Kannada NewsLatest

ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವ ಸರ್ಕಾರಕ್ಕೆ ಧಿಕ್ಕಾರ -ವಿಜಯಲಕ್ಷ್ಮಿ ಬಾಳೆಕುಂದ್ರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಒಂದು ಸಾವಿರ ಇಂಗ್ಲೀಷ್ ಶಾಲೆಗಳಿಗೆ ಕರ್ನಾಟಕ ಸರ್ಕಾರದವರು ಅನುಮತಿ ಕೊಡುತ್ತಿರುವುದು ಖೇದಕರ ಸಂಗತಿ. ಕನ್ನಡ ಮಾಧ್ಯಮ ಶಿಕ್ಷಕರೇ ಇಂಗ್ಲೀಷ ಭಾಷೆಯನು ಕಲಿಸಬೇಕೆಂಬ ಸರಕಾರದ ನಿರ್ಧಾರ ಕನ್ನಡ ಭಾಷೆಯ ಮಾರಣ ಹೋಮ ಮಾಡಿದಂತೆ. ಮಾತೃಭಾಷೆಯನು ಮರೆತರೆ ಮಾತೆಯನು ಮರೆತಂತೆ ಎಂದು ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.
ನಗರದ ಸಾಹಿತ್ಯ ಭವನ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಮೇಳೇದ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ  ವಾಸಂತಿ ಮೇಳೇದ ಅವರ ತ್ರಿದಳ(ತ್ರಿಪದಿಗಳ ಸಂಕಲನ), ಸೆರಗಿನ ಸಿರಿ(ಕವನಗಳ ಸಂಕಲನ) ಹಾಗೂ ಚಿಲಿಪಿಲಿ(ಚುಟುಕುಗಳ ಸಂಕಲನ) ಮೂರು ಕೃತಿಗಳ ಬಿಡುಗಡೆ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು.

ತ್ರಿದಳ ಕೃತಿ ಬಿಡುಗಡೆ ಮಾಡಿದ ಡಾ. ಬಾಳೇಕುಂದ್ರಿಯವರು ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಐದನೇ ಇಯತ್ತೆವರೆಗೆ ಮಾತೃಭಾಷೆಯ ಶಿಕ್ಷಣ ಅತ್ಯವಷ್ಯವಾಗಿದೆ. ಒಂದು ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ನಿರ್ಧಾರ ತೆಗೆದುಕೊಂಡಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಹೇಳಿದರು.

Home add -Advt

’ಸೆರಗಿನ ಸಿರಿ’ ಕವನ ಸಂಕಲನ ಕೃತಿಯನ್ನು ಪರಿಚಯಿಸುತ್ತ ಡಾ. ಗುರುದೇವಿ ಹುಲೆಪ್ಪನವರಮಠ ಅವರು, ಮೇಳೇದ ಅವರ ಕವನಗಳು ಗ್ರಾಮೀಣ ಸಂಸ್ಕೃತಿಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತವೆ. ಇವರ ಕವನಗಳಲ್ಲಿ ದಾಂಪತ್ಯ ಪ್ರೀತಿ, ಪ್ರೇಮ, ವಿರಹ, ಕರುಣೆ, ಅನುಕಂಪ ಎಲ್ಲವನ್ನು ಕಾಣಬಹುದು. ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ಇವರು ಕವನಗಳ ಮೂಲಕ ತೆರೆದಿಟ್ಟಿದ್ದಾರೆ. ಇವರಿಂದ ಇಂತಹ ಹಲವು ಕೃತಿಗಳು ಹೊರಬರಲಿ ಎಂದು ಹೇಳಿದರು.
ತ್ರಿದಳ(ತ್ರಿಪದಿಗಳ ಸಂಕಲನ), ಚಿಲಿಪಿಲಿ(ಚುಟುಕುಗಳ ಸಂಕಲನ) ಕೃತಿಗಳನ್ನು ಪರಿಚಯಿಸತ್ತ ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ,  ವಾಸಂತಿ ಮೇಳೇದ ಅವರು ತ್ರಿಪದಿ, ಕವನ ಹಾಗೂ ಚುಟುಕುಗಳು ಮೂರು ಪ್ರಕಾರಗಳಲ್ಲಿ ಬರೆದಿದ್ದಾರೆ. ಇವರ ಕೃತಿಗಳಲ್ಲಿ ವಿಷಯ ವೈವಿಧ್ಯತೆ ಇದೆ. ಜಾನಪದ ಮಾದರಿಯಲ್ಲಿ ಬರೆಯುವುದು ಕಷ್ಟದ ಕೆಲಸ ಅದು ಇವರಿಗೆ ಸಾಧಿಸಿದೆ. ಜಾನಪದ ಸಾಹಿತ್ಯವನ್ನು ಕೀಳರಿಮೆಯಿಂದ ಕಾಣುವವರಿದ್ದಾರೆ ಆದರೆ ಜಾನಪದಕ್ಕೆಂದೂ ಸಾವಿಲ್ಲ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಲೇಖಕಿ ವಾಸಂತಿ ಮೇಳೇದ ದಂಪತಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಜ್ಯೋತಿ ಬದಾಮಿ ಅಧ್ಯಕ್ಷತೆ ವಹಿಸಿದ್ದರು. ನೀಲಗಂಗಾ ಚರಂತಿಮಠ ಸೆರಗಿನ ಸಿರಿ ಹಾಗೂ ಚಿಲಿಪಿಲಿ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಆಶಾ ಯಮಕನಮರಡಿ, ಸುಷ್ಮಾ ಮೇಳೇದ, ಸುಪ್ರಿಯಾ ಜಂಬಗಿ ವಾಸಂತಿ ಮೇಳೇದ ಅವರ ರಚನೆಗಳನ್ನು ಹಾಡಿದರು.
ನಿರ್ಮಲಾ ಬಟ್ಟಲ ಸ್ವಾಗತಿಸಿದರು. ಸುನಂದಾ ಎಮ್ಮಿ ಪರಿಚಯಿಸಿದರು. ವಿಜಯಲಕ್ಷ್ಮಿ ಪುಟ್ಟಿ ನಿರೂಪಿಸಿದರು. ಸುಮಾ ಕಿತ್ತೂರ ವಂದಿಸಿದರು.

 

Related Articles

Back to top button