Kannada NewsKarnataka News

ನಿಮ್ಮನ್ನು ಬದಲಿಸುವ ಉದ್ದೇಶ ನಮಗಿಲ್ಲ, ಆದರೆ…: ಅಧಿಕಾರಿಗಳಿಗೆ ಜಾರಕಿಹೊಳಿ, ಹೆಬ್ಬಾಳಕರ್ ನೀಡಿದ ಎಚ್ಚರಿಕೆ ಸಂದೇಶ ಏನು?


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ”ಯಾವುದೇ ಅಧಿಕಾರಿಗಳನ್ನು ಬದಲಿಸುವ ಉದ್ದೇಶ ನಮಗಿಲ್ಲ. ಆದರೆ ಹಿಂದಿನಂತೆ ಇದ್ದರೆ ಆಗುವುದಿಲ್ಲ. ಜನರು ಬಹಳ ನಿರೀಕ್ಷೆ ಇಟ್ಟು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಸುಳ್ಳು ಹೇಳುತ್ತ ಕಾಲಕಳೆದರೆ ನಡೆಯುವುದಿಲ್ಲ. ನಮ್ಮ ಸ್ಪೀಡ್ ಗೆ ನೀವೂ ಓಡಬೇಕು. ಜಿಲ್ಲಾಧಿಕಾರಿಗಳ ಕೈಗೆ, ಶಾಸಕರ ಕೈಗೆ ಸಿಗದೆ ಓಡಾಡುವವರು ಈಗಲೇ ಹೊರಗೆ ಹೋಗಲು ಸಿದ್ಧತೆ ಮಾಡಿಕೊಳ್ಳಿ”

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ ಜಿಲ್ಲೆಯ ಅಧಿಕಾರಿಗಳಿಗೆ ನೀಡಿದ ಸ್ಪಷ್ಟ ಸಂದೇಶ ಇದು.

ಮಂಗಳವಾರ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಮೊದಲ ಸಭೆ ನಡೆಸಿದ ಸಚಿವರು ಸಮಗ್ರ ಮಾಹಿತಿ ಪಡೆಯುವ ಪ್ರಯತ್ನ ಮಾಡಿದರು. ಅತ್ಯಂತ ಮೃಧುವಾಗಿಯೇ ಸಭೆ ನಿರ್ವಹಿಸಿದ ಸಚಿವ ದ್ವಯರು ನೇರವಾಗಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ನಿಮ್ಮನ್ನು ಬದಲಾಯಿಸುವ ಉದ್ದೇಶ ಇಲ್ಲ. ಆದರೆ ಕೆಲಸ ಮಾಡಬೇಕು, ಜನರ ನಿರೀಕ್ಷೆ ಬಹಳ ಇದೆ. ನಮಗೂ ಒತ್ತಡ ಇದೆ. ನಿಜ ಹೇಳಬೇಕು, ಸುಳ್ಳು ಹೇಳಬೇಡಿ, ಒಮ್ಮೆ ಸುಳ್ಳು ಹೇಳಿದರೆ ಮುಚ್ಚಿಕೊಳ್ಳಲು 10 ಸುಳ್ಳು ಹೇಳಬೇಕಾಗುತ್ತದೆ. ನಾವು ಪ್ರತಿ ಇಲಾಖೆ. ಪ್ರತ್ಯೇಕ ಸಭೆ ನಡೆಸುತ್ತೇವೆ. ಒಮ್ಮೆಲೇ ಎಲ್ಲ ಇಲಾಖೆಗಳ ಕೆಡಿಪಿ ಮೀಟಿಂಗ್ ಮಾಡಿ ಮುಗಿಸುವುದಿಲ್ಲ. ನಮಗೆ ಸೂಕ್ತ ಸ್ಪಂದನೆ ಬೇಕು ಎಂದು ಸತೀಶ್ ಹೇಳಿದರು.

ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಸತೀಶ್ ಜಾರಕಿಹೊಳಿ 5ನೇ ಬಾರಿ ಮಂತ್ರಿಯಾಗಿದ್ದಾರೆ. ಅವರಿಗೆ ಆಡಳಿತದ ಸಮಗ್ರ ಅನುಭವವಿದೆ. ಹಾಗಾಗಿ ನಿಮಗೆ ಎಲ್ಲವನ್ನೂ ಹೇಳಿದ್ದಾರೆ. ಜನರು ನಮಗೆ ಆಶಿರ್ವಾದ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿ. ಶಾಸಕರ ಕೈಗೆ, ಡಿಸಿ ಕೈಗೆ ಸಿಗದವರು ಹೊರಗೆ ಹೋಗಿಬಿಡಿ. ನಮ್ಮ ಸ್ಪೀಡ್ ಗೆ ಸ್ಪಂದಿಸಿ, ಇಲ್ಲವಾದರೆ ಇಲ್ಲಿಂದ ಹೊರಡಿ ಎಂದು ಸೂಚಿಸಿದರು.

ಪೊಲೀಸರು ದಾಖಲೆಗಳ ಪರಿಶೀಲನೆ ದಿನನಿತ್ಯ ಜನರಿಗೆ ಕಿರುಕುಳ ನೀಡಬೇಡಿ. ಕಾನೂನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಿ. ಹೆಲ್ಮೆಟ್ ಹಾಕದವರು, ಮೊಬೈಲ್ ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುವವರು ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಭ್ಯಂತರವಿಲ್ಲ. ಆದರೆ ದಿನವೂ ವಾಹನ ದಾಖಲೆ ಪರಿಶೀಲಿಸುವ ಬದಲು ತಿಂಗಳಲ್ಲಿ 2 ದಿನ ಅಂತಹ ಕೆಲಸ ಮಾಡಿ. ಅನಗತ್ಯ ಕಿರುಕುಳವಾಗದಂತೆ ನೋಡಿಕೊಳ್ಳಿ ಎಂದು ಹೆಬ್ಬಾಳಕರ್ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಮತ್ತು ಮುಂಬರುವ ಪ್ರವಾಹ ಕುರಿತು ಮುಂಜಾಗ್ರತೆ ತೆಗೆದುಕೊಳ್ಳಿ, ಅಗತ್ಯವಾದಷ್ಟು ಟ್ಯಾಂಕರ್ ವ್ಯವಸ್ಥೆ ಮಾಡಿ. ಇನ್ನು ಒಂದೆರಡು ವಾರವಷ್ಟೆ ನೀರಿನ ಸಮಸ್ಯೆ ಇರಲಿದ್ದು ಅಲ್ಲಿಯವರೆಗೆ ಸರಿಯಾಗಿ ನಿಭಾಯಿಸಿ ಎಂದೂ ಹೆಬ್ಬಾಳಕರ್ ಹೇಳಿದರು.

ಮುನ್ನೆಚ್ಚರಿಕೆ ವಹಿಸಿ – ಸತೀಶ್ ಜಾರಕಿಹೊಳಿ

ಮಳೆಗಾಲ ಆರಂಭಗೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ನಾಳೆಯಿಂದಲೇ ಎಲ್ಲ ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರ ಜತೆಗೂಡಿ ರೈತರಿಗೆ ಬೀಜ-ಗೊಬ್ಬರ ವಿತರಣೆ ಕಾರ್ಯವನ್ನು ಆರಂಭಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಜಿಲ್ಲೆಯ ಅಭಿವೃದ್ಧಿ ಕುರಿತು ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ (ಮೇ ೩೦) ನಡೆದ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀಜ ಖರೀದಿಗೆ ರೈತರು ದೂರ ಅಲೆಯುವುದನ್ನು ತಪ್ಪಿಸಲು ಆದಷ್ಟು ಸಮೀಪದಲ್ಲಿ ಬೀಜ ಲಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಬಾಕಿ ಇದ್ದರೆ ಕೂಡಲೇ ಬಿಡುಗಡೆ ಮಾಡಬೇಕು. ಆತ್ಮಹತ್ಯೆ ವರದಿಯಾದ ಕೂಡಲೇ ಮರಣೋತ್ತರ ಪರೀಕ್ಷೆ ನಡೆಸಿ ಪರಿಹಾರ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.
ವಿಪತ್ತು ಸಂದರ್ಭದಲ್ಲಿ ಯಾವುದೇ ಜಾನುವಾರುಗಳು ಮೃತಪಟ್ಟಾಗ ಅವುಗಳ ಮಾಲೀಕರಿಗೆ ಅಧಿಕಾರಿಗಳು ಸ್ವತಃ ಮನೆಗೆ ತೆರಳಿ ಪರಿಹಾರ ವಿತರಿಸಬೇಕು. ಪರಿಹಾರ ಪಡೆಯುವ ಪ್ರಕ್ರಿಯೆ ಗೊತ್ತಿಲ್ಲದಿರುವುದರಿಂದ ಅನೇಕ ಜನರು ಪರಿಹಾರ ಪಡೆಯಲು ಮುಂದಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳೇ ಆಸಕ್ತಿ ವಹಿಸಿ ಪರಿಹಾರ ನೀಡಬೇಕು.

ಶಾಲೆಗಳು ಆರಂಭಗೊಳ್ಳುತ್ತಿರುವುದರಿಂದ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚನೆ ನೀಡಿದರು. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು. ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಔಷಧಿಗಳ ದಾಸ್ತಾನು ಇರಬೇಕು.
ಬೆಳಗಾವಿಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಒದಗಿಸಿ ಆದಷ್ಟು ಬೇಗನೇ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅತೀ ಹೆಚ್ಚು ಬಿಪಿಎಲ್ ಕಾರ್ಡು ಇರುವ ಕಡೆಗಳಲ್ಲಿ ಪಡಿತರ ಅಂಗಡಿ ಆರಂಭಿಸಲು ಪರವಾನಿಗೆ ನೀಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬವಾದಷ್ಟು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಾಮಗಾರಿಗಳು ವಿಳಂಬಗೊಳ್ಳಬಾರದು. ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಜಾರಕಿಹೊಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳಗಾವಿ ನಗರದ ಕುಡಿಯುವ ನೀರು ಪೂರೈಕೆ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಹೊಸ ಸರಕಾರದ ಆಶಯದ ಪ್ರಕಾರ ಅಧಿಕಾರಿಗಳು ಕೆಲಸ ಮಾಡಬೇಕು. ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂಬುದು ಸರಕಾರದ ಆದ್ಯತೆಯಾಗಿದೆ. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು.
ಕ್ರಿಯಾಶೀಲ ಅಧಿಕಾರಿಗಳಿಗೆ ಕೆಲಸ ಮಾಡಲು ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವರಾದ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಶಾಸಕರ ಗಮನಕ್ಕೆ ತಂದೇ ಕೆಲಸ ಮಾಡಿ ಲಕ್ಷ್ಮೀ ಹೆಬ್ಬಾಳಕರ್


ಸಭೆಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಕಾರಣಗಳು ಅಡ್ಡಿಯಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ತ್ವರಿತವಾಗಿ ಕ್ರಮವಾಗಬೇಕು ಎಂದರು.
ಹನಿ ನೀರಾವರಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಆಯಾ ಮತಕ್ಷೇತ್ರದ ಶಾಸಕರ ಗಮನಕ್ಕೆ ತಂದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಮಾಡುವ ಕೆಲಸವು ರೈತರಿಗೆ ಉಪಯೋಗವಾಗಬೇಕು.
ಶಾಲೆಗಳು ಆರಂಭಗೊಳ್ಳುತ್ತಿರುವುದರಿಂದ ಅಗತ್ಯವಿರುವ ಶಾಲೆಗಳಿಗೆ ಡೆಸ್ಕ್ ಮತ್ತಿತರ ಪೀಠೋಪಕರಣಗಳನ್ನು ಒದಗಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿ ಮಾಹಿತಿಯನ್ನು ನೀಡಿದರೆ ಸರಕಾರದ ಮಟ್ಟದಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಸಾಂಬ್ರಾದಲ್ಲಿ ೩೫೦೦ ಬಿಪಿಎಲ್ ಕಾರ್ಡುದಾರರಿದ್ದು, ಹೆಚ್ಚುವರಿ ಪಡಿತರ ಅಂಗಡಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ನಿವೇಶನ ಅಗತ್ಯವಿರುವ ಮಾಹಿತಿಯನ್ನು ಕೂಡಲೇ ಪಡೆದುಕೊಂಡು ತಕ್ಷಣವೇ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜಂಟಿ ಸಭೆ ನಡೆಸಿ ಅಂಗನವಾಡಿ ಕೇಂದ್ರ ಸ್ಥಾಪನೆಗೆ ನಿವೇಶನ ಒದಗಿಸಬೇಕು ಎಂದರು. ಸಂಭವನೀಯ ಪ್ರವಾಹ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಚಂದನ ಹೊಸೂರ, ಬೆಕ್ಕಿನಕೇರಿ, ಬೆನಕನಹಳ್ಳಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಧಿಕಾರಿಗಳು ಟ್ಯಾಂಕರ್ ಮೂಲಕ ಕುಡಿಯುವ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಜನರು ಸರಕಾರದ ಮೇಲೆ ಇಟ್ಟಿರುವ ನಿರೀಕ್ಷೆ ನಾವು ಈಡೇರಿಸಬೇಕಿದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಬೈಲಹೊಂಗಲ ಶಾಸಕರಾದ ಮಹಾಂತೇಶ್ ಕೌಜಲಗಿ ಅವರು, ಪಿಕೆಪಿಎಸ್ ಮೂಲಕ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಿಡಿಲು ಬಡಿದು ರೈತರ ಬಣಿವೆ ಸುಟ್ಟಾಗ ನೈಸರ್ಗಿಕ ವಿಪತ್ತು ಮಾರ್ಗಸೂಚಿಯಡಿ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಲು ಸಚಿವರನ್ನು ಒತ್ತಾಯಿಸಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಬೆಳಗಾವಿಯಿಂದ ಹಾವೇರಿ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ಜಂಟಿ ನಿರ್ದೇಶಕರ ಕಚೇರಿಯನ್ನು ಮತ್ತೆ ಬೆಳಗಾವಿಗೆ ಸ್ಥಳಾಂತರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ನೇಮಕಗೊಂಡ ಅತಿಥಿ ಶಿಕ್ಷಕರನ್ನು ನಿಯೋಜಿಸುವಾಗ ಶಿಕ್ಷಕರ ಕೊರತೆ ಇರುವ ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಮಹಾಂತೇಶ್ ಕೌಜಲಗಿ ಹೇಳಿದರು.
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಒಟ್ಟಾರೆ ೧೭೦ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
ತೋಟಗಾರಿಕೆ ಇಲಾಖೆಯ ಯಾವುದೇ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವಾಗ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯ ಮೂಲಕವೇ ಮಾಡಬೇಕು ಎಂದರು
ಬೆಳಗಾವಿ ಉತ್ತರ ಶಾಸಕರಾದ ಆಸಿಫ್(ರಾಜು) ಸೇಠ್, ಶಿಕ್ಷಕರ ಕೊರತೆ ಇರುವ ಕಡೆಗಳಲ್ಲಿ ಕೂಡಲೇ ಅತಿಥಿ ಶಿಕ್ಷಕರನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣವರ, ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ, ಸವದತ್ತಿ ಶಾಸಕರಾದ ವಿಶ್ವಾಸ್ ವೈದ್ಯ, ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಡಾ.ಸಾಬಣ್ಣ ತಳವಾರ ಸಭೆಯಲ್ಲಿ ಉಪಸ್ಥಿತರಿದ್ದರು.

ನೂತನ ಸಚಿವರಿಗೆ ಜಿಲ್ಲಾಡಳಿತದಿಂದ ಸನ್ಮಾನ:
ನೂತನ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದರು.
ಇದೇ ವೇಳೆ ಎಲ್ಲ ಶಾಸಕರನ್ನು ಕೂಡ ಜಿಲ್ಲಾಡಳಿತ ಪರವಾಗಿ ಶಾಲು ಹೊದಿಸಿ ಸಸಿಗಳನ್ನು ವಿತರಿಸಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಡಿಸಿಪಿ ಸ್ನೇಹಾ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

https://pragati.taskdun.com/belgaum-district-division-cry-came-to-the-fore-again-what-did-the-new-ministers-jarakiholi-and-hebbalkar-say/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button