*ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತನ ಆರೋಗ್ಯ ವಿಚಾರಿಸಿದ ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಕಬ್ಬಿನ ಬೆಳೆಗೆ 3500 ರೂ. ದರ ನಿಗದಿ ಮಾಡುವಂತೆ ರೈತರು ಕೈಗೊಂಡಿರುವ ಪ್ರತಿಭಟನೆ ವೇಳೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥರಾಗಿರುವ ಅವರನ್ನು ಬೆಳಗಾವಿ ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಕೆ ಎಲ್ ಇ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಸ್ವಸ್ಥ ರೈತನ ಆರೋಗ್ಯ ವಿಚಾರಿಸಿದರು.
ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರ ಗ್ರಾಮದ ರೈತ ಲಕ್ಕಪ್ಪ ಗುಂಢದಾಳ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ರೈತನನ್ನು ಬೆಳಗಾವಿ ನಗರದ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದ ವಿಜಯೇಂದ್ರ ಅವರು, ಇಂದು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ ರೈತ ಲಕ್ಕಪ್ಪ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ನೇರವು ನೀಡಿ ಸಮಾಧಾನ ಹೇಳಿದರು.
ಈ ವೇಳೆ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿ ಮುಖಂಡ ಎಂ.ಬಿ. ಜಿರಲಿ, ಮಲ್ಲಣ್ಣ ಯಾದವಾಡ, ಮಹಾಂತೇಶ ವಕ್ಕುಂದ, ಮುರಗೇಂದ್ರಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು.




