ಪ್ರಕಾಶ ಗಿರಿಮಲ್ಲನವರ, ಬೆಳಗಾವಿ
ಮನುಷ್ಯನಿಗೆ ದುಃಖ ಏಕಿದೆ ಎಂದು ಕ್ರಿ.ಪೂ.ದಲ್ಲಿಯೇ ಬುದ್ಧನು ಸಂಶೋಧಿಸಿದ. ಮನುಷ್ಯನ ವರ್ತಮಾನದ ಬದುಕು ಸುಖಮಯವಾಗದಿರಲು ಆಶೆಯೇ ಕಾರಣವಾಗಿ ದುಃಖಮೂಲವಾಗಿದೆ ಎಂದು ಬುದ್ಧ ಹೇಳಿದ. ಬುದ್ಧನ ತರುವಾಯ ಎರಡು ಸಾವಿರ ವರ್ಷಗಳ ಹಿಂದೆ ಸಾಂಖ್ಯಕಾರಿಕೆಯ ಕರ್ತೃ ಈಶ್ವರಕೃಷ್ಣನು ಮನುಷ್ಯನಿಗೆ ದುಃಖ-ರೋಗ ರುಜಿನಗಳು ಏಕೆ ಬರುತ್ತವೆ? ಎಂದು ಚಿಂತಿಸಿದ. ಹೀಗೆ ಸಾವಿರ ಸಾವಿರ ವರುಷಗಳಿಂದ ಮನುಷ್ಯನ ಸುಖಮಯ ಬದುಕಿಗೆ ಬೇಕಾದ ಮೌಲ್ಯಗಳನ್ನು ಕಂಡುಕೊಳ್ಳಲು ಅನೇಕ ದಾರ್ಶನಿಕರು ಮಹಾನುಭಾವಿಗಳು ಪ್ರಯತ್ನಿಸುತ್ತ ಬಂದಿದ್ದಾರೆ. ಅಂಥ ಸಂತ ಮಹನೀಯರಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಒಬ್ಬರು.
ಮನುಷ್ಯನಿಗೆ ವರ್ತಮಾನದ ಬದುಕು ಬಹಳ ಮುಖ್ಯ ಎಂದು ಹೇಳುತ್ತಾರೆ. ಆದರೆ ವರ್ತಮಾನವು ಭೂತ ಮತ್ತು ಭವಿಷ್ಯತ್ಗಳ ನಡುವಿನ ಬಿಂದುವಾಗಿದೆ. ಭೂತಕಾಲದ ಗತನೆನಪುಗಳೊಂದಿಗೆ, ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡು ಬದುಕುವುದು ವರ್ತಮಾನದ ಕರ್ತವ್ಯವಾಗಿದೆ. ಆದರೆ ಕೆಲವರು ಭೂತಕಾಲದ ಗತನೆನಪುಗಳಿಗೆ ಜೋತು ಬಿದ್ದು ವರ್ತಮಾನ ಮತ್ತು ಭವಿಷ್ಯತ್ತುಗಳನ್ನು ಮರೆತು ಬಿಡುತ್ತಾರೆ; ಇನ್ನು ಕೆಲವರು ಭವಿಷ್ಯದ ಕನಸುಗಳನ್ನು ಕಾಣುತ್ತ ವರ್ತಮಾನದ ಸುಖಮಯ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ.
ಅಂತೆಯೆ ಅನುಭಾವಿ ಅಲ್ಲಮಪ್ರಭುದೇವರು ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎಂದು ಹೇಳುತ್ತಾರೆ. ನಾವು ನಿಂತ ಹೆಜ್ಜೆ ಅಂದರೆ ವರ್ತಮಾನವನ್ನು ಅರ್ಥಮಾಡಿಕೊಳ್ಳಲು ‘ಹಿಂದಣ ಹೆಜ್ಜೆ’ಗಳನ್ನು ಅಂದರೆ ನಮ್ಮ ಭಾರತೀಯ ಪುರಾತನ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಹಿಂದಣ ಹೆಜ್ಜೆಯಲ್ಲಿ ವೇದಗಳಿವೆ, ಉಪನಿಷತ್ತುಗಳಿವೆ, ದಾರ್ಶನಿಕರು-ಸಂತರು-ಮಹAತರು-ಋಷಿಗಳು -ಶರಣರು ಇದ್ದಾರೆ.
ಅವರು ಕೊಟ್ಟ ಸಾರ್ವಕಾಲಿಕ ಮೌಲ್ಯಗಳಿವೆ. ಉದಾತ್ತವೂ ಉಜಲ್ವವೂ ಆದ ಪರಂಪರೆಯಿದೆ. ಹೀಗಿದ್ದೂ ನಮ್ಮ ವರ್ತಮಾನದ ಬದುಕು ಅವೈಚಾರಿಕವಾಗಿದೆ-ಅಪಸವ್ಯದಿಂದ ಕೂಡಿದೆ. ಇದಕ್ಕೆ ಕಾರಣವೇನು, ನಾವು ಹಿಂದಣ ಹೆಜ್ಜೆಯನ್ನು ಮರೆತಿರುವುದೇ ಆಗಿದೆ. ಹಿಂದಣ ಹೆಜ್ಜೆ ಮತ್ತು ಭವಿಷ್ಯದ ಶೋಧಗಳನ್ನು ನಾವು ಅರಿತುಕೊಂಡು, ವರ್ತಮಾನದಲ್ಲಿ ಆನಂದದಿಂದ ಬದುಕಬೇಕೆಂಬ ಆಶಯಕ್ಕಾಗಿ, ನೂತನ ಯುಗ-ಪುರಾತನ ಪಥಗಳ ನಡುವೆ ಸೇತುವೆಯಾಗಿ ನಿಂತಿದ್ದಾರೆ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು.
ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಜ್ಞಾನಯೋಗಾಶ್ರಮ ವಿಜಯಪುರ ಅವರು ನಮ್ಮ ದಿನಮಾನದ ಅಪರೂಪದ ರಾಷ್ಟçಸಂತರು. ಜನಮನದ ಮೈಲಿಗೆಯನ್ನು ತೊಳೆಯ ಬಂದ ಜ್ಞಾನಯೋಗಿಗಳು. ಜಗತ್ತಿನ ಸಕಲ ದರ್ಶನಗಳನ್ನು ಅಧ್ಯಯನ ಮಾಡಿದ ಅಪರೂಪದ ಚಿಂತಕರು. ಸಕಲಶಾಸ್ತçಗಳ ಅನುಭವವನ್ನು ಅನುಭಾವವಾಗಿ ಪರಿವರ್ತಿಸಿದ ಅನುಭಾವಿಗಳು. ನಡೆದಾಡುವ ದೇವರು, ಸುಳಿದಾಡುವ ಧರ್ಮ ಎಂದು ಜನಮಾನಸದಲ್ಲಿ ಉಳಿದುಕೊಂಡವರು.
ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರು ವಿಜಯಪುರ ಜಿಲ್ಲೆಯ ಬಿಜ್ಜರಗಿಯಲ್ಲಿ ಸೆಪ್ಟಂಬರ್ ೫, ೧೯೪೦ರಂದು ಜನಿಸಿದರು. (ನಮ್ಮ ರಾಷ್ಟçದ ಶ್ರೇಷ್ಠ ತತ್ವಜ್ಞಾನಿ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರ ಜನ್ಮದಿನವೂ ಸೆಪ್ಟಂಬರ್ ೫ ಆಗಿರುವುದು ಯೋಗಾಯೋಗ) ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪೂಜ್ಯ ಶ್ರೀ ಶಿವಾನಂದ ಜಗದ್ಗುರುಗಳ ಕರಕಮಲ ಸಂಜಾತರಾಗಿ ಹಳ್ಳಿ ಹಳ್ಳಿ ತಿರುಗಿ ಶುದ್ಧ ಅಧ್ಯಾತ್ಮದ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದರು. ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳು ಮಲ್ಲಿಕಾರ್ಜುನ ಸ್ವಾಮಿಗಳವರ ಪರಮಾಪ್ತ ಶಿಷ್ಯರಾಗಿ ಪಾಶ್ಚತ್ಯ ಮತ್ತು ಪೌರಸ್ತö್ಯ ಸಕಲ ದರ್ಶನಗಳನ್ನು ಅಧ್ಯಯನ ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ತ÷್ವಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಂಪಾದಿಸಿದರು.
ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳವರೊಂದಿಗೆ ಈ ನಾಡನ್ನು ಸುತ್ತಿದರು. ಕನ್ನಡ, ಮರಾಠಿ, ಸಂಸ್ಕೃತ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಪಾರಂಗತರಾಗಿ ತಮ್ಮ ಅಸ್ಖಲಿತವಾಣಿಯಿಂದ ಪ್ರವಚನ ಯೋಗಿಯಾದರು. ಪೂಜ್ಯರು ಶಿವಯೋಗದ ನಿಜಸಾಧಕರು. ಅಂತೆಯೇ ಲೋಕಸಂಗ್ರಹಕ್ಕಾಗಿ ಪ್ರವಚನ ಕಾಯಕವನ್ನು ನಿಷ್ಠೆಯಿಂದ ಕೈಕೊಂಡರು. ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ೧೯೭೫ರಲ್ಲಿ ಸ್ಥಾಪಿಸಿದ ವಿಜಯಪುರ ಜ್ಞಾನಯೋಗಾಶ್ರಮ ಶ್ರೀಗಳಿಗೆ ಒಂದು ನೆಲೆಯಾದರೂ, ಅನಿಕೇತನ ಪ್ರಜ್ಞೆಯ ಜಂಗಮಮೂರ್ತಿಯಾಗಿರುವ ಪೂಜ್ಯರು ಲೋಕಕಲ್ಯಾಣಕ್ಕಾಗಿ ಸದಾಸಂಚಾರಿಗಳಾದವರು.
ಅತ್ಯಂತ ಕಿರಿವಯಸ್ಸಿನಲ್ಲಿ ಯೋಗಜೀವನಕ್ಕೆ ಒಳಗಾದ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ಅಸಾಧಾರಣ ವೈರಾಗ್ಯಮೂರ್ತಿಗಳು. ಪೂಜ್ಯರನ್ನು ನೋಡಿದಾಗಲೆಲ್ಲ ನಮಗೆ ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರು ಜ್ಞಾಪಕಕ್ಕೆ ಬರುತ್ತಾರೆ. ಅಪಾರ ವಿದ್ವತ್ತಿನ ಖಣಿಯಾಗಿರುವ ಪೂಜ್ಯರು ಸದುವಿನಯದ ಸಾಕಾರಮೂರ್ತಿಗಳು. ತುಂಬಿ ತುಳುಕುವ ವಿದ್ವತ್ತಿದ್ದರೂ ನಿರಾಡಂಬರ ನಿರಾಲಂಬ ನಿರಪೇಕ್ಷ ಭಾವದ ಸಂತರಾಗಿ ಅವರು ನಮಗೆ ಕಾಣುತ್ತಾರೆ. ಆಶೆ-ಆಮಿಷಗಳನ್ನು ಗೆದ್ದವರು ಶರಣರೆಂದು ವಚನಕಾರರು ಹೇಳುತ್ತಾರೆ. ಅಂಥ ಶರಣತ್ವದ ಪರಿಪೂರ್ಣ ಲಕ್ಷಣವನ್ನು ನಾವು ಪೂಜ್ಯ ಸಿದ್ಧೇಶ್ವರ ಸ್ವಾಮಿಗಳವರಲ್ಲಿ ಕಾಣಬಹುದು.
ವೇದಗಳ ಕಾಲದಿಂದಲೂ ಪ್ರವಚನ ಕಲೆ ಇರುವುದನ್ನು ಗಮನಿಸಬಹುದು. ಗುರುಗಳು ವೇದ-ಉಪನಿಷತ್ತುಗಳ ಜ್ಞಾನವನ್ನು ತಮ್ಮ ಶಿಷ್ಯರಿಗೆ ಪ್ರವಚನದ ಮೂಲಕವೇ ಧಾರೆಯೆರೆಯುತ್ತಿದ್ದರು. ಶಿಷ್ಯರಿಗೆ ಮಾತ್ರವಲ್ಲ ಜ್ಞಾನಪಿಪಾಸುಗಳಾದ ಜಿಜ್ಞಾಸು ಭಕ್ತರಿಗೂ ಸಾಧನೆಯ ದಿಕ್ಕನ್ನು ತೋರಿಸುವ ಒಂದು ಪ್ರಕ್ರಿಯೆಯಾಗಿ ಪ್ರವಚನ ಬೆಳೆದು ಬಂದಿದೆ. ಪ್ರವಚನ ನಾಲ್ಕು ಗೋಡೆಯ ನಡುವೆ ನಡೆದರೆ ಅದು ಶಿಷ್ಯೋತ್ತಮರಿಗೆ ಅನುಗ್ರಹಿಸಿದ ಅರಿವಿನ ಬೆಳಕಾಗುತ್ತದೆ, ಅದೇ ಪ್ರವಚನ ಬಯಲಿನಲ್ಲಿ ಹೇಳಿದರೆ ಕೇಳಿದ ಲಕ್ಷ ಲಕ್ಷ ಕಿವಿಗಳು ಪಾವನವಾಗುತ್ತವೆ. ಅಂತೆಯೇ ಬುದ್ಧನಿಂದ ಹಿಡಿದು ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ವರೆಗೆ ಈ ಪ್ರವಚನ ಕಾಯಕ ಮುಂದುವರೆದುಕೊಂಡು ಬಂದಿದೆ.
ಗುರುವಾದವನು ತಾನು ಕಂಡು ಅನುಭವಿಸಿದ, ಆಚರಿಸಿದ, ಆನಂದಿಸಿದ ಮೌಲ್ಯಗಳನ್ನು ಪ್ರವಚನದಲ್ಲಿ ಪ್ರತಿಪಾದಿಸುತ್ತಾನೆ. ನಡೆ-ನುಡಿ ಒಂದಾದ ಗುರುಗಳ ನುಡಿಗಳು ಜ್ಯೋತಿರ್ಲಿಂಗವಾಗುತ್ತವೆ. ಅಂತೆಯೇ ಅಲ್ಲಮ ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದು ಹೇಳುತ್ತಾನೆ. ರಾಮಕೃಷ್ಣ ಪರಮಹಂಸರು ಬಹಳ ಕಲಿತವರಲ್ಲ, ಪ್ರಕಾಂಡ ವಾಗ್ಮಿಗಳಲ್ಲ, ಆದರೂ ತಮ್ಮ ಸದುವಿನಯದ ನುಡಿಗಳಿಂದ ಲೋಕದ ಜನರನ್ನೆಲ್ಲ ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ಇದೇ ಮಾದರಿಯಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ವಾಣಿಯನ್ನು ಕೇಳಲು ಲಕ್ಷ ಲಕ್ಷ ಜನರು ಕಾತರಿಸುತ್ತಾರೆ. ಪೂಜ್ಯರು ಹಳ್ಳಿ-ಪಟ್ಟಣ-ನಗರಪ್ರದೇಶದ ಭೇದವೆನಿಸಿದೆ, ಸಮುದಾಯದ ಭಕ್ತಿಯ ಕರೆಗೆ ಓಗೊಟ್ಟು ಆಗಮಿಸುತ್ತಾರೆ.
ಪೀಠ-ಸಿಂಹಾಸನ-ಪ್ರತಿಷ್ಠೆ ಮೊದಲಾದ ಯಾವ ಮಾಯಾಮೋಹದ ಸುಳಿಗೂ ಸಿಗದ ಪೂಜ್ಯರು ಒಂದು ಸಾಮಾನ್ಯ ಕುರ್ಚಿಯಲ್ಲಿ ನಿರಾಳವಾಗಿ ಕುಳಿತು ತಮ್ಮ ಅನುಭಾವದ ಬುತ್ತಿಯನ್ನು ಅತ್ಯಂತ ಸರಳವಾಗಿ, ಉಣಬಡಿಸುವ ಕಲೆ ವಿನೂತನವಾದುದು. ‘ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗ ಅಜ್ಜನಿಗಿಂತ ವಿಶಾಲವೂ ರಮ್ಯವೂ ಆದ ಸೃಷ್ಟಿಯನ್ನು ಕಾಣುತ್ತಾನೆ’ ಎಂಬ ಕುವೆಂಪು ಅವರ ಅನುಭವೋಕ್ತಿಯಂತೆ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ನಮಗೆ ಪ್ರವಚನದ ಮೂಲಕ ತೋರುವ ಜ್ಞಾನವೂ ಅಷ್ಟೇ ವಿಶಾಲವೂ, ವೈವಿಧ್ಯಮಯವೂ ಆಗಿದೆ.
ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಪ್ರವಚನ ಹೇಳುವಲ್ಲಿ ಸೂರ್ಯನೇಮಿ. ಅವರು ಸರಿಯಾದ ಸಮಯಕ್ಕೆ ಬಂದು ಪ್ರವಚನ ಪ್ರಾರಂಭ ಮಾಡುತ್ತಾರೆ. ಒಂದು ಗಂಟೆ ಕ್ಲುಪ್ತ ಅವಧಿಯಲ್ಲಿ ಹೇಳಬೇಕಾದುದನ್ನು ಹೇಳಿ, ಸಂಸ್ಕೃತ ಉಕ್ತಿ, ವಚನಗಳ ನುಡಿಗಳನ್ನು ವಿಶ್ಲೇಷಣೆಗೆ ಒಳಗು ಮಾಡಿ, ವಿವರಣೆ ನೀಡಿ, ದೃಷ್ಟಾಂತಗಳ ಮೂಲಕ ಮನದಟ್ಟಾಗಿಸುತ್ತಾರೆ. ಪೂಜ್ಯರ ಪ್ರವಚನ ಜನಸಮುದಾಯದಲ್ಲಿ ಒಂದು ರೀತಿಯ ಕ್ರಿಯಾತ್ಮಕವಾದ ಸಮಯಪ್ರಜ್ಞೆಯನ್ನು ಕಲಿಸಿ, ಒಂದು ಶಿಸ್ತಿಗೆ ಒಳಪಡಿಸುತ್ತದೆ.
ಜೀವನದುದ್ದಕ್ಕೂ ಸಾಧನೆ ಮಾಡುತ್ತ ಬಂದಿರುವ ಪೂಜ್ಯರು ಕವಿಹೃದಯದವರು. ‘Songs of silence’ ಎಂಬ ಅವರ ಕವನ ಸಂಕಲನ ಅನುಭಾವ ಮತ್ತು ವಿದ್ವತ್ಲೋಕದ ಗಮನ ಸೆಳೆದಿರುವುದನ್ನು ಕಾಣಬಹುದು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿರಂತರವಾಗಿ ಮಾಡುತ್ತಿದ್ದ ಪ್ರವಚನಗಳನ್ನೆಲ್ಲ ಅಕ್ಷರರೂಪದಲ್ಲಿ ದಾಖಲಿಸಿದ ಶ್ರೇಯಸ್ಸು ಪಜ್ಯ ಶ್ರೀಗಳವರದು. ‘ಮದ್ಭಗವದ್ಗೀತೆ’, ‘ಕಠೋಪನಿಷತ್ತು’, ‘ಶ್ವೇತಾಶ್ವತರೋಪನಿಷತ್’ ‘ಕೇನೋಪನಿಷತ್ತು’, ‘ಮಾಂಡುಕೋಪನಿಷತ್ತು’, ಮುಂಡುಕೋಪನಿಷತ್ತು’, ‘ಸಿದ್ಧಾಂತ ಶಿಖಾಮಣಿ’, ‘ಪತಂಜಲಿ ಯೋಗಸೂತ್ರ’ ಮೊದಲಾದ ಸಂಸ್ಕೃತ ಮಹಾಗ್ರಂಥಗಳಿಗೆ ಸರಳಗನ್ನಡದಲ್ಲಿ ವ್ಯಾಖ್ಯಾನವನ್ನು ನೀಡಿ ಜ್ಞಾನಪಿಪಾಸುಗಳ ದಾಹವನ್ನು ಹಿಂಗಿಸಿದ್ದಾರೆ.
‘ಶಾಂತಿಪಥ’, ‘ಸಿದ್ಧರಾಮೇಶ್ವರ ವಚನಗಳು’, ಸಮಾಜ ಸಂಪದ’ ‘ಹಠಯೋಗ’, ‘ವಿಶ್ವಧರ್ಮದ ವಿವಿಧ ಸೂತ್ರಗಳು’, ‘ಈಶಾವಾಶೋಪನಿಷತ್ತು’, ಮೊದಲಾದ ಪ್ರವಚನ ಕೃತಿಗಳನ್ನು ರಚಿಸಿ, ಅಧ್ಯಾತ್ಮ ಪ್ರಪಂಚವನ್ನು ಸಿರಿವಂತಗೊಳಿಸಿದ್ದಾರೆ. ಪೂಜ್ಯ ಶ್ರೀಗಳು ೧೯೯೧ರ ಶ್ರಾವಣ ಮಾಸದಲ್ಲಿ ಸುತ್ತೂರು ಮಠದಲ್ಲಿ ‘ಭಗವಚ್ಚಿಂತನ’ ವಿಷಯವಾಗಿ ೨೯ ದಿನಗಳ ಕಾಲ ಪ್ರವಚನ ಮಾಡಿದರು. ಆ ಪ್ರವಚನ ಇಡೀ ನಾಡಿನ ಗಮನ ಸೆಳೆಯಿತು. ಪ್ರವಚನದ ಸಾರ ‘ಭಗವಚ್ಚಿಂತನ’ ಎಂಬ ಕೃತಿಯಲ್ಲಿ ಪ್ರಕಟವಾಯಿತು. ಈ ಕೃತಿ ಇಲ್ಲಿಯವರಿಗೆ ಐವತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆಯನ್ನೆ ನಿರ್ಮಿಸಿದೆ. ನಂತರದ ದಿನಮಾನದಲ್ಲಿ ಪೂಜ್ಯ ಶ್ರೀಗಳ ಪ್ರವಚನಗಳನ್ನು ಡಾ. ಶ್ರದ್ಧಾನಂದ ಸ್ವಾಮಿಗಳು ವ್ಯವಸ್ಥಿತವಾಗಿ ಸಂಗ್ರಹಿಸಿ, ಸಂಕಲಿಸಿ, ಸಂಪಾದಿಸಿ ಪ್ರಕಟಿಸತೊಡಗಿದರು. ‘ನಾನಾರು’, ‘ಆನಂದಯೋಗ’, ‘ಭಕ್ತಿಯೋಗ’, ‘ಇದು ಸತ್ಯಾನ್ವೇಷಣೆ’, ‘ಬದುಕು’ ಮೊದಲಾದ ನಾಲ್ವತ್ತಕ್ಕೂ ಹೆಚ್ಚು ಪ್ರವಚನ ಸಂಗ್ರಹಗಳು ಪ್ರಕಟಗೊಂಡಿವೆ.
ಸುತ್ತೂರು ಮಠದಲ್ಲಿ ನಾಲ್ಕಾರು ಚಿಂತಕರೊಂದಿಗೆ ಸೇರಿ ‘ಬಸವಾದಿ ಶಿವಶರಣರ ವಚನಗಳಿಗೆ ಮರುವ್ಯಾಖ್ಯಾನ’ ಬರೆಯುವ ಕಾರ್ಯವನ್ನು ಪೂಜ್ಯರು ಕೈಕೊಂಡರು. ಅವರ ಪ್ರಯತ್ನದ ಫಲವಾಗಿ ‘ಬಸವೇಶ್ವರ ವಚನ ದೀಪಿಕೆ’ ಮೊದಲ ಸಂಪುಟ ಪ್ರಕಟವಾಯಿತು. ನಂತರ ಪೂಜ್ಯ ಶ್ರೀಗಳೇ ಬರೆದ ‘ಅಲ್ಲಮನ ವಚನ-ನಿರ್ವಚನ’ ಒಂದು ಅದ್ಭುತವಾದ ಕೃತಿಯಾಗಿದೆ. ಅಲ್ಲಮನ ಅನುಭಾವವನ್ನು ಅತ್ಯಂತ ಸರಳವಾಗಿ ಹೇಳುವ ಕೃತಿ ಇದಾಗಿದೆ. ಇಂಥ ಕೃತಿಯನ್ನು ಮೀರಿಸುವ ಇನ್ನೊಂದು ಕೃತಿ ಕನ್ನಡದಲ್ಲಿ ಬಂದಿಲ್ಲವೆAಬುದು ಆಶ್ಚರ್ಯದ ಸಂಗತಿಯಾಗಿದೆ.
ಪೂಜ್ಯರ ಹೊಳಪುಳ್ಳ ಕಣ್ಣು, ಅಂತಃಕರಣ ಉಕ್ಕಿ ಹೊರಸೂಸುವ ವಾತ್ಸಲ್ಯಪೂರ್ಣ ನಗು, ಹೃದ್ಯವಾದ ಮಾತು, ಇವೆಲ್ಲ ಯಾರನ್ನೂ ವಿನೀತರನ್ನಾಗಿ ಮಾಡುತ್ತವೆ. ಖಾದಿ ಬಿಳಿ ಬಟ್ಟೆ ಧರಿಸಿ, ಪ್ರವಚನ ಮಂಟಪಕ್ಕೆ ದಯಮಾಡಿಸುವಾಗ ಭಕ್ತಿ-ಜ್ಞಾನ-ವೈರಾಗ್ಯಗಳು ಮುಪ್ಪುರಿಗೊಂಡ ಸಾಕಾರಮೂರ್ತಿಯೇ ನಡೆದು ಬರುವಂತೆ ಭಾಸವಾಗುತ್ತದೆ. ಎರಡೂ ಕೈಗಳನ್ನು ಜೋಡಿಸಿ ಭಕ್ತವೃಂದವನ್ನು ಶ್ರೀಗಳವರು ನಮಿಸುವಾಗ ಅದೆಂತಹ ಭಕ್ತಿಸಂವೇದನೆಯುಂಟಾಗುತ್ತದೆಂಬುದನ್ ನು ಬರೆದು ಹೇಳುವುದು ಕಠಿಣ.
ಪೂಜ್ಯರು ನಿಜವಾದ ಅರ್ಥದಲ್ಲಿ ಜಂಗಮ ಮೂರ್ತಿಗಳಾಗಿ ಕಾರ್ಯ ಮಾಡುತ್ತಿದ್ದಾರೆ. ಅವರ ಮಠ ಯಾವುದು? ಅವರ ವಾಸಸ್ಥಾನ ಯಾವುದು? ಎಂಬ ಪ್ರಶ್ನೆಗಳಿಗೆ ಪ್ರಭಲಿಂಗಲೀಲೆಯಲ್ಲಿ ಅಲ್ಲಮಪ್ರಭು ಹೇಳಿದ ಉತ್ತರಗಳನ್ನೇ ಹೇಳಬಹುದಾಗಿದೆ. ‘ದೇಶವೆಮ್ಮದು ಹೇಳುವೊಡೆ ಪರದೇಶ, ಲೇಸಮಾಡುವ ಠಾವುಗಳಭಿಲಾಷೆಯಿಲ್ಲದೆ ಹೊದ್ದುವೆವು’ ಎಂಬ ಪ್ರಭುವಿನ ಮಾತುಗಳು ಶ್ರೀಗಳವರಿಗೆ ಇದ್ದಕ್ಕಿದಂತೆ ಒಪ್ಪುತ್ತವೆ. ‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’ ಜೀವನ-ಧ್ಯೇಯ ಅವರದಾಗಿದೆ.
ಶ್ರೀಗಳವರದು ತಪೋನಿಷ್ಠ ಜೀವನ. ಪೂಜೆ, ಜಪ ತಪಗಳಲ್ಲಿ ಶ್ರೀಗಳವರದು ಅಚಲವಾದ ನಿಯಮವಿದೆ. ಅದಕ್ಕೆ ನಿಯಮಿತತನದ ಒಪ್ಪವಿಟ್ಟಿದ್ದಾರೆ. ಶರಣರ ಕಾಯಕಧರ್ಮವನ್ನು ಅವರು ಕಡೆಗಣಿಸುವವರಲ್ಲ. ಅವರ ಸ್ವಾನುಭಾವವೇ ಒಂದು ಶಿವಾನುಭವ. ಅದನ್ನೆ ಪ್ರವಚನದ ಮೂಲಕ ಬಿತ್ತರಿಸುತ್ತಾರೆ. ಎಲ್ಲ ಬಗೆಯ ಅಧ್ಯಾತ್ಮಜ್ಞಾನವನ್ನು ಅವರು ಅರಿತುಕೊಂಡು ಅದನ್ನೇ ಸಹಜವಾದ, ತಿಳಿಯಾದ ಪಂಡಿತಮಾನ್ಯವಾದ ಪಾಮರ ಗ್ರಾಹ್ಯವಾದ ಭಾಷೆಯಲ್ಲಿ ತಿಳಿಸಿಕೊಡುತ್ತಾರೆ. ಅವರ ಪ್ರವಚನ ಕಲೆ ದೈವದತ್ತವಾಗಿ, ಗುರುವಿನ ಹರಕೆಯಾಗಿ ಬಂದ ಮಹಾಕೊಡುಗೆಯಾಗಿದೆ. ಅವರ ಪ್ರವಚನ ಎಷ್ಟು ದಿನ ಕೇಳಿದರೂ ಕೇಳಬೇಕೆನ್ನುವ ಆಶೆ ಹೆಚ್ಚುತ್ತಲೇ ಹೋಗುತ್ತದೆ. ಒಂದು ದಿನವೂ ಅವರು ಪ್ರವಚನ ಮಾಡುವ ಕಾಯಕವನ್ನು ತಪ್ಪಿಸಲಾರರು.
ಮನುಷ್ಯನಲ್ಲಿರುವ ಅವಗುಣಗಳನ್ನು ಕಳೆದುಕೊಂಡು, ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು, ಕರ್ಮಯೋಗದಿಂದ, ಭಕ್ತಿಯೋಗದ ಸಾಧನೆ ಮಾಡಿ, ಭಕ್ತಿಯೋಗದಿಂದ ಜ್ಞಾನಯೋಗದ ಕಡೆಗೆ ಸಾಗಿ ಭಕ್ತಿ-ಜ್ಞಾನ-ಕರ್ಮಗಳ ನಿಜವಾದ ಅರಿವು ಪಡೆಯುವುದೇ ಮನುಷ್ಯಜೀವನದ ಪರಮಗುರಿ ಎಂಬ ಸತ್ಯವನ್ನು ತಮ್ಮ ಪ್ರವಚನ ಮೂಲಕ ಅರುಹಿದ ಪೂಜ್ಯರ ಜ್ಞಾನಶಕ್ತಿಗೆ ಮಣಿಯದವರಾರು?
ಅಧ್ಯಾತ್ಮ-ವಿಜ್ಞಾನಗಳ ಸಮನ್ವಯ
ಅಧ್ಯಾತ್ಮ ಮತ್ತು ವಿಜ್ಞಾನ ಎರಡೂ ವಿರುದ್ಧ ಪದಗಳೆಂದು ಅನೇಕರು ಭಾವಿಸುತ್ತಾರೆ. ವಿಜ್ಞಾನವೆಂದರೆ ವಿವೇಕ. ಅದು ಕಾರಣ ಸಿದ್ಧಾಂತದ ಮೇಲೆ ಅವಲಂಬಿತವಾಗಿದೆ. ಕಾರಣವಿಲ್ಲದೆ ಯಾವುದನ್ನೂ ನಂಬಲಾರದು. ರೋಗಗಳು ಬರಲು ಕಾರಣವೇನು?, ಪ್ರಕೃತಿ ವಿಕೋಪಗಳಾಗಲು ಕಾರಣವೇನು? ಹೀಗೆ ಕಾರಣಗಳನ್ನು ಹುಡುಕುವ ಪ್ರಕ್ರಿಯೆಯನ್ನು ಅದು ಅವಲಂಬಿಸಿದೆ. ಹಾಗೆಯೇ ವಿಜ್ಞಾನ ಇಂದ್ರಿಯಾನುಭವಜನ್ಯವಾಗಿದೆ. ವಿಜ್ಞಾನದ ಕೆಲವು ಕೊಡುಗೆಗಳು ನಮಗೆ ಇಂದ್ರಿಯಗೋಚರವಾಗುವುದಿಲ್ಲ. ಉದಾ: ತಂತಿಯಲ್ಲಿ ವಿದ್ಯುತ್ ಹರಿಯುವುದು. ಆದರೆ ಯಂತ್ರಗಳು ತಿರುಗುವುದು, ವಿದ್ಯುದೀಪಗಳು ಹೊತ್ತಿಕೊಳ್ಳುವ ಮೂಲಕ ಅದರ ಅನುಭವ ನಮಗಾಗುತ್ತದೆ. ವಿಜ್ಞಾನವು ಖಚಿತ ಮತ್ತು ಸತ್ಯತತ್ವಗಳ ಮೇಲೆ ನಿಂತಿದೆ. ಯಾವುದೋ ದೇಶದಲ್ಲಿರುವ ವಿಜ್ಞಾನಿಯೊಬ್ಬ ಶೋಧಿಸಿರುವುದನ್ನು ಎಲ್ಲ ದೇಶದ ಜನರು ಒಪ್ಪಿ ಅದಕ್ಕೆ ಸಾರ್ವತ್ರಿಕ ಮುದ್ರೆಯೊತ್ತುತ್ತಾರೆ. ಉದಾ: ‘ಎಲ್ಲ ವಸ್ತುಗಳು ಗುರುತ್ವಾಕರ್ಷಣೆಗೆ ಒಳಗಾಗಿವೆ’ ಎಂಬ ಸಂಗತಿಯನ್ನು ಎಲ್ಲರೂ ಸತ್ಯವೆಂದು ನಂಬಿದ್ದಾರೆ. ಹೀಗೆ ವಿಜ್ಞಾನ ಕಾರಣಸಿದ್ಧಾಂತ, ಇಂದ್ರಿಯಾನುಭವ ಮತ್ತು ಖಚಿತತೆ ಈ ಮೂರು ಆಯಾಮಗಳ ಮೇಲೆ ಸಿದ್ಧಗೊಳ್ಳುತ್ತದೆ. ಇದೇ ತತ್ವಗಳ ಮೇಲೆಯೇ ಅಧ್ಯಾತ್ಮವಿಜ್ಞಾನವು ಪ್ರತಿಪಾದಿಸಲ್ಪಟ್ಟಿದೆ ಎಂಬುದನ್ನು ಜನಸಾಮಾನ್ಯರಿಗೂ ತಿಳಿಸುವ ಪ್ರಯತ್ನ ಮಾಡಿದವರು ಸ್ವಾಮಿ ವಿವೇಕಾನಂದರು ಮತ್ತು ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ಎಂಬುದು ಗಮನಾರ್ಹವಾದ ಸಂಗತಿಯಾಗಿದೆ.
ಭಾರತೀಯ ಸಂಸ್ಕೃತಿಯನ್ನು ತಮ್ಮ ಪ್ರವಚನಗಳ ಮೂಲಕ ಪರಿಚಯಿಸುವ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ವೇದ-ಉಪನಿಷತ್ತುಗಳ ಸಾರವನ್ನು ಆಧುನಿಕ ಯುಗದ ವಿಜ್ಞಾನದ ಆವಿಷ್ಕಾರಗಳೊಂದಿಗೆ ತೂಗಿ ನೋಡುತ್ತಾರೆ. ಇಂದು ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಜಗತ್ತು ಬೆರಳ ತುದಿಯಲ್ಲಿ ಬಂದು ನಿಂತಿದೆ. ಪಾರಂಪರಿಕ ಶಿಕ್ಷಣ ಪದ್ಧತಿಯೂ ಬದಲಾಗಿ, ಕಂಪ್ಯೂಟರ್-ಮೊಬೈಲ್ ಕೇಂದ್ರೀತ ಶಿಕ್ಷಣ ದೊರಕುತ್ತಿದೆ. ಹೀಗೆ ಏನೆಲ್ಲ ಬದಲಾವಣೆಗಳಾಗುತ್ತಿದ್ದರೂ ನಮ್ಮ ಧಾರ್ಮಿಕ ಸಂಪ್ರದಾಯಗಳು ವೈಚಾರಿಕ-ವೈಜ್ಞಾನಿಕ ತಳಹದಿಯ ಮೇಲೆ ನಿಲ್ಲದೇ ಮತ್ತಷ್ಟು ಮೂಢನಂಬಿಕೆ-ಅAಧಶ್ರದ್ಧೆಗಳನ್ನು ಬೆಳೆಸುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ಸಂಗತಿಯಾಗಿದೆ.
ಹಾಗೆ ನೋಡಿದರೆ ಭಾರತೀಯ ಸಂಸ್ಕೃತಿಯ ನಿರ್ಮಾಪಕರಲ್ಲಿ ವಿಜ್ಞಾನಿಗಳ ಕೊಡುಗೆಯೂ ಅನನ್ಯವಾಗಿದೆ. ಆರ್ಯಭಟ್, ವರಾಹ-ಶುಶ್ರುತ ಮೊದಲಾದ ಮಹಾನುಭಾವರು ಜ್ಞಾನ-ವಿಜ್ಞಾನಕ್ಕೆ ನೀಡಿದ ಕಾಣಿಕೆಯೂ ಅಪೂರ್ವವಾದುದು. ಸೈದ್ಧಾಂತಿಕ ತಳಹದಿಯ ಮೇಲೆ ರೂಪುಗೊಂಡಿದ್ದ ಭಾರತೀಯ ದರ್ಶನಗಳೆಲ್ಲ ಆಚಾರ್ಯವರ್ಗದವರ ಭಾಷ್ಯಯ ಹಿಡಿತದಲ್ಲಿ ಸಿಕ್ಕು ವೈಜ್ಞಾನಿಕ ಸತ್ಯಗಳ ಮೇಲೆ ಮೂಢನಂಬಿಕೆ-ಅಂಧಶ್ರದ್ಧೆಯ ಮುಚ್ಚಳ ಮುಚ್ಚಿತು. ಮನುಷ್ಯನ ಸ್ವಾರ್ಥ, ಅವನ ಅವೈಚಾರಿಕತೆ ಕಾರಣವಾಗಿ ಧರ್ಮಸಿದ್ಧಾಂತಗಳು ಅಪವ್ಯಾಖ್ಯಾನಕ್ಕೆ ಒಳಗಾದವು.
ಈ ಹಿನ್ನೆಲೆಯಲ್ಲಿ ಪೂಜ್ಯ ಸಿದ್ಧೇಶ್ವರ ಶ್ರೀಗಳು ಯಾವುದೇ ಧರ್ಮದ ಮುಖವಾಣಿಯಾಗಿ ಮಾತನಾಡುವುದಿಲ್ಲ. ಅವರಿಗೆ ಎಲ್ಲ ಧರ್ಮಗಳು ಅಷ್ಟೇ. ಎಲ್ಲ ಧರ್ಮಗಳ ಸಾರವನ್ನು ಸಾರುವುದೇ ಅವರ ಪರಮೋದ್ದೇಶವಾಗಿದೆ. ಅರ್ಥಹೀನವಾದ ಆಚರಣೆಗಳಲ್ಲಿ ತೊಡಗಿ ಮನುಷ್ಯ ಅವೈಚಾರಿಕತೆಯಲ್ಲಿ ಸ್ಥಗಿತಗೊಂಡಿದ್ದಾನೆ. ಅಂಥ ಮನುಷ್ಯನಲ್ಲಿ ಒಂದು ವೈಚಾರಿಕ ಪ್ರಜ್ಞೆ ಮೂಡಬೇಕೆಂದರೆ ಅಧ್ಯಾತ್ಮದ ಜೊತೆಗೆ ವಿಜ್ಞಾನವೂ ಬೇಕು ಎಂಬುದು ಶ್ರೀಗಳ ಅಭಿಪ್ರಾಯ.
‘ಧರ್ಮವಿಲ್ಲದ ವಿಜ್ಞಾನ ಕುರುಡು; ವಿಜ್ಞಾನವಿಲ್ಲದ ಧರ್ಮ ಕುಂಟು’ ಎಂದು ಜಗತ್ಪ್ರಸಿದ್ಧ ವಿಜ್ಞಾನಿ ಐನ್ಸ್ಟೀನ್ ಹೇಳುತ್ತಾನೆ. ಯಾವ ವ್ಯಕ್ತಿಯಲ್ಲಿ ವೈಜ್ಞಾನಿಕ ಮನೋಭಾವ ಇರುತ್ತದೆಯೋ ಅಂಥ ವ್ಯಕ್ತಿ ಶುದ್ಧ ಅಧ್ಯಾತ್ಮಜೀವಿಯಾಗಬಲ್ಲ ಎಂದು ಶ್ರೀಗಳು ಹೇಳುತ್ತಾರೆ. ಎಲ್ಲವನ್ನು ಪ್ರಶ್ನಿಸುವ, ಅದಕ್ಕೆ ಸಮರ್ಪಕ ಉತ್ತರವನ್ನು ಕಂಡುಕೊಳ್ಳುವ ಸಕಾರಾತ್ಮಕ ಮನೋಭಾವ ಬೇಕು. ಆದರೆ ನಮ್ಮ ತರುಣರು ಒಂದು ಅಸ್ವಸ್ಥ ಪರಿಸರದಲ್ಲಿ ಬದುಕುತ್ತಿದ್ದಾರೆ. ಇತ್ತ ಅಧ್ಯಾತ್ಮದತ್ತ ಒಲವು ತೋರಿದರೂ ಸಮಕಾಲೀನ ಸಂದರ್ಭಗಳಿಗೆ ಯಾವುದೇ ರೀತಿ ಸ್ಪಂದಿಸಲಾರದಷ್ಟು ದುರ್ಬಲರಾಗಿದ್ದಾರೆ. ಇವರಿಗಾಗಿ ಪೂಜ್ಯ ಶ್ರೀಗಳು ಸಾವಿರಾರು ವರುಷಗಳ ಹಿಂದೆ ಕಠೋಪನಿಷತ್ತಿನಲ್ಲಿ ಹೇಳಿದ ‘ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಬೋಧತ’ ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ‘ಏಳಿರಿ! ಎಚ್ಚರಾಗಿರಿ, ನಾವು ಜ್ಞಾನಿಗಳು-ವಿಜ್ಞಾನಿಗಳು ಆಗಬೇಕಾದರೆ ನಮ್ಮೊಳಗಿನ ಅದ್ಭುತ ಶಕ್ತಿಯನ್ನು, ಮನಸ್ಸನ್ನು ದುಡಿಸಬೇಕೆಂದು ಪೂಜ್ಯರು ಪ್ರತಿಪಾದಿಸುತ್ತಾರೆ. ಯುವಜನಾಂಗದಲ್ಲಿ ವ್ಯಕ್ತಿತ್ವ ವಿಕಸನವಾಗಬೇಕು, ಅವರಲ್ಲಿ ಅಪಾರವಾದ ಶಕ್ತಿ-ಸಾಮರ್ಥ್ಯಗಳಿವೆ. ಅದನ್ನು ಸರಿಯಾದ ಉಪಕ್ರಮದಲ್ಲಿ ಉಪಯೋಗಿಸುವ ಮನಸ್ಸು ಮಾಡಬೇಕು. ಇಂದು ಯುವಕರು ಪಡೆಯುತ್ತಿರುವ ಶಿಕ್ಷಣ ಅವರನ್ನು ನಿಂತ ನೆಲದಿಂದ, ಪರಂಪರೆ ಸಂಸ್ಕೃತಿಗಳಿಂದ ದೂರ ಸರಿಸುತ್ತಿದೆ. ಮಾನವೀಯ ಮೌಲ್ಯಗಳು ಅಧಃಪತನಗೊಳ್ಳುತ್ತಿವೆ.
ವಿಜ್ಞಾನದ ಆವಿಷ್ಕಾರಗಳಿಂದ ಭೌತಿಕ ಶ್ರೀಮಂತಿಕೆಯನ್ನು ನಾವು ಪಡೆದಿದ್ದೇವೆ, ಭೋಗ ಸುಖದ ಬೆನ್ನುಹತ್ತಿದ್ದೇವೆ. ಆದರೆ ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಕಳೆದುಕೊಂಡಿದ್ದೇವೆ. ಇದಕ್ಕೆಲ್ಲ ನಮ್ಮ ಅತಿಯಾದ ಅಪೇಕ್ಷೆ-ಮೋಹಗಳೇ ಕಾರಣ ಎಂದು ಶ್ರೀಗಳು ಹೇಳುತ್ತಾರೆ. ಇಂದು ಕಂಪ್ಯೂಟರ್-ಮೊಬೈಲ್ಗಳಿAದ ಕ್ರಾಂತಿಯೇ ಆಗಿದೆ. ನಿಜ, ಆದರೆ ಅದರಿಂದ ಉತ್ಪಾದಿತವಾಗುತ್ತಿರುವ ಇ-ತ್ಯಾಜ್ಯ ಒಂದು ಜಾಗತಿಕ ಸಮಸ್ಯೆಯಾಗಿದೆ. ವಿಜ್ಞಾನಿಗಳು ಮನುಷ್ಯನ ಅವಶ್ಯಕತೆಗಳನ್ನು ಪೂರೈಸುತ್ತ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಬದುಕಲಾರದ ಸ್ಥಿತಿಗೆ ತಂದು ಬಿಟ್ಟಿದ್ದಾರೆ. ಏನೆಲ್ಲವನ್ನು ಬಿಟ್ಟಾರು; ಮೊಬೈಲ್ ಮಾತ್ರ ಬಿಡಲಾರರು ಎಂಬುವಷ್ಟರ ಮಟ್ಟಿಗೆ ಮನುಷ್ಯ ಅದರ ಬೆನ್ನು ಹತ್ತಿದ್ದಾನೆ. ಅದಕ್ಕಾಗಿ ಇಂದು ವಿಜ್ಞಾನಿಗಳು ಮೊಬೈಲ್ನಿಂದ ಮನುಷ್ಯನನ್ನು ದೂರ ಇಡುವುದು ಹೇಗೆ ಎಂಬುದರ ಕುರಿತು ಚಿಂತಿಸುತ್ತಿದ್ದಾರೆ ಎಂಬ ರೋಚಕ ಸಂಗತಿಯನ್ನು ಸಿದ್ಧೇಶ್ವರ ಸ್ವಾಮಿಗಳು ಬೆಳಗಾವಿ ಪ್ರವಚನದಲ್ಲಿ ಹೇಳಿದ್ದರು.
ವಿಜ್ಞಾನವಾದದ ಪರಿಣಾಮವಾಗಿ ನಾವು ಭೌತಿಕ ಶ್ರೀಮಂತಿಕೆಯ ಬದುಕು ಸಾಗಿಸಬಹುದು, ಆದರೆ ಮನಸ್ಸಿನ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ‘ಹಾಸಿಗೆಯನ್ನು ಕೊಳ್ಳಬಹುದು; ನಿದ್ರೆಯನ್ನಲ್ಲ’ ಎಂಬ ನುಡಿಯಂತೆ, ಭೋಗದ ವಸ್ತುಗಳನ್ನು ಖರೀದಿಸಬಹುದು, ಭೋಗಿಸಲು ಶಕ್ತವಾದ ಶರೀರ-ಮನಸ್ಸುಗಳೇ ಇಲ್ಲದಿದ್ದರೆ ಆ ಭೌತಿಕ ಸುಖದಿಂದ ಏನು ಪ್ರಯೋಜನ? ಅಂತಿಮಸತ್ಯದ ಸಾಕ್ಷಾತ್ಕಾರ ಜ್ಞಾನಿಗಳಿಗೆ, ಅನುಭಾವಿಗಳಿಗೆ, ವಿಜ್ಞಾನಿಗಳಿಗೆ ಸಾಧ್ಯವಾಗುತ್ತದೆ ಎಂದು ಶ್ರೀಗಳು ಹೇಳುತ್ತಾರೆ. ಅಬ್ದುಲ್ ಕಲಾಂ ಒಬ್ಬ ವಿಜ್ಞಾನಿಯಾಗಿರುವಂತೆ ಶ್ರೇಷ್ಠ ಅಧ್ಯಾತ್ಮಜೀವಿಯೂ ಆಗಿದ್ದರೂ ಎಂಬುದನ್ನು ಶ್ರೀಗಳು ಉದಾಹರಣೆಯಾಗಿ ನೀಡುತ್ತಾರೆ.
ಒಟಾರೆ, ವಿಜ್ಞಾನಕ್ಕೆ ಅಧ್ಯಾತ್ಮದ ಊರುಗೋಲು ಬೇಕು. ಅದರಿಂದಲೇ ಜಗದ ಏಳ್ಗೆ ಸಾಧ್ಯ ಎಂದು ಶ್ರೀಗಳು ಪರಿಭಾವಿಸಿದ್ದಾರೆ. ಶ್ರೀಗಳು ಸೂಕ್ತವಾದ ಉದಾಹರಣೆಗಳೊಂದಿಗೆ ಜನರ ಮನಸ್ಸಿಗೆ ತಟ್ಟುವ ರೀತಿಯಲ್ಲಿ ಉಪದೇಶ ನೀಡುತ್ತಾರೆ. ನೂತನ ಯುಗ-ಪುರಾತನ ಪಥಗಳ ನಡುವಿನ ಕೊಂಡಿಯಾಗಿ ವರ್ತಮಾನದ ಬದುಕನ್ನು ಸಹ್ಯಗೊಳಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಪೂಜ್ಯರ ಜೀವನ ನಮಗೆಲ್ಲ ಆದರ್ಶವೂ ಅನುಕರಣೀಯವೂ ಆಗಿದೆ. ಇಂಥ ಶ್ರೀಗಳು ನಮ್ಮನು ಅಗಲಿದ್ದಾರೆ. ಅವರ ಜೀವಿತ ಕಾಲದಲ್ಲಿ ನಾವೆಲ್ಲ ಇದ್ದೇವೆಂಬುದೇ ಒಂದು ಪವಾಡ! ಒಂದು ಸೋಜಿಗ!!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ