
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ 3ನೇ ರೈಲ್ವೆಗೇಟ್ ಬಳಿ ಮೇಲ್ಸೆತುವೆ ಉದ್ಘಾಟನೆ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಈ ಸಂಬಂಧ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಆಮಂತ್ರಣ ಪತ್ರಿಕೆ ಪ್ರಕಟಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದೆ ಮಂಗಲಾ ಅಂಗಡಿ ಉದ್ಘಾಟನೆ ನಡೆಸಲಿದ್ದಾರೆ. ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗೌರವ ಉಪಸ್ಥಿತಿ ಎಂದು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಶಾಸಕ ಅನಿಲ ಬೆನಕೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ, ಪ್ರಕಾಶ ಹುಕ್ಕೇರಿ, ತಳವಾರ ಸಾಬಣ್ಣ, ಲಖನ್ ಜಾರಕಿಹೊಳಿ ಗೌರವ ಅತಿಥಿಗಳೆಂದು ಉಲ್ಲೇಖಿಸಲಾಗಿದೆ.
ಆದರೆ ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಲ್ಲ. ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿಲ್ಲ. ಈ ಇಬ್ಬರು ಶಾಸಕರು ಬೆಳಗಾವಿ ಮಹಾನಗರದ ಕೆಲವು ವಾರ್ಡ್ ಗಳ ವ್ಯಾಪ್ತಿ ಹೊಂದಿದ್ದಾರೆ. ಹಾಗಾಗಿ ಮಹಾನಗರ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರೊಟೋಕಾಲ್ ಪ್ರಕಾರ ಈ ಇಬ್ಬರು ಶಾಸಕರನ್ನು ಆಹ್ವಾನಿಸಬೇಕಾಗುತ್ತದೆ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುವುದರಿಂದ ಬೇರೆ ಕ್ಷೇತ್ರದ ಶಾಸಕರ ಹೆಸರನ್ನು ಹಾಕಿರಲಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. ಹಾಗಾದರೆ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೆಸರು ಹಾಕಿದ್ಹೇಗೆ? ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ.
——————
ಹಿಂದೆಲ್ಲ ರೈಲ್ವೆ ಓವರ್ ಬ್ರಿಜ್ ಉದ್ಘಾಟನೆಗೆ ನಮಗೆ ಆಮಂತ್ರಣವಿರುತ್ತಿತ್ತು. ಈಬಾರಿ ಏಕೆ ಹೀಗೆ ಮಾಡಿದ್ದಾರೋ ಗೊತ್ತಿಲ್ಲ. ಇದು ಸ್ಪಷ್ಟವಾಗಿ ಪ್ರೋಟೋಕಾಲ್ ಉಲ್ಲಂಘನೆಯಾಗಿದೆ
-ಸತೀಶ್ ಜಾರಕಿಹೊಳಿ, ಶಾಸಕ
ಅಂತೂ ಮೂರನೇ ರೈಲ್ವೇ ಗೇಟ್ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ