*ವಿಮಾನ ನಿಲ್ದಾಣದಲ್ಲೆ ಪ್ರಜ್ವಲ್ ರೇವಣ್ಣರನ್ನು ಬಂಧಿಸುತ್ತೇವೆ: ಗೃಹ ಸಚಿವ ಪರಮೇಶ್ವರ*

ಪ್ರಗತಿವಾಹಿನಿ ಸುದ್ದಿ: ಪೆನ್‌ಡ್ರೈವ್ ಕೇಸ್ ನಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ 31 ರಂದು ವಿದೇಶದಿಂದ ಮರಳಿ ಭಾರತಕ್ಕೆ ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಜ್ವಲ್ ರೇವಣ್ಣ ಬಂಧಿಸಲು ವಾರೆಂಟ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬರುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಬಂಧಿಸಲಿದ್ದಾರೆ ಬಳಿಕ ವಿಚಾರಣೆ ನಡೆಸಲು ಮುಂದಾಗಲಿದ್ದಾರೆಂದರು.
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಎಂಬ ಆಧಾರದ ಮೇಲೆ ಬಂಧಿಸುತ್ತಿಲ್ಲ. ಎಸ್‌ಐಟಿ ಅಧಿಕಾರಿಗಳಿಗೆ ತನಿಖೆ ವೇಳೆ ಅನುಮಾನ ಬಂದವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ