Kannada NewsKarnataka NewsPolitics

*2014ರಲ್ಲಿ ಮೋದಿ ಕೈಗೆ ಮೌನಿ ಬಾಬಾ ಖಾಲಿ ಚೊಂಬು ಕೊಟ್ಟಿದ್ರು; ಮಾಜಿ ಸಂಸದ, ಉದ್ಯಮಿ ವಿಜಯ ಸಂಕೇಶ್ವರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರ ಕೈಗೆ ಮೌನಿ ಬಾಬಾ (ಡಾ. ಮನಮೋಹನ ಸಿಂಗ್) ಖಾಲಿ ಚೊಂಬನ್ನೇ ಕೊಟ್ಟಿದ್ದರು ಎಂದು ಮಾಜಿ ಸಂಸದ, ಉದ್ಯಮಿ, ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ವಿಜಯ ಸಂಕೇಶ್ವರ ಟೀಕಿಸಿದರು.

ಹುಬ್ಬಳ್ಳಿಯ ವರೂರಿನ ವಿಆರ್ ಎಲ್ ಸಂಸ್ಥೆ ಆವರಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, 2014ರಲ್ಲಿ ಇನ್ನೊಂದೇ ತಿಂಗಳು ಕಳೆದಿದ್ದರೂ ಯುಪಿಎ ಕೈಯಲ್ಲಿ ದೇಶ ಅಧೋಗತಿಗೆ ಹೋಗುತ್ತಿತ್ತು ಎಂದು ಹೇಳಿದರು.

ಯುಪಿಎ ಆಡಳಿತದ ಕೊನೇ ಗಳಿಗೆಯಲ್ಲಿ ದೇಶದ ತೈಲ ಸಂಗ್ರಹ ಮುಗಿದೇ ಹೋಗಿತ್ತು. ಸರ್ಕಾರದ ಮೇಲೆ ಸಾಲದ ಹೊರೆ ಬಿದ್ದಿತ್ತು. ಈ ರೀತಿ ನರೇಂದ್ರ ಮೋದಿ ಅವರ ಕೈಗೆ ಅಂದು ಕಾಂಗ್ರೆಸ್ ಖಾಲಿ ಚೊಂಬನ್ನೇ ಕೊಟ್ಟಿದ್ದು ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ತೈಲ ರಾಷ್ಟ್ರಗಳಿಗೆ ದಯವಿಟ್ಟು ಪೆಟ್ರೋಲಿಯಂ ಉತ್ಪನ್ನ ನಿಲ್ಲಿಸಬೇಡಿ ಎಂದು ಮನವಿ ಮಾಡಿದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂಥ ದಯನೀಯ ಸ್ಥಿತಿ ದೇಶಕ್ಕಿಲ್ಲ ಎಂದು ಹೇಳಿದರು.

ಅನೇಕ ಸುಧಾರಣೆಗಳ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಮೋದಿ ಮಾಡಿದ್ದಾರೆ. ಆದರೆ, ಯುಪಿಎ ಕಾಲದ ಇಟಲಿ ಮೇಡಂ, ಮೌನಿ ಬಾಬಾ ಆಡಳಿತದಲ್ಲಿ ಭಾರತದಲ್ಲಿ ಯಾವುದೇ ಸಾಧನೆ ಆಗಲಿಲ್ಲ ಎಂದರು.

ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ಮೋದಿ ನಮ್ಮ ಪ್ರಧಾನಿ ಮಾತ್ರವಲ್ಲ, ಜಗತ್ತಿನ ನಾಯಕರಾಗಿ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಸಂಕೇಶ್ವರ ಬಣ್ಣಿಸಿದರು.

ಈ ಲೋಕ ಕದನವನ್ನು ವಿಶ್ವದ ರಾಷ್ಟ್ರಗಳು ಬಹಳ ಕುತೂಹಲದಿಂದ ನೋಡುತ್ತಿವೆ. ಹಾಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಕರ್ತವ್ಯ ಪಾಲಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ಬದಲಾವಣೆ ಇಲ್ಲ:
ತಮ್ಮ ಜೀವಿತಾವಧಿಯಲ್ಲಿ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಸ್ವತಃ ಮೋದಿ ಅವರೇ ಹೇಳಿದ್ದಾರೆ. ಆದರೂ, ಚುನಾವಣೆ ಬಂದಾಗ ರಾಹುಲ್​ ಗಾಂಧಿಯಂಥವರು ಅಪಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ ಎಂದು ವಿಜಯ ಸಂಕೇಶ್ವರ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಕಾಂಗ್ರೆಸ್ ಸಂವಿಧಾನದ ವಿರುದ್ಧವಾಗಿ ಬರೋಬ್ಬರಿ 82 ಸರ್ಕಾರಗಳನ್ನು ಕೆಡವಿದೆ. ಆದರೆ, ಅಟಲ್​ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಒಂದೇ ಒಂದು ಸರ್ಕಾರವನ್ನು ಉರುಳಿಸುವ ಕೆಲಸ ಮಾಡಿಲ್ಲ ಎಂದರು.

ದೇಶದ ಹಲವು ರಾಜ್ಯಗಳಲ್ಲಿ ಈಗಲೂ ಅರಾಜಕತೆ ಇದೆ. ಹಾಗಿದ್ದರೂ ಮೋದಿ ಅವರು ಚುನಾಯಿತ ಸರ್ಕಾರ ಕೆಡವದೇ ಸಂವಿಧಾನಕ್ಕೆ ಗೌರವ ತೋರುವ ಔದಾರ್ಯ ತೋರಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

49 ವರ್ಷಗಳ ಕಾಲ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್​ ಆಡಳಿತವೇ ಇತ್ತು. 3 ಬಾರಿ ಜನ ನನಗೆ ಆಶೀರ್ವಾದ ಮಾಡಿದರು. 4 ನಾ ಬಾರಿ ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸಿದ್ದಾರೆ. ಈ ಬಾರಿಯೂ ಗೆಲುವು ಅವರದ್ದೇ ಆಗಬೇಕು ಎಂದು ಕೋರಿದರು.

ಹಮ್ಮು ಬಿಮ್ಮು ಇಲ್ಲದ ಸರಳ ವ್ಯಕ್ತಿ ಜೋಶಿ: ಪ್ರಲ್ಹಾದ ಜೋಶಿ ಕೇಂದ್ರದಲ್ಲಿ ದೊಡ್ಡ ಮಂತ್ರಿಯಾಗಿದ್ದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದ ಸರಳ ವ್ಯಕ್ತಿ ಆಗಿದ್ದಾರೆ. ಎಲ್ಲ ಕಾರ್ಯಕರ್ತರು ಮತ್ತು ಜನರೊಂದಿಗೆ ಬೆರೆಯುವ ವ್ಯಕ್ತಿತ್ವದವರು ಎಂದು ಹೊಗಳಿದರು.

3.5 ಲಕ್ಷ ಅಂತರದ ಗೆಲುವು ಕೊಡಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಕಣಕ್ಕಿಳಿದ ಬಿಜೆಪಿಯ ಈ ನಿಷ್ಠಾವಂತ ನಾಯಕ ಪ್ರಲ್ಹಾದ ಜೋಶಿ ಅವರನ್ನು ಈ ಬಾರಿ 3.5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಡಾ. ಸಂಕೇಶ್ವರ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಜಿಪಂ ಮಾಜಿ ಅಧ್ಯಕ್ಷ ಟಿ.ಜಿ. ಬಾಳಣ್ಣವರ, ಶಾಸಕ ಎಂ.ಆರ್​.ಪಾಟೀಲ, ವಿಆರ್​ಎಲ್​ ಸಂಸ್ಥೆ ಅಧಿಕಾರಿ-ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button