ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಕೆಲವರು ಬಹಳ ಲಾಭ ಅನುಭವಿಸಿದ್ದಾರೆ. ಅಂತವರು ತ್ಯಾಗ ಮಾಡಬೇಕು. ರಾಜ್ಯದಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿದರು ತಮ್ಮ ಸಚಿವ ಸ್ಥಾನ ಬಿಟ್ಟು ಕೊಡಬೇಕು ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಸಚಿವ ಸ್ಥಾನ ಬಿಡುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಲಹೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾಗಬೇಕು ಎಂದರೆ ಕೆಲವರು ಸಚಿವ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ. ಈ ಹಿಂದೆ ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ಅನುಭವಿಸಿದರು ಪದತ್ಯಾಗ ಮಾಡಲು ಮುಂದಾಗಬೇಕು. ಈ ಮೂಲಕ ನೂತನ ಬಿಜೆಪಿ ಶಾಸಕರಿಗೆ ಸ್ಥಾನ ನೀಡಬೇಕು ಎಂದರು.
ವರಿಷ್ಠರು ಮತ್ತು ಮಂತ್ರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ಮಾಡಬೇಕು. ಅವರಿಗೆ ನೀಡಿರುವ ಗುರಿಯ ಅವಲೋಕನ ಮಾಡಬೇಕು. ಇಲ್ಲದಿದ್ದರೆ ಕೇವಲ ಗೂಟದ ಕಾರು, ಗನ್ ಮ್ಯಾನ್ ಇಟ್ಟುಕೊಂಡಂತಾಗುತ್ತದೆ. ಕೆಲವು ಸಚಿವರು ವಿಧಾನಸೌಧಕ್ಕೆ ಸೀಮಿತರಾಗಿದ್ದಾರೆಂದು ಕಿಡಿಕಾರಿದರು.
ಇನ್ನು ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಿಸಿ ಪಾಟೀಲರನ್ನು ಬಲಿಕೊಟ್ಟು ನಾನು ಸಚಿವನಾಗಲು ಬಯಸುವುದಿಲ್ಲ. ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 17 ಜನರಲ್ಲಿ ಕೆಲವರಿಗೆ ಡಿಸಿಎಂ, ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಮಾನ ನೀಡಲು ಮಾತುಕತೆಯಾಗಿದೆ. ಆ ರೀತಿ ಆಗುವ ವಿಶ್ವಾಸ ಕೂಡ ಇದೆ. ರಮೇಶ ಜಾರಕಿಹೊಳಿ ಅವರಿಗೆ ಡಿಸಿಎಂ ನೀಡಬೇಕೆಂಬುದು ಸಹಜ ಬಯಕೆ ಎಂದರು.
ಇದೇ ವೇಳೆ ಡಿಸಿಎಂ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದರಿಂದ ಗೌರವ ಕಡಿಮೆಯಾಗಲಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ