ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ಜ್ಯೋತಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನೀಡಲಾಗುವ ವ್ಯಾಸಜ್ಯೋತಿ ಪ್ರಶಸ್ತಿಗೆ ವಿದ್ವಾನ್ ಡಿ.ಎಸ್.ಪ್ರಕಾಶ ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತೀಯ ವಿದ್ಯಾಭವನ ಮತ್ತು ಜ್ಯೋತಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಕಳೆದ 20 ವರ್ಷಗಳಿಂದ ಪ್ರತಿವರ್ಷ ವ್ಯಾಸಪೂರ್ಣಿಮ ಶುಭ ಸಂರ್ಭದಲ್ಲಿ `ವ್ಯಾಸಜ್ಯೋತಿ ಪ್ರಶಸ್ತಿ’ಯನ್ನು ನೀಡುತ್ತಿದ್ದು. ಮಹೋಪಾಧ್ಯಯ ಎನ್. ರಂಗನಾಥಶರ್ಮ, ವಿದ್ವಾನ್ ಎಚ್. ಆರ್. ಕೇಶವಮೂರ್ತಿ, ಸಂತ ಭದ್ರಗಿರಿ ಅತ್ಯುಚದಾಸರು, ಕೆ. ಟಿ. ಪಾಂಡುರಂಗಿ, ವಿದ್ವಾನ್ ವಿ. ಶಿವರಾಮಭಟ್ ಅಲೇಖ ಮುಂತಾದವರಿಗೆ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿಯು ನಗದು ಮತ್ತು ಫಲಕವನ್ನೊಳಗೊಂಡಿದ್ದು 2023 ನೆಯ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡದ ವಿದ್ವಾನ್ ಡಿ. ಎಸ್. ಪ್ರಕಾಶ ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ.
ದಿನಾಂಕ ಜುಲೈ 8ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜ್ಯೋತಿ ಸಮೂಹಸಂಸ್ಥೆಗಳ ಅಧ್ಯಕ್ಷರಾದ ಎಂ. ನರಸಿಂಹನ್ ಪ್ರಧಾನ ಮಾಡುವರು. ಇದೇ ಸಂದರ್ಭದಲ್ಲಿ `ಗುರುಪೂರ್ಣಿಮಾ ಮತ್ತು ಗುರುವಿನ ಮಹತ್ವ’ ಕುರಿತು ಡಾ. ಎಂ. ಸಿ. ಪ್ರಕಾಶ್ ವಿಶೇಷ ಉಪನ್ಯಾಸ ನೀಡುವರು.
ಪರಿಚಯ: ವಿದ್ವಾನ್ ಡಿ.ಎಸ್.ಪ್ರಕಾಶ ಭಟ್ಟ ಅವರು ಹುಟ್ಟಿದ್ದು 1.11.1960ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ದಾನಂದಿಯಲ್ಲಿ. ಕೃಷ್ಣ ಯಜುರ್ವೇದ್ ಸಲಕ್ಷಣ ಘನಾಂತ, ಕೃಷ್ಣ ಯಜುರ್ವೇದ ಶ್ರೌತ ವಿದ್ವತ್, ಕೃಷ್ಣ ಯಜುರ್ವೇದ ಸ್ಮಾರ್ತ ವಿದ್ವತ್, ಪೂರ್ವ ಮೀಮಾಂಸಾ ವಿದ್ವತ್, ಸಂಸ್ಕೃತ ಎಂ.ಎ. ದೆಹಲಿಯ ಲಾಲ್‌ಬಹದ್ದೂರ ಶಾಸ್ತ್ರೀ ವಿದ್ಯಾಪೀಠದಿಂದ ಪಿಎಚ್.ಡಿ., ದಕ್ಷಿಣ ಭಾರತ ಹಿಂದಿ ಮಹಾಸಭೆಯ ಹಿಂದಿ ವಿಶಾರದ ಪದವಿಗಳನ್ನು ಪಡೆದಿದ್ದಾರೆ.
ಬೆಂಗಳೂರಿನ ಶೃಂಗೇರಿ ಶಂಕರಮಠ, ಶ್ರೀ ಮಲ್ಲಿಕಾರ್ಜುನ ವೇದ- ಸಂಸ್ಕತ, ಪಾಠಶಾಲೆ, ಮಾಗಡಿ ಕರಣಿಕರ ಪಾಠಶಾಲೆಗಳಲ್ಲಿ 48 ವರ್ಷಗಳ ಅಧ್ಯಾಪನ ವೃತ್ತಿ. ಸದ್ಯ ‘ವೇದಪ್ರಕಾಶ ಗುರುಕುಲಂ’ನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್.ನಗರದ ಯಡತೊರೆ ಸಂಸ್ಥಾನ, ಶೃಂಗೇರಿ ಶಿವಗಾಂಗಾ ಸಂಸ್ಥಾನ, ರಾಮಚಂದ್ರಪುರ ಮಠ ಸಂಸ್ಥಾನ, ಮಹರ್ಷಿ ಸಾಂದೀಪನೀ ವಿದ್ಯಾಪೀಠ, ವೇದ-ನಾದ ಸಮ್ಮಾನ ನೆಲೆಮಾಂ- ಇಸಳೂರು ಧರ್ಮೇಶ್ವರ ದೇವಸ್ಥಾನ ಧಾರ್ಮಿಕ ಸಮಿತಿ ಮುಂತಾದವುಗಳಿಂದ ಗೌರವ ಸನ್ಮಾನಗಳು ಸಂದಿವೆ. ಈಗ ಭಾರತೀಯ ವಿದ್ಯಾಭವನ ಮತ್ತು ಜ್ಯೋತಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ವ್ಯಾಸ ಪೂರ್ಣಿಮೆಯ ಸಂದರ್ಭದಲ್ಲಿ ನೀಡುವ ವ್ಯಾಸಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ