*ಫೆ.2 ರಂದು ವಿಟಿಯು ಘಟಿಕೋತ್ಸವ: ವಿಟಿಯು ಕುಲಪತಿ ವಿದ್ಯಾಶಂಕರ್*

25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ 25 ನೇ ವಾರ್ಷಿಕ ಘಟಿಕೋತ್ಸವದಲ್ಲಿ( ಭಾಗ-2) 8,702 ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಲು ಅರ್ಹರಾಗಿದ್ದಾರೆ. 25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 96 ವಿದ್ಯಾರ್ಥಿಗಳಿಗೆ ವಿವಿಧ ರ್ಯಾಂಕ್ ನೀಡಲಾಗುತ್ತಿದೆ” ಎಂದು ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿದರು.
ಗುರುವಾರ ಘಟಿಕೋತ್ಸವದ ಪೂರ್ವ ಭಾವಿಯಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಫೆಬ್ರವರಿ 2 ಬೆಳಗ್ಗೆ 11 ಗಂಟೆಗೆ ಘಟಿಕೋತ್ಸವನ್ನು ವಿವಿಯ ಕ್ಯಾಂಪಸ್ ” ಜ್ಞಾನ ಸಂಗಮ” ದಲ್ಲಿ ಆಯೋಜಿಸಿದೆ. ಈ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಫ್ಲಾಗ್ ಕರ್ನಾಟಕ ನೌಕಾ ನೆಲೆಯ ಆಫೀಸರ್ ಕಮಾಂಡಿಂಗ್ ರಿಯಲ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ಘನ ಉಪಸ್ಥಿಯನ್ನು ಉನ್ನತ ಶಿಕ್ಷಣ ಸಚಿವರು ಹಾಗೂ ನಮ್ಮ ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳಾದ ಡಾ.ಎಂ.ಸಿ. ಸುಧಾಕರ್ ವಹಿಸಲಿದ್ದಾರೆ“ ಎಂದರು.
“ನಮ್ಮಲ್ಲಿರುವ ಎಂಬಿಎ, ಎಂಸಿಎ, ಎಂ. ಟೆಕ್, ಪಿ.ಎಚ್.ಡಿ ಸೇರಿದಂತೆ ಪ್ರವೇಶ ಪಡೆದಿದ್ದ 9,540 ವಿದ್ಯಾರ್ಥಿಗಳ ಪೈಕಿ, 8,702 ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಲು ಅರ್ಹರಾಗಿದ್ದಾರೆ. ನಮ್ಮಲ್ಲಿ ಉತ್ತೀರ್ಣ ಪ್ರಮಾಣ ಶೇ.91.21 ಇದೆ. ಎಂದಿನಂತೆ ಹುಡುಗಿಯರು ಮೇಲುಗೈ ಸಾಧಿಸಿದ್ದಾರೆ. ಶೇಕಡಾ 94.40 ಹುಡುಗಿಯರು ಮತ್ತು ಶೇಕಡಾ 87.98 ಹುಡುಗರು ಸೇರಿದ್ದಾರೆ.
ಮೊದಲ ಭಾಗದ ಘಟಿಕೋತ್ಷವವನ್ನು ಜುಲೈನಲ್ಲಿ ನಡೆಸಲಾಗಿದ್ದು, ಪದವಿ ವಿದ್ಯಾರ್ಥಿಗಳಿಗಾಗಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಇದು ಸಂಪೂರ್ಣವಾಗಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ನಡೆಸುವ ಘಟಿಕೋತ್ಸವ ಸಮಾರಂಭವಾಗಿದೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಕಾರ್ಯಗಳಿಗೆ ವಿಳಂಬವಾಗಬಾರದು ಎಂಬ ಉದ್ದೇಶದಿಂದ ಪದವಿ ಮುಗಿಸಿದ ತಕ್ಷಣ ಪ್ರಮಾಣ ಪತ್ರಗಳನ್ನು ನೀಡುವ ಕೆಲಸ ಮಾಡುತ್ತಿದ್ದೇವೆ.” ಎಂದರು.
“ಘಟಿಕೊತ್ಸವದಲ್ಲಿ ಎಂಬಿಎ -4,928, ಎಂಸಿಎ -2,960, ಎಂ.ಟೆಕ್ – 718, ಎಂ. ಆರ್ಕ್- 59, ಎಂ.ಪ್ಲಾನ್ -21, ಎಂ. ಎಸ್ಸಿ -16 ಸೇರಿದಂತೆ ಒಟ್ಟಾರೆ -8,702 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ” ಎಂದು ತಿಳಿಸಿದರು.
ಚಿನ್ನದ ಪದವೀಧರರು: ಶಿವಮೊಗ್ಗದ ಜವಾಹರ ಲಾಲ್ ನೆಹರು ಕಾಲೇಜ್ ಆಫ್ ಎಂಜಿನಿಯರಿಂಗ್ ಜೆ.ಪಾರ್ವತಿ ಸಾಲೇರಾ 4 ಚಿನ್ನದ ಪದಕ, ಬೆಂಗಳೂರಿನ ಆರ್. ಎನ್.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಸಿ. ಕಾವ್ಯ 3 ಚಿನ್ನದ ಪದಕ, ದಾವಣಗೆರೆ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಬಿ.ಎಸ್. ಸಂಚಿತಾ 3 ಚಿನ್ನದ ಪದಕ, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿ. ಯೋಗೇಶ್ ಗೌಡ, ಬೆಂಗಳೂರಿನ ಜಿ. ಪಿ.ನಗರದ ಆಕ್ಸ್ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಸಿ. ರೇವಂತ ಕುಮಾರ್, ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಬಿ.ರಾಹುಲ್ ಡೇವಿಡ್ ತಲಾ ಎರಡು ಚಿನ್ನದ ಪದಕ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ವಿಟಿಯು ಕುಲಸಚಿವ (ಮೌಲ್ಯಮಾಪನ) ಪ್ರೊ.ಯು. ಜೆ.ಉಜ್ವಲ್ ಮತ್ತು ಕುಲಸಚಿವ ಪ್ರೊ. ಪ್ರಸಾದ ಬಿ. ರಾಂಪೂರೆ ಇದ್ದರು.


