ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ನಾಗುರ್ಡಾ ಗ್ರಾಮದ ನಿವಾಸಿ ಹಾಗೂ ಭಾರತೀಯ ಸೈನ್ಯದಲ್ಲಿ ಸುಬೇದಾರ್ ಎಂದು ಸೇವೆ ಸಲ್ಲಿಸುತ್ತಿದ್ದ ಯೋಧ ಸಂತೋಷ ಕೋಲೆಕರ (೩೪) ಭಾನುವಾರ ಪುಣೆಯ ಮಿಲಿಟರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಮೃತರ ಪಾರ್ಥೀವ ಶರೀರವನ್ನು ಸೋಮವಾರ ರಸ್ತೆ ಮೂಲಕ ಅವರ ಹುಟ್ಟೂರಿಗೆ ಕರೆತರಲಾಯಿತು. ಗ್ರಾಮದಲ್ಲಿ ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ರೇಷ್ಮಾ ತಾಳಿಕೋಟಿ, ಪೊಲೀಸ್ ಇನ್ಸಪೆಕ್ಟರ್ ಸುರೇಶ ಶಿಂಗಿ ಯೋಧನ ಪಾರ್ಥೀವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸಿದರು. ಬಳಿಕ ಭಾರತೀಯ ಸೈನ್ಯದ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಮೃತ ಸಂತೋಷ ಭಾರತೀಯ ಸೈನ್ಯಕ್ಕೆ ಸೇರಿದ್ದರು. ದೇಶದ ವಿವಿಧ ಮಿಲಿಟರಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರಿಗೆ ತಂದೆ, ತಾಯಿ, ಓರ್ವ ಸಹೋದರ, ಪತ್ನಿ ಮತ್ತು ಪುತ್ರ ಇದ್ದಾರೆ. ಮೃತ ಯೋಧನ ಪಾರ್ಥೀವ ಶರೀರಕ್ಕೆ ಅವರ ೮ ವರ್ಷದ ಪುತ್ರ ಅಗ್ನಿಸ್ಪರ್ಶ ಮಾಡಿದ ಈ ಸಂದರ್ಭದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ, ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ, ನಾಗುರ್ಡಾ ಗ್ರಾಪಂ ಪಿಡಿಒ ಪ್ರವೀಣ ಸಾಯನಾಯ್ಕ ಸೇರಿದಂತೆ ತಾಲೂಕಿನ ವಿವಿಧ ಕ್ಷೇತ್ರಗಳ ಗಣ್ಯರು, ನಾಗುರ್ಡಾ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಧ್ಯರಾತ್ರಿ ಮಹಿಳಾ ಅಧಿಕಾರಿಯ ರೌದ್ರಾವತಾರ: ಬಾಲ ಮುದುಡಿಕೊಂಡ ಎಂಇಎಸ್ ಫುಂಡರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ