
ಅಂತ್ಯಸಂಸ್ಕಾರ ನೆರವೇರಿಸಿ, ತವರಿಗೆ ಮರಳಲು ವ್ಯವಸ್ಥೆ ಮಾಡಿದ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಸೋಶಿಯಲ್ ರೆಸ್ಕ್ಯೂ ತಂಡ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತಿಯ ಮೃತದೇಹದ ಪಕ್ಕದಲ್ಲಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದ ಮಹಿಳೆಯ ನೆರವಿಗೆ ಧಾವಿಸಿದ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಸೋಶಿಯಲ್ ರೆಸ್ಕ್ಯೂ ತಂಡ, ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಮೂಲದ ವಾರಕರಿಯೊಬ್ಬರು ತಮ್ಮ ಪತ್ನಿಯೊಂದಿಗೆ ಕಳೆದ ಸುಮಾರು ಒಂದು ತಿಂಗಳಿಂದ ಬೆಳಗಾವಿಯ ರೈಲು ನಿಲ್ದಾಣ ರಸ್ತೆಯ ಬದಿಯಲ್ಲಿ ವಾಸವಾಗಿದ್ದರು. ಈ ದಂಪತಿಗೆ ಸ್ಥಳೀಯವಾಗಿ ಯಾವುದೇ ಕುಟುಂಬದವರಾಗಲಿ, ನೆರವಿಗೆ ಬರುವವರಾಗಲಿ ಇರಲಿಲ್ಲ. ಈ ನಡುವೆ ಪತಿ ನಿನ್ನೆ ಮೃತಪಟ್ಟಿದ್ದು, ಅವರ ಮೃತದೇಹದ ಪಕ್ಕದಲ್ಲೇ ಪತ್ನಿ ಅಸಹಾಯಕ ಸ್ಥಿತಿಯಲ್ಲಿ ಕುಳಿತು ಕಣ್ಣೀರಿಡುತ್ತಿದ್ದರು.
ಈ ವಿಷಯ ತಿಳಿದ ಕ್ಯಾಂಪ್ ಪೊಲೀಸ್ ಸಿಬ್ಬಂದಿ ತಕ್ಷಣ ಮಾಜಿ ಮೇಯರ್ ವಿಜಯ ಮೋರೆ ಅವರನ್ನು ಸಂಪರ್ಕಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ವಿಜಯ ಮೋರೆ ಅವರು ಸೋಶಿಯಲ್ ರೆಸ್ಕ್ಯೂ ತಂಡದೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪೊಲೀಸರ ಸಮ್ಮುಖದಲ್ಲಿ ಮೃತದೇಹದ ಪ್ರಾಥಮಿಕ ಪರಿಶೀಲನೆ ನಡೆಸಿದಾಗ ದಂಪತಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದವರು ಎಂಬುದು ತಿಳಿದುಬಂದಿತು.
ಬಳಿಕ ಮೃತರ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ವಿಜಯ ಮೋರೆ ಹಾಗೂ ತಂಡ ವಹಿಸಿಕೊಂಡಿತು. ಮಹಾನಗರ ಪಾಲಿಕೆಯ ಶವವಾಹನ ಸಿಬ್ಬಂದಿ ನಿಶಾರ್ ಶಂಶರ್, ಸಂಜಯ್ ಮೆಟ್ರಿ ಹಾಗೂ ಚಿತಾಗಾರದ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹವನ್ನು ಸದಾಶಿವನಗರದ ಸ್ಮಶಾನಕ್ಕೆ ಕೊಂಡೊಯ್ದು ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಈ ಮಾನವೀಯ ಕಾರ್ಯದಲ್ಲಿ ಗಂಗಾಧರ ಪಾಟೀಲ, ಪದ್ಮಪ್ರಸಾದ ಹುಲಿ, ಅಲನ್ ವಿಜಯ ಮೋರೆ, ಅವಧೂತ ತುದವೇಕರ್, ರಾಜು ಟಕ್ಕರ್, ಶಶಿಕಾಂತ ಅಂಬೇವಾಡಿಕರ್ ಹಾಗೂ ಶಂಸಿಂಗ್ ರಜಪೂತ್ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪತಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದ ಮಹಿಳೆಗೆ ತಂಡದ ಸದಸ್ಯರು ಧೈರ್ಯ ತುಂಬಿ, ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ಸಹಕರಿಸಿದರು. ಅಲ್ಲದೆ, ಆಕೆಯನ್ನು ಸುರಕ್ಷಿತವಾಗಿ ಸ್ವಗ್ರಾಮ ಛತ್ರಪತಿ ಸಂಭಾಜಿನಗರಕ್ಕೆ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆಯನ್ನೂ ಮಾಡಿದರು.
ಕುಟುಂಬದವರೂ ಇಲ್ಲದೆ, ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಯಾರೂ ಇಲ್ಲದೆ ಬೀದಿಯಲ್ಲಿ ಅಸಹಾಯಕಳಾಗಿದ್ದ ಮಹಿಳೆಯ ಕೈಹಿಡಿದ ವಿಜಯ ಮೋರೆ ಹಾಗೂ ಸೋಶಿಯಲ್ ರೆಸ್ಕ್ಯೂ ತಂಡದ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಮ್ಮವರು ಯಾರೂ ಇಲ್ಲದವರಿಗೂ ನಾವಿದ್ದೇವೆ ಎಂಬ ಭರವಸೆ ನೀಡುವುದೇ ನಿಜವಾದ ಮಾನವೀಯತೆ ಎಂಬುದನ್ನು ಈ ಕಾರ್ಯ ಮತ್ತೊಮ್ಮೆ ಸಾರಿದೆ.



