ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯದ 15 ವಿಧಾನ ಸಭಾ ಕ್ಷೇತ್ರಗಳಲ್ಲಿ ಗುರುವಾರ ಚುನಾವಣೆ ನಡೆಯಲಿದೆ. ತೀವ್ರ ಆರೋಪ-ಪ್ರತ್ಯಾರೋಪಗಳೊಂದಿಗೆ ಕಳೆದ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿದ್ದ ಅಬ್ಬರದ ಪ್ರಚಾರ ಕೊನೆಗೊಂಡು ಬುಧವಾರ ಮನೆ ಮನೆ ಪ್ರಚಾರ ನಡೆಯಿತು. ಮೂರೂ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ತೀವ್ರ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಕೆಲವು ಕ್ಷೇತ್ರಗಳು ಹೈ ವೋಲ್ಟೇಜ್ ಸೃಷ್ಟಿಸಿವೆ.
ಅನರ್ಹ ಶಾಸಕರ ಕ್ಯಾಪ್ಟನ್ ರಮೇಶ ಜಾರಕಿಹೊಳಿಯ ಗೋಕಾಕ, 1200 ಕೋಟಿ ರೂ.ಗಳ ಒಡೆಯ ಎಂ.ಟಿ.ಬಿ.ನಾಗರಾಜ ಅವರ ಹೊಸಕೋಟೆ, ಜಡಿಎಸ್ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ ಅವರ ಹುಣಸೂರು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯ ಉಸ್ತುವಾರಿಯ ಅಥಣಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳು.
ಭಾರತೀಯ ಜನತಾ ಪಾರ್ಟಿಗೆ ಸರಕಾರ ಉಳಿಸಿಕೊಳ್ಳಲು ಕನಿಷ್ಠ 6 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಇಲ್ಲವಾದಲ್ಲಿ ಸರಕಾರ ಪತನವಾಗಿ ಮತ್ತೆ ರಾಜಕೀಯ ಡೊಂಬರಾಟ ಶುರುವಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇದಕ್ಕಾಗಿಯೇ ಕಾಯುತ್ತಿವೆ. ಈ ದಿಸೆಯಲ್ಲಿ ಈಗಾಗಲೆ ಹಲವು ಲೆಕ್ಕಾಚಾರಗಳು ಶುರುವಾಗಿವೆ. ಗುರುವಾರ ಸಂಜೆ ಚುನಾವಣೆ ಮುಗಿಯುತ್ತಿದ್ದಂತೆ ಹೊರಬೀಳುವ ಚುನಾವಣೋತ್ತರ ಸಮೀಕ್ಷೆಗಳು ಇದಕ್ಕೆಲ್ಲ ನಾಂದಿ ಹಾಡಲಿವೆ.
ಬುಧವಾರ ರಾತ್ರಿ ಏನೇನು ಕಾರ್ಯಾಚರಣೆಗಳು ನಡೆಯಲಿವೆಯೋ ಎನ್ನುವ ಆತಂಕ ಎಲ್ಲೆಡೆ ಮನೆಮಾಡಿದೆ. ಹಣ, ಹೆಂಡ, ಸಾಮಗ್ರಿ ಹಂಚಿಕೆ, ಗಲಾಟೆಗಳ ಸಾಧ್ಯತೆ ಇದೆ. ಚುನಾವಣೆ ಆಯೋಗ ಎಲ್ಲ ಕಡೆ ತೀವ್ರ ನಿಗಾವಹಿಸಿದೆ.
ಗುರುವಾರದ ಚುನಾವಣೆಗಾಗಿ ಎಲ್ಲೆಡೆ ಮತಗಟ್ಟೆಗಳು ಸಿದ್ಧವಾಗಿದ್ದು, ಅನೇಕ ಕಡೆ ಸಿಂಗಾರ ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ತಲಾ ಒಂದು ಸಖಿ ಮತಗಟ್ಟೆ ಮತ್ತು ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.
ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಈಗಾಗಲೆ ಹಲವು ಸುತ್ತಿನ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದಿವೆ. ಶಾಂತಿಯುತ ಮತದಾನಕ್ಕಾಗಿ ಪೊಲೀಸರು ಸಜ್ಜಾಗಿದ್ದಾರೆ. ವಿಶೇಷ ಚುನಾವಣಾಧಿಕಾರಿಗಳು, ವೀಕ್ಷಕರು ನೇಮಕವಾಗಿದ್ದಾರೆ.
ಮತದಾರರನ್ನು ಆಕರ್ಷಿಸಲು ಸಖಿ ಮತಗಟ್ಟೆ
ಬಿಜೆಪಿ ವಿಶ್ವಾಸ 12- 13 ಕ್ಷೇತ್ರ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ