
10 ವರ್ಷಗಳ ಕಠಿಣ ಜೈಲು ಶಿಕ್ಷೆ: ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್
ಪ್ರಗತಿವಾಹಿನಿ ಸುದ್ದಿ: ಪತ್ರಕರ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ದೋಷಿ ಎಂದು ಬಾಂಬೆ ಹೈಕೋರ್ಟ್ ನ ಗೋವಾ ಪೀಠ ತೀರ್ಪು ನೀಡಿದೆ.
ತರುಣ್ ತೇಜ್ ಪಾಲ್ ವಿರುದ್ಧದ 2013ರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನ ಗೋವಾ ಪೀಠವು ಮಹತ್ವದ ತೀರ್ಪು ಪ್ರಕಟಿಸಿದೆ. 2021ರಲ್ಲಿ ಗೋವಾ ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ವಜಾಗೊಳಿಸಿರುವ ಹೈಕೋರ್ಟ್, ತರುಣ್ ತೇಜ್ಪಾಲ್ ಅವರನ್ನು ದೋಷಿ ಎಂದು ಘೋಷಿಸಿದೆ. ಅಲ್ಲದೇ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ನೀಲಾ ಗೋಖಲೆ ಮತ್ತು ನ್ಯಾಯಮೂರ್ತಿ ಅಮಿತ್ ಜಮ್ಸಂದೇಕರ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.
ತೇಜ್ಪಾಲ್ ಪರ ಹಾಜರಿದ್ದ ಹಿರಿಯ ವಕೀಲ ಅಬಾದ್ ಪೋಂಡಾ, ಆರೋಪಿಗೆ ಈಗ 62 ವರ್ಷ ವಯಸ್ಸಾಗಿದೆ. ಇದು ಅವರ ಮೊದಲ ಅಪರಾಧ. ಈಗಾಗಲೇ 6 ತಿಂಗಳ ಜೈಲು ಶಿಕ್ಷೆ ಅನುಭವಿಸಿದ್ದು, ಕನಿಷ್ಠ ಶಿಕ್ಷೆ ವಿಧಿಸುವ ಮೂಲಕ ಸೌಮ್ಯತೆ ತೋರಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯಕ್ಕೆ ಸ್ವತಃ ಹೇಳಿಕೆ ನೀಡಿದ ತೇಜ್ಪಾಲ್, ಕಳೆದ 30 ವರ್ಷಗಳಿಂದ ನಾವು ಸತ್ಯ ಬಹಿರಂಗಪಡಿಸುವ ಕೆಲಸ ಮಾಡಿದ್ದೇವೆ. ನಾನು ಇಬ್ಬರು ಹೆಣ್ಣುಮಕ್ಕಳ ತಂದೆ, ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.
ಕೇಂದ್ರ ಮತ್ತು ಗೋವಾ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪಿಯಲ್ಲಿ ಯಾವುದೇ ಪಶ್ಚಾತ್ತಾಪ ಕಾಣುತ್ತಿಲ್ಲ. ಆತನ ವರ್ತನೆ ಅತ್ಯಂತ ನಿರ್ಲಜ್ಜತನದಿಂದ ಕೂಡಿದ್ದು, ಆತನಿಗೆ ಯಾವುದೇ ವಿನಾಯಿತಿ ನೀಡಬಾರದು ಎಂದು ವಾದಿಸಿದರು.
2013ರ ನವೆಂಬರ್ನಲ್ಲಿ ಗೋವಾದ ಪಂಚತಾರಾ ಹೋಟೆಲ್ನಲ್ಲಿ ನಡೆದ ಥಿಂಕ್ ಫೆಸ್ಟ್ ಕಾರ್ಯಕ್ರಮದ ವೇಳೆ, ತಮ್ಮ ಉದ್ಯೋಗಿಯಾಗಿದ್ದ ಯುವ ಪತ್ರಕರ್ತೆಯ ಮೇಲೆ ಹೋಟೆಲ್ ಲಿಫ್ಟ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ತೇಜ್ಪಾಲ್ ಮೇಲಿತ್ತು.
2021 ರಲ್ಲಿ ಗೋವಾ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆ ನೆಪವೊಡ್ಡಿ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಈ ತೀರ್ಪನ್ನು “ರೇಪ್ ಸಂತ್ರಸ್ತರ ವರ್ತನೆಯ ಕೈಪಿಡಿಯಂತಿದೆ ಎಂದು ಟೀಕಿಸಿದ್ದ ಸರ್ಕಾರ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ತೇಜ್ಪಾಲ್ ಪರ ವಕೀಲರು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳುತ್ತಿದ್ದಂತೆ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ತಡೆ ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. 2012ರ ನಿರ್ಭಯಾ ದುರಂತದ ನಂತರ ಭಾರತದಲ್ಲಿ ಜಾರಿಗೆ ತರಲಾದ ಕಠಿಣ ಲೈಂಗಿಕ ಅಪರಾಧ ತಡೆ ಕಾನೂನುಗಳ ಅಡಿಯಲ್ಲಿ ತನಿಖೆಗೊಳಪಟ್ಟ ಮೊದಲ ಉನ್ನತ ಮಟ್ಟದ ಪ್ರಕರಣ ಇದಾಗಿದೆ.



