Latest

ವೋಟರ್ ಗೇಟ್ ಹಗರಣ ಕಿಂಗ್ ಪಿನ್ ಸಿಎಂ ಬೊಮ್ಮಾಯಿ ತಕ್ಷಣ ರಾಜೀನಾಮೆ ನೀಡಬೇಕು; ಕಾಂಗ್ರೆಸ್ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ‘ವೋಟರ್ ಗೇಟ್ ಪ್ರಕರಣದಲ್ಲಿ (ಮತದಾರರ ಮಾಹಿತಿ ಕಳವು) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಪ್ರಮುಖ ಕಿಂಗ್ ಪಿನ್ ಆಗಿದ್ದು, ಪ್ರಕರಣದ ನ್ಯಾಯಸಮ್ಮತ ತನಿಖೆಗೆ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಎಫ್ಐಆರ್ ದಾಖಲಾಗಿ ಅವರ ಬಂಧನವಾಗಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಎಐಸಿಸಿ ಪ್ರದಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿನಡೆಸಿದರು.

ಈ ವೇಳೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ವಾಸ್ತವಾಂಶಗಳನ್ನು ಜನರ ಮುಂದೆ ಇಟ್ಟಿರುವ ರಾಜ್ಯದ ಎಲ್ಲ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮತದಾರರ ಮಾಹಿತಿ ಕಳವು ಹಗರಣವು ಬಸವರಾಜ ಬೊಮ್ಮಾಯಿ ಅವರೇ ನಿಜವಾದ ಕಿಂಗ್ ಪಿನ್ ಎಂದು ಸಾಬೀತುಪಡಿಸಿದೆ. ಮುಖ್ಯಮಂತ್ರಿಯಾಗಿ ಅವರು ಎಂದಿನಂತೆ ಸುಳ್ಳಿನ ಮೂಲಕ ಸತ್ಯಾಂಶ ಮರೆಮಾಚಲು ಮುಂದಾಗಿದ್ದಾರೆ. ಸತ್ಯ ಏನೆಂದರೆ ಬೊಮ್ಮಾಯಿ ಅವರು ಒಂದು ಸುಳ್ಳನ್ನು ಸಮರ್ಥಿಸಿಕೊಳ್ಳಲು ಸಾವಿರ ಸುಳ್ಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭಾರತದ ಇತಿಹಾಸದಲ್ಲಿ ಇದೊಂದು ದೊಡ್ಡ ಹಗರಣ. ಆ ಮೂಲಕ ಕನ್ನಡಿಗರ ಮತದಾನದ ಹಕ್ಕು ಕಸಿಯುವ ಪ್ರಯತ್ನ ಮಾಡಲಾಗಿದೆ. ಪ್ರತಿ ಗಂಟೆಯೂ ಬಿಜೆಪಿ ಸರ್ಕಾರ ಹೇಗೆ ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಸಮಯದಲ್ಲಿ ಬಿಜೆಪಿ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ ಎಂದು ಹಲವು ಪ್ರಶ್ನೆಗಳನ್ನು ಮುಂದಿಟ್ಟರು.

• ಇದುವರೆಗೂ ಬೆಂಗಳೂರು ಉಸ್ತುವಾರಿಯಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ಯಾಕೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ?

• ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ಕಳ್ಳತನ ಮಾಡಿರುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರನ್ನು ವಿಚಾರಣೆ ನಡೆಸಬೇಕಾಗಿದ್ದು, ಕೆಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಒಂದಿಬ್ಬರು ಬಿಎಲ್ಒ ಗಳ ಮೇಲೆ ಎಫ್ಐಆರ್ ದಾಖಲಿಸಿರುವುದು ಏಕೆ?

• ಬೊಮ್ಮಾಯಿ ಅವರು ತಮ್ಮ ಸುಳ್ಳಿನ ಬಲೆಯಲ್ಲಿ ತಾವೇ ಸಿಲುಕಿಕೊಂಡಿಲ್ಲವೇ? ಮೊನ್ನೆ ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ಆರೋಪ ಮಾಡಿದಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದೊಂದು ಆಧಾರರಹಿತ ಆರೋಪ ಎಂದಿದ್ದರು. ಆದರೆ ಮತ್ತೊಂದೆಡೆ ಕೆಲವರ ಮೇಲೆ ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶಿಸಿದ್ದಾರೆ. ಯಾವ ಪ್ರಕರಣವನ್ನು ಮುಖ್ಯಮಂತ್ರಿಗಳೇ ತಿರಸ್ಕರಿಸಿದ್ದಾರೋ ಆ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿ ತಾನೇ ಎಫ್ಐಆರ್ ದಾಖಲಿಸಿ ತನಿಖೆ ಮಾಡುತ್ತಾರೆ? ಇಂತಹ ಸುಳ್ಳಿನ ತನಿಖೆಯ ಪ್ರಯೋಜನವೇನು? ಬೊಮ್ಮಾಯಿ ಅವರು ಉದ್ದೇಶಪೂರ್ವಕವಾಗಿ ಜನರ ದಾರಿತಪ್ಪಿಸುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ.

• ಇದುವರೆಗೂ ಚಿಲುಮೆ ಎಜುಕೇಶನ್ ಅಂಡ್ ರೂರಲ್ ಡೆವಲಪ್ಮೆಂಟ್ ಸಂಸ್ಥೆ, ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಸಂಸ್ಥೆಗಳ ನಿರ್ದೇಶಕರ ಕೃಷ್ಣಪ್ಪ ರವಿಕುಮಾರ್, ಭೈರಪ್ಪ ಶೃತಿ, ನರಸಿಂಹಮೂರ್ತಿ ಐಶ್ವರ್ಯ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಏಕೆ?

• ಬೆಂಗಳೂರಿನ ಸರಿ ಸುಮಾರು 1 ಕೋಟಿ ಮತದಾರರ ಕಳ್ಳತನವಾಗಿರುವ ಮಾಹಿತಿ ಎಲ್ಲಿದೆ ಎಂದು ಸಿಎಂ ಬೊಮ್ಮಾಯಿ ಅವರು ಉತ್ತರಿಸುತ್ತಿಲ್ಲ ಯಾಕೆ?

• ಸಿಎಂ ಬೊಮ್ಮಾಯಿ ಅವರು ಖಾಸಗಿ ಆಪ್ ಡಿಜಿಟಲ್ ಸಮೀಕ್ಷಾ ಅನ್ನು ಯಾಕೆ ಮುಟ್ಟುಗೋಲು ಹಾಕಿಕೊಂಡಿಲ್ಲ?

• ಬಿಬಿಎಂಪಿಗೆ ಚಿಲುಮೆ ಸಂಸ್ಥೆ ಉಚಿತ ಸೇವೆ ನೀಡುತ್ತಿದ್ದು, ಈ ಸಂಸ್ಥೆಗೆ ಆರ್ಥಿಕ ನೆರವು ನೀಡುತ್ತಿರುವವರು ಯಾರು ಎಂಬ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳುತ್ತಿಲ್ಲ ಏಕೆ? ಗುತ್ತಿಗೆ, ಅರೆ ಗುತ್ತಿಗೆ ಸಿಬ್ಬಂದಿಗಳಿಗೆ ವೇತನ ನೀಡಲು ಈ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಎಲ್ಲಿಂದ ಬಂದಿದೆ?

• ಚಿಲುಮೆ ಸಂಸ್ಥೆ ಸಮೀಕ್ಷೆ ಮಾಡಲು ಸಿಬ್ಬಂದಿ ನೇಮಕಾತಿಗಾಗಿ ಜಾಹೀರಾತು ಪ್ರಟಿಸಿದ್ದು ನಿಜವಲ್ಲವೇ? ಆ ಮೂಲಕ ಸುಮಾರು 15 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು ನಿಜವಲ್ಲವೇ?

• ಚಿಲುಮೆ ಸಂಸ್ಥೆ ಸಿಬ್ಬಂದಿ ನೇಮಕಕ್ಕೆ ಮಾಡಿಕೊಳ್ಳಲಾದ ಉಪ ಗುತ್ತಿಗೆಯ ಒಪ್ಪಂದದ ಪ್ರತಿ ನಮ್ಮ ಬಳಿ ಇದೆ. ಈ ಒಪ್ಪಂದದಲ್ಲಿ ಮತದಾರರ ಮಾಹಿತಿ ಪರಿಷ್ಕರಣೆಗೆ ಪ್ರತಿ ಮತದಾರರ ಮಾಹಿತಿಗೆ 25 ರೂಪಾಯಿ ನೀಡುವುದಾಗಿ ತಿಳಿಸಿದೆ. ಇನ್ನು ಮಾಹಿತಿ ಸಂಗ್ರಹಣೆ ಮಾಡಿದ ಬಿಎಲ್ಒಗಳಿಗೆ ಪ್ರತಿ ಮತದಾರರ ಮಾಹಿತಿಗೆ 50 ರೂ. ನೀಡುವುದಾಗಿ ತಿಳಿಸಿತ್ತು. ಪ್ರತಿ ಹೊಸ ಮತದಾರರ ಗುರುತಿಸಿದಕ್ಕೆ 40 ರೂ., ಪ್ರತಿ ಫಾರ್ಮ್ 7ರ ಪರಿಶೀಲನೆಗೆ 23 ರೂ., ಮತದಾರರಲ್ಲದವರನ್ನು ಗುರುತಿಸಿದರೆ ಪ್ರತಿಯೊಬ್ಬರ ಗುರುತಿಸಲು 10 ರೂ. ನೀಡುವುದಾಗಿ ತಿಳಿಸಿದ್ದಾರೆ. ಇದೆಲ್ಲದಕ್ಕೂ ಕೋಟ್ಯಂತರ ರೂ. ಖರ್ಚಾಗಿದ್ದು ಈ ಹಣ ಎಲ್ಲಿಂದ ಬಂತು? ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಎಲ್ಲಿದೆ?

• ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಬೊಮ್ಮಾಯಿ ಅವರು ಹಾಗೂ ಚುನಾವಣಾಧಿಕಾರಿಯಾಗಿರುವ ಬಿಬಿಎಂಪಿ ಆಯುಕ್ತರು 2019ರಿಂದ 2022ರವರೆಗೂ ನಿರಂತರವಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆದೇಶ ನೀಡುತ್ತಲೇ ಬಂದಿದ್ದಾರೆ. ಬಿಬಿಎಂಪಿ 03-03-2022ರಂದು ಪರ್ಕಟಿಸಿರುವ ಪತ್ರದಲ್ಲಿ ಖಾಸಗಿ ಸಂಸ್ಥೆಗಳು ಪ್ರತಿ ಮತದಾರರ ಮಾಹಿತಿಗಳಾದ ಆಧಾರ್ ಸಂಖ್ಯೆ, ಕುಟುಂಬದ ಮಾಹಿತಿ ಕಲೆಹಾಕಲಿದೆ ಎಂದು ತಿಳಿಸಿದೆ. ಅಲ್ಲದೆ ಪ್ರತಿಯೊಬ್ಬ ಮತದಾರರು ತಮ್ಮ ಆಧಾರ್ ಕಾರ್ಡ್, ಕುಟುಂಬದ ಮಾಹಿತಿ, ಮತದಾರರ ಗುರುತಿನ ಚೀಟಿಯನ್ನು ಬಿಬಿಎಂಪಿ ಪ್ರತಿನಿಧಿಗಳಿಗೆ ನೀಡಬೇಕು ಎಂದು ತಿಳಿಸಿದೆ. ಈ ಬಿಬಿಎಂಪಿ ಪ್ರತಿನಿಧಿಗಳು ಎಂದರೆ ಚಿಲುಮೆ ಸಂಸ್ಥೆಯ ಸಿಬ್ಬಂದಿಯಲ್ಲದೆ ಮತ್ತಾರು?

• ಒಂದುಕಡೆ ಈ ಆರೋಪಗಳನ್ನು ಮುಖ್ಯಮಂತ್ರಿಗಳು ನಿರಾಕರಿಸುತ್ತಿದ್ದಾರೆ. ಮತ್ತೊಂದೆಡೆ ಮತದಾರರ ಮಾಹಿತಿ ಕಲೆ ಹಾಕಿದ ಚಿಲುಮೆ ಸಂಸ್ಥೆಯ ನಿಯೋಜಿತ ಬಿಎಲ್ಒಗಳು ಮುಂದೆ ಬಂದು ಬಿಬಿಎಂಪಿ ಹೇಳಿದ ಕಾರಣಕ್ಕೆ ನಾವು ಮತದಾರರ ಮಾಹಿತಿ ಕಲೆಹಾಕಿದ್ದೇವೆ ಎಂದು ವಿಡಿಯೋ ಸಾಕ್ಷಿಗಳನ್ನು ನೀಡುತ್ತಿದ್ದಾರೆ. ಇದರಿಂದ ಬೊಮ್ಮಾಯಿ ಅವರೇ ಇದರ ಹಿಂದೆ ಇದ್ದಾರೆ ಎಂಬುದು ಸಾಬೀತಾಗುವುದಿಲ್ಲವೇ?

• ಕೆ.ಆರ್ ಪುರಂನ ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಚಿಲುಮೆ ಸಂಸ್ಥೆಗೆ 18 ಲಕ್ಷ ಹಣ ನೀಡಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಮತದಾರರ ಮಾಹಿತಿ ಪಡೆದು ಹಣಕ್ಕೆ ಅದನ್ನು ಮಾರಾಟ ಮಾಡುವ ಸಂಸ್ಥೆಗೆ ಬೆಂಗಳೂರಿನ ಎಲ್ಲ 28 ಕ್ಷೇತ್ರಗಳ ಮತದಾರರ ಮಾಹಿತಿ ಕಲೆ ಹಾಕಲು ಜಾಹೀರಾತು ಇಲ್ಲದೆ ಅವಕಾಶ ನೀಡಿದ್ದು ಯಾಕೆ? ಇದು ಭ್ರಷ್ಟಾಚಾರವಲ್ಲವೇ? ಇದಕ್ಕೆ ಬೆಂಗಳೂರು ಉಸ್ತುವಾರಿ ಸಚಿವರು ಹೊಣೆಯಲ್ಲವೇ?

• ನಮ್ಮ ನಾಯಕರು ಇಂದು ಪ್ರತಿಭಟನೆ ನಡೆಸಿದ ನಂತರ ಮುಖ್ಯಮಂತ್ರಿಗಳು ಮುಂದೆ ಬಂದು ಮತದಾರರ ಮಾಹಿತಿ ಕಲೆ ಹಾಕಲು ಅವರು ಯಾರಿಗೂ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ. ಅತ್ತ ಮುಖ್ಯ ಚುನಾವಣಾಧಿಕಾರಿಗಳು ತಾವು ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಬಿಬಿಎಂಪಿಯ ಪತ್ರದಲ್ಲಿ ಖಾಸಗಿ ಸಂಸ್ಥೆಗಳಿಗೆ ಮಾಹಿತಿ ನೀಡಿ ಎಂದು ಜನರಿಗೆ ಕರೆ ನೀಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆ ನಡೆಯಲು ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು. ಈ ಪ್ರಕರಣದಲ್ಲಿ ಬೊಮ್ಮಾಯಿ ಅವರ ವಿರುದ್ಧ ಎಫ್ಐಆರ್ ಯಾಕೆ ದಾಖಲಾಗಿಲ್ಲ, ಅವರ ಬಂಧನ ಯಾಕಾಗಿಲ್ಲ? ಎಂದು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಕೇವಲ ಮಹದೇವಪುರ ಕ್ಷೇತ್ರದಲ್ಲಿ ಮತದಾರರ ಮಾಹಿತಿ ಕಲೆಹಾಕಲು ನೀಡಲಾಗಿರುವ ಅನುಮತಿಯನ್ನು ಮಾತ್ರ ಪ್ರಸ್ತಾಪಿಸಿದರು. ನಮ್ಮ ಬಳಿ ಎಲ್ಲ 28 ಕ್ಷೇತ್ರಗಳಲ್ಲಿ ಮತದಾರರ ಮಾಹಿತಿ ಕಲೆಹಾಕಲು ಅನುಮತಿ ನೀಡಿರುವ ದಾಖಲೆಗಳು ಇವೆ. ಬಿಬಿಎಂಪಿಯವರು ಚಿಲುಮೆ ಸಂಸ್ಥೆಗೆ ಅನುಮತಿ ಪತ್ರ ಬರೆದಿದ್ದಾರೆ.

ಈ 28 ಕ್ಷೇತ್ರಗಳಲ್ಲಿ ಅನಧಿಕೃತವಾಗಿ ಬಿಎಲ್ಒಗಳನ್ನು ನೇಮಕ ಮಾಡಿದವರ ವಿರುದ್ಧ ಎಫ್ಐಆರ್ ಆಗಬೇಕು. ಈ ಎಲ್ಲ ಕ್ಷೇತ್ರ ಚುನಾವಣಾಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ನಿನ್ನೆ ಪೊಲೀಸ್ ಅಧಿಕಾರಿಗಳು ಚಿಲುಮೆ ಸಂಸ್ಥೆ ಕಚೇರಿ ಮೇಲೆ ದಾಳಿ ನಡೆಸಿದಾಗ ಸಿಕ್ಕಿರುವ ಸಾಕ್ಷಾಧಾರಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ವಿಡಿಯೋ ಮಾಡಿಸಬೇಕು. ಇದರಲ್ಲಿ ಚೆಕ್, ಲೆಟರ್ ಹೆಡ್, ನೋಟು ಏಣಿಕೆ ಯಂತ್ರಗಳಿವೆ. ನೋಟು ಎಣಿಕೆ ಯಂತ್ರ ಅಲ್ಯಾಕೆ ಬಂತು? ಎಷ್ಟು ದುಡ್ಡು ಏಣಿಸಲಾಯಿತು? ಇವೆಲ್ಲವೂ ಸಾರ್ವಜನಿಕ ವೇದಿಕೆಗೆ ಬರಬೇಕು ಎಂದು ಆಗ್ರಹಿಸಿದರು.

ಚುನಾವಣಾ ಆಯೋಗ ಯಾವುದೇ ಅಧಿಕಾರಿಗಳ ಹೆಗಲಿಗೆ ಇದರ ಜವಾಬ್ದಾರಿ ಹಾಕಿ ಸುಮ್ಮನಾಗಬಾರದು. ನಿಮ್ಮದು ಸ್ವಾಯತ್ತ ಸಂಸ್ಥೆಯಾಗಿದ್ದು, ನೀವು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳಿಂದ ತನಿಖೆಗೆ ನೀಡಬೇಕು. ನಿಮ್ಮ, ಮತದಾರರು ಹಾಗೂ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಕರೆ ನೀಡಿದರು.

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮುಂದಿನ ನಡೆ ಏನು ಎಂದು ಕೇಳಿದ ಪ್ರಶ್ನೆಗೆ, ‘ಇದು ಮತದಾರರ ಮಾಹಿತಿ ಕಳ್ಳತನ ಪ್ರಕರಣವಾಗಿದ್ದು, ಇದು ನಂಬಿಕೆ ದ್ರೋಹ, ಸಾರ್ವಜನಿಕ ಅಧಿಕಾರಿಯ ವೇಷದಲ್ಲಿ ಮಾಡಲಾದ ಮೋಸ, ಮಾಹಿತಿ ಕಳ್ಳತನ ಪ್ರಕರಣವಾಗಿದೆ. ಇದು ಹಣಕಾಸಿನ ಅವ್ಯವಹಾರ, ಪಿತೂರಿ, ಖಾಸಗಿ ಹಕ್ಕಿನ ಚ್ಯುತಿ ಪ್ರಕರಣವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಬಿಬಿಎಂಪಿ ಅಧಿಕಾರಿಗಳವರೆಗೂ ಎಲ್ಲರೂ ತಪ್ಪಿತಸ್ಥರಾಗಿದ್ದಾರೆ. ಬಮ್ಮಾಯಿ ಅವರು ಹಾಗೂ ಅವರ ಹಿಂಬಾಲಕರಿಂದ ಕನ್ನಡಿಗರ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನವಾಗಿದೆ. ಚಿಲುಮೆ ಈ ಅಕ್ರಮದ ಸಾಧನವಾಗಿದೆ. ಈ ವಿಚಾರವನ್ನು ನಾವು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರಶ್ನಿಸುತ್ತೇವೆ. ಜನತಾ ನ್ಯಾಯಾಲಯದ ಮುಂದೆ ಇಡುತ್ತೇವೆ. ಪ್ರಜಾಪ್ರಭುತ್ವದ ರಕ್ಷಕರಾಗಿ ಕನ್ನಡಿಗರ ಮತದಾನದ ಹಕ್ಕನ್ನು ಕಸಿಯಲು ಅವಕಾಶ ನೀಡುವುದಿಲ್ಲ’ ಎಂದರು.

 

*ಸಚಿವರ ಚೆಕ್, ಲೆಟರ್ ಹೆಡ್ ಚಿಲುಮೆ ಕಚೇರಿಯಲ್ಲಿ ಸಿಕ್ಕಿದ್ದು ಹೇಗೆ?: ಡಿ.ಕೆ. ಶಿವಕುಮಾರ್ ಪ್ರಶ್ನೆ*

ಸಚಿವ ಅಶ್ವತ್ಥ ನಾರಾಯಣ ಅವರ ದೂರವಾಣಿ ಸಂಖ್ಯೆ, ಅವರ ಚೆಕ್, ಲೆಟರ್ ಹೆಡ್, ಲೆಟರ್ ಪ್ಯಾಡ್, ಸೀಲ್ ಗಳು, ನೋಟು ಎಣಿಕೆ ಯಂತ್ರ ಎಲ್ಲವೂ ಚಿಲುಮೆ ಸಂಸ್ಥೆಯ ಕಚೇರಿಯಲ್ಲಿ ಯಾಕೆ ಸಿಕ್ಕಿವೆ? ಏನಿದರ ಅಸಲಿಯತ್ತು?

ಚಿಲುಮೆ, ಹೊಂಬಾಳೆ ಎರಡೂ ಸಂಸ್ಥೆಯಲ್ಲಿ ಒಂದೇ ಟೀಂ ಕೆಲಸ ಮಾಡಿದೆ. ಫ್ರೀ ಆಗಿ ಕೆಲಸ ಮಾಡ್ತೀವಿ ಅಂತ ಹೇಳಿದ್ದವರ ಕಚೇರಿಯಲ್ಲಿ ನೋಟು ಎಣಿಸುವ ಯಂತ್ರ ಯಾಕೆ ಬಂತು. ಸಿನಿಮಾದಲ್ಲಿ ಬಂದ ದುಡ್ಡನ್ನು ಇಲ್ಲಿ ಏಣಿಸ್ತಿದ್ರಾ? ಬ್ಲಾಕ್ ಮನಿ ವೈಟ್ ಮಾಡ್ತಿದ್ರಾ?

ಹಿಂದೆ ನಕಲಿ ಅಂಕಪಟ್ಟಿ ತಯಾರು ಮಾಡಿ ಅಕ್ರಮ ಮಾಡಿದಂತೆ ಈಗ ಮತದಾರ ಪಟ್ಟಿಯಲ್ಲಿ ಅಕ್ರಮ ಮಾಡಿದ್ದಾರೆ. ಇದೆಲ್ಲವೂ ಸಚಿವರ ಉಸ್ತುವಾರಿಯಲ್ಲೇ ನಡೆದಿದೆ ಎಂದು ಶಿವಕುಮಾರ ಆರಪಿಸಿದರು.

ವೋಟರ್ ಐಡಿ ಗೋಲ್ ಮಾಲ್; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

https://pragati.taskdun.com/voter-id-scamcongress-complaintelection-commission/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button