ಲಕ್ಷ್ಮೀ ಹೆಬ್ಬಾಳಕರ್ ನಮ್ಮವರು ಎಂದು ಒಪ್ಪಿಕೊಂಡಿದ್ದೇವೆ, ವಿಷಯಾಂತರ ಮಾಡಬೇಡಿ: ಮುರುಗೇಶ ನಿರಾಣಿ ಹೇಳಿಕೆಗೆ ಸ್ವಾಮೀಜಿ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಿ ಗುರುತಿಸಿಕೊಂಡಿದ್ದಾರೆ. ವಿನಾಕಾರಣ ವಿಷಯಾಂತರ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿಕೆಗೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಮುರುಗೇಶ ನಿರಾಣಿ ಅವರ ಪಕ್ಷ ಬೇರೆ ಇದ್ದರೂ ಜಾತಿ ಹೆಸರಿನಲ್ಲಿ ಈ ರೀತಿ ನೋವಾಗುವ ತರ ಮಾತನಾಡಬಾರದು. ನಿರಾಣಿ ಹಾಗೂ ಹೆಬ್ಬಾಳ್ಕರ್ ಒಂದೇ ತಾಯಿಯ ಮಕ್ಕಳು ಇದ್ದ ಹಾಗೆ. ರಾಜಕೀಯ ವಿಷಯದಲ್ಲಿ ಬೇಕಾದ್ದನ್ನು ಮಾತನಾಡಿ, ಆದರೆ ಜಾತಿಯ ವಿಷಯ ತಂದು ನಮ್ಮ ನಮ್ಮಲ್ಲಿಯೇ ಜಗಳ ಹಚ್ಚುವುದು ಸರಿಯಲ್ಲ ಎಂದು ನಿರಾಣಿಗೆ ತಿಳಿಸಿದರು.
ಲಕ್ಷ್ಮೀ ಹೆಬ್ಬಾಳಕರ್ ಸಂಪೂರ್ಣವಾಗಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ನಮ್ಮವರು ಎನ್ನುವ ಕಾರಣಕ್ಕಾಗಿಯೇ ಇಷ್ಟೊಂದು ಸಹಕಾರ ನೀಡಿದ್ದಾರೆ. ಅದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ವಿಷಯದಲ್ಲಿ ಬೇರೆ ರಾತಿ ಮಾತನಾಡುವುದು ಸರಿಯಲ್ಲ ಎಂದು ಸ್ವಾಮೀಜಿ ತಿಳಿಸಿದರು.
ಚುನಾವಣೆ ಬಳಿಕ ಮೀಸಲಾತಿ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು. ಮೀಸಲಾತಿ ಹೋರಾಟಕ್ಕೆ ಸ್ಪಂದನೆ ಮಾಡದವರಿಗೆ ತಿರಸ್ಕಾರ ಮಾಡಿ, ಸಹಕಾರ ಕೊಟ್ಟವರಿಗೆ ಆಶೀರ್ವಾದ ಮಾಡಿ ಎಂದು ಪಂಚಮಸಾಲಿ ಸಮಾಜಕ್ಕೆ ಕರೆ ನೀಡಲಾಗಿದೆ ಎಂದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಕುರಿತು ಸಿಎಂ ಸಭೆ ಕರೆದಿದ್ದರು. ಆದರೆ ಇಲ್ಲಿಯವರೆಗೂ ಮೀಸಲಾತಿ ಕೊಡದೆ ಇರುವುದಕ್ಕೆ ನಮಗೆ ಅಸಮಾಧಾನ ಇದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ