Latest

ಬದಲಾಗಬೇಕಿದೆ ದೃಶ್ಯ ಮಾಧ್ಯಮ. ಸುಸಂಸ್ಕೃತ, ಸದಭಿರುಚಿಯ ಚಿತ್ರಗಳೆಲ್ಲಿ ?

-ರವಿ ಕರಣಂ.

ಸಿನಿಮಾ ಎಂಬುದು ಭ್ರಮಾಲೋಕದಲ್ಲಿ 150 ನಿಮಿಷಗಳವರೆಗೆ, ದೈನಂದಿನ ಬದುಕಿನ ಯಾತನೆಗಳನ್ನೋ’ ಒತ್ತಡಗಳನ್ನೋ ಮರೆಸುವ ಒಂದು ದೃಶ್ಯ ಮಾಧ್ಯಮ. ಅದು ಹಲವು ಬಗೆಯ ಮನಸುಗಳನ್ನು ಒಂದೇ ರೇಖೆಯಲ್ಲಿ ಹಿಡಿದಿಡುವ ಸಾಮರ್ಥ್ಯವಿರುವ ಮಾಧ್ಯಮ. ಹಿಂದಿನ ದಶಕಗಳಲ್ಲಿ ಕೆಲವೇ ಆಯ್ದ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡು ಶತದಿನಗಳ ಪ್ರದರ್ಶನ ಕಾಣುತಿದ್ದವು. ಈಗ ಸಂದರ್ಭ ಹಾಗಿಲ್ಲ. ಏಕ ಕಾಲದಲ್ಲಿ ಪ್ರಪಂಚದಾದ್ಯಂತ ಸಾವಿರಾರು ಮಂದಿರಗಳಲ್ಲಿ ಪ್ರದರ್ಶನಗೊಂಡು ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸುವ ಪರಿಪಾಠ ಬೆಳೆದಿದೆ. ನೂರು ದಿನ, ಇಪ್ಪತ್ತೈದು ವಾರ, ಒಂದು ವರ್ಷ, ಎರೆಡು ವರ್ಷಗಳ ಕಾಲ ಪ್ರದರ್ಶನವಾಗುವಂತಹ ಪದ್ದತಿಯಿಲ್ಲ. ಏನಿದ್ದರೂ ಚಿತ್ರ ಎಷ್ಟು ಹಣ ಮಾಡಿತು ?ಎಂಬುದರ ಮೇಲೆ ಯಶಸ್ವಿ ಚಿತ್ರವೆಂದು ಪರಿಗಣಿಸಲಾಗುತ್ತದೆ. ಅದೂ ಕೂಡಾ ಸಮ್ಮತವಾಗಬಹುದು.

Related Articles

ಇತ್ತೀಚಿನ ದಿನಗಳಲ್ಲಿ ನೂರು, ಸಾವಿರ ಕೋಟಿ ಹಣ ಸಂಗ್ರಹ ಮಾಡುವ ಚಿತ್ರಗಳ ತಯಾರಿಕೆಯ ಗುರಿ ಚಿಗುರೊಡೆಯುತ್ತಿದೆ. ಹಲವು ಭಾಷೆಗಳಲ್ಲಿ ಬಂದ “ಬಾಹು ಬಲಿ” ಭಾಗ 1 ಮತ್ತು 2 ಚಿತ್ರಗಳು, ಹಾಗೇ “K G F” ಭಾಗ 1 ಮತ್ತು 2, ಸಧ್ಯಕ್ಕೆ ಸಿನಿ ಪ್ರಿಯರಿಗೆ ‘ಕಾಂತಾರ’ ಚಿತ್ರ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈಗಿನ ಟ್ರೆಂಡ್ ಪ್ಯಾನ್ ಇಂಡಿಯಾ. ಇತರೆ ಪ್ರಮುಖ ಭಾಷೆಗಳಲ್ಲಿ ತೆರೆಯ ಮೇಲೆ ಬರುವ ಸಂಪ್ರದಾಯ ಭರದಿಂದ ಶುರುವಾಗಿದೆ.

ಉದ್ದೇಶ ಮನೋರಂಜನೆ ಜೊತೆಗೆ ಪ್ರೇಕ್ಷಕರ ಅಭಿರುಚಿಗೆ ಇಂಬು ನೀಡುವಂತೆ ತಯಾರಿಸಿ, ಹಣ ಬಾಚುವುದೇ ಪ್ರಮುಖ ಗುರಿ. ಭಾರತೀಯ ಚಿತ್ರರಂಗವೆಂದರೆ ಕೇವಲ ಹಿಂದಿ ಚಿತ್ರರಂಗವೆಂದು ಪರಿಗಣಿಸುತ್ತಿದ್ದ ಬಾಲಿವುಡ್ ಮಂದಿಗೆ, ಸ್ಥಳೀಯ ಭಾಷೆಗಳ ಬಗ್ಗೆ ತಾತ್ಸಾರವಿರುತಿತ್ತು. ತಾವು ಅದ್ವಿತೀಯ ಸಾಧಕರೆಂಬ ಮದವೇರಿತ್ತು. ಅದೇನು ಸುಳ್ಳಲ್ಲ. ಈ ಅಭಿಪ್ರಾಯಕ್ಕೆ ತೆಲುಗಿನ ಜನಪ್ರಿಯ ನಟ ಚಿರಂಜೀವಿಯವರ ಹೇಳಿಕೆಯು ಪುಷ್ಟಿ ಕೊಡುತ್ತದೆ. ದಕ್ಷಿಣದವರ ಸಿನಿಮಾಗಳ ನಟರನ್ನು ಬಾಲಿವುಡ್ ಮಂದಿ ಹೇಗೆ ನೋಡುತ್ತಿದ್ದರು ಎಂದರೆ, ಒಂದು ಗ್ಯಾಲರಿಯಲ್ಲಿ ಇಡೀ ಭಾರತೀಯ ಚಿತ್ರರಂಗದ ನಟ ನಟಿಯರ ಭಾವಚಿತ್ರಗಳನ್ನು ಇಡಲಾಗಿತ್ತು. ಅವುಗಳಲ್ಲಿ ಡಾ॥ ರಾಜ್ ಕುಮಾರ್ ಅವರಂತಹ ಮೇರು ಕಲಾವಿದರನ್ನೇ ಗಣನೆಗೆ ತೆಗೆದುಕೊಂಡಿರಲಿಲ್ಲ. ಎನ್ ಟಿ ರಾಮರಾವ್, ಕೃಷ್ಣ, ಅಕ್ಕಿನೇನಿ ನಾಗೇಶ್ವರ ರಾವ್, ಶಿವಾಜಿ ಗಣೇಶನ್. ಎಂ ಜಿ ಆರ್ ಮುಂತಾದವರು ಅಸಾಧಾರಣ ಪ್ರತಿಭೆ ಉಳ್ಳವರು ಎಂದಿದ್ದನ್ನು ನೀವು ಗಮನಿಸಿರಬೇಕು.

ಆದರೆ ಇಂದು ಅದೇ ಬಾಲಿವುಡ್ ಇಂದು ಸ್ಥಳೀಯ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾಗಳನ್ನು ಎದುರಿಸಲು ಸಾಧ್ಯವಾಗದೇ ತಮ್ಮ ಚಿತ್ರಗಳ ಬಿಡುಗಡೆ ಮಾಡುವ ದಿನಾಂಕಗಳನ್ನು ಮುಂದೂಡುವ ಪರಿಸ್ಥಿತಿ. ಬಿಡುಗಡೆಯಾದ ಚಿತ್ರಗಳನ್ನು ಉತ್ತರ ಭಾರತದ ಜನರನ್ನೂ ಒಳಗೊಂಡಂತೆ ಜನ ಸಾರಾಸಗಟಾಗಿ ತಿರಸ್ಕಾರ ಮಾಡುತ್ತಿದ್ದಾರೆ. ಕಾರಣ ಗುಣಮಟ್ಟ ಜೊತೆಗೆ ಹಳೆಯ ಪರಿಕಲ್ಪನೆಗಳಿಂದ ಹೊರ ಬಂದು ಹೊಸ ಬಗೆಯ ಸಾಹಸಕ್ಕೆ ಕೈ ಹಾಕಲು ಸಾಧ್ಯವಾಗುತ್ತಿಲ್ಲವೆಂಬುದು. ಜೊತೆಗೆ ಹಿಂದುತ್ವ ಜಾಗೃತಿಯ ಅಭಿಯಾನ ಸರಿಯಾಗಿ ಬಾಲಿವುಡ್ ಮಂದಿಯ ಚಳಿ ಬಿಡಿಸಿದೆ. ದೇಶ ವಿರೋಧಾ ಭಾಸದ ಹೇಳಿಕೆಯಂತಲೋ ಏನೋ, Face book, WhatsApp, Twitter, Instagram ಗಳಲ್ಲಿ ಬರುವ ಸಂದೇಶದ ತುಣುಕುಗಳು ಕೆಲವು ಸಿನಿಮಾ ನಟರ ಚಿತ್ರಗಳನ್ನು ಸೋಲಿಸಲು ಕರೆ ಕೊಟ್ಟು ಸೋಲಿಸಿದ್ದಿದೆ.

ಕನ್ನಡದಲ್ಲಿ ಸಿನಿಮಾ ವೀಕ್ಷಕರ ವರ್ಗವೀಗ ಬದಲಾಗಿದೆ. 1995 ರಿಂದ ಈಚೆಗೆ ಬಂದ ಪೀಳಿಗೆಯವರೇ ಹೆಚ್ಚಾಗಿ ಚಿತ್ರ ಮಂದಿರಗಳತ್ತ ಮುಖ ಮಾಡುತ್ತಾರೆಯೇ ಹೊರತು,ಅದರ ಹಿಂದಿನ ಪೀಳಿಗೆಯವರ ಸಂಖ್ಯೆ ತುಸು ಕಡಿಮೆಯೇ. ಕಾರಣ ಸಮಾಜ ಮುಖಿ ಸಿನಿಮಾಗಳನ್ನು ನೀಡಿದ ಕುಮಾರತ್ರಯರು (ರಾಜ್ ಕುಮಾರ, ಉದಯ್ ಕುಮಾರ್, ಕಲ್ಯಾಣ್ ಕುಮಾರ್) ವಿಷ್ಣುವರ್ಧನ್, ಶ್ರೀನಾಥ್,ಪ್ರಭಾಕರ್, ಅಂಬರೀಶ್, ರಾಜೇಶ್,ಗಂಗಾಧರ್, ಅನಂತ್ ನಾಗ್- ಶಂಕರ್ ನಾಗ್ ಸಹೋದರರು, ರವಿಚಂದ್ರನ್, ರಮೇಶ್ ಅರವಿಂದ್, ಶಿವರಾಜ್ ಕುಮಾರ್,ಸುದೀಪ್, ಪುನೀತ್ ರಾಜಕುಮಾರ್ ಮಾಡಿದ ರಸವತ್ತಾದ ಕಥೆಗಳು ಮಾಯವಾಗಿವೆ. ಈಗಿನ ಜಾಯಮಾನ ಬರೀ ಲಾಂಗು, ಗನ್ ಗಳಿಗೆ ಸೀಮಿತವಾದ ಚಿತ್ರರಂಗಕ್ಕೇನಿದ್ದರೂ ನಿಜ ಜೀವನದ ಆಧಾರಿತ ಮತ್ತು ಕಾಲ್ಪನಿಕ ಸೇರಿದಂತೆ ರೌಡಿಸಂ ಕಥೆಗಳು ವಿಜೃಂಭಿಸುತ್ತವೆ. ದರ್ಶನ್, ಯಶ್,ಶಿವ ರಾಜಕುಮಾರ್ ಅದರಲ್ಲಿ ಮುಂದಿದ್ದಾರೆ. ಅದರ ನಡುವೆ ತೂರಿ ಬರುವ ಕೆಲವು ವಿಭಿನ್ನ ಪ್ರಯತ್ನದ ಜೇಮ್ಸ್, ಲಕ್ಕಿಮ್ಯಾನ್, ಗಂಧದ ಗುಡಿ, ಚಾರ್ಲಿ 777, ವಿಕ್ರಂ ರೋಣ ಅಂತಹ ಚಿತ್ರಗಳು ಗೆಲ್ಲುತ್ತಿವೆ. ಅಂದರೆ ಹಲವು ವಿಭಿನ್ನ ಪ್ರಯತ್ನಗಳಿಂದ ಬರುವ ಹೊಸ ಬಗೆಯ ಚಿತ್ರಗಳು ಜನರ ಮನಸೂರೆಗೊಳ್ಳುತ್ತಿವೆ.

ಇದರ ನಡುವೆ ಕಥೆಯ ಜೊತೆಗೆ ಸಾಹಿತ್ಯ ಮತ್ತು ಸಂಗೀತ ಕೀಳು ಅಭಿರುಚಿಯತ್ತ ತಿರುಗಿದೆ. ಸಾಹಿತ್ಯವಂತೂ ಶೇ 90 ರಷ್ಟು ಅಭಿರುಚಿಯ ನಾಲ್ಕನೇ ವರ್ಗಕ್ಕೆ ಸೇರಿದ್ದಾಗಿದೆ.
ಕುಟುಂಬ ಸಮೇತ ಕೇಳುವಂತಿಲ್ಲ. ಮುಜುಗರವಾಗುತ್ತದೆ. ರಾಗವೊಂದಕ್ಕೆ ಪದಗಳಿದ್ದರೆ ಸಾಕು. ‘ನಾನು ಗೋಲಿ ಸೋಡಾ ಬಾಟಲಿ’, ‘ಹಳೇ ಪಾತ್ರೆ ಹಳೇ ಕಬ್ಬಿಣ’, ದಾರು,ಬೀರು, ಮಂಚ, ‘ಲಕ್ಸ್ ಹಚ್ಚಿ ಸ್ನಾನ ಮಾಡಿದೆ’. ‘ಉಳ್ಳಾಗಡ್ಡಿ ತಿಂದಿದ್ವಿ’…. ಇತ್ಯಾದಿ ಪದಗಳ ಸಮೂಹವೇ ಸಾಕು. ಅದೊಂದು ಹಾಡು. ಮತ್ತೆ ಅದು ಸೂಪರ್ ಹಿಟ್ ಅಂತಾ ಗಣನೆ !

ಸಿನಿಮಾಗಳಲ್ಲಿ ಬದುಕಿನ ಜವಾಬ್ದಾರಿ ಮೂಡಿಸುವ ಅಂಶಗಳು ಬರಬೇಕಿದೆ. ದೇಶದ ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯ ಮತ್ತು ಭಾಷೆ ಸೊಗಡು, ಕಲೆ, ಚಿತ್ರ ಕಲೆ, ಲಲಿತ ಕಲೆ,ಇತಿಹಾಸ,ವಾಸ್ತುಶಿಲ್ಪ ಅನೇಕ ವಿಷಯಗಳ ನಿರೂಪಣೆಯಾಗಬೇಕಿದೆ. ಇದೀಗ ಬಂದ ಪೀಳಿಗೆ ಇನ್ನೂ ಜವಾಬ್ದಾರಿ ಹೊತ್ತಿಲ್ಲ. ಅದರ ಅರಿವು ಮೂಡಿಲ್ಲ.ಮೊದಲು ಕಥೆಗಾರರು, ನಿರ್ದೇಶಕರು,ನಟರು ಸುಸಂಸ್ಕೃತರಾಗಬೇಕು.ಅಂದಾಗ ಸಮಾಜ ಮುಖಿ ಚಿತ್ರಗಳು ಮೂಡಿ ಬರುತ್ತವೆ.

ಕರ್ನಾಟಕದ ಕರಾವಳಿ ತೀರಗಳ ವಿಸ್ಮಯ ನೋಟಗಳು

https://pragati.taskdun.com/amazing-views-of-karnatakas-coastline/

*ಸಿಗರೇಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್*

https://pragati.taskdun.com/govt-planning-to-ban-on-loose-cigarate-sales/

*ರಾಜ್ಯಕ್ಕೆ ಎರಡು ಶಾಕಿಂಗ್ ಸುದ್ದಿ…!*

https://pragati.taskdun.com/karnata1st-zika-virus5-yers-girlkarnatakacold-windrainbreathing-problemminister-sudhakarwarning/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button