ಅಭಿಮಾನಿ ಬಳಗ, ಸಾಹುಕಾರ ಪಡೆ ಎಲ್ಲ ಬಿಜೆಪಿಯಲ್ಲಿ ನಡೆಯಲ್ಲ; ಬಿಜೆಪಿ ರಾಜ್ಯಾಧ್ಯಕ್ಷರ ವಾರ್ನಿಂಗ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈಚೆಗೆ ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದ ಯಶಸ್ಸಿನ ಹಿನ್ನೆಲೆಯಲ್ಲಿ ಸಂಘಟಕರಿಗೆ ಧನ್ಯವಾದ ಸಲ್ಲಿಸುವ ನೆಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಶನಿವಾರ ಬೆಳಗಾವಿಯಲ್ಲಿ ಸಭೆ ನಡೆಸಿದರು.
ಮೊದಲು ಕಾರ್ಯಕರ್ತರ ಸಭೆ ನಡೆಸಿದ ಕಟೀಲು ನಂತರ ಪ್ರಮುಖ ನಾಯಕರ ಸಭೆಯನ್ನು ನಡೆಸಿದರು.
ಯಾವ ಯಾವ ನಾಯಕರು ಸಮಾವೇಶಕ್ಕೆ ಜನರನ್ನು ಕರೆತರಲು ಎಷ್ಟೆಷ್ಟು ವಾಹನ ಮಾಡಿದ್ದಿರಿ ಎನ್ನುವ ಮಾಹಿತಿಯನ್ನು ಕಟೀಲು ಪಡೆದುಕೊಂಡರು. ಬೆಳಗಾವಿ ಲೋಕಸಭಾ ಉಪಚುನಾವಣೆ ಸಂಬಂಧ ಯಾರೂ ಬಾಯಿ ಬಿಡದಂತೆ ಎಲ್ಲ ನಾಯಕರಿಗೆ ಕಟೀಲು ವಾರ್ನ್ ಮಾಡಿದರು. ಈ ಸಂಬಂಧ ಏನಿದ್ದರೂ ರಾಷ್ಟ್ರೀಯ ಅಧ್ಯಕ್ಷರು ನಿರ್ಣಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಯಾರೂ ಚರ್ಚಿಸಬೇಡಿ ಎಂದರು.
ಬಿಜೆಪಿಯಲ್ಲಿ ಇನ್ನು ಮುಂದೆ ವಂಶಪಾರಂಪರ್ಯ ರಾಜಕಾರಣ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎನ್ನುವ ಸಂದೇಶವನ್ನು ಅಮಿತ್ ಶಾ ಬೆಳಗಾವಿಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಹೇಳಿರುವುದನ್ನು ನೀವೆಲ್ಲ ಗಮನಿಸಿದ್ದೀರಿ ಎಂದುಕೊಂಡಿದ್ದೇನೆ ಎಂದೂ ಬೆಳಗಾವಿ ಲೋಕಸಭೆ ಉಪಚುನಾವಣೆ ವಿಷಯಕ್ಕೆ ಲಿಂಕ್ ಮಾಡಿ ನಳಿನ್ ಕುಮಾರ್ ಪರೋಕ್ಷವಾಗಿ ಹೇಳಿದರು.
ಅಮಿತ್ ಶಾ ಬಂದ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಕೆಲವರು ಸುರೇಶ ಅಂಗಡಿ ಅಭಿಮಾನಿ ಬಳಗ ಎಂದು ಫ್ಲೆಕ್ಸ್ ಹಾಕಿದ್ದರು. ಅದನ್ನು ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಾಹುಕಾರ ಪಡೆ ಎಂದು ಹಾಕಿಕೊಳ್ಳುತ್ತಿದ್ದಾರೆ. ಒಮ್ಮೆ ಬಿಜೆಪಿಗೆ ಬಂದ ನಂತರ ಎಲ್ಲರೂ ಬಿಜೆಪಿಯವರು. ಇಲ್ಲಿ ಯಾರದ್ದೇ ಪಡೆಯಾಗಲಿ, ಅಭಿಮಾನಿ ಬಳಗವಾಗಲಿ ಇರುವಂತಿಲ್ಲ. ಹಾಗೇನಾದರೂ ಇನ್ನು ಮುಂದೆ ಹಾಕಿದ್ದು ಕಂಡು ಬಂದರೆ ಪಕ್ಷ ಗಂಭೀರವಾಗಿ ಪರಿಗಣಿಸಲಿದೆ ಎನ್ನುವ ಎಚ್ಚರಿಕೆಯನ್ನು ನಳಿನ್ ಕುಮಾರ ಕಟೀಲು ಎಚ್ಚರಿಕೆ ನೀಡಿದರು.
ಸಚಿವರಾದ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರು, ಪ್ರಮುಖರು ಸಭೆಯಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ