Belagavi NewsBelgaum NewsEducation

*ಸ್ವಾವಲಂಬಿ ಮತ್ತು ಸುಸ್ಥಿರ ಭಾರತಕ್ಕೆ ತಾಂತ್ರಿಕ ನೈಪುಣತೆ ಜೊತೆಗೆ ನೈತಿಕತೆ ಮತ್ತು ಸಮಾಜಿಕ ಜವಾಬ್ದಾರಿ ಅವಶ್ಯ: ಡಾ ಟೆಸ್ಸಿ ಥಾಮಸ್*

ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ ಟಿ ಯು), ಬೆಳಗಾವಿಯ 24ನೇ ವಾರ್ಷಿಕ ಘಟಿಕೋತ್ಸವದ ಭಾಗ 2 ನ್ನು ಶನಿವಾರ, ದಿನಾಂಕ 08ನೇ ಫೆಬ್ರವರಿ, 2025 ರಂದು ಪೂರ್ವಾಹ್ನ 11.00 ಕ್ಕೆ ವಿ. ತಾ. ವಿ. “ಜ್ಞಾನ ಸಂಗಮ” ಆವರಣದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಥಾವರಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಿ ವಿ ಟಿ ಯು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪದವೀಧರರಿಗೆ ಸ್ವರ್ಣ ಪದಕಗಳನ್ನು ನೀಡಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು ಎಲ್ಲರನ್ನು ಅಭಿನಂದಸಿದರು. ಸರ್ ಎಂ ವಿಶ್ವೇಶ್ವೇರಯ್ಯ ಹೆಸರು ಒಂದೇ ತಮ್ಮ ಸಾಧನೆಗೆ ಪ್ರೇರಣೆ ಆಗುತ್ತದೆ ಎಂದು ಹೇಳಿದರು. ಇವತ್ತಿನ ಸ್ವರ್ಣ ಪದಕಗಳನ್ನು ಪಡೆದುಕೊಂಡವರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ಇದ್ದು ಪ್ರತಿ ಕ್ಷೇತ್ರದಲ್ಲಿ ಮಹಿಳೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು. ಒಂದು ರಾಷ್ಟ್ರದ ಅಭಿವೃದ್ಧಿ ಅದರ ತಂತ್ರಜ್ಞಾನ ಪ್ರಗತಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಇವತ್ತಿನ ಪದವೀಧರರು ಸಾಮಾಜಿಕ ಪ್ರಜ್ಞೆಯೊಂದಿಗೆ ಹೊಸ ಕನಸಗಳನ್ನು ಕಾಣುವುದಲ್ಲದೆ ಅವುಗಳನ್ನು ನನಸಾಗುವತ್ತ ದೃಷ್ಟಿಹರಿಸಿ “ವಿಕಸಿತ” ಮತ್ತು “ಆತ್ಮ ನಿರ್ಭರ ಭಾರತ” ನಿರ್ಮಾಣದಲ್ಲಿ ತಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೆ ಇವತ್ತಿನ ಪದವೀಧರರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು ಎಂದು ಹೇಳಿದರು. ಇವತ್ತು ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ನೀಡುವ ಚಿಂತನೆ ಮಾಡಿ ಅನುಷ್ಠಾನಗೊಂಡಿದ್ದು ಇದು ಕ್ರಾಂತಿಕಾರಿ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕರ್ನಾಟಕವನ್ನು ಜಾಗತಿಕ ತಾಂತ್ರಿಕ ಶಿಕ್ಷಣ ಕೇಂದ್ರವನ್ನಾಗಿಸಲು ಅನುಷ್ಠಾನ ಮಾಡಿದ ಕಾರ್ಯಕ್ರಮಗಳನ್ನು ಶ್ಲಾಘಿಸಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿ ಇವತ್ತಿನ ಪದವೀಧರರು ರಾಷ್ಟ್ರದಲ್ಲಿ ಮತ್ತೆ ಸ್ವರ್ಣಯುಗವನ್ನು ಸ್ಥಾಪಿಸಿ ವಿಶ್ವಗುರವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

ಘಟಿಕೋತ್ಸವ ಭಾಷಣ – ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ ಟೆಸ್ಸಿ ಥಾಮಸ್ ಇವರು ಘಟಿಕೋತ್ಸವ ಭಾಷಣ ಮಾಡಿದರು. ಘಟಿಕೋತ್ಸವ ಸಮಾರಂಭವು ನಿಮ್ಮ ಶೈಕ್ಷಣಿಕ ಪ್ರಯಾಣವನ್ನು ಪ್ರತಿಬಿಂಬಿಸುವುದಲ್ಲದೆ ನಿಮ್ಮ ಭವಿಷ್ಯದ ವೃತ್ತಿಜೀವನದಲ್ಲಿ ಬರಲಿರುವ ಅನಂತ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುವ ಒಂದು ಕ್ಷಣವಾಗಿದೆ. ಇಂದು, ನೀವು ಪದವಿಯ ಜೊತೆಗೆ ನಿಮ್ಮ ತಾಂತ್ರಿಕ ಪರಿಣತಿ ಅನ್ವಯ ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಪ್ರತಿಜ್ಞೆ ಮಾಡುತ್ತಿದ್ದೀರಿ ಎಂದು ಹೇಳಿದರು.

ಮೂಲಸೌಕರ್ಯ ವಿನ್ಯಾಸದಿಂದ ಕೂಡಿಕೊಂಡು ಪ್ರತಿಯೊಬ್ಬರ ಜೀವನವನ್ನು ಸುಧಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಮಾದರಿ ಸಮಾಜವನ್ನು ರೂಪಿಸುವುದು ಇವತ್ತಿನ ಇಂಜಿನಿಯರ್ ಪದವೀಧರರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ನಾವು ಇವತ್ತು ಅತಿ ವೇಗದ ತಾಂತ್ರಿಕ ಪ್ರಗತಿಯ ಯುಗದಲ್ಲಿ ಬದುಕುತ್ತಿದ್ದೇವೆ. ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬಾಹ್ಯಾಕಾಶ ಪರಿಶೋಧನೆಗಳು ಜಗತ್ತನ್ನು ಮರುರೂಪಿಸುತ್ತಿವೆ. ನಾಲ್ಕನೇ ಕೈಗಾರಿಕಾ ಕ್ರಾಂತಿ ಅಥವಾ ಉದ್ಯಮ 4.0, ಇವುಗಳು ಒಂದು ದಶಕದ ಹಿಂದೆ ಊಹಿಸಲೂ ಸಾಧ್ಯವಾಗದ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಆದ್ದರಿಂದ ಇವತ್ತಿನ ಪದವೀಧರರು ಈ ಕ್ರಿಯಾತ್ಮಕ ಹಾಗೂ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತಿಗೆ ಕಾಲಿಡುತ್ತಿದ್ದಂತೆ ಅದಕ್ಕೆ ತಕ್ಕಂತೆ ಹೊಂದಿಕೊಳ್ಳಲು, ಕಲಿಯಲು ಮತ್ತು ನಾವೀನ್ಯತೆ ಸಾಧಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.

ವಿಕಸಿತ ಭಾರತ್ 2047, ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಯೋಜನಗಳು ನಮ್ಮ ದೇಶವು ತಂತ್ರಜ್ಞಾನ, ಉತ್ಪಾದನೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕವಾಗಿ ನಾಯಕನಾಗಲು ಸಜ್ಜಾಗಿದೆ ಈ ಸಮಯದಲ್ಲಿ ಇವತ್ತಿನ ಎಂಜಿನಿಯರ್‌ ಪದವೀಧರರಾದ ನೀವು ಹವಾಮಾನ ಬದಲಾವಣೆ, ಸಂಪನ್ಮೂಲ ಕೊರತೆ, ಅಸಮಾನತೆ ಮತ್ತು ಜಾಗತಿಕ ಆರೋಗ್ಯ ಬಿಕ್ಕಟ್ಟುಗಳಂತಹ ಸವಾಲುಗಳಿಗೆ ಸುಸ್ಥಿರ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಂಡು ಮಾದರಿ ಸಮಾಜದ ವಾಸ್ತುಶಿಲ್ಪಿಗಳಂತೆ ಕೆಲಸಮಾಡಬೇಕಿದೆ ಎಂದು ಹೇಳಿದರು.

ಭವಿಷ್ಯ ಕೇವಲ ತಾಂತ್ರಿಕ ನೈಪುಣತೆ ಮೇಲೆ ಅವಲಂಬಿತವಾಗದೆ ತಾಂತ್ರಿಕ ನೈಪುಣ್ಯತೆಯು ಕ್ರಿಯಾಶೀಲ, ವಿಮರ್ಶಾತ್ಮಕ ಚಿಂತನೆ, ನೈತಿಕ ಮತ್ತು ಸಾಮಾಜಿಕ ಪ್ರಜ್ಞೆ ಹಾಗೂ ಜವಾಬ್ದಾರಿಯನ್ನು ಒಳಗೊಂಡಿರಬೇಕು ಇವುಗಳ ಸಂಯೋಜನೆಯಿಂದಲೇ ಸುಸ್ಥಿರ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಹೇಳುತ್ತಾ ಇವತ್ತಿನ ಪದವೀಧರರು ಈ ಕೆಳಗಿನ ಅತಿ ಅವಶ್ಯ ಅಂಶಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದರು.

  1. ಹವಾಮಾನ ಬದಲಾವಣೆ: ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ತಂತ್ರಜ್ಞಾನಗಳನ್ನು ನಾವು ಹೇಗೆ ವಿನ್ಯಾಸಗೊಳಿಸಬಹುದು?
  2. ಆರೋಗ್ಯ ರಕ್ಷಣೆ: ಆರೋಗ್ಯ ರಕ್ಷಣೆಯನ್ನು ಯೋಜನೆಗಳು ಎಲ್ಲರಿಗು ಕೈಗೆಟುಕುವಂತೆ ಮಾಡಲು ಜೈವಿಕ ತಂತ್ರಜ್ಞಾನ ಮತ್ತು AI ಯಲ್ಲಿನ ಪ್ರಗತಿಯನ್ನು ನಾವು ಹೇಗೆ ಬಳಸಬಹುದು?
  3. ಶಿಕ್ಷಣ: ಡಿಜಿಟಲ್ ಅಂತರವನ್ನು ನಿವಾರಿಸಲು ಮತ್ತು ಸಕಲರಿಗೂ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಹೇಗೆ ಬಳಸಬಹುದು?
  1. ಮೂಲಸೌಕರ್ಯ: ಭವಿಷ್ಯಕ್ಕಾಗಿ ನಾವು ಸ್ಮಾರ್ಟ್ ಮತ್ತು ಸುಸ್ಥಿರ ನಗರಗಳನ್ನು ಹೇಗೆ ನಿರ್ಮಿಸಬಹುದು?

ಈ ಮೇಲಿನ ಪ್ರಶ್ನೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವತ್ತ ಗಮನ ಹರಿಸಬೇಕು ಎಂದು ಹೇಳಿದರು. ತಂತ್ರಜ್ಞಾನವನ್ನು ಯಾರು ಉಚಿತವಾಗಿ ಅಥವಾ ಸುಲಭವಾಗಿ ಸಿಗುವ ವಸ್ತುವಲ್ಲ ಅದನ್ನು ಪಡೆಯಲು ನಾವು “ಔಟ್ ಆಫ್ ದಿ ಬಾಕ್ಸ್ ” ಚಿಂತನೆಯೊಂದಿಗೆ ಸೃಜಶೀಲರಾಗಿ ನಮ್ಮ ರಾಷ್ಟ್ರಕ್ಕನುಗುಣವಾಗಿ ತಂತ್ರಜ್ಞಾನವನ್ನು ವಿನ್ಯಾಸಮಾಡಬೇಕು ಎಂದು ಹೇಳಿದರು.

ಘಟಿಕೋತ್ಸವದ ಆರಂಭದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ್ ಎಸ್. ಅವರು ಎಲ್ಲರನ್ನು ಸ್ವಾಗತಿಸಿ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿ ಟಿ ಯು ಅನುಷ್ಠಾನಗೊಳಿಸಲಾದ ಯೋಜೆನಗಳ ಬಗ್ಗೆ ಹಾಗೂ ವಿ ಟಿ ಯು ಇತ್ತೀಚಿನ ಸಾಧನೆಗಳ ಬಗ್ಗೆ ಹೇಳಿ ಅತಿಥಿಗಳನ್ನು ಪರಿಚಯಿಸಿದರು.

ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಸ್ವರ್ಣ ಪದಕ ಪಡೆದ ಪದವೀಧರರನ್ನು ಹಾಗೂ ಅವರುಗಳು ಪಡೆದ ದತ್ತಿ ಬಹುಮಾನಗಳನ್ನು ವಿವರಿಸಿದರು.

ಮೌಲ್ಯಮಾಪನ ದಂಡ (ಮೇಸ್)ವನ್ನು ಹಿಡಿದ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ ಅವರು ಘಟಿಕೋತ್ಸವದ ಪಥಸಂಚಲನವನ್ನು ಮುನ್ನಡೆಸಿದರು.

24ನೇ ವಾರ್ಷಿಕ ಘಟಿಕೋತ್ಸವ(ಭಾಗ -2)ದಲ್ಲಿ, MBA 7194 (4947 + 2247 from Autonomous Colleges), MCA- 3784(2648 +1136 fromAutonomous Colleges), M.Tech.-1313(477+836 from Autonomous Colleges),M. Arch.-83 (72 +11 from Autonomous Colleges) ಹಾಗೂ ಸಂಶೋಧನಾ ಪದವಿಗಳಾದ ಪಿ.ಎಚ್ ಡಿ .423 ., ಎಂ ಎಸ್ಸಿ ಇಂಜನಿಯರಿಂಗ್ ಬೈ ರಿಸರ್ಚ್ 03 ಪದವಿಗಳನ್ನು ನೀಡಲಾಯಿತು.

ವಿ ಟಿ ಯು ನ ಡೀನ್ ಪ್ರೊ ಸದಾಶಿವೆಗೌಡ ಅವರು ಎಲ್ಲ ಪದವೀಧರರನ್ನು ಕುಲಾಧಿಪತಿಗಳ ಸಮ್ಮುಖದಲ್ಲಿ ಪ್ರಸ್ತುತ ಪಡಿಸಿದರು, ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಡಾ ಪ್ರಶಾಂತ ನಾಯಕ್ ಜಿ. , ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಲ ಸದಸ್ಯರು, ಪೋಷಕರು ವಿ ಟಿ ಯು ಸಿಬ್ಬಂದಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button