
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅಭಿಮಾನಿಗಳ ಬಳಗದಿಂದ ನ.7 ರಂದು ಕಿತ್ತೂರಿನಲ್ಲಿ ಜನ್ಮ ದಿನಾಚರಣೆ ಮಾಡಲಾಗುತ್ತಿದೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಶನಿವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನ.7 ರಂದು ಅವರ ಜನ್ಮ ದಿನಾಚರಣೆಯನ್ನು ಕಿತ್ತೂರಿನಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ಧಾರವಾಡ, ಬಾಗಲಕೋಟ, ವಿಜಯಪುರ ಹಾಗೂ ಬೆಳಗಾವಿಯ ವಿನಯ ಕುಲಕರ್ಣಿ ಅಭಿಮಾನಿಗಳು ಅವರ ಜನ್ಮ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಆದ್ದರಿಂದ ಸುಮಾರು 5,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆ ಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲ ಕಾರ್ಯಾಧ್ಯಕ್ಷರು, ಚಿತ್ರ ನಟ ದರ್ಶನ ಆಗಮಿಸಲಿದ್ದಾರೆ ಎಂದರು.
ಸಂಜೆ 4 ಕ್ಕೆ ಕಾರ್ಯಾಕ್ರಮ ಪ್ರಾರಂಭವಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. 5 ಗಂಟೆಗೆ ನಾಯಕರುಗಳು ಆಗಮಿಸಲಿದ್ದಾರೆ. 5.30ಕ್ಕೆ ರೈತ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ. ಸುಮಾರು ೨ ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ಇದು ಪಕ್ಷಾತೀತ ಕಾರ್ಯಕ್ರಮ ವಿವಿಧ ಮಠಾಧೀಶರು ಕಾರ್ಯಕ್ರಮಕ್ಕೆ ಆಗಮಿಸಿ ವಿನಯ ಕುಲಕರ್ಣಿ ಅವರಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಎಲ್ಲಕಡೆ ಕಾಂಗ್ರೆಸ್ ಅಲೆ ಸೃಷ್ಟಿಯಾಗಿದೆ. ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ಭಾಗದಿಂದ ಸ್ಪರ್ಧೆ ಮಾಡುವುದು ನಿಶ್ಚಿತ. ಆ ಭಾಗದ ಜನರಿಗೆ ಅನುಭವವಾಗಿದೆ. ಕಳೆದ ಚುನಾವಣೆಯಲ್ಲಿ ನಾವು ತಪ್ಪು ಮಾಡಿದ್ದೇವೆ ಎನ್ನುತ್ತಿದ್ದಾರೆ. ಈ ಬಾರಿ ವಿನಯ ಕುಲಕರ್ಣಿ ಅವರು ಹೊರಗಡೆಯಿದ್ದು ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಗೆಲವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಹೋರಟವರು ಕೈಗಾರಿಕೆ ಕಂಪನಿಗಳನ್ನು ಕಿತ್ತೂರಿಗೆ ತೆಗೆದುಕೊಂಡು ಬರಲಿ. ಕಿತ್ತೂರಿಗೆ ಬರುವ ಎಲ್ಲ ಕೈಗಾರಿಕೆಗಳು ಬೇರೆ ಜಿಲ್ಲೆಗಳಿಗೆ ಹೋಗುತ್ತಿರುವುದು ವಿಷಾಧನೀಯ ಎಂದರು.
ನಾನು ಸವದತ್ತಿ ಹಾಗೂ ಕುಡಚಿ ಮತಕ್ಷೇತ್ರದ ಉಸ್ತುವಾರಿ ಇದ್ದೇನೆ. ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಾಬಾ ಸಾಹೇಬ ಪಾಟೀಲ ಮಾತನಾಡಿ, ಸುಮಾರು 50 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಬರುವ ಎಲ್ಲ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಧರೇಪ್ಪ ಟಕ್ಕಣ್ಣವರ, ಕಿರಣ ಸಾಧುವನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
https://pragati.taskdun.com/latest/millions-of-people-for-vinaya-kulkarnis-birthday-on-november-7-presence-of-kharge-siddaramaiah-dkshivkumar-darshan-etc-hebbalkar-hattiholi-information/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ