
ಪ್ರಗತಿವಾಹಿನಿ ಸುದ್ದಿ: ಟಾಲಿವುಡ್ ನಟ, ನೂತನ ರಾಜಕೀಯ ಪಕ್ಷ ತಮಿಳಿಗ ವೆಟ್ರಿ ಕಳಗಂ ಸಂಸ್ಥಾಪಕ ದಳಪತಿ ವಿಜಯ್ ನಡೆಸುತ್ತಿದ್ದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭೀಕರ ಕಾಲ್ತಿಳಿತ ಸಂಭವಿಸಿದ್ದು, ಈವರೆಗೆ 33 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಕರೂರಿನಲ್ಲಿ ಈ ದುರಂತ ಸಂಭವಿಸಿದೆ. ಇತ್ತೀಚೆಗಷ್ಟೇ ರಾಜಕೀಯಕ್ಕೆ ಪ್ರವೇಶಿಸಿರುವ ನಟ ವಿಜಯ್ ತಮ್ಮದೇ ಹೊಸ ಪಕ್ಷ ಸ್ಥಾಪಿಸಿದ್ದು, ಭರ್ಜರಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಅದೇ ರೀತಿ ಇಂದು ತಮಿಳುನಾಡಿನ ಎರಡು ಕಡೆಗಳಲ್ಲಿ ರ್ಯಾಲಿ ಆಯೋಜಿಸಿದ್ದರು. ಬೆಳಿಗ್ಗೆ ರ್ಯಾಲಿ ಮುಗಿಸಿ ಸಂಜೆ ಕರೂರಿನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ನಟ ವಿಜಯ್ ಭಾಗವಿಸಿದ್ದರು.
ಹೈವೆಯಲ್ಲಿಯೇ ಬೃಹತ್ ರ್ಯಾಲಿ ಆಯೋಜಿಸಲಾಗಿದ್ದು, ಬಸ್ ಮೇಲೆ ನಿಂತು ನಟ ವಿಜಯ್ ಭಾಷಣ ಮಾಡುತ್ತಿದ್ದರು. ಈ ವೇಳೆ ಲಕ್ಷಾಂತರ ಜನರು ನೆರೆದಿದ್ದು, ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ನಟ ವಿಜಯ್ ಅವರತ್ತ ಧಾವಿಸಿ ಬಂದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ. ದುರಂತದಲ್ಲಿ 33 ಜನರು ಸಾವನ್ನಪ್ಪಿದ್ದು, ಲೆಕ್ಕವಿಲ್ಲದಷ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವು ಮಕ್ಕಳು ನಾಪತ್ತೆಯಾಗಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ. ಮಕ್ಕಳನ್ನು ಹುಡುಕಾಡಲು ಪೋಷಕರು ಪರದಾಟ ನಡೆಸಿದ್ದಾರೆ. ಗಾಯಾಳುಗಳಲ್ಲಿ 40ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ ಕರೂರು ಆಸ್ಪತ್ರೆಯಲ್ಲಿ ಕುಟುಂಬದವರನ್ನು ಕಳೆದುಕೊಂಡವರ ಆಕ್ರಂದನ, ಗೋಳಾಟ ಮುಗಿಲು ಮುಟ್ಟಿದೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.