Kannada NewsLatestNational

*ಭಾರಿ ಮಳೆಗೆ ಗೋಡೆ ಕುಸಿತ: 9 ಜನ ಸಾವು*

ಪ್ರಗತಿವಾಹಿನಿ ಸುದ್ದಿ: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿವಿಧ ಕಡೆ ಮನೆ ಗೋಡೆ ಕುಸಿದು 9 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ನಿರಂತರ ಮಳೆಯಿಂದಾಗಿ ಹಳೆಯ ಮನೆ ಮತ್ತು ಗೋಡೆಗಳು ಕುಸಿದು ಬಿದ್ದ ಪರಿಣಾಮ ನಾಲ್ಕು ಮಕ್ಕಳು ಹಾಗೂ ಇಬ್ಬರು ಕಂದಮ್ಮಗಳು ಸೇರಿದಂತೆ ಒಟ್ಟು 9 ಮಂದಿ ಜೀವ ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಮಾಹುಲಿ ಬಜಾರ್‌ನಲ್ಲಿ ಆಗಸ್ಟ್ 5 ಮತ್ತು 6ರ ಮಧ್ಯರಾತ್ರಿ ಸುಮಾರು 2 ಗಂಟೆಗೆ, ಸುಮಾರು 100 ವರ್ಷ ಹಳೆಯದಾದ ಮನೆಯೊಂದರಲ್ಲಿ ಕುಟುಂಬದ 7 ಸದಸ್ಯರು ಗಾಢ ನಿದ್ರೆಯಲ್ಲಿದ್ದಾಗ ಮನೆ ಏಕಾಏಕಿ ಕುಸಿದು ಬಿದ್ದಿದೆ.

ಅವಶೇಷಗಳ ಅಡಿಯಿಂದ ಪ್ರಮೋದ್ ಶ್ರೀವಾಸ್ತವ್ (60), ಅವರ ಪತ್ನಿ ರೀಟಾ (55), ಮಗ ನಿತಿನ್ (25), ಸೊಸೆ ಮಾಧುರಿ (24) ಹಾಗೂ ಅಮಾನ್ ಅವರ ಇಬ್ಬರು ಪುಟ್ಟ ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. ಅದೃಷ್ಟವಶಾತ್ ಪ್ರಮೋದ್ ಅವರ ಹಿರಿಯ ಮಗ ಅಮಾನ್ (28) ಅವಶೇಷಗಳ ಅಡಿಯಿಂದ ಹೊರಬಂದು ನೆರೆಹೊರೆಯವರನ್ನು ಕರೆದು ಸಹಾಯ ಪಡೆದಿದ್ದರಿಂದ ಅವರ ಜೀವ ಉಳಿದಿದೆ.

ಬಾರಾಬಂಕಿ ಜಿಲ್ಲೆಯ ಅಲಿಯಾಬಾದ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಹಳೆಯ ಇಟ್ಟಿಗೆ ಗೋಡೆ ಕುಸಿದು ಬಿದ್ದಿದೆ. ಪರಿಣಾಮ 7 ವರ್ಷದ ಬಾಲಕ ಮತ್ತು ಆತನ 14 ವರ್ಷದ ಅಕ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರು ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸುರಿದ ಭಾರಿ ಮಳೆಯಿಂದಾಗಿ ಶಿಥಿಲಗೊಂಡಿದ್ದ ಗೋಡೆ ಕುಸಿದಿದೆ ಎಂದು ತಿಳಿದುಬಂದಿದೆ.

ಸಹಾರನ್‌ಪುರ ಜಿಲ್ಲೆಯ ಘಾಗ್ರೇಕಿ ಗ್ರಾಮದಲ್ಲಿ ಬುಧವಾರ ರಾತ್ರಿ ನಿರಂತರ ಮಳೆಗೆ ಮಣ್ಣಿನ ಮನೆ ಕುಸಿದು ಬಿದ್ದಿದ್ದು, 35 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪೋಲಿಸರು ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button