Kannada NewsKarnataka NewsPolitics

*ಬಿಜೆಪಿ ಸಂಸದರು 10 ರೂಪಾಯಿ ಸಹಾಯವನ್ನೂ ಮಾಡಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ:“ಮೆಟ್ರೋ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ. 80 ರಷ್ಟು ಖರ್ಚು ಮಾಡಿದ್ದರೆ, ಕೇಂದ್ರ ಬಿಜೆಪಿ ಸರ್ಕಾರ ಶೇ.20 ರಷ್ಟು ಮಾತ್ರ ಖರ್ಚು ಮಾಡಿದೆ. ಕೆಲವೊಂದು ಕಡೆ ಶೇ.11 ರಷ್ಟು ಮಾತ್ರ ಖರ್ಚು ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು‌.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿ ಸಂಸದರು ಹಾಗೂ ನಾಯಕರ ಮೇಲೆ ವಾಗ್ದಾಳಿ ನಡೆಸಿದರು.

“ಬೆಂಗಳೂರಿಗೆ ಕನಿಷ್ಠ 1 ಲಕ್ಷ ಕೋಟಿ ರೂ. ಅನುದಾನ ನೀಡಬೇಕು ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ. ಮೆಟ್ರೋ ಯೋಜನೆಯ ಭೂಸ್ವಾಧೀನನಕ್ಕೆಲ್ಲ ರಾಜ್ಯ ಸರ್ಕಾರವೇ ಹಣ ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಶೇ. 50 ರಷ್ಟು ನೀಡಬೇಕಾಗಿತ್ತು. ಅದನ್ನೂ ನೀಡಿಲ್ಲ. ಆದರೂ ನಾವು ಈ ರಾಜ್ಯದ, ಬೆಂಗಳೂರಿನ ಜನರ ಹಿತಕ್ಕಾಗಿ ಈ ಕೆಲಸ ಪೂರ್ಣಗೊಳಿಸಿದ್ದೇವೆ. ಬೆಂಗಳೂರು ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ನಗರವಾದರೂ ಸಿಗುತ್ತಿರುವ ಅನುದಾನ ಮಾತ್ರ ಬಹಳ ಕಡಿಮೆ” ಎಂದರು.

“ಅಹಮದಾಬಾದ್ ಗೆ ಶೇ.20 ರಷ್ಟು ತೆರಿಗೆ ಪಾಲನ್ನು ನೀಡಲಾಗಿದೆ. ನಮಗೆ ಶೇ10 ರಷ್ಟು ಮಾತ್ರ ನೀಡಲಾಗಿದೆ. ಅದಕ್ಕೆ ದೇಶದ ಇತರೆ ದೊಡ್ಡ ನಗರಗಳಂತೆ ನಮ್ಮನ್ನೂ ಪರಿಗಣಿಸಿ. ಜೊತೆಗೆ ದೇಶದ ರಾಜಧಾನಿ ಸಾಲಿನಲ್ಲಿಟ್ಟು ಬೆಂಗಳೂರನ್ನು ಯೋಚಿಸಿ.‌ ನಾವು ರಾಜಕಾರಣ ಮಾಡುತ್ತಿಲ್ಲ, ಬದಲಾಗಿ ಮನವಿ ಮಾಡುತ್ತಿದ್ದೇವೆ” ಎಂದರು. 

Home add -Advt

ಬಿಜೆಪಿಯವರು 10 ರೂಪಾಯಿ ತಂದಿಲ್ಲ

“ಬಿಜೆಪಿಯವರು ಎಲ್ಲಾ ನಾವೇ ಮಾಡಿದ್ದೇವೆ ಎನ್ನುತ್ತಾರೆ. ಅವರದ್ದು ಏನೇನೂ ಸಾಧನೆಯಿಲ್ಲ. ಯಾವೊಬ್ಬ ಸಂಸದನೂ ಸಹ ಬೆಂಗಳೂರು ನಗರಕ್ಕೆ, ರಾಜ್ಯಕ್ಕೆ ಹತ್ತು ರೂಪಾಯಿ ಸಹಾಯ ತಂದಿಲ್ಲ. ಯಾವ ರೀತಿಯ ಸಹಕಾರವನ್ನೂ ಸಹ ಕೊಟ್ಟಿಲ್ಲ. ಕರ್ನಾಟಕದ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು.‌ ಕೇಂದ್ರ ಜಲಶಕ್ತಿ ಸಚಿವರು ಮಾತ್ರ ಕೆಲವೊಮ್ಮೆ ನಮ್ಮ ಮನವಿಗಳಿಗೆ ಸ್ಪಂದಿಸಿದ್ದಾರೆ. ಅದರ ಹೊರತಾಗಿ ಒಂದೇ ಒಂದು ರೂಪಾಯಿ ಸಹ ಬಂದಿಲ್ಲ. ನರೇಗಾ ಯೋಜನೆಗೂ ಹಣ ನೀಡಿಲ್ಲ” ಎಂದರು.

ಕೇವಲ ಫೋಟೊ ಹಾಕಿಸಿಕೊಂಡರೆ ಸಾಧನೆಯಲ್ಲ

“ಈ ಬಿಜೆಪಿ ಸಂಸದರು ಕೇವಲ ಎಕ್ಸ್ (ಟ್ವೀಟ್) ಮಾಡಿಕೊಂಡು, ಮಾಧ್ಯಮಗಳಲ್ಲಿ ಎರಡು ಪೋಟೊ ಹಾಕಿಸಿಕೊಂಡರೆ ಮಾತ್ರ ಸಾಧನೆ ಎಂದುಕೊಂಡಿದ್ದಾರೆ. ನಿಮ್ಮ ಪ್ರಜ್ಞೆ ಇಲ್ಲಿ ಕೆಲಸ ಮಾಡಬೇಕು. ಸಂಸದರು ರಾಜಕಾರಣ ಬಿಟ್ಟು ಜನರ ಸೇವೆಗೆ ಅನುದಾನ ತರುವ ಕೆಲಸ‌ ಮಾಡಿ” ಎಂದು ಕುಟುಕಿದರು.

ಡಬಲ್ ಡೆಕ್ಕರ್ ನಂತಹ ಮಾದರಿ ಯೋಜನೆ ನೀಡಿದ್ದೇವೆ

“ಕೇಂದ್ರ‌ ಸರ್ಕಾರ ಸಂಪೂರ್ಣವಾಗಿ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ. ಅನುದಾನ ನೀಡಲು ಕಡೆಗಣಿಸಲಾಗಿದೆ. ಆದರೆ ಮಾನ್ಯ ಪ್ರಧಾನಿಗಳಿಗೆ ಗೌರವ ನೀಡಿ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ. ನಾವು ಡಬಲ್ ಡೆಕ್ಕರ್ ಎನ್ನುವ ಮಾದರಿಯುತ ಯೋಜನೆಯನ್ನು ಜಾರಿಗೆ ತಂದಿದ್ದೇವೆ” ಎಂದರು. 

“ಬೆಂಗಳೂರಿನಲ್ಲಿ ಪ್ರತಿ ವರ್ಷ ಐಟಿ ಕ್ಷೇತ್ರದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಐಟಿ ಉದ್ದಿಮೆಗಳು ಇರುವ ಭಾಗಕ್ಕೆ ಅನುಕೂಲವಾಗಲಿ ಎಂದು ಹಳದಿ ಮಾರ್ಗ ಮಾಡಿದ್ದೇವೆ. ಇಂದು ಆ ಮಾರ್ಗ ಉದ್ಘಾಟನೆಯಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಕೂಡ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆಗಿದ್ದು” ಎಂದರು.

ಅಂಕಿಅಂಶಗಳ ಬಿಡುಗಡೆಗೆ ಸವಾಲು

ಮೆಟ್ರೋ ಎರಡನೇ ಹಾಗೂ ಮೂರನೇ ಹಂತಕ್ಕೆ ಮೋದಿಯವರ ಕೊಡುಗೆ ಹೆಚ್ಚಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಕೇಳಿದಾಗ, “ಯಾರ ಕೊಡುಗೆಯೂ ಇಲ್ಲಿ ಇಲ್ಲ. ಇದೆಲ್ಲಾ ಪ್ರಾರಂಭ ಆಗಿದ್ದು ಎಸ್.ಎಂ.ಕೃಷ್ಣ ಅವರು ಹಾಗೂ ವಾಜಪೇಯಿ ಅವರ ಕಾಲದಲ್ಲಿ. ಎಷ್ಟೆಷ್ಟು ಅನುದಾನ ನೀಡಿದ್ದೇವೆ ಎನ್ನುವ ಅಂಕಿಅಂಶಗಳನ್ನು ಅವರೂ ಬಿಡುಗಡೆ ಮಾಡಲಿ, ನಾನೂ ಬಿಡುಗಡೆ ಮಾಡುತ್ತೇನೆ” ಎಂದು ಸವಾಲು ಹಾಕಿದರು.

“ಇನ್ಫೋಸಿಸ್, ಡೆಲ್ಟಾ, ಬಯೋಕಾನ್ ಹಾಗೂ ಇತರೇ ಸಂಸ್ಥೆಗಳು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ಹಣ ನೀಡಿದ್ದಾರೆ ಅವರಿಗೆ ಇದೇ ವೇಳೆ ಅಭಿನಂದನೆಗಳನ್ನು ತಿಳಿಸುತ್ತೇನೆ” ಎಂದರು.

Related Articles

Back to top button