Belagavi NewsBelgaum NewsEducationKarnataka News

*ವಿಶ್ವೇಶ್ವರಯ್ಯ ಹೆಸರೇ ಸಾಧನೆಗೆ ಪ್ರೇರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್*

ವಿ.ತಾ.ವಿ 25ನೇ ವಾರ್ಷಿಕ ಘಟಿಕೋತ್ಸವ

ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 25ನೇ ವಾರ್ಷಿಕ ಘಟಿಕೋತ್ಸವವನ್ನು ಶುಕ್ರವಾರ ವಿ. ತಾ. ವಿ. “ಜ್ಞಾನ ಸಂಗಮ” ಆವರಣದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಿ ಗೌರವ ಡಾಕ್ಟರೇಟ್ ಪದವಿ ಹಾಗೂ ವಿ ಟಿ ಯು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪದವೀಧರರಿಗೆ ಸ್ವರ್ಣ ಪದಕಗಳನ್ನು ನೀಡಿ ಅಧ್ಯಕ್ಷೀಯ ನುಡಿಗಳನ್ನಾಡಿ ಎಲ್ಲರನ್ನು ಅಭಿನಂದಸಿದರು. ಸರ್ ಎಂ ವಿಶ್ವೇಶ್ವರಯ್ಯ ಹೆಸರು ಒಂದೇ ತಮ್ಮ ಸಾಧನೆಗೆ ಪ್ರೇರಣೆ ಆಗುತ್ತದೆ ಎಂದು ಹೇಳಿದರು. ಪದವೀಧರರು ತಮ್ಮ ನಾವಿನ್ಯತೆ ಮತ್ತು ಕ್ರೀಯಾಶೀಲ ಮನೋಭಾವವನ್ನು ಹೊಸ ಉದ್ಯಮಗಳನ್ನು ಹುಟ್ಟು ಹಾಕಿ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬಕೆಂದು ಹೇಳಿದರು. ಉದ್ಯಮಗಳನ್ನು ಹುಟ್ಟುಹಾಕಿ ಉದ್ಯೋಗ ನೀಡುವಂತರಾಗಬೇಕು ಎಂದು ಹೇಳಿದರು.ಅಷ್ಟೇ ಅಲ್ಲದೆ ಇವತ್ತಿನ ಪದವೀಧರರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು ಎಂದು ಹೇಳಿದರು. ವಿಕಸಿತ ಭಾರತದ ದೃಷ್ಠಿಕೋನದೊಂದಿಗೆ ನಮ್ಮ ಜವಾಬ್ದಾರಿ ಅರಿತು ನಮ್ಮ ರಾಷ್ಟ್ರವನ್ನು ಜಾಗತಿಕವಾಗಿ ಶಕ್ತಿಯನ್ನಾಗಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಅಜಯ್ ಕುಮಾರ್ ಸೂದ್, ಪ್ರಧಾನ ವೈಜ್ಞಾನಿಕ ಸಲಹೆಗಾರರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಘಟಿಕೋತ್ಸವ ಭಾಷಣ ಮಾಡುತ್ತ ಪ್ರತಿಯೊಬ್ಬ ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಪದಕ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ನಾನು ನನ್ನ ಘಟಿಕೋತ್ಸವ ಭಾಷಣವನ್ನು ಪ್ರಾರಂಭಿಸುತ್ತೇನೆ ಎಂದು ಹೇಳುತ್ತಾ ಬದುಕು ಕೇವಲ ಬೈನರಿ ಅಲ್ಲ ಅಂದರೆ ದ್ವಿಮಾನ “ಇದು ಇಲ್ಲವೇ ಅದು” ಸಾಧ್ಯವೇ ಇಲ್ಲ ಅದು ಕೇವಲ ತಂತ್ರಜ್ಞಾನದಲ್ಲಿ ಮಾತ್ರ ಬದುಕಲ್ಲಿ ನೀವು ಕೇವಲ ಒಳ್ಳೆಯ ತಂತ್ರಜ್ಞ ಅಥವಾ ವಿಜ್ಞಾನಿ ಅಥವಾ ಯಾವುದಾರೂ ವೃತ್ತಿಪರ ನಿಪುಣ ಮಾತ್ರ ಆಗುತ್ತೇವೆ ಎಂಬುದಲ್ಲ ಆ ನಿಪುಣತೆಯ ಅಂದರೆ ಒಳ್ಳೆಯ ತಂತ್ರಜ್ಞ ಅಥವಾ ವಿಜ್ಞಾನಿಯ ಜೊತೆಗೆ ನಾನು ಒಬ್ಬ ಒಳ್ಳೆಯ ಗುಣವುಳ್ಳ ರಾಷ್ಟ್ರ ಪ್ರಜ್ಞೆ ಇರುವ ಪ್ರಜ್ಞಾವಂತ ನಾಗರೀಕನಾಗಿ ಎರಡು ಜವಾಬ್ದಾರಿಯನ್ನು ಅರಿತು ಬದುಕುವುದೇ ಜೀವನ ಎಂದು ಹೇಳಿದರು.

Home add -Advt

ಇಂದು ಈ ನಿಮ್ಮ ಶೈಕ್ಷಣಿಕ ಪ್ರಯಾಣದ ಮುಕ್ತಾಯ ಮಾತ್ರವಲ್ಲ; ಇದು ಹೊಸ ಆರಂಭದ ಹೊಸ್ತಿಲು. ಈ ಹೊಸ ಆರಂಭದಲ್ಲಿ ತರಗತಿಗಳು, ಅಸ್ಸಾಯಿನ್ಮೆಂಟ್ ಗಳು ಮತ್ತು ಪರೀಕ್ಷೆಗಳ ಆಚೆಗಿನ ಜಗತ್ತಿಗೆ ಕಾಲಿಡುತ್ತಿದ್ದಿರಿ ಆ ಜಗತ್ತು ಸವಾಲುಗಳು ಮತ್ತು ಅವಕಾಶಗಳಿಂದ ತುಂಬಿದೆ ಎಂದು ಹೇಳಿದರು.

ಈ ಕ್ಷೀಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ತಂತ್ರಜ್ಞಾನವು ನಿಮ್ಮ ಅತ್ಯುತ್ತಮ ಸಾರಥಿ ಮತ್ತು ಸಹಾಯಕವಾಗಿರುತ್ತದೆ. ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಮಾರ್ಗಗಳನ್ನು ರೂಪಿಸುವುದಲ್ಲದೆ, ಶಕ್ತಿಶಾಲಿ ಮತ್ತು ಸ್ವಾವಲಂಭಿ ಭಾರತವನ್ನು ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಶಕ್ತಿಯಾಗಿದೆ. ತಂತ್ರಜ್ಞಾನವು ರಾಷ್ಟ್ರೀಯ ಪ್ರಗತಿಯ ವೇಗವರ್ಧಕ ಮತ್ತು ಮೂಲಾಧಾರವಾಗಿ, ನಮ್ಮ ಜೀವನ ಶೈಲಿ ನಮ್ಮ ಕಾರ್ಯ ವಿಧಾನ ಮತ್ತು ಇತರರೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತೇವೆ ಎಂಬುದನ್ನು ನಿರ್ಧರಿಸಿ ಅದನ್ನ ಮತ್ತಷ್ಟು ಅಭಿವೃದ್ಧಿ ಪಡಿಸುತ್ತದೆ. ಇದು ನಾವೀನ್ಯತೆಯ ಮೂಲಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಕೃಷಿ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಹಾಗೂ ಶಿಕ್ಷಣ ಮತ್ತು ಸಾರ್ವಜನಿಕ ಸೇವಾ ವಲಯಗಳಲ್ಲಿ ಇರುವ ಅಂತರವನ್ನು ಕಡಿಮೆ ಮಾಡುತ್ತದೆ.

ಸ್ವಾತಂತ್ರ್ಯೋತ್ತರ ಕಾಲದಿಂದ ಭಾರತವು ಬಡತನದಿಂದ ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹತ್ವದ ಸ್ಥಾನದತ್ತ ಮುನ್ನುಗ್ಗುತ್ತಿದೆ. ಚಂದ್ರಯಾನ ಮತ್ತು ಮಂಗಳಯಾನ ಮುಂತಾದ ಬಾಹ್ಯಾಕಾಶ ಕಾರ್ಯಕ್ರಮಗಳು, ಯುಪಿಐಂತಹ ಡಿಜಿಟಲ್ ಪಾವತಿ ಕ್ರಾಂತಿಗಳು ಈ ನಿಟ್ಟಿನಲ್ಲಿ ನಿದರ್ಶನಗಳಾಗಿವೆ. “ವಿಕಸಿತ ಭಾರತ” ಎಂಬ ಕನಸು ಈಗ ತಲುಪಬಹುದಾದ ಗುರಿಯಾಗಿದ್ದು, ಈ ಸಾಧನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕಾರಣವಾಗಲಿದೆ.

ಇತ್ತೀಚಿನ ಉದಾಹರಣೆಯಾದ ಆಪರೇಶನ್ ಸಿಂಧೂರ ಭಾರತದ ತಂತ್ರಜ್ಞಾನ ಕ್ಷಮತೆಯ ಪ್ರಾತ್ಯಕ್ಷಿಕೆಯಾಗಿತ್ತು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಅಕಾಶ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಎಐ ಆಧಾರಿತ ನಿರ್ಣಯ ವ್ಯವಸ್ಥೆಗಳ ಬಳಕೆ ಭಾರತವನ್ನು ಆತ್ಮನಿರ್ಭರ ರಾಷ್ಟ್ರವಾಗಿ ರೂಪಿಸುತ್ತಿದೆ ಎಂದರೆ ತಪ್ಪಾಗಲಾರದು ಎಂದರು.

ಕೋವಿಡ್-19 ಸಮಯದಲ್ಲಿ, ಭಾರತ ತನ್ನದೇ ಆದ ಲಸಿಕೆಗಳಾದ ಕೋವ್ಯಾಕ್ಸಿನ್ ಮುಂತಾದವುಗಳನ್ನು ಅಭಿವೃದ್ಧಿಪಡಿಸಿ ವಿಶ್ವದ ಪ್ರಮುಖ ಲಸಿಕೆ ಪೂರೈಕೆದಾರನಾಗಿ ಹೊರಹೊಮ್ಮಿತು. ಇಂದು ಭಾರತ WHO ನ ಲಸಿಕೆಗಳ 70% ಪೂರೈಕೆ ಮಾಡುತ್ತದೆ ಮತ್ತು ಅಮೇರಿಕದ ಜನರಿಕ್ ಔಷಧಿಗಳ 14% ಭಾರತದಿಂದ ಆಮದು ಮಾಡಲಾಗುತ್ತಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯು, ವಿಶೇಷವಾಗಿ UPI ತಂತ್ರಜ್ಞಾನ, ದೇಶದ ಆರ್ಥಿಕ ಶ್ರೇಣಿಗೆ ಹೊಸ ಮೈಲಿಗಲ್ಲಾಗಿದೆ. Aadhaar ಮತ್ತು e-KYC ಮೂಲಕ ನಕಲಿ ಫಲಾನುಭವಿಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದ್ದು, ಇವುಗಳು ಸಹಜವಾಗಿ ಆಧುನಿಕ, ಸುಲಭ ಮತ್ತು ಪಾರದರ್ಶಕ ಭ್ರಷ್ಟ ಮುಕ್ತ ಆಡಳಿತವನ್ನು ಸಾಧ್ಯವನ್ನಾಗಿಸಿವೆ. ಇಂದು ಯುಪಿಐ ದೇಶದ ಹೊರಗಿನ ದೇಶಗಳಾದ ಸಿಂಗಪೂರ್, ಫ್ರಾನ್ಸ್, ಮಾರಿಶಿಯಸ್ ಮತ್ತು UAE ಗಳು ಸಹ ಉಪಯೋಗಿಸುತ್ತಿವೆ ಎಂದು ಹೇಳಿದರು.

ಇದೆ ದಿಶೆಯಲ್ಲಿ ಭಾರತವು ವಿಶ್ವದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಬೇಕಾದರೆ, ತನ್ನದೇ ಆದ ತಂತ್ರಜ್ಞಾನ ಅಭಿವೃದ್ಧಿ ಸಾಮರ್ಥ್ಯವನ್ನು ಸಾಧಿಸಿ ಇನ್ನು ಹೆಚ್ಚಿನ ಸ್ವಾಲಂಭಿಯಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತವು ಇಂಡಿಯಾ AI ಮಿಷನ್ ಮತ್ತು ಕ್ವಾಂಟಮ್ ಮಿಷನ್ಆ ರಂಭಿಸಿದ್ದು, ನಮ್ಮ ಭಾಷೆಗಳನ್ನೂ ಒಳಗೊಂಡಂತೆ ಬಹುಭಾಷೆಯ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯಡಿಯಲ್ಲಿ Soket AI, Sarvam AI, Gnani.ai, Gan.ai ಮುಂತಾದ ಸ್ಟಾರ್ಟಪ್‌ಗಳು ಪ್ರಮುಖ ಪಾತ್ರವಹಿಸುತ್ತಿವೆ.

ಉನ್ನತ ಶಿಕ್ಷಣ ಇಲಾಖೆ ಶೈಕ್ಷಣಿಕ ಮಟ್ಟದಲ್ಲಿ ತಂತ್ರಜ್ಞಾನ ಸಿದ್ಧತೆಯನ್ನು ಉತ್ತೇಜಿಸಲು, ಕೃಷಿ, ಆರೋಗ್ಯ ಮತ್ತು ಸುಸ್ಥಿರ ನಗರಗಳ ವಿಷಯಗಳ ಕ್ಷೇತ್ರಗಳಲ್ಲಿ ಸೆಂಟರ್ಸ್ ಆಫ್ ಎಕ್ಸೆಲೆನ್ಸ್ ನ್ನು ಸ್ಥಾಪಿಸಿದೆ ಎಂದು ಹೇಳಿದರು.

ಪದವೀಧರರನ್ನು ಉದ್ದೇಶಿಸಿ ಮಾತನಾಡುತ್ತ, ನಿಮ್ಮ ಶ್ರಮ ಮತ್ತು ಸಮರ್ಪಣೆಗೆ ಅಭಿನಂದನೆಗಳು. ಆದರೆ ಜ್ಞಾನದ ಬಳಕೆಯು ಕೇವಲ ಪರೀಕ್ಷೆಗಳಲ್ಲಿ ಸೀಮಿತವಾಗದೆ, ಸಮಾಜಕ್ಕೆ ಕೊಡುಗೆ ನೀಡುವಲ್ಲಿಯೂ ಇರಲಿ. ನಂಬಿಕೆ ಹಾಗೂ ರಾಷ್ಟ್ರ ಸೇವೆ ದೃಷ್ಟಿಕೋನ ಇದ್ದರೆ, ಇಂದು ನೀವು ಓದಿದ ಅಂಶಗಳು ನಾಳೆ ಉಪಯುಕ್ತ ತಂತ್ರಜ್ಞಾನಗಳಾಗಿ ಪರಿವರ್ತಿಸಬಹುದು.

ಉದಾಹರಣೆಗೆ ಹೇಳುವುದಾದರೆ ಸಿ ವಿ ರಾಮನ್ ಅವರ ರಾಮನ್ ಪರಿಣಾಮದ ಮೂಲಕ ವಿಜ್ಞಾನದಿಂದ ಉದ್ಭವಿಸಿದ ಹೊಸ ಶಾಖೆಯಾದ “ರಾಮನ್ ಸ್ಪೆಕ್ಟ್ರೋಸ್ಕೋಪಿ” – ಇಂದು ಬಹುಮೌಲ್ಯದ ಪ್ರಯೋಗಾತ್ಮಕ ತಂತ್ರಜ್ಞಾನವಾಗಿದೆ. DNA ರಚನೆ, ಕ್ವಾಂಟಮ್ ತತ್ವಗಳು, ಎಲೆಕ್ಟ್ರೋಮ್ಯಾಗ್ನೆಟಿಕ್ ಸಂಶೋಧನೆಗಳೆಲ್ಲವೂ ಇಂದಿನ ಜಗತ್ತನ್ನು ರೂಪಿಸಿದ್ದು ಮೂಲ ವಿಜ್ಞಾನ ಎಂದು ಸಾರಿ ಹೇಳಿದರು.

ನೀವು ಭವಿಷ್ಯದ ತಾಂತ್ರಿಕ ನಾಯಕರಾಗಬಲ್ಲವರು. ನಿಮ್ಮ ಜ್ಞಾನವನ್ನು ಗ್ರಾಮೀಣ ಮತ್ತು ವಂಚಿತ ಸಮುದಾಯಗಳ ಹಿತಕ್ಕಾಗಿ ಬಳಿಸಿರಿ. RuTAG Smart Village Centres (RSVCs) ಗ್ರಾಮೀಣ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ನಿದರ್ಶನವಾಗಿವೆ. ಇವು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪನೆಯಾಗಿ ಸೌರಶಕ್ತಿ, IoT, ಸಹಾಯಕ ಸಾಧನಗಳು ಮುಂತಾದ ಬಳಕೆಯೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಮುಂದಾಗಿದೆ ಇದರಲ್ಲಿ ತಾವು ಕೈಜೋಡಿಸಬೇಕೆಂದು ತಿಳಿಸಿದರು.

ಭಾಷಣದ ಅಂತ್ಯದಲ್ಲಿ, ಪದವಿ ಪಡೆದ ಎಲ್ಲರಿಗೂ ಅಭಿನಂದೆಗಳನ್ನು ತಿಳಿಸಿ ಕೊನೆಗೆ ನಿಮ್ಮ ಇಲ್ಲಿಯವರೆಗಿನ ವಿದ್ಯಾಭ್ಯಾಸ ನಿಮ್ಮ ಭವಿಷ್ಯ ರೂಪಿಸಲು ಬೇಕಾದ ಎಲ್ಲ ಅಂಶಗಳನ್ನ ನೀಡಿದೆ. ಈಗ ನೀವು ಇಲ್ಲಿಯವರೆಗೆ ಪಡೆದುಕೊಂಡ ಜ್ಞಾನ ಮತ್ತು ಇಚ್ಛಾಶಕ್ತಿಯಿಂದ ಸಮೃದ್ಧ ಭಾರತವನ್ನು ರೂಪಿಸಬಹುದಾಗಿದೆ ಎಂದು ತಿಳಿಸಿ ಇಂದಿನ ವಿಜ್ಞಾನವೇ ನಾಳೆಯ ತಂತ್ರಜ್ಞಾನ ಎಂದು ಹೇಳಿ ಘಟಿಕೋತ್ಸವ ಭಾಷಣ ಮುಗಿಸಿದರು.

ಗೌರವ ಡಾಕ್ಟರೇಟ್ “ಡಾಕ್ಟರ್ ಆಫ್ ಸೈನ್ಸ್” ಪದವಿ ಪ್ರದಾನ-

ಈ ಸಂದರ್ಭದಲ್ಲಿ ಡಾ. ವಿ. ನಾರಾಯಣನ್ ಅಧ್ಯಕ್ಷರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ, ಪ್ರಶಾಂತ್ ಪ್ರಕಾಶ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಎಕ್ಸೆಲ್ ಇಂಡಿಯಾ ಸಂಸ್ಥಾಪಕರು. ಸಿ. ಎಸ. ಸುಂದರ್ ರಾಜು ಕುಲಾಧಿಪತಿಗಳು, ಎಟ್ರಿಯ ವಿಶ್ವವಿದ್ಯಾಲಯ, ಬೆಂಗಳೂರು.ಈ ಮಹನೀಯರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರಧಾನ ಮಾಡಲಾಯಿತು.

ವಿಶ್ವವಿದ್ಯಾಲಯದ ಈ 25ನೇ ವಾರ್ಷಿಕ ಘಟಿಕೋತ್ಸವದ (ಭಾಗ -1 ) ಸಮಯದಲ್ಲಿ B.E.-38154+20707(Autonomous Colleges)=58,861, B.Tech.-117, B.Plan.-10, B.Arch.-806+234(Autonomous Colleges)=1040, B.Sc.(Honours)- 24, ಒಟ್ಟು – 60,052 ಸ್ನಾತಕ ಪದವಿ ಹಾಗೂ ಸಂಶೋಧನಾ ಪದವಿಗಳಾದ ಪಿಎಚ್.ಡಿ. 262 ಹಾಗೂ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ 02 ಪದವಿಗಳನ್ನು ಪ್ರದಾನ ಮಾಡಲಾಗಿದೆ.

ಘಟಿಕೋತ್ಸವದ ಆರಂಭದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ್ ಎಸ್. ಅವರು ಎಲ್ಲರನ್ನು ಸ್ವಾಗತಿಸಿ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿ ಟಿ ಯು ಅನುಷ್ಠಾನಗೊಳಿಸಲಾದ ಯೋಜೆನಗಳ ಬಗ್ಗೆ ಹಾಗೂ ವಿ ಟಿ ಯು ಇತ್ತೀಚಿನ ಸಾಧನೆಗಳ ಬಗ್ಗೆ ಹೇಳಿ ಅತಿಥಿಗಳನ್ನು ಪರಿಚಯಿಸಿ ಗೌರವ ಡಾಕ್ಟರೇಟ್ ಡಾಕ್ಟರ್ ಆಫ್ ಸೈನ್ಸ್ ಪದವಿ ಪುರಸ್ಕೃತರನ್ನು ಮಾನ್ಯ ಕುಲಾಧಿಪತಿಗಳ ಸಮ್ಮುಖದಲ್ಲಿ ಪರಿಚಯಿಸಿ ಪ್ರಸ್ತುತ ಪಡಿಸಿದರು.

ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಸ್ವರ್ಣ ಪದಕ ಪಡೆದ ಪದವೀಧರರನ್ನು ಹಾಗೂ ಅವರುಗಳು ಪಡೆದ ದತ್ತಿ ಬಹುಮಾನಗಳನ್ನು ವಿವರಿಸಿದರು.

ಮೌಲ್ಯಮಾಪನ ದಂಡ (ಮೇಸ್)ವನ್ನು ಹಿಡಿದ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ ಅವರು ಘಟಿಕೋತ್ಸವದ ಪಥಸಂಚಲನವನ್ನು ಮುನ್ನಡೆಸಿದರು.

ವಿಟಿಯು ನ ಡೀನ್ ಪ್ರೊ. ಸಂಜಯ್ ಎಚ್. ಎ. ಅವರು ಎಲ್ಲ ಪದವೀಧರರನ್ನು ಕುಲಾಧಿಪತಿಗಳ ಸಮ್ಮುಖದಲ್ಲಿ ಪ್ರಸ್ತುತ ಪಡಿಸಿದರು,ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಲ ಸದಸ್ಯರು ವೇದಿಕೆ ಮೇಲಿದ್ದರು. ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಡಾ ಪ್ರಶಾಂತ ನಾಯಕ್ ಜಿ. ಮತ್ತು ಪೋಷಕರು ಹಾಗೂ ವಿ ಟಿ ಯು ಸಿಬ್ಬಂದಿ ಹಾಜರಿದ್ದರು.

Related Articles

Back to top button