Belagavi NewsBelgaum NewsKannada NewsKarnataka News

ಷಡ್ಯಂತ್ರ ಮಾಡುವ ಅವಶ್ಯಕತೆ ನಮಗಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 

* *ಕಲಬುರಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಹೇಳಿಕೆ* 

ಪ್ರಗತಿವಾಹಿನಿ ಸುದ್ದಿ, ಕಲಬುರಗಿ:*ಕಾಂಗ್ರೆಸ್ ಪಕ್ಷಕ್ಕೆ ಷಡ್ಯಂತ್ರ ಮಾಡುವ ಅವಶ್ಯಕತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. 

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಬಂಧನ ಕಾಂಗ್ರೆಸ್ ಷಡ್ಯಂತ್ರ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. 

ಕಾಂಗ್ರೆಸ್ ಪಕ್ಷಕ್ಕೆ ಷಡ್ಯಂತ್ರ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ರೀತಿ ಕಾಂಗ್ರೆಸ್ ಷಡ್ಯಂತ್ರ ಮಾಡಿದರೆ, ಕರ್ನಾಟಕದ ಜೈಲುಗಳು ಸಾಕಾಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. 

ಷಡ್ಯಂತ್ರ, ಸೇಡಿನ ರಾಜಕಾರಣ ಮಾಡುವುದು, ಬಿಜೆಪಿಯವರ ಚಾಳಿ. ಮಾಜಿ ಮಂತ್ರಿಯಾದವರು ಮಹಿಳೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ರಾಜಕಾರಣಿಗಳು ಅಂದ ಮೇಲೆ ನಮ್ಮನ್ನು ಸಾವಿರ ಜನ ಅನುಕರಣೆ ಮಾಡುತ್ತಾರೆ. ನಮ್ಮ ಜವಾಬ್ದಾರಿ ಏನು ಅಂತ ತಿಳಿದುಕೊಂಡು ಮಾತಾಡಬೇಕು. ಹೆಣ್ಣು ಮಕ್ಕಳ ಬಗ್ಗೆ ಮಾತಾಡುವಾಗ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಎಂದು ಸಚಿವರು ಹೇಳಿದರು. 

* *ನಾಗಮಂಗಲ ಘಟನೆ ನಡೆಯಬಾರದಿತ್ತು* 

ನಾಗಮಂಗಲ ಗಲಭೆಗೆ ಕೇರಳ ಲಿಂಕ್ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 60 ಸಾವಿರ ಗಣೇಶ ಮಂಡಳಿಗಳಿವೆ‌‌. ಇಂತಹ ಘಟನೆಗಳು ಆಗಬಾರದು. ನಾನು ಯಾವುದೇ ಕೋಮಿಗಾಗಲಿ, ಯಾವುದೇ ಜಾತಿಗಾಗಲಿ ಇಂತಹುದಕ್ಕೆ ಬೆಂಬಲ ನೀಡುವುದಿಲ್ಲ ಎಂದರು‌. 

ಇಂಥ ಘಟನೆಗಳನ್ನು ನಾವು ಖಂಡಿಸುತ್ತೇವೆ. ಪಕ್ಷಾತೀತವಾಗಿ ಯಾವುದೇ ಕೋಮಿನವರಾಗಲಿ ನಮ್ಮ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತೆ. ನಾಗಮಂಗಲ ಘಟನೆಯಲ್ಲಿ ಯಾವುದೇ ಲಿಂಕ್ ಇಲ್ಲ. ಪೂರ್ವ ಯೋಜಿತವೂ ಅಲ್ಲ, ಯಾವುದೇ ಪ್ರೀ ಪ್ಲ್ಯಾನ್ ಇಲ್ಲ. ಯಾರೂ ದೊಡ್ಡ ಕಥೆ ಕಟ್ಟೋದು ಬೇಡ,  ಎರಡು ಗುಂಪುಗಳ ಮಧ್ಯೆ ಘರ್ಷಣೆ ಆಗಿದೆಯಷ್ಟೆ. ಈಗಾಗಲೇ ನಮ್ಮ ಸರ್ಕಾರ ಕ್ರಮಕೈಗೊಂಡಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button