ಎಲ್ಲಿದೆ ಗೊತ್ತಾ ಬೆಂಡೆಕಾಯಿ, ಹಲ್ಗಿಮೂರ್ತಿ, ಬಾದಲ್ ಅಂಕಲಗಿ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಯಸ್ಸು ಮತ್ತು ಮಾನಸಿಕ ಆರೋಗ್ಯದ ಷರತ್ತು ಬಿಟ್ಟರೆ ಶಾಸಕರಾಗುವುದಕ್ಕೆ, ಸಂಸದರಾಗುವುದಕ್ಕೆ ಯಾವುದೇ ಅರ್ಹತೆ ಬೇಕಿಲ್ಲ. ಸೂಕ್ತ ವಿದ್ಯಾರ್ಹತೆಯೂ ಇಲ್ಲದ, ಸಾಮಾನ್ಯ ಜ್ಞಾನವೂ ಇಲ್ಲದವರು ಎಷ್ಟೋ ಜನ ನಮ್ಮ ಜನಪ್ರತಿನಿಧಿಗಳಾಗಿ ಬರುತ್ತಾರೆ.
ಇಲ್ಲೊಬ್ಬ ಅಭ್ಯರ್ಥಿ ನೋಡಿ, ಇವರಿಗೆ ತಮ್ಮ ಕ್ಷೇತ್ರದಲ್ಲಿರುವ ಊರುಗಳ ಹೆಸರೂ ಸರಿಯಾಗಿ ಗೊತ್ತಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ್ ಅವರ ಪೋಸ್ಟ್ ಈಗ ಭಾರೀ ವೈರಲ್ ಆಗಿದೆ. ಊರ ಹೆಸರೇ ಗೊತ್ತಿಲ್ಲದ ಇವರೆಂತಹ ಅಭ್ಯರ್ಥಿ ಎಂದು ಟೀಕೆಗಳು ಬರುತ್ತಿವೆ. ಕನ್ನಡವನ್ನಂತೂ ಕಗ್ಗೊಲೆ ಮಾಡಲಾಗಿದೆ.
ನಾಗೇಶ ಮನ್ನೋಳಕರ್ ತಮ್ಮ ಪ್ರಚಾರ ಸಭೆಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಬೆಂಡಿಗೇರಿ ಬದಲು ಬೆಂಡೆಕಾಯಿ ಎಂದು ಬರೆದಿದ್ದಾರೆ. ಹಾಲಗಿಮರಡಿ ಬರೆಯುುವುದಕ್ಕೆ ಹಲ್ಗಿ ಮೂರ್ತಿ ಎಂದು ಬರೆಯಲಾಗಿದೆ. ಬಡಾಲ್ ಅಂಕಲಗಿ ಬರೆಯಲು ಬಾದಲ್ ಅಂಕಲಗಿ ಎಂದಿದೆ. ಬಡಸ್ ಬರೆಯಲು ಬುಡಸ್ ಎಂದು ಬರೆಯಲಾಗಿದೆ.
ಬೆಂಡೆಕಾಯಿ, ಹಲ್ಗಿಮೂರ್ತಿ ಎಲ್ಲಿದೆ ಎಂದು ಬೆಳಗಾವಿಯ ಜನರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಪಾಪ, ಅವರಿಗೆ ತಮ್ಮ ಹಿಂಡಲಗಾ ಊರು ಬಿಟ್ಟು ಎಲ್ಲಿಯೂ ಪರಿಚಯವೇ ಇಲ್ಲ. ಅವರನ್ನು ತಂದು ಒಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಡಿದರೆ ಅವರೇನು ಮಾಡಬೇಕು ಎಂದೂ ಕೆಲವರು ವ್ಯಂಗ್ಯವಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ