Wanted Tailor2
Cancer Hospital 2
Bottom Add. 3

ವಿಜಯಪುರ ವಿಶ್ವದ ಗಮನ ಸೆಳೆದಿದ್ದೇ ಅಭೂತಪೂರ್ವ ಗುಮ್ಮಟದಿಂದ

ಕಿರು ಲೇಖನ : ರವಿ ಕರಣಂ.

ವಿಜಯಪುರ ನಿಮಗೆ ಚಿರಪರಿಚಿತವಾದ ಊರು. ಹಿಂದೆ ಇದು ‘ಬಿಜಾಪುರ” ಎಂದು ಉಚ್ಚರಿಸಲ್ಪಡುತಿತ್ತು. ಬಯಲು ಸೀಮೆಯ ಜಿಲ್ಲೆಗಳಲ್ಲಿ ಇದೂ ಕೂಡಾ ಪ್ರಸಿದ್ದವಾದುದು. ಐತಿಹಾಸಿಕವಾಗಿ ರಾಷ್ಟ್ರ ಗಮನ ಸೆಳೆದಿದೆಯಲ್ಲದೇ ಸಾಂಸ್ಕೃತಿಕ ಹಿರಿಮೆ ಗರಿಮೆಗಳನ್ನೂ ಹೊಂದಿದೆ. ವಿಜಯಪುರವನ್ನು ಆಳಿದ ಸುಲ್ತಾನರು, ವೈಭವೋಪೇತ ಸಾಮ್ರಾಜ್ಯ ಕಟ್ಟಲು ಶ್ರಮವಹಿಸಿರುವುದನ್ನು ಕಾಣಬಹುದು. ಸಮಕಾಲೀನ ಬಲಿಷ್ಠ ವಿಜಯನಗರ ಸಾಮ್ರಾಜ್ಯಕ್ಕೆ ಸರಿಸಾಟಿಯಾಗಿ ನಿಲ್ಲುವ ಪ್ರಯತ್ನ ಮಾಡಿತೆಂದೇ ಹೇಳಬಹುದು. ಅದಕ್ಕೆ ಸಾಕ್ಷಿಯಾಗಿ ಜಗದ್ವಿಖ್ಯಾತ ಗೋಳ ಗುಮ್ಮಟವೊಂದು ಉದಾಹರಣೆಯಾಗಿದೆ. ಆದಾಗ್ಯೂ ಹಂಪೆ ಕಲ್ಲೊಳಗೇ ಅರಳಿದ ಮಹೋನ್ನತ ನಗರವಾಗಿತ್ತು. ಇದರ ಕಲೆಯ ಶೈಲಿ ವಿಭಿನ್ನವಾಗಿದೆ. ಇಂಡೋ – ಪರ್ಷಿಯನ್ ಪ್ರಭಾವ ಎದ್ದು ಕಾಣುತ್ತದೆ.

ಪ್ರಮುಖವಾದವುಗಳ ಬಗ್ಗೆ ಕಿರು ಪರಿಚಯ ಇದಾಗಿದೆ.

ಗೋಳ ಗುಮ್ಮಟ.

ಕ್ರಿ ಶ 1627 ರಿಂದ 1657 ರವರೆಗೆ ಆಳಿದ ಆದಿಲ್ ಶಾಹಿಯ ಗೋರಿ ಇದರಲ್ಲಿದೆ. ತನ್ನ ಜೀವಿತಾವಧಿಯಲ್ಲಿಯೇ ಕಟ್ಟಡದ ನಿರ್ಮಾಣ ಆರಂಭಿಸಿದ್ದನು. ಆದರೆ ಪೂರ್ಣವಾಗುವ ಮುಂಚೆ ಅಂದರೆ 1657 ರಲ್ಲಿ ತೀರಿಕೊಂಡನು ಇದನ್ನು 1659 ರಲ್ಲಿ ಪ್ರಸಿದ್ದ ವಾಸ್ತು ಶಿಲ್ಪಿ ಯಾಕುತ್ ನಿರ್ಮಿಸಿದ್ದಾನೆ. ಇದರ ಉದ್ದ ಮತ್ತು ಅಗಲ 50 ಮೀ , ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸ ಹೊಂದಿದೆ.ಅದರಂತೆ ಎಂಟು ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಗುಂಬಜ್.

ಹಿಂದೊಮ್ಮೆ ಏಳು ಬಾರಿ ಪ್ರತಿಧ್ವನಿಸುತ್ತಿತ್ತು ಎಂದೂ ಈಗ ಅದರಲ್ಲಿನ ಕೂದಲೆಳೆ ಬಿರುಕಿನಿಂದಾಗಿ ಮೂರು ನಾಲ್ಕು ಸಲ ಮಾತ್ರ ಕೇಳುತ್ತಿದೆ ಎಂಬುದು ಸ್ಥಳೀಯ ಜನರ ಮಾತು. ಮೇಲೆ ಹತ್ತಿದಾಗ ಪಿಸುಗುಟ್ಟುವ ಪ್ರಾಂಗಣ (Whispering Chamber) ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.

ಬಾರಾ ಕಮಾನ್

ಬಾರಾ ಕಮಾನ್ ಅನ್ನು ಕ್ರಿ.ಶ. 1672 ನಲ್ಲಿ ಅಲಿ ಆದಿಲ್ ಷಾ II ನಿರ್ಮಿಸಿದನು. ಇದು ತನ್ನ ಮತ್ತು ಅವನ ಹೆಂಡತಿಯರಿಗೆ ಸಮಾಧಿ ಸ್ಥಳ. ಬಾರಾ ಕಮಾನ್ ನಲ್ಲಿ ಅಲಿ ಆದಿಲ್ ಶಾ II, ಅವನ ಪತ್ನಿ ಚಾಂದ್ ಬೀಬಿ, ಪ್ರೇಯಸಿಯರ, ಮತ್ತು ಪುತ್ರಿಯರ ಸಮಾಧಿಗಳಿವೆ. ಇದು ಅಪೂರ್ಣಗೊಳ್ಳಲು ಕೆಲವು ಕಾರಣಗಳನ್ನು ಹುಡುಕಿದ್ದಾರಾದರೂ ಅವುಗಳಿಗೆ ಸಮರ್ಥ ಸಾಕ್ಷ್ಯಗಳಿಲ್ಲ. ಸ್ವತಃ ತಂದೆಯಿಂದಲೇ ಹತನಾದನೆಂಬ ಹೇಳಿಕೆಗೆ ಪುಷ್ಟಿ ಕೊಡುವ ಅಂಶಗಳ ಕೊರತೆಯಿವೆ.

ಸಂಗೀತ ಮಹಲ್

ಸಂಗೀತ ಮಹಲ್ ನೋಡುವಂಥಹ ಸ್ಮಾರಕವಾಗಿದೆ. ಇದು ಸಾಧಾರಣ ವಿಷಯವೇನೂ ಅಲ್ಲ. ಮೂರರಿಂದ ನಾಲ್ಕು ಸಾವಿರ ಸಂಗೀತ ವಿದ್ವಾಂಸರ ಪಡೆಯಿತ್ತೆಂದು ಹೇಳಲಾಗುತ್ತದೆ. ಆದಿಲ್ ಶಾಹಿ ರಾಜರು ಸಂಗೀತದ ಪ್ರೇಮಿಗಳಾಗಿದ್ದರೆಂದೂ, ಅವರಲ್ಲಿ ಯೂಸುಫ್ ಆದಿಲ್ ಶಾ ನು ತಂಬೂರಿ ಮತ್ತು ವೀಣೆಯಲ್ಲಿ ಆಸಕ್ತಿ ಹೊಂದಿದ್ದರೆ, ಇಸ್ಮಾಯಿಲ್ ಆದಿಲ್ ಷಾ ಮಧ್ಯ ಏಷ್ಯಾದ ಸಂಗೀತಕ್ಕೆ ಹೆಚ್ಚು ಒತ್ತು ಕೊಟ್ಟಿದನು. ಇಬ್ರಾಹಿಂ ಆದಿಲ್ ಷಾ II ನು ಸಂಗೀತ ವಿದ್ವಾಂಸನಾಗಿದ್ದನಲ್ಲದೇ ಕವಿಯೂ ಗಾಯಕನೂ ಆಗಿದ್ದನೆಂದು ಹಲವಾರು ವರ್ಣಚಿತ್ರಗಳಿಂದ ತಿಳಿದು ಬರುತ್ತದೆ.

ಇಬ್ರಾಹಿಂ ರೋಜಾ

ಇದು ಎರಡನೇ ಇಬ್ರಾಹಿಂ ಆದಿಲ್ ಶಹಾನ ಸಮಾಧಿ ಸ್ಥಳ. ಒಳ ಹೋಗುತ್ತಿದ್ದಂತೆಯೇ ನಿಮಗೆ ವಿಶಾಲವಾದ, ಹಸಿರಿನಿಂದ ಕಂಗೊಳಿಸುವ ಉದ್ಯಾನವನವಿದೆ. ಅದರ ನಡುವೆ ಹಾದು ಹೋಗುವ ಹೃನ್ಮನ ತಣಿಸುವ ಸ್ಮಾರಕವೊಂದು ಕಣ್ಕುಕ್ಕುತ್ತದೆ. ಪ್ರಸಿದ್ಧ ವಾಸ್ತುಶಿಲ್ಪಿ ಮಲಿಕ್ ಸಂದಲ್ ಸ್ಮಾರಕದ ನಿರ್ಮಾಣ ಕತೃ. ಉತ್ಕೃಷ್ಟ ಕುಶಲ ಕಲೆಯನ್ನು ಕಾಣಬಹುದು. ಕಟ್ಟಡಗಳ ಸೌಂದರ್ಯಕ್ಕೆ ಕೊರತೆಯಿಲ್ಲ. ಶಿಲೆಯಲ್ಲೂ ಕುಸುರಿ ಕೆತ್ತನೆ ಮನಮೋಹಕವಾಗಿದೆ. ಇಬ್ರಾಹಿಂ ಆದಿಲ್ ಶಾಹಿ ಮರಣ ದೊಂದಿದಾಗ ಇದು ಅಪೂರ್ಣವಾಗಿತ್ತೆಂದೂ , ಆತನ ಪತ್ನಿ ತಾಜ್ ಸುಲ್ತಾನಳು ಮುಂದೆ ನಿಂತಿದ್ದು ಪೂರ್ಣಗೊಳಿಸಿದ್ದರ ಮಾಹಿತಿಯಿದೆ. ಇಲ್ಲಿರುವ ಪರ್ಶಿಯನ್ ಭಾಷೆಯ ಶಾಸನವು ಈ ಸ್ಮಾರಕವು ಕ್ರಿ.ಶ. 1626 ರಲ್ಲಿ ನಿರ್ಮಾಣಗೊಂಡಿದೆ ಎಂಬುದನ್ನು ತಿಳಿಸುತ್ತದೆ.

ಗಗನ್ ಮಹಲ್

ಬಹಳಷ್ಟು ಪ್ರವಾಸಿಗರಿಂದ ದೂರ ಉಳಿದಿರುವ ಸ್ಮಾರಕ ಇದು. ಆದರೆ ಹಿಂದಿನ ಮಹತ್ವ ಮಾತ್ರ ಎಂದೂ ಕಡಿಮೆಯಿಲ್ಲ. ವಿಶಾಲವಾದ ಕೋಟೆ ಗೋಡೆಗಳ ನಡುವೆ ಇರುವ ದರ್ಬಾರ್ ಹಾಲ್, ಅರಮನೆಗಳು ಮತ್ತು ಆದಿಲ್ ಶಾಹಿ ಆಡಳಿತ ವರ್ಗದವರ ಸಂತೋಷದ ಉದ್ಯಾನಗಳನ್ನು ಒಳಗೊಂಡಿತ್ತೆಂಬುದು ಅಚ್ಚರಿಯ ಸಂಗತಿ. ಆದರೆ ಸೂಕ್ತ ನಿರ್ವಹಣೆಯ ಕೊರತೆಯೋ ಏನೋ ಪಾಳು ಬಿದ್ದಿದೆ.
ಕ್ರಿ.ಶ. 1561ರಲ್ಲಿ ನಿರ್ಮಿಸಲಾದ ಗಗನ್ ಮಹಲ್ ಅತ್ಯುತ್ತಮವಾದ ಕಟ್ಟಡ.

ವಿಜಯಪುರದ ಕೋಟೆ

ಪ್ರಮುಖ ಆಕರ್ಷಣೆಗಳಲ್ಲೊಂದು. ಹಿಂದೆ ಈ ನಗರ ಸುತ್ತಲೂ ಕೋಟೆಗಳನ್ನು ಹೊಂದಿತ್ತು. ಸುಲಭವಾಗಿ ಶತ್ರುಗಳ ಸೈನ್ಯ ಒಳ ನುಸುಳುವಂತೆಯೂ ಇರಲಿಲ್ಲ. ಜಾಗೃತ ದಳವನ್ನು ನಿಯೋಜಿಸಲಾಗಿತ್ತು. ಕೆಲವು ಪಾಳು ಬಿದ್ದಿರುವ ಕೋಟೆಗಳು ಸಹ ಕಾಣುತ್ತವೆ. ಇದು ಸುಭದ್ರವಾಗಿರುವ ಕೋಟೆ.

Bottom Add3
Bottom Ad 2

You cannot copy content of this page