ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಸೋಮವಾರ ಆರಂಭವಾಗಿರುವ ವಿಧಾನಮಂಡಳದ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಅಧಿವೇಶನದ ಸಮಗ್ರ ಸುದ್ದಿಗಳು ಮತ್ತು ವಿಡೀಯೋ ಇಲ್ಲಿವೆ –
ಕೆ. ರೋಸಯ್ಯ, ಬಿಪಿನ್ ರಾವತ್, ಪುನೀತ ರಾಜಕುಮಾರ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ
ಮೇಲ್ಮನೆಯಲ್ಲಿ ಸಂತಾಪ
ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಅನುದಾನ, ಬಿಗಿ ನಿಯಮಗಳ
ಸಡಿಲಿಕೆಗೆ ಭರವಸೆ : ಕೋಟ ಶ್ರೀನಿವಾಸ ಪೂಜಾರಿ
ಭೈರಪ್ಪನವರ ‘ಪರ್ವ’ ಕಾದಂಬರಿ ಆಧಾರಿತ ನಾಟಕ
21 ಸ್ಥಳಗಳಲ್ಲಿ ಪ್ರದರ್ಶನ: ಸಚಿವ ಸುನೀಲಕುಮಾರ್
ಅನುದಾನಿತ ಶಾಲೆ-ಕಾಲೇಜುಗಳ 257 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ –
ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ
ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪೂರ್ಣ ನಿಷೇಧ – ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ರಾಜ್ಯದಲ್ಲಿ ಹಸ್ತಚಾಲಿತ ಮಲ ಹೋರುವ ಪದ್ಧತಿಯನ್ನು ಪೂರ್ಣವಾಗಿ ನಿಷೇಧಿಸಲಾಗುವುದು. ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ರಾಜ್ಯದಲ್ಲಿರುವ ಮ್ಯಾನ್ಯುವೆಲ್ ಸ್ಕ್ವಾವೆಂಜರ್‌ಗಳ ಬದುಕು ಹಸನ ಮಾಡಲು ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಿದೆ. ಈ ಕುರಿತಂತೆ ಜನವರಿ ೧೦ರೊಳಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾದ ಕೋಟಾ ಶ್ರೀನಿವಾಸ್ ಪೂಜಾರ ಅವರು ಸೋಮವಾರ ಮೇಲ್ಮನೆಗೆ ತಿಳಿಸಿದರು.
ಸದಸ್ಯ ಬಿ.ಕೆ. ಹರಿಪ್ರಸಾದ ಅವರು ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿ ಕುರಿತಂತೆ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು ಭಾರತ ಸರ್ಕಾರವು ೨೦೧೩ರಲ್ಲಿ ಮ್ಯಾನ್ಯುಯಲ್ ಸ್ಕ್ವಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ಅಧಿನಿಯಮ ೨೦೧೩ರ ಕಾಯ್ದೆ ಹಾಗೂ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಈ ಪದ್ಧತಿಯನ್ನು ಅನುಸರಿಸುವವ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಕಾನೂನಿನ ಅರಿವು ಮೂಡಿಸುವ ಮತ್ತು ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಂದು ಕ್ರಮಗಳ ಕುರಿತಂತೆ ತಿಳಿಸಿದರು.
ರಾಜ್ಯ ಮಟ್ಟದಲ್ಲಿ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಸಫಾಯಿ ಕರ್ಮಚಾರಿಗಳ ಸಮುದಾಯದ ಪ್ರತಿನಿಧಿಗಳನ್ನು ಹಾಗೂ ಅನುಷ್ಠಾನ ಇಲಾಖೆಗಳು ಒಳಗೊಂಡಂತೆ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಸದರಿ ಸಮಿತಿಯು ೬ ತಿಂಗಳಿಗೊಮ್ಮೆ ಸಭೆ ಸೇರಿ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ೧೨ ಜಿಲ್ಲೆಗಳಲ್ಲಿ ಸಫಾಯಿ ಕರ್ಮಚಾರಿ ಆಯೋಗದಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಬಾಕಿ ೧೮ ಜಿಲ್ಲೆಗಳಲ್ಲಿ ಬರುವ ಫೆಬ್ರವರಿ ೨೨ ಮಾಹೆಯೊಳಗಾಗಿ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್‌ನಲ್ಲಿ ತೊಡಗಿರುವವರನ್ನು ಕಾಯಿದೆಗಳ ನಿಯಮಾನುಸಾರ ೫೦೮೦ ಜನರನನ್ನು ಗುರುತಿಸಲಾಗಿದೆ. ಇವರಿಗೆ ಪುನರ್ವಸತಿ ಕಾರ್ಯಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಒಂದು ಬಾರಿಗೆ ನಗದು ಸಹಾಯಧನವಾಗಿ ೪೦,೦೦೦ ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಮತ್ತು ಸಹಾಯಧನ ನೀಡಲಾಗುತ್ತಿದೆ. ಈಗಾಗಲೇ ಗುರುತಿಸಲ್ಪಟ್ಟ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡುವ ಕೆಲಸ ನಡೆದಿದೆ ಎಂದು ತಿಳಿಸಿದರು.
ಮ್ಯಾನ್ಯುವೆಲ್ ಸ್ವಚ್ಛಗೊಳಿಸುವಾಗ ಮೃತಪಟ್ಟಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುತ್ತವೆ. ಮೃತಪಟ್ಟ ಕುಟುಂಬದ ಅವಲಂಬಿತರಿಗೆ ೧೦ ಲಕ್ಷ ರೂ.ಗಳ ಪರಿಹಾರ ಹಣವನ್ನು ನೀಡಲಾಗಿದೆ. ಕಳೆದ ೧೯೯೫ ರಿಂದ ಈವರೆಗೆ ೮೮ ಕುಟುಂಬಗಳಿಗೆ ಪರಿಹಾರಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರವು State Action plan for Elimination of Manual cleaning of sewers and septic tanks ಎಂಬ ಕ್ರಿಯಾ ಯೋಜನೆಯನ್ನು ರೂಪಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ. ಮ್ಯಾನ್ಯುವೆಲ್ ಸೆಫ್ಟಿಕ್ ಟ್ಯಾಂಕ್ ಹಾಗೂ ತೆರೆದ ಚರಂಡಿ ಗಟಾರಗಳನ್ನು ಸ್ವಚ್ಛಗೊಳಿಸಲು ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಈವರೆಗೆ ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸ್ವಚ್ಛತೆಗಾಗಿ ಆಧುನಿಕ ತಂತ್ರಜ್ಞಾನ ಆಧಾರಿತ ೧೭೭ ಸಕ್ಕಿಂಗ್ ಮಿಷಿನ್, ೨೫೫ ಜಟ್ಟಿಂಗ್ ಮಶೀನ್, ೫೦ ಡೀಸಾಟ್ಟಿಂಗ್, ೨೮ ರಾಡರಿಂಗ್ ಯಂತ್ರ, ೧೩೨ ಸಕ್ಕಿಂಗ್ ಕಮ್ ಜಟ್ಟಿಂಗ್ ಮಶೀನ್ , ೧೩ ಇತರ ಸ್ವಚ್ಛತೆಯ ಯಂತ್ರಗಳನ್ನು ಖರೀದಿಸಲಾಗಿದೆ. ರಾಜ್ಯದಲ್ಲಿ ಈ ಹಿಂದೆ ಇದ್ದ ೩೦,೩೪೧ ಅನೈರ್ಮಲ್ಯ ಶೌಚಾಲಯಗಳನ್ನು ತೆರವುಗೊಳಿಸಿ ನೈರ್ಮಲ್ಯ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಚರ್ಚೆಯಲ್ಲಿ ಸದಸ್ಯರಾದ ಧರ್ಮಸೇನ, ತಿಪ್ಪೇಸ್ವಾಮಿ, ರಮೇಶ ಅವರು ಭಾಗವಹಿಸಿ ಹಸ್ತ ಚಾಲಿತ ಸ್ವಚ್ಛತಾ ಕಾರ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೆಲಸಗಾರರಿಗೆ ಸುರಕ್ಷಾ ಸಾಮಗ್ರಿಗಳು ಆಧುನಿಕ ಸ್ವಚ್ಛತಾ ಯಂತ್ರೋಪಕರಣಗಳನ್ನು ಒದಗಿಸಬೇಕು. ಈ ಪದ್ಧತಿ ಅನುಸರಿಸುವವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದ ಇಥೇನಾಲ್ ನೀತಿಗೆ ಕ್ರಮ
ರಾಜ್ಯದಲ್ಲಿ ಇಥೇನಾಲ್ ಉತ್ಪಾದಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ನೀತಿ ರೂಪಿಸುವ ಕುರಿತಂತೆ ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಕೈಮಗ್ಗ ಮತ್ತು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಭರವಸೆ ನೀಡಿದರು.
ವಿಧಾನ ಪರಿಷತ್‌ನಲ್ಲಿಂದು ಸದಸ್ಯರಾದ ಮಹಾಂತೇಶ ಕವಟಗಿಮಠ ಅವರ ಗಮನ ಸೆಳೆಯುವ ಪ್ರಶ್ನೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು ಇಥೇನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳಿಗೆ ಯಾವ ರೀತಿಯ ಪ್ರೋತ್ಸಾಹ ನೀಡಬೇಕು ಎಂಬುವುದನ್ನು ಚರ್ಚಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ ಎಂದರು.
ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಕಬ್ಬು ಬೆಳೆಯನ್ನು ಸೇರ್ಪಡೆಗೊಳಿಸಬೇಕು. ರೈತರ ವಿಮಾ ಕಂತುಗಳ ಶೇಕಡಾವಾರು ಪಾಲನಾ ಸರ್ಕಾರದ ವತಿಯಿಂದ ತುಂಬಲು ಕ್ರಮಕೈಗೊಳ್ಳಬೇಕೆಂಬ ಮನವಿಗೆ ಸ್ಪಂದಿಸಿದ ಸಚಿವರಾದ ಮುನೇನಕೊಪ್ಪ ಅವರು ಬೆಳೆ ವಿಮೆ ಪಾಲಿಸಿ ಕುರಿತಂತೆ ರೈತರಿಗೆ ಅನುಕೂಲಕರವಾದ ನೀತಿಯನ್ನು ಸರ್ಕಾರ ಪಾಲಿಸುತ್ತಾ ಬಂದಿದೆ. ಈಗಾಗಲೇ ಹೋಬಳಿ ಮಟ್ಟದಿಂದ ಗ್ರಾಮ ಮಟ್ಟಕ್ಕೆ ಇದೀಗ ಆಪ್ ಮೂಲಕ ರೈತನೇ ತನ್ನ ಹೊಲದ ವಿಮೆ ಭರ್ತಿ ಅವಕಾಶ ಮಾಡಿಕೊಡಲಾಗಿದೆ. ಕಬ್ಬಿನ ಬೆಳೆಯನ್ನು ಫಸಲ ಬಿಮಾ ಯೋಜನೆಯಡಿ ಸೇರ್ಪಡೆ ಮಾಡುವ ಕುರಿತಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹಿರಿಯ ಸದಸ್ಯರಾದ ಎಸ್.ಆರ್. ಪಾಟೀಲ ಅವರು ಕಬ್ಬು ಬೆಳೆಗಾರರು ತೂಕದ ವಂಚನೆಯಿಂದ ಮುಕ್ತಗೊಳಿಸಲು ಸರ್ಕಾರ ವತಿಯಿಂದಲೇ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಅತ್ಯಾಧುನಿಕ ತೂಕದ ಯಂತ್ರಗಳನ್ನು ಅಳವಡಿಸುವ ಕುರಿತು ಸಲಹೆಗೆ ಮನ್ನಣೆ ನೀಡಿದ ಸಚಿವರು ಈ ಕುರಿತು ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಹಿರಿಯ ಸದಸ್ಯರಾದ ಸಿದ್ದು ಸವದಿ ಅವರು ಹಲವು ಕಾರ್ಖಾನೆಗಳು ಕಬ್ಬು ಪೂರೈಸಿದ ಬೆಳೆಗಾರರ ಬಾಕಿ ಹಣ ಪಾವತಿ ಮಾಡಿರುವುದಿಲ್ಲ. ತಕ್ಷಣ ಬಾಕಿ ಪಾವತಿಗೆ ಕ್ರಮ ವಹಿಸಬೇಕು. ಕೇಂದ್ರ ಸರ್ಕಾರ ಈಗಾಗಲೇ ಇಥೇನಾಲ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಕೆಲವು ರಾಜ್ಯಗಳು ಕೇಂದ್ರ ಸರ್ಕಾರದ ನೆರವಿನ ಜೊತೆಗೆ ಹಲವು ರಾಜ್ಯ ಸರ್ಕಾರಗಳು ಪ್ರತ್ಯೇಕ ನೀತಿ ರೂಪಿಸಿ ಪ್ರೋತ್ಸಾಹ ನೀಡುತ್ತಿವೆ. ಕರ್ನಾಟಕ ಸರ್ಕಾರವು ಪ್ರತ್ಯೇಕವಾದ ಎಥೇನಾಲ್ ಉತ್ಪಾದನಾ ಪ್ರೋತ್ಸಾಹ ನೀತಿ ರೂಪಿಸುವಂತೆ ಸಚಿವರ ಗಮನ ಸೆಳೆದರು.
ಸಚಿವರ ಮುನೇನಕೊಪ್ಪ ಅವರು ಮಾಹಿತಿ ನೀಡಿ ರಾಜ್ಯದಲ್ಲಿ ೮೮ ಸಕ್ಕರೆ ಕಾರ್ಖಾನೆಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ೬೫ ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ. ೨೦೧೬-೧೭ ಹಾಗೂ ೨೦೧೭-೧೮ನೇ ಸಾಲಿನಲ್ಲಿ ಯಾವುದೇ ಬಾಕಿಯನ್ನು ಕಾರ್ಖಾನೆಗಳು ಉಳಿಸಿಕೊಂಡಿಲ್ಲ. ೨೦೧೮-೧೯ನೇ ಸಾಲಿನಲ್ಲಿ ೮.೯೩ ಕೋಟಿ, ೨೦೧೯-೨೦ನೇ ಸಾಲಿನಲ್ಲಿ ೫.೮೦ ಕೋಟಿ ಬಾಕಿ ಉಳಿಸಿಕೊಂಡಿವೆ. ೨೦೨೦-೨೧ನೇ ಸಾಲಿನಲ್ಲಿ ಯಾವುದೇ ಬಾಕಿ ಇರುವುದಿಲ್ಲ. ೨೦೧೬-೧೭ ರಿಂದ ೨೦೨೦-೨೧ನೇ ಹಂಗಾಮುಗಳಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್.ಆರ್.ಪಿ. ದರಕ್ಕಿಂತ ಹೆಚ್ಚಿನ ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಿವೆ ಎಂದು ಮಾಹಿತಿ ನೀಡಿದರು. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ವಸೂಲಾತಿ ಪ್ರಮಾಣಪತ್ರವನ್ನು ಹೊರಡಿಸಿ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಐಟಿಐ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಪ್ರಸ್ತಾವ ಇಲ್ಲ -ಸಚಿವ ಡಾ. ಅಶ್ವಥ್ ನಾರಾಯಣ
ರಾಜ್ಯದಲ್ಲಿರುವ ಅನುದಾನರಹಿತ ಖಾಸಗಿ ಐಟಿಐ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಯಾವುದೆ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರು ಇಂದು ಮೇಲ್ಮನೆಯಲ್ಲಿ ತಿಳಿಸಿದರು.
ಸದಸ್ಯರಾದ ಕೆ. ಪ್ರತಾಪಸಿಂಗ್ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿರುವ ಸರ್ಕಾರಿ ಐಟಿಐ ಕಾಲೇಜುಗಳನ್ನು ಉನ್ನತೀಕರಿಸುವ ಕಾರ್ಯ ನಡೆದಿದೆ. ಈಗಿರುವ ಐಟಿಐ ಕಾಲೇಜುಗಳಿಗೆ ಪ್ರವೇಶ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ ಅನುದಾನ ರಹಿತ ೧೦೪೧ ಐಟಿಐ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ೫೩೫೩ ಬೋಧಕ ಸಿಬ್ಬಂದಿ, ೩೨೭೯ ಬೋಧಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅನುದಾನರಹಿತ ಐಟಿಐ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿದರೆ ಅಂದಾಜು ವಾರ್ಷಿಕವಾಗಿ ೪೩೫ ಕೋಟಿ ರೂ. ಗಳ ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.
ಧಾರ್ಮಿಕ ಸಂಸ್ಥೆಗಳ ಬಾಕಿ ವಿದ್ಯುತ್ ಬಿಲ್ ಮನ್ನಾ ಇಲ್ಲ –ಸಚಿವ ವಿ. ಸುನೀಲಕುಮಾರ್
ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು ಹಾಗೂ ಇತರೆ ಪ್ರರ್ಥನಾಲಯಗಳಲ್ಲಿ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲು ಮನ್ನಾ ಮಾಡುವ ಯಾವುದೆ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲಕುಮಾರ್ ವಿಧಾನ ಪರಿಷತ್ತಿಗೆ ತಿಳಿಸಿದರು.
ಸದಸ್ಯ ಪಿ.ಎಂ. ಮುನಿರಾಜ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು ೩೧-೧೦-೨೦೨೧ಕ್ಕೆ ಅನ್ವಯವಾಗುವಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ದೇವಾಲಯಗಳು, ಚರ್ಚು, ಮಸೀದಿ ಹಾಗೂ ಇತರೆ ಪ್ರಾರ್ಥನಾ ಮಂದಿರಗಳು ಒಳಗೊಂಡಂತೆ ೩೦೯೧ ಸಂಸ್ಥೆಗಳು ೫೫.೦೬ ಲಕ್ಷ ರೂ., ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯ ೩೭೦೮ ಧಾರ್ಮಿಕ ಸಂಸ್ಥೆಗಳಿಂದ ೪೮.೬೫ ಲಕ್ಷ ರೂ., ಹೆಸ್ಕಾಂ ವ್ಯಾಪ್ತಿಯ ೨೦೮೦ ಧಾರ್ಮಿಕ ಸಂಸ್ಥೆಗಳು ೩೦.೭೯ ಲಕ್ಷ ರೂ., ಜೆಸ್ಕಾಂ ವ್ಯಾಪ್ತಿಯ ೨೪೦೭ ಧಾರ್ಮಿಕ ಸಂಸ್ಥೆಗಳು ೧.೨೯ ಕೋಟಿ ರೂ., ಮೆಸ್ಕಾಂ ವ್ಯಾಪ್ತಿಯ ೨೫೦೦ ಧಾರ್ಮಿಕ ಸಂಸ್ಥೆಗಳು ೧೦.೨೪ ಲಕ್ಷ ರೂ. ಬಾಕಿ ಪಾವತಿಸಬೇಕಾಗಿದೆ. ಒಟ್ಟಾರೆ ರಾಜ್ಯದ ವಿವಿಧ ಎಲ್ಲಾ ಧಾರ್ಮಿಕ ಸಂಸ್ಥೆಗಳಿಂದ ೨.೭೪ ಕೋಟಿ ರೂ. ಬಾಕಿ ಬರಬೇಕಾಗಿದೆ.
ಜಿಲ್ಲೆಗಳಲ್ಲಿ ಅಗತ್ಯಕ್ಕನುಗುಣವಾಗಿ ನ್ಯಾಯಬೆಲೆ ಅಂಗಡಿ ಮಂಜೂರು:ಸಚಿವ ಕತ್ತಿ
ಬೆಳಗಾವಿ ಸುವರ್ಣಸೌಧ,ಡಿ.೧೩(ಕರ್ನಾಟಕ ವಾರ್ತೆ): ಜಿಲ್ಲೆಗಳಲ್ಲಿ ಅಗತ್ಯಕ್ಕನುಗುಣವಾಗಿ ಹಾಡಿಗಳು/ತಾಂಡಾಗಳು/ಗೊಲ್ಲರಹಟ್ಟಿ/ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಕಾಲೋನಿ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದ್ದು, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ/ಉಪನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ ಕತ್ತಿ ಅವರು ವಿಧಾನಪರಿಷತ್ನಲ್ಲಿ ತಿಳಿಸಿದರು.
ಸದಸ್ಯ ಪ್ರಕಾಶ ರಾಠೋಡ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು ಸದರಿ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೩೭೬ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗಿದೆ. ನ್ಯಾಯಬೆಲೆ ಅಂಗಡಿಗಳ ಬೇಡಿಕೆ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ತಕ್ಷಣ ಮಂಜೂರು ಮಾಡಲಾಗುವುದು; ಮಂಜೂರು ಮಾಡದೇ ಸತಾಯಿಸಿದರೇ ಆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಆಯಾ ಹಾಡಿ/ತಾಂಡಾ/ಗೊಲ್ಲರಹಟ್ಟಿ,ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿನ ಅರ್ಹ ಸ್ವ-ಸಹಾಯ/ಸಂಘ-ಸಂಸ್ಥೆಗಳು/ವ್ಯಕ್ತಿಗಳನ್ನು ಮಾತ್ರ ಪರಿಗಣಿಸಲು ಮತ್ತು ಕನಿಷ್ಠ ೧೦೦ ಪಡಿತರ ಚೀಟಿಗಳಿಗೆ ಸೀಮಿತಗೊಳಿಸಿ ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡಲು ಅನುಮತಿ ನೀಡಲಾಗಿದೆ ಎಂದರು.
೫೧,೩೯೯ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಅಕ್ರಮ ದಂಧೆಕೋರರಿಂದ ವಶ :ಸಚಿವ ಕತ್ತಿ
೫೧,೩೯೯ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮದಂಧೆಕೋರರಿಂದ ವಶಪಡಿಸಿಕೊಳ್ಳಲಾಗಿದ್ದು,೩೩೫ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ ಕತ್ತಿ ಅವರು ವಿಧಾನಪರಿಷತ್ನಲ್ಲಿ ತಿಳಿಸಿದರು.
ಸದಸ್ಯ ಮಹಾಂತೇಶ ಮಲ್ಲಿಕಾರ್ಜುನ ಕವಠಿಗಿಮಠ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು ಅನ್ನಭಾಗ್ಯದ ಅಕ್ಕಿಯನ್ನು ಪಾಲಿಷ್ ಮಾಡುತ್ತಿರುವ ಮತ್ತು ದುರುಪಯೋಗ ಪ್ರಕರಣಗಳು ಸರಕಾರದ ಗಮನಕ್ಕೆ ಬಂದಿದ್ದು,ಈ ರೀತಿಯ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಹಾರ ಜಾಗೃತಿ ಮತ್ತು ತನಿಖಾದಳವನ್ನು ರಚಿಸಲಾಗಿದೆ ಎಂದರು.
ಅಗತ್ಯ ವಸ್ತುಗಳ ಕಾಯ್ದೆ ಅಡಿ ಒಟ್ಟು ೩೧೪ ಪ್ರಕರಣಗಳು ದಾಖಲಿಸಲಾಗಿದ್ದು, ಈ ಪೈಕಿ ೩೦೯ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಅಂದಾಜು ೮.೨೩ಕೋಟಿ ರೂ ಮೌಲ್ಯದ ೩೮೫೩೦ ಕ್ವಿಂಟಾಲ್ ಅಕ್ಕಿ ಮತ್ತು ೫೩೮ ಕ್ವಿಂಟಾಲ್ ಗೋದಿ ವಶಪಡಿಸಿಕೊಳ್ಳಲಾಗಿದೆ ಎಂದರು.
ಆಹಾರ ಜಾಗೃತಿ ಮತ್ತು ತನಿಖಾದಳವು ೨೧ ಪ್ರಕರಣಗಳನ್ನು ೫.೮೦ಕೋಟಿ ರೂ. ಮೌಲ್ಯದ ಪತ್ತೆಹಚ್ಚಿ ೧೨೮೬೮ ಕ್ವಿಂಟಾಲ್ ಅಕ್ಕಿ,೫೦.೨೬ಕ್ವಿಂಟಾಲ್ ಗೋದಿ ಹಾಗೂ ೫೦೭ ಕ್ವಿಂಟಾಲ್ ರಾಗಿ ವಶಪಡಿಸಿಕೊಳ್ಳಲಾಗಿದೆ.ಅಕ್ರಮಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
ಆರ್ಥಿಕ ಇಲಾಖೆ ಸಮ್ಮತಿ ನಂತರ ವಿಜಯನಗರ ಜಿಲ್ಲೆಯಲ್ಲಿ
ಡಿಡಿಪಿಐ,ಡಯಟ್ ಕಚೇರಿ ಆರಂಭ: ಸಚಿವ ನಾಗೇಶ
ವಿಜಯನಗರ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಚೇರಿಗಳನ್ನು ಸ್ಥಾಪಿಸಲು ಹಾಗೂ ಕಚೇರಿಗೆ ಹುದ್ದೆಗಳನ್ನು ಮಂಜೂರು ಮಾಡಲು ಸಹಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಹಮತಿ ದೊರೆತ ನಂತರ ಕ್ರಮವಹಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ತಿಳಿಸಿದರು.
ವಿಧಾನಪರಿಷತ್ ನಲ್ಲಿ ಸದಸ್ಯರ ನಸೀರ್ ಅಹ್ಮದ್ ಅವರ ಚುಕ್ಕೆರಹಿತ ಪ್ರಶ್ನೆಗೆ ಉತ್ತರಿಸಿದ ಅವರು ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಕಚೇರಿಗಳು ಇನ್ನೂ ಆರಂಭವಾಗದಿರುವುದು ಗಮನಕ್ಕೆ ಬಂದಿದೆ ಎಂದರು.
ಅಶಕ್ತರಿಗೆ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ವಿತರಣೆ: ಸಚಿವ ಆರ್.ಅಶೋಕ
ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಈಗಾಗಲೇ ೨೭,೭೩,೦೦೦ ಫಲಾನುಭವಿಗಳಿಗೆ ಅಂಚೆ ಕಚೇರಿ ಮೂಲಕ ಪಿಂಚಣಿ ಒದಗಿಸಲಾಗುತ್ತಿದ್ದು, ಅಶಕ್ತರಿಗೆ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಅವರು ಸೋಮವಾರ ವಿಧಾನಸಭೆಯಲ್ಲಿ ಶಾಸಕ ಬಂಡೆಪ್ಪ ಖಾಶೆಂಪೂರ್ ಅವರ ಪ್ರಶ್ನೆಗೆ ಉತ್ತರಿಸಿ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ನೇರವಾಗಿ ಪಿಂಚಣಿಯನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆದು, ಮನೆ ಬಾಗಿಲಿಗೆ ಪಿಂಚಣಿ ಒದಗಿಸಲು ಮನವಿ ಸಲ್ಲಿಸಿದರೆ ಈ ಸೌಲಭ್ಯವನ್ನು ಕಲ್ಪಿಸಲಾಗುವುದು.
ರಾಜ್ಯದಲ್ಲಿ ಬೋಗಸ್ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಕಳೆದ ವರ್ಷ ೪ಲಕ್ಷ ಬೋಗಸ್ ಕಾರ್ಡುಗಳನ್ನು ರದ್ದುಪಡಿಸಿರುವುದರಿಂದ ೪೭೫ ಕೋಟಿ ರೂ. ಉಳಿತಾಯವಾಗಿದೆ. ರಾಜ್ಯದಲ್ಲಿ ೬೦ವರ್ಷ ಮೇಲ್ಪಟ್ಟ ಬಿಪಿಎಲ್ ಪಡಿತರದಾರರ ಮಾಹಿತಿ ಲಭ್ಯವಿದ್ದು, ಅಂತವರಿಗೆ ನೇರವಾಗಿ ಪಿಂಚಣಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಪಶು ವೈದ್ಯಾಧಿಕಾರಿಗಳ ಶೀಘ್ರ ನೇಮಕಾತಿಗೆ ಕ್ರಮ: ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿಯಿರುವ ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ತಿಳಿಸಿದರು.
ಅವರು ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ನಾರಾಯಣ ಸ್ವಾಮಿ ಎಲ್.ಎನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ೯೦೦ ಪಶು ವೈದ್ಯಾಧಿಕಾರಿಗಳ ಹುದ್ದೆಯನ್ನು ನೇರ ನೇಮಕಾತಿ ಮೂಲಕ ತುಂಬಲು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಹುದ್ದೆಗಳು ಬಹಳ ವರ್ಷಗಳಿಂದ ಖಾಲಿಯಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಪಶು ಸಂಜೀವಿನಿ ವಾಹನ ಸೌಲಭ್ಯವನ್ನು ಶೀಘ್ರವಾಗಿ ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಕಾಲು ಬಾಯಿ ಜ್ವರ ಲಸಿಕೆಯನ್ನು ೧೩ ಜಿಲ್ಲೆಗಳಲ್ಲಿ ಈಗಾಗಲೇ ಸಂಪೂರ್ಣವಾಗಿ ನೀಡಲಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಈ ತಿಂಗಳ ಅಂತ್ಯದ ಒಳಗಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಶಾಸಕ ಸುಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು.
ಘಾಟ್ ರಸ್ತೆಗಳ ಶಾಶ್ವತ ದುರಸ್ತಿ: ರಾಜ್ಯದ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಎಲ್ಲಾ ೯ ಘಾಟ್ ರಸ್ತೆಗಳು ಕಳೆದ ಮೂರು ವರ್ಷಗಳ ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿದ್ದು, ಸದರಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿಸಿ.ಪಾಟೀಲ್ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಘಾಟ್ ರಸ್ತೆಗಳ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ರಸ್ತೆಗಳನ್ನು ಆದಷ್ಟು ಬೇಗನೆ ಸರಿಪಡಿಸಲಾಗುವುದು. ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿಗೆ ೩೬.೫೨ ಕೋಟಿ ರೂ. ಮಂಜೂರಾಗಿದ್ದು, ಆರ್ಥಿಕ ಬಿಡ್‌ಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲು ಕಾರ್ಯಾದೇಶ ನೀಡಲಾಗುವುದು. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ನಿರ್ವಹಣೆಗೆ ೧೯.೩೬ ಕೋಟಿ ರೂ. ಮಂಜೂರು ಮಾಡಲಾಗಿದ್ದು, ಕಾಮಗಾರಿ ಸಧ್ಯದಲ್ಲೇ ಪ್ರಾರಂಭವಾಗಲಿದೆ.
ಸಂಪಾಜೆ ಘಾಟ್‌ನಲ್ಲಿ ಕಾಂಕ್ರೀಟ್ ತಡೆಗೋಡೆಗಳ ನಿರ್ಮಾಣ ಕಾಮಗಾರಿಯನ್ನು ೫೮.೮೪ ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ಮುಕ್ತಾಯದ ಹಂತದಲ್ಲಿದೆ. ತೈನ್‌ಘಾಟ್ ರಸ್ತೆಯನ್ನು ಎರಡು ವಲಯಗಳಲ್ಲಿ ೮೫೬ ಕೋಟಿ ರೂ. ಮತ್ತು ೪೮೬ ಕೋಟಿ ರೂ. ಮೊತ್ತದಲ್ಲಿ ಇಪಿಸಿ ಮಾದರಿಯಲ್ಲಿ ನಿರ್ವಹಿಸಲಾಗುತ್ತಿದೆ. ದೇವಿಮನೆ ಘಾಟ್ ರಸ್ತೆಯನ್ನು ೩೬೦ ಕೋಟಿ ರೂ. ವೆಚ್ಚದಲ್ಲಿ ಇಪಿಸಿ ಮಾದರಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಉತ್ತರ ನೀಡಿದರು.
ಸಕ್ರಮಗೊಳಿಸಲು ಅವಕಾಶವಿಲ್ಲ: ಕರ್ನಾಟಕ ಭೂ ಕಂದಾಯ ಕಾಯ್ದೆ ಪ್ರಕಾರ ಅರಣ್ಯ ಭೂಮಿಯಲ್ಲಿನ ಯಾವುದೇ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶವಿರುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಡಿ.ಟಿ.ರಾಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಒಪ್ಪಿಗೆ ಸೂಚಿಸುವ ಪ್ರಕರಣಗಳಲ್ಲಿ ಸಾಗುವಳಿ ಚೀಟಿ ನೀಡಲು ಯಾವುದೇ ತೊಂದರೆಯಿರುವುದಿಲ್ಲ. ಸಮಿತಿಗಳಲ್ಲಿ ಸ್ಥಿರೀಕರಣಗೊಂಡ ಪ್ರಕರಣಗಳನ್ನು ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಲಾಪದ ವಿಡೀಯೋಗಳು ಇಲ್ಲಿವೆ –
https://webcast.gov.in/events/MTQzMg–/session/MzM4MA–
——————————————-
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ