
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲ ಪೋಸ್ಟರ್, ಬ್ಯಾನರ್, ಗೋಡೆಬರಹಗಳನ್ನು ತೆರವುಗೊಳಿಸಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲ ತಂಡಗಳು ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಮಾ.29) ನಡೆದ ಚುನಾವಣಾಧಿಕಾರಿಗಳ ಹಾಗೂ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯವನ್ನು ಒದಗಿಸಬೇಕು. ಸಂಬಂಧಿಸಿದ ಮತಗಟ್ಟೆಗಳ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳು ಕಡ್ಡಾಯವಾಗಿ ಮತಗಟ್ಟೆಗಳಿಗೆ ಭೇಟಿ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾದರಿ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ವರದಿಯಾದಲ್ಲಿ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಂಬಂಧಿಸಿದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಲು ಸೂಚನೆ:
ನಗದು, ಮದ್ಯ, ಉಡುಗೊರೆ ಮತ್ತಿತರ ವಸ್ತುಗಳ ಅಕ್ರಮ ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಬೇಕು. ಈ ರೀತಿಯ ಅಕ್ರಮ ಸಾಗಾಣಿಕೆ ವೇಳೆ ವಶಪಡಿಸಿಕೊಂಡ ವಸ್ತುಗಳ ಮೇಲೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಭಾವಚಿತ್ರಗಳಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು.
ಭಾವಚಿತ್ರವಿರುವ ಅಥವಾ ಪಕ್ಷದ ಚಿಹ್ನೆ ಕಂಡುಬಂದಾಗ ಸಂಬಂಧಿಸಿದವರನ್ನೇ ಮೊದಲ ಆರೋಪಿಯನ್ನಾಗಿಸಬೇಕು. ವಾಹನ ಚಾಲಕರು ಮತ್ತಿತರ ವ್ಯಕ್ತಿಗಳನ್ನು ಎರಡು, ಮೂರನೇ ಆರೋಪಿಗಳನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಪರವಾನಿಗೆಯನ್ನು ನೀಡಲು ಅನುಕೂಲವಾಗುವಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಆರಂಭಿಸಬೇಕು.
ನೀತಿಸಂಹಿತೆ ಜಾರಿಗೆ ಬಂದಿರುವುದರಿಂದ ಮೊದಲ 24 ಗಂಟೆ ಅತ್ಯಂತ ಪ್ರಮುಖವಾಗಿದೆ. ಸಂಬಂಧಿಸಿದ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ತಕ್ಷಣವೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಅಗತ್ಯ ಮಾಹಿತಿಯನ್ನು ನೀಡಬೇಕು.
ಎಲ್ಲ ಪ್ರವಾಸಿಮಂದಿರದ ಕೊಠಡಿಗಳನ್ನು ತೆರವುಗೊಳಿಸಿ ಸಂಬಂಧಿಸಿದ ಚುನಾವಣಾಧಿಕಾರಿಗಳ ಸುಪರ್ದಿಗೆ ಪಡೆದುಕೊಳ್ಳಬೇಕು.
ಅನಧಿಕೃತ ವ್ಯಕ್ತಿಗಳಿಗೆ ಅಥವಾ ಸಭೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.ಮಾದರಿ ನೀತಿಸಂಹಿತೆ ಉಲ್ಲಂಘನೆ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಅಕ್ರಮ ನಗದು, ಮದ್ಯ ಮತ್ತಿತರ ವಸ್ತುಗಳ ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದರು. ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಚುರುಕುಗೊಳಿಸಿದಷ್ಟು ಅಕ್ರಮಗಳನ್ನು ತಡೆಗಟ್ಟಲು ಅನುಕೂಲವಾಗುತ್ತದೆ. ಆದ್ದರಿಂದ ವಾಹನಗಳನ್ನು ಸಮರ್ಪಕವಾಗಿ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಿದರು. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪರವಾನಿಗೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಮಾತನಾಡಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು/ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಇದರಿಂದ ಅಧಿಕೃತ ಮತ್ತು ಅನಧಿಕೃತ ವ್ಯಕ್ತಿಗಳನ್ನು ಗುರುತಿಸಲು ಅನುಕೂಲವಾಗುತ್ತದೆ.
ಚುಮಾವಣೆಗೆ ಹಾಗೂ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಕಂಡುಬಂದರೆ ಚುನಾವಣಾಧಿಕಾರಿಗಳು ಕೂಡಲೇ ದೂರ ದಾಖಲಿಸಬೇಕು. ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿತ ತಂಡಗಳು ತೀವ್ರ ನಿಗಾ ವಹಿಸಬೇಕು ಎಂದು ಡಾ.ಸಂಜೀವ ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಮಾದರಿ ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ವಿವಿಧ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ