ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದ ಆಯ್ದ ೬ ಸರಕಾರಿ ವಿಶ್ವವಿದ್ಯಾಲಯಗಳನ್ನು ’ಯೂನಿವರ್ಸಿಟಿ ಆಫ್ ಎಮಿನೆನ್ಸ್’ ಮಟ್ಟಕ್ಕೆ ಸುಧಾರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಇಲ್ಲಿನ ಹಿರೇಬಾಗೇವಾಡಿಯಲ್ಲಿ ನಿರ್ಮಾಣವಾಗಲಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ಸಿನ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ರಾಣಿ ಚೆನ್ನಮ್ಮ ವಿ.ವಿ.ಯಿಂದಾಗಿ ಬೆಳಗಾವಿ, ಬಾಗಲಕೋಟೆ ಮತ್ತು ಚಿಕ್ಕೋಡಿ ಭಾಗಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದ್ದು, ಈ ವಿಶ್ವವಿದ್ಯಾಲಯವು ಕಿತ್ತೂರು ರಾಣಿ ಚೆನ್ನಮ್ಮನಂತೆಯೇ ಈ ಭಾಗಕ್ಕೆ ನಾಯಕತ್ವವನ್ನು ಒದಗಿಸಬೇಕು ಎಂದು ಆಶಿಸಿದರು.
ಸರಕಾರವು ಶಿಕ್ಷಣ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಗ್ರ ಬದಲಾವಣೆಯನ್ನು ತರಲು ಸಂಕಲ್ಪ ಮಾಡಿದ್ದು, ಈಗಾಗಲೇ ೨,೫೦೦ ತರಗತಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂಗಳನ್ನಾಗಿ ಮಾಡಲಾಗಿದೆ. ಉಳಿದಿರುವ ೬ ಸಾವಿರ ತರಗತಿಗಳನ್ನು ಕೂಡ ಇನ್ನು ಕೆಲವೇ ತಿಂಗಳುಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಮೂಲಕ ನಿರಂತರ ಕಲಿಕೆಯನ್ನು ತಮ್ಮದನ್ನಾಗಿಸಿಕೊಳ್ಳುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.
ಇಷ್ಟೇ ಅಲ್ಲದೆ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಂತೆ, ರಾಜ್ಯದಲ್ಲಿ ೭ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಣ ರಂಗದ ಸುಧಾರಣೆಗಾಗಿ ಸರಕಾರವು ಹಲವು ಅತ್ಯುಪಯುಕ್ತ ಕ್ರಮಗಳನ್ನು ಕೈಗೊಂಡಿವೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಕಿತ್ತೂರು ಕರ್ನಾಟಕ ಭಾಗದ ಮುಂಚೂಣಿ ಸಂಸ್ಥೆಯಾಗಿ ಬೆಳೆಯಬೇಕು. ಜತೆಗೆ ಸ್ಥಳಿಯ ಪರಿಸರಸ ಬೆಳವಣಿಗೆ, ಅಭಿವೃದ್ಧಿ ಮತ್ತು ಸುಧಾರಣೆಗೆ ಅಗತ್ಯವಾಗಿರುವ ಕಾರ್ಯಕ್ರಮ ಹಾಗೂ ಪರಿಕಲ್ಪನೆಗಳೊಂದಿಗೆ ಮುಂದಡಿ ಇಡಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎಂಎಲ್ಸಿ ಅರುಣ್ ಶಹಾಪುರ, ಕುಲಪತಿ ರಾಮಚಂದ್ರ ಗೌಡ ಮುಂತಾದವರು ಭಾಗವಹಿಸಿದ್ದರು.
ಜಿಲ್ಲೆಗೊಂದು ಐಐಟಿ ಮಾದರಿಯಲ್ಲಿ ಇಂಜನಿಯರಿಂಗ್ ಕಾಲೇಜು ಅಭಿವೃದ್ಧಿ
ಸಚಿವ ಡಾ. ಅಶ್ವಥ್ ನಾರಾಯಣ
ಅವಿಷ್ಕಾರ ತಂತ್ರಜ್ಞಾನಕ್ಕೆ ಒತ್ತು ನೀಡುವ ಐಐಟಿ ಮಾದರಿಯಲ್ಲಿ ಜಿಲ್ಲೆಗೊಂದು ಇಂಜನಿಯರಿಂಗ್ ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರು ಮೇಲ್ಮನೆಗೆ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿಂದು ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ವಿಧೇಯಕ ೨೦೨೧ ರ ಅನುಮೋದನೆ ಪಡೆಯಲಾಯಿತು. ಈ ವಿಧೇಯಕದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು ಸೂಪರ್ ೩೦ ಯೋಜನೆಯಡಿ ರಾಜ್ಯದ ೧೪ ಜಿಲ್ಲೆಗಳ ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಖಾಸಗಿ ಕಾಲೇಜುಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗುವುದು. ಒಟ್ಟಾರೆ ೩೦ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಉನ್ನತೀಕರಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅತ್ಯುನ್ನತ ತಾಂತ್ರಿಕ ವಿ.ವಿ. ಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ಈ ಕುರಿತಂತೆ ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಚರ್ಚಿಸಲಾಗಿದೆ. ಒಂದು ತಿಂಗಳೊಳಗಾಗಿ ವಿ.ವಿ.ಯ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇಂಜನಿಯರಿಂಗ್ ಕಾಲೇಜುಗಳಲ್ಲಿ ಖಾಲಿಯಿರುವ ಅಧ್ಯಾಪಕರ ಹುದ್ದೆ ಭರ್ತಿಗಾಗಿ ಸಮಿತಿಯನ್ನು ರಚಿಸಲಾಗಿದೆ. ಪ್ರಸ್ತುತ ವಿಷಯಕ್ಕೆ ತಕ್ಕಂತೆ ಅಧ್ಯಾಪಕರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ತಿಳಿಸಿದರು.
ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜನ್ನು ಸ್ವಾಯತ್ತ ಸಂಸ್ಥೆಯಾಗಿ ಐಐಟಿ ಮಾದರಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಅತ್ಯುನ್ನತ ಅವಿಷ್ಕಾರ ತಂತ್ರಜ್ಞಾನದ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಅಭಿವೃದ್ಧಿಪಡಿಸಲಾಗುವುದು. ಕರ್ನಾಟಕ ರಾಜ್ಯದ ಶೇ. ೭೫ರಷ್ಟು ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. ೨೫ ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಚರ್ಚೆಯಲ್ಲಿ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ, ಸದಸ್ಯರಾದ ಮರಿತಿಬ್ಬೇಗೌಡ, ತಿಪ್ಪೇಸ್ವಾಮಿ, ಸಿ.ಎಂ. ಲಿಂಗಪ್ಪ, ಅಪ್ಪಾಜಿಗೌಡ, ಪ್ರಕಾಶ ರಾಠೋಡ, ಡಾ. ತೇಜಸ್ವಿನಿಗೌಡ, ಸಿ.ಎಂ. ಇಬ್ರಾಹಿಂ, ಕವಟಗಿಮಠ, ಡಾ. ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಇತರರು ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಶೇ. ೧೦೦ ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಕಾಯ್ದಿರಿಸಬೇಕು. ಕನಿಷ್ಠ ೧೦೦ ಕೋಟಿ ರೂ.ಗಳನ್ನು ವಿ.ವಿ.ಯ ಅಭಿವೃದ್ಧಿಗೆ ಬಳಸಬೇಕು. ಬೆಂಗಳೂರಿನಲ್ಲಿ ಈಗಿರುವ ಇಂಜನಿಯರಿಂಗ್ ಕಾಲೇಜನ್ನು ಪಾರಂಪರಿಕ ಕಟ್ಟಡವಾಗಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ನೂತನ ಕಟ್ಟಡ ನಿರ್ಮಾಣಕ್ಕೆ ಜ್ಞಾನಭಾರತಿಯಲ್ಲಿ ೫೦ ಎಕರೆ ಜಮೀನು ಕಾಯ್ದಿರಿಸಲು ಮನವಿ ಮಾಡಿಕೊಂಡರು.
ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
೨೦೨೧-೨೨ ನೇ ಸಾಲಿಗೆ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್ ಶಿಫ್ ಯೋಜನೆಯಡಿ ಪ್ರೀಮ್ಯಾಟ್ರಿಕ್ ಮತ್ತು ಪೋಸ್ಟ ಮ್ಯಾಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗ ಮಾಡಲು ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ಪ್ರಿಮ್ಯಾಟ್ರಿಕ್, ಪೋಸ್ಟ ಮ್ಯಾಟ್ರಿಕ್ ಮತ್ತು ಟಾಪ್ ಕ್ಲಾಸ್ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ ೩೧ ಕೊನೆಯ ದಿನಾಂಕವಾಗಿರುತ್ತದೆ.
ಇ-Sಛಿhoಟಚಿಡಿshiಠಿ ಠಿoಡಿಣಚಿಟ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಬೆಳಗಾವಿ ಜೆಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಮೂಲಕ ಈ ಯೋಜನೆಯ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡದ ಗ್ರಾಮೀಣ ಕುಶಕರ್ಮಿ ಸಹಾಯಧನ : ಅರ್ಜಿ ಆಹ್ವಾನ
೨೦೨೧-೨೨ ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಸಾಮಾನ್ಯ ,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗ್ರಾಮೀಣ ಭಾಗದ ಕುಶಲಕರ್ಮಿ ಆಭ್ಯರ್ಥಿಗಳಿಗೆ ಶೇ. ೬೦ ರಷ್ಟು ಸಹಾಯಧನ ಅಡಿ ಸಾಲಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಆಭ್ಯರ್ಥಿಗಳು ಜನೇವರಿ ೭ ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಪರಿಶಿಷ್ಟ ಪಂಗಡದ ಆಭ್ಯರ್ಥಿಗಳು ತಮ್ಮ ವೃತ್ತಿಯನ್ನು ವೃದ್ದಿಗೊಳಿಸಿ ಅನುಕೂಲವಾಗುವಂತೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಭ್ಯರ್ಥಿಯು ಗ್ರಾಮೀಣ ಭಾಗದವರಾಗಿರಬೇಕು ಮತ್ತು ಕುಶಲಕರ್ಮಿಯಾಗಿದ್ದು, ೧೮-೪೫ ವಯೋಮೀತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು:
ಆಧಾರ ಕಾರ್ಡ, ಗ್ರಾಮ ಸಭೆಯ ಆಯ್ಕೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಸೇರಿದಂತೆ ಯೋಜನಾ ವರದಿಯನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಣ್ಣ ಕೈಗಾರಿಕಾ ಘಟಕಗಳು ಬ್ಯಾಂಕಿನ ಸಾಲ ಪಡೆದು ಉದ್ಯೋಗ ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
೨೦೨೧-೨೨ ನೇ ಸಾಲಿನ ವಿಶೇಷ ಘಟಕ ಗಿರಿಜನ ಉಪಯೋಜನೆಯಡಿ ಗುಡಿ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳು ಹಣಕಾಸು ಸಂಸ್ಥೆಯು ಬ್ಯಾಂಕಿನ ಸಾಲ ಪಡೆದು ಉದ್ಯೋಗ ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಗುಡಿ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳು ಸ್ಥಾಪಿಸಲು ಶೇ ೬೦% ಸಹಾಯಧನ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಆಭ್ಯರ್ಥಿಗಳು ಜನೇವರಿ ೧೦ ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ರಾಷ್ಟ್ರೀಕೃತ ಬ್ಯಾಂಕ ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಸಂಯುಕ್ತ ಸಾಲ ರೂ. ೧೦.೦೦ ಲಕ್ಷ ಸಾಲ ಪಡೆದು ಸ್ಥಾಪಿಸಿದಲ್ಲಿ ಶೇ. ೬೦% ರಷ್ಟು ಸ್ಥಿರ ಬಂಡವಾಳದ ಹೂಡಿಕೆಯ ಮೇಲೆ ಸಹಾಯಧನ ಗರಿಷ್ಠ ೫.೦೦ ಲಕ್ಷಗಳವರೆಗೆ ಮಂಜೂರಾತಿ ನೀಡುವ ಅವಕಾಶ ಇರುವುದು ಹಾಗೂ ಶೇ. ೧೦% ರಂತೆ ಪ್ರವರ್ತಕರು ವಂತಿಗೆಯನ್ನು ಭರಿಸುವುದು,ಘಟಕವನ್ನು ಪ್ರಾರಂಭಿಸುವ ಉದ್ದಿಮೆದಾರರು ಕನಿಷ್ಠ ೧೮ ವರ್ಷ ವಯೋಮಾನ ಪೂರೈಸಿರಬೇಕು, ಹೊಸ ಘಟಕಗಳಿಗೆ ಮಾತ್ರ ಈ ಯೋಜನೆಯಡಿ ಸಹಾಯಧನ ದೊರಕುವುದು, ೨೦೨೦-೨೫ ನೇ ಸಾಲಿನ ಕೈಗಾರಿಕಾ ನೀತಿಯನ್ವಯ ಕೈಗಾರಿಕಾ ಅಥವಾ ಸೇವಾ ಚಟುವಟಿಕೆಯಡಿ ಕೈಗಾರಿಕೆ ಸ್ಥಾಪಿಸುವುದು. ಸೇವಾ ಘಟಕಗಳಲ್ಲಿ ಟೇಲರಿಂಗ್ ಹಾಗೂ ರೆಡಿಮೆಡ್ ಗಾರ್ಮೆಂಟ್ಸ, ಝೆರಾಕ್ಸ, ಡಿಟಿಪಿ, ಫೊಟೋ ಗ್ರಾಫಿ, ವ್ಹಿಡಿಯೋ ಗ್ರಾಫಿ, ಬ್ಯೂಟಿಫಾಲರ್, ಸೆಂಟರಿಂಗ್ ಪ್ಲೇಟ, ಕಾಂಕ್ರಿಟ್ ಮಿಕ್ಸರ್, ಪೆಂಡಾಲ ಡೆಕಾರೇಶನ್, ಇಲೆಕ್ಟ್ರೀಕಲ್ ಡೆಕಾರೇಶನ್, ಲ್ಯಾಬೋರಟರಿಗಳು ಮುಂತಾದ ಚಟುವಟಿಕೆಗಳು ಈ ಯೋಜನೆಯಡಿಯಲ್ಲಿ ಸಾಲ ಹಾಗೂ ಸಹಾಯಧನ ಪಡೆಯಲು ಅರ್ಹತೆಯನ್ನು ಹೊಂದಿರುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಈ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ದೂರವಾಣಿ ಸಂಖ್ಯೆ : ೦೮೩೧-೨೪೪೦೧೮೭ ಅಥವಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ನೂತನ ಅಗ್ನಿಶಾಮಕ ದಳದ ಕಟ್ಟಡದ ಉದ್ಘಾಟನೆ
ಅಗ್ನಿ ಅವಘಡ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ, ಸಂತ್ರಸ್ತರು ಹಾಗೂ ಅಮೂಲ್ಯ ಆಸ್ತಪಾಸ್ತಿಗಳನ್ನು ಸಂರಕ್ಷಣೆಗೆ ಧಾವಿಸುವ ಸಿಬ್ಬಂದಿಗಳಿಗೆ ಅತ್ಯುತ್ತಮ ತರಬೇತಿ ನೀಡಲಾಗಿದೆ. ನಮ್ಮ ಸಿಬ್ಬಂದಿಗಳು, ಆಯಾ ಅಗ್ನಿಶಾಮಕ ಠಾಣೆ ವ್ಯಾಪ್ತಿಯಲ್ಲಿ, ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ, ಪ್ರಕೃತಿ ವಿಕೋಪದ ಹಾಗೂ ಇನ್ನಿತರ ತುರ್ತು ಸನ್ನಿವೇಶಗಳನ್ನು ಎದುರಿಸಲು ತರಭೇತಿ ನೀಡುವಂಥ ಕಾರ್ಯವೂ ನಡೆಸಲಿದ್ದಾರೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಡಿಸೆಂಬರ್ ೨೨ ಬುಧವಾರ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಅಗ್ನಿಶಾಮಕ ದಳದ ನೂತನ ಕಟ್ಟಡದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ನಮ್ಮ ಸರಕಾರ ಜನತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದ್ದು, ಕಳೆದ ಮೂರೂವರೆ ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸದೆ ಎಂದರು.
ಪ್ರಸ್ತುತ ವಿಧಾನಸಭೆಯಲ್ಲಿ ಮಂಡಿಸಿರುವ ಮತಾಂತರ ವಿರೋಧಿ ಕಾಯಿದೆಯ ಮಹತ್ವವನ್ನು ವಿವರಿಸಿ, ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಗಳನ್ನೂ ಉಳಿಸಿಕೊಂಡು ಹೋಗಲು, ಇಂತಹ ಮಸೂದೆಯ ಅಗತ್ಯವಿದೆ ಎಂದು ಹೇಳಿ, ” ನಮ್ಮ ಪ್ರಯತ್ನಕ್ಕೆ ನಿಮ್ಮಪ್ರೋತ್ಸಾಹವೂ ಅಗತ್ಯ” ಎಂದೂ ಹೇಳಿದರು.
ಶಾಸಕರಾದ, ದುರ್ಯೋಧನ ಐಹೊಳೆ ಮತ್ತು ಕುಡಚಿ ಶಾಸಕ ರಾಜೀವ್, ಹಾಗೂ ರಾಜ್ಯ ಅಗ್ನಿ ಶಾಮಕ ದಳ ಮುಖ್ಯಸ್ಥ ಅಮರ್ ಕುಮಾರ್ ಪಾಂಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂತಿಗೆ ಸಲ್ಲಿಕೆ
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ವಿಶೇಷ ಶಾಲೆಗಳನ್ನು ನಡೆಸುತ್ತಿರುವ ವಿವಿಧ ಸ್ವಯಂ ಸಂಸ್ಥೆಯವರು ಕೋರೋನಾ ಪೀಡಿತರ ಸಹಾಯಾರ್ಥವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨ ಲಕ್ಷ ರೂಪಾಯಿ ವಂತಿಗೆಯನ್ನು ಸಲ್ಲಿಸಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಆಚಾರ ಹಾಲಪ್ಪ ಅವರ ಮೂಲಕ ವಂತಿಗೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ವಿ ಮುನಿರಾಜು, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಸೇರಿದಂತೆ ವಿವಿಧ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕೊರೊನಾ ಪೀಡಿತರ ಸಹಾಯಾರ್ಥವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ಲಕ್ಷ ರೂಪಾಯಿ ವಂತಿಗೆ ಸಲ್ಲಿಸಿದ ವಿವಿಧ ಸ್ವಯಂ ಸಂಸ್ಥೆಗಳ ಪದಾಧಿಕಾರಿಗಳಿಗೆ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ವಿ ಮುನಿರಾಜು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇಂಚಲ-ಮರಕುಂಬಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ: ಸಚಿವ ಕೆ.ಎಸ್.ಈಶ್ವರಪ್ಪ
ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸವದತ್ತಿ ತಾಲೂಕಿನ ಇಂಚಲ-ಮರಕುಂಬಿ ೫ ಕಿ.ಮೀ. ಗ್ರಾಮೀಣ ರಸ್ತೆಯನ್ನು ೧.೬೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕಂದಾಯ ಮತ್ತು ಆರ್ಥಿಕ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಇಂದು ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮತಕ್ಷೇತ್ರದ ಸವದತ್ತಿ ತಾಲೂಕಿನ ಇಂಚಲ-ಮರಕುಂಬಿ ೫ ಕಿ.ಮಿ. ರಸ್ತೆಯು ಮಳೆಯಿಂದ ಹಾಳಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವದು ಸರಕಾರದ ಗಮನಕ್ಕೆ ಬಂದಿದ್ದು ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸುಮಾರು ೧.೬೫ ಕೋಟಿ ರೂ. ಅನುದಾನದ ಅವಶ್ಯಕತೆವಿರುತ್ತದೆ. ೨೦೨೦-೨೧ನೇ ಸಾಲಿನಲ್ಲಿ ಲಿಂಕ್ ಡಾಕ್ಯೂಮೆಂಟರಡಿ ೩ ಲಕ್ಷ ರೂ.ಗಳ ಮೊತ್ತದಲ್ಲಿ ಮೇಲಿನ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗಿದೆ. ಅಲ್ಲದೇ ಈ ಇಂಚಲ-ಮರಕುಂಬಿ ರಸ್ತೆ ಒಳಗೊಂಡಂತೆ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಗೆ ಅನುದಾನವನ್ನು ಒದಗಿಸುವಂತೆ ಕಂದಾಯ ಮತ್ತು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಅನುದಾನ ಲಭ್ಯವಾದ ನಂತರ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ತಿಳಿಸಿದರು.
ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ
ಗ್ರಾಮೀಣ ಪ್ರದೇಶ:೧೮,೭೧,೬೯೧ ವಸತಿ ರಹಿತರು,೭,೧೯,೧೯೦ ನಿವೇಶನ ರಹಿತರು!
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ೨೦೧೮ರಲ್ಲಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಸಮೀಕ್ಷೆಯಲ್ಲಿ ೧೮,೭೧,೬೯೧ ವಸತಿರಹಿತರು ಹಾಗೂ ೭,೧೯,೧೯೦ ನಿವೇಶನರಹಿತರಿರುವ ಮಾಹಿತಿ ಲಭ್ಯವಾಗಿದೆ.
ಅದೇ ರೀತಿ ನಗರದಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೈಗೊಂಡ ಸಮೀಕ್ಷೆ ಅನುಸಾರ ೧,೪೧,೫,೧೨೧ ಮನೆಗಳಿಗೆ ಬೇಡಿಕೆ ಇರುವುದು ಕಂಡುಬಂದಿದೆ. ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ೮೯೨೧೯ ವಸತಿ ರಹಿತರು ಹಾಗೂ ೪೩೪೭ ನಿವೇಶನರಹಿತರು ಕಂಡುಬಂದಿದ್ದಾರೆ. ನಗರ ಪ್ರದೇಶದಲ್ಲಿ ಇದೇ ಜಿಲ್ಲೆಯಲ್ಲಿ ೨೧೪೦೯ ವಸತಿ ರಹಿತರು ಮತ್ತು ೨೫೫೩೩ ನಿವೇಶನರಹಿತರಿದ್ದಾರೆ ಎಂಬ ಮಾಹಿತಿಯನ್ನು ವಸತಿ ಸಚಿವ ವಿ.ಸೋಮಣ್ಣ ಅವರು ವಿಧಾನಪರಿಷತ್‌ನಲ್ಲಿ ಬಿಚ್ಚಿಟ್ಟರು.
ಸದಸ್ಯ ವಿಜಯಸಿಂಗ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಸಾಲಿಗೆ ವಿವಿಧ ವಸತಿ ಯೋಜನೆಗಳಡಿ ೫ಲಕ್ಷ ಹೊಸ ಮನೆಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ೪ಲಕ್ಷ ಮತ್ತು ನಗರ ಪ್ರದೇಶಕ್ಕೆ ೧ಲಕ್ಷ ಮನೆಗಳ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅರ್ಹ ಫಲಾನುಭವಿಗಳ ಆಯ್ಕೆಗೆ ಸೂಚನೆ ನೀಡಲಾಗಿದ್ದು, ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೇ ೨೦೧೮-೧೯ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ವಸತಿ ಯೋಜನೆಗಳಡಿ ೧೮೮೭೫ ಮನೆಗಳನ್ನು ಮಂಜೂರು ಮಾಡಿದ್ದು, ಈ ಪೈಕಿ ೧೬೦೫೭ ಫಲಾನುಭವಿಗಳನ್ನು ಆಯ್ಕೆಗೊಳಿಸಿ ಕಾಮಗಾರಿ ಆದೇಶಪತ್ರ ನೀಡಲಾಗಿದೆ ಎಂದರು.
—
ಕಡಿಮೆ ದರ ನಮೂದಿಸಿ ಅರ್ಹರಾದ ಗುತ್ತಿಗೆದಾರರಿಂದ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್
ಗುತ್ತಿಗೆ ಕಾಮಗಾರಿಗಳಲ್ಲಿ ೫೦ಲಕ್ಷ ರೂ.ಮೀಸಲಾತಿ ಸಮರ್ಪಕ ಜಾರಿ: ಸಚಿವ ಸಿ.ಸಿ.ಪಾಟೀಲ್
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಲೋಕೋಪಯೋಗಿ ಗುತ್ತಿಗೆ ಕಾಮಗಾರಿಗಳಲ್ಲಿ ಕಲ್ಪಿಸಲಾಗಿರುವ ೫೦ಲಕ್ಷ ರೂ.ಗಳ ಮೀಸಲಾತಿಯು ರ‍್ಯಾಂಡಮೈಸೆಶನ್ ಮೂಲಕ ಸಮರ್ಪಕವಾಗಿ ಜಾರಿಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಪರಿಷತ್‌ನಲ್ಲಿ ಸದಸ್ಯ ಆರ್.ಬಿ.ತಿಮ್ಮಾಪುರ ಅವರ ಪ್ರಶ್ನೆಗೆ ಉತ್ತರಿಸಿದರು.
ಇದಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಯಾವುದೇ ರೀತಿಯ ದೂರುಗಳು ಸ್ವಿಕೃತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಪಾಟೀಲ್ ಅವರು ರೂ.೫೦ಲಕ್ಷದಿಂದವರೆಗಿನ ಟೆಂಡರ್ ಮೀಸಲಾತಿಯನ್ನು ರೂ.೧ ಕೋಟಿವರೆಗೆ ವಿಸ್ತರಿಸುವ ಪ್ರಸ್ತಾವನೆ ಸರಕಾರದ ಮುಂದಿರುವುದಿಲ್ಲ ಎಂದು ಅವರು ತಿಳಿಸಿದರು.
*ಕಡಿಮೆ ದರ ನಮೂದಿಸಿ ಅರ್ಹರಾದ ಗುತ್ತಿಗೆದಾರರಿಂದ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್:ತಾಂತ್ರಿಕವಾಗಿ ಅರ್ಹಗೊಂಡು ಅತಿಕಡಿಮೆ ದರಗಳನ್ನು ನಮೂಸಿದ ಗುತ್ತಿಗೆದಾರರಿಂದ ದರಪಟ್ಟಿ ದರಗಳಿಗಿಂತ ಕಡಿಮೆಯಿರುವ ಮೊತ್ತಕ್ಕೆ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಪಡೆದುಕೊಂಡು ಗುತ್ತಿಗೆ ಕರಾರನ್ನು ಮಾಡಿಕೊಳ್ಳಲಾಗುತ್ತದೆ ಎಂದು ಸಚಿವ ಪಾಟೀಲ್ ಅವರು ಎನ್.ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
ಈ ಗುತ್ತಿಗೆದಾರರು ವಿಶಿಷ್ಟ ವಿವರಣೆಯ ಹಾಗೂ ಗುತ್ತಿಗೆ ಕರಾರಿನ ನಿಯಮಾವಳಿಯಂತೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಮೊತ್ತವನ್ನು ಗುತ್ತಿಗೆದಾರರಿಗೆ ಹಿಂತುರಿಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕೆಲವು ಪ್ರಕರಣಗಳಲ್ಲಿ ಗುತ್ತಿಗೆದಾರರು ಶೇ.೩೦ರವರೆಗೂ ಕಡಿಮೆ ಬಿಡ್ ಮಾಡಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಗುಣನಿಯಂತ್ರಣ ಮಾನದಂಡಗಳಿಗನುಸಾರವಾಗಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಿ ಕಾಮಗಾರಿಯನ್ನು ಸಮರ್ಪಕವಾಗಿ ಉತ್ತಮ ಗುಣಮಟ್ಟದೊಂದಿಗೆ ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಇಲಾಖೆಯಲ್ಲಿ ಮುಖ್ಯ ಎಂಜನಿಯರ್ ವೃಂದದ ಅಧಿಕಾರಿಯ ನೇತೃತ್ವದಲ್ಲಿ ಗುಣನಿಯಂತ್ರಣ ವಲಯ ಸ್ಥಾಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
*ಚಾಮುಂಡಿ ಬೆಟ್ಟದಲ್ಲಿ ರಸ್ತೆ ಮತ್ತು ಭೂಕುಸಿತ; ರೂ.೯೯೬ಲಕ್ಷಗಳ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾಮಗಾರಿ: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇತ್ತೀಚೆಗೆ ಮೂರು ಭಾರಿ ರಸ್ತೆ ಮತ್ತು ಭೂಕುಸಿತವಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಭೂ ಕುಸಿತ ಸಂಬಂಧ ಪರಿಶೀಲಿಸಲು ತಜ್ಞರ ಸಮಿತಿ ನೇಮಕ ಮಾಡಿರುವುದಿಲ್ಲ.ಅದಾಗ್ಯೂ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಿಂದ ಪರಿಶೀಲಿಸಿ ವರದಿ ಪಡೆಯಲಾಗಿದೆ ಎಂದರು.
ಭೂ ಕುಸಿತ ತಡೆಗಟ್ಟಲು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ವರದಿಯಂತೆ ರೇಇನ್ಪೋರ್ಸಡ್ ಅರ್ಥ್ ಸ್ಟೀಪೆನೆಡ್ ಸ್ಲೋಪ್ ಸ್ಟಚರ‍್ಸ್ ವಾಲ್ ನಿರ್ಮಾಣ ಮಾಡುವಂತೆ ಶಿಫಾರಸ್ಸು ಮಾಡಿದ್ದು, ಅದರಂತೆ ರಸ್ತೆ ದುರಸ್ತಿಗೊಳಿಸಲು ರೂ.೯೯೬ಲಕ್ಷಗಳ ತಗಲಬಹುದೆಂದು ಅಂದಾಜಿಸಲಾಗಿದೆ. ಅದರನ್ವಯ ಪ್ರಸ್ತಾವನೆ ತಯಾರಿಸಿದ್ದು,ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದರು.
ಭಾರಿ ಮಳೆಯಿಂದ ಹಾಳಾದ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ ರೂ.೩೧೦ ಕೋಟಿ ಹಂಚಿಕೆ ಮಾಡಲಾಗಿದೆ ಎಂದರು.
*
ಆಯುಷ್ ವಿವಿ ವಿಧೇಯಕ ಸೇರಿ ೦೮ ವಿಧೇಯಕಗಳಿಗೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ
ವಿಧಾನಪರಿಷತ್‌ನಲ್ಲಿ ಬುಧವಾರ ಎಂಟು ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ.
ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ವಿಧೇಯಕಗಳನ್ನು ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅವರು ಸಭೆಯ ಮುಂದಿಟ್ಟರು.
ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕ, ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ,ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ಎರಡನೇ ತಿದ್ದುಪಡಿ)ವಿಧೇಯಕ, ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ವಿಧೇಯಕಗಳ ಕುರಿತು ಸದನದಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಸದಸ್ಯರು ಹಾಗೂ ಸಚಿವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಮಂಡಿಸಲಾದ ಎಂಟು ವಿಧೇಯಕಗಳಿಗೆ ಸದನವು ಅಂಗೀಕರಿಸಿತು.
ಕಿರುಕುಳ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
೬.೬೪ಲಕ್ಷ ಹೆಕ್ಟೇರ್ ಜಮೀನು ಕಂದಾಯ ಇಲಾಖೆಗೆ ವಾಪಸ್:ಸಚಿವ ಅಶೋಕ
ರಾಜ್ಯದಲ್ಲಿ ೧೦.೧೨ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು,ಅದರಲ್ಲಿ ೬.೬೪ಲಕ್ಷ ಹೆಕ್ಟೇರ್ ಜಮೀನನ್ನು ಕಂದಾಯ ಇಲಾಖೆಗೆ ವಾಪಸ್ ನೀಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದ್ದು ಶೀಘ್ರ ಅದನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ಪ್ರತಾಪ್‌ಚಂದ್ರಶೆಟ್ಟಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಡೀಮ್ಡ್ ಫಾರೆಸ್ಟ್ ಎಂಬುದೇ ಅವೈಜ್ಞಾನಿಕ. ಸರಕಾರಿ ಜಮೀನು ಯಾವ್ಯಾವ ಮತ್ತು ಎಲ್ಲೆಲ್ಲಿ ಇದೆಯೋ ಅದನ್ನೆಲ್ಲಾ ಅರಣ್ಯ ಇಲಾಖೆಯದ್ದು ಅಂತ ಜಿಲ್ಲಾಧಿಕಾರಿಗಳು ಬರೆದುಹೋಗಿದ್ದೇ ದೊಡ್ಡ ಸಮಸ್ಯೆಯಾಗಿದೆ. ೧೦.೧೨ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‌ನಲ್ಲಿ ರೈತರು ವ್ಯವಸಾಯ ಮಾಡ್ತಾ ಇದ್ದಾರೆ;ಅದನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ಆಗ್ತಿಲ್ಲ. ಕಳೆದ ಆರೆಳು ತಿಂಗಳಿಂದ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಭೆ ನಡೆಸಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ೬.೬೪ಲಕ್ಷ ಹೆಕ್ಟೇರ್ ಜಮೀನು ಪ್ರದೇಶವನ್ನು ವಾಪಸ್ ನೀಡಲು ಒಪ್ಪಿಕೊಂಡಿದ್ದಾರೆ.ಅದನ್ನು ಪಡೆದುಕೊಂಡು ವ್ಯವಸಾಯ ಮಾಡುತ್ತಿರುವವರಿಗೆ ಮತ್ತು ಮನೆಕಟ್ಟಿಕೊಂಡವರಿಗೆ ನೀಡಲಾಗುವುದು ಎಂದು ಅವರು ವಿವರಿಸಿದರು.
ವ್ಯವಸಾಯ ಮಾಡುತ್ತಿರುವವರಿಗೆ ಮತ್ತು ಮನೆಕಟ್ಟಿಕೊಂಡವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ದೂರುಗಳು ಎಲ್ಲಿಯೂ ಕೇಳಿಬಂದಿಲ್ಲ;ಆದ್ರೂ ಆ ರೀತಿ ಕೇಳಿಬಂದಲ್ಲಿ ಕಿರುಕುಳ ನೀಡದಂತೆ ಕಟ್ಟುನಿಟ್ಟಿನ ಸೂಚನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿರುವ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಭೌತಿಕ ಸ್ಥಳ ಪರಿಶೀಲಿಸಿ ಸಿದ್ದಪಡಿಸಿ ವರದಿಯಂತೆ ಉಡುಪಿ ಜಿಲ್ಲೆಯಲ್ಲಿ ೬೮,೭೯೪.೭೬ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇದ್ದು, ಈ ಪೈಕಿ ೩೪,೯೧೮.೨೦ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ವಿರಹಿತಗೊಳಿಸಲು ಜಿಲ್ಲಾ ಸಮಿತಿಯಿಂದ ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದ ಸಚಿವ ಅಶೋಕ ಅವರು ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಸೇರಿರುವ ಜಮೀನುಗಳ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವು ಇತ್ಯರ್ಥವಾದ ನಂತರ ನಿಯಮಾನುಸಾರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಕೊಡಗು ಜಿಲ್ಲೆ ಪಹಣಿಯಲ್ಲಿ ಬಹುವಾರ್ಷಿಕ ಬೆಳೆ ನಮೂದಿಸಲು ಕ್ರಮ
ಕೊಡಗು ಜಿಲ್ಲೆಯಲ್ಲಿ ಆರ್‌ಟಿಸಿಯ ಬೆಳೆಕಾಲಂನಲ್ಲಿ ಬಹುವಾರ್ಷಿಕ ವಾಣಿಜ್ಯ ಬೆಳೆಗಳನ್ನು ನಮೂದಿಸಲು ಕ್ರಮಕೈಗೊಳ್ಳಲಾಗುವುದು. ಈ ಸಮಸ್ಯೆ ಗಮನಕ್ಕಿದ್ದು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯೆ ವೀಣಾ ಅಚ್ಚಯ್ಯ ಅವರು ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಮತ್ತು ಕೊಡಗು ಜಿಲ್ಲೆಯಲ್ಲಿ ವಿಶೇಷವೆಂದು ಪರಿಗಣಿಸಿ ಪಹಣಿಯ ಬೆಳೆಕಾಲಂನಲ್ಲಿ ಬಹುವಾರ್ಷಿಕ ವಾಣಿಜ್ಯ ಬೆಳೆಗಳನ್ನು ನಮೂದಿಸಲು ಕ್ರಮವಹಿಸಲಾಗುವುದು ಎಂದರು.
ಸದಸ್ಯೆ ವೀಣಾ ಅವರು ಕೊಡಗು ಜಿಲ್ಲೆಯಲ್ಲಿ ಪಹಣಿಯಲ್ಲಿ ಬೆಳೆಕಾಲಂನಲ್ಲಿ ಬಹುವಾರ್ಷಿಕ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಕರಿಮೆಣಸುಗಳು ವರ್ಷದ ೩೬೫ ದಿನವೂ ನಮೂದಾಗಿರುವ ಬದಲು ೩ ತಿಂಗಳು ಅಥವಾ ೦೬ ತಿಂಗಳಿಗೊಮ್ಮೆ ಪ್ರಸ್ತುತ ನಮೂದಿಸಲಾಗುತ್ತಿರುವುದರಿಂದ ಬೆಳೆಗಾರರಿಗೆ ಸಾಲಸೌಲಭ್ಯ ಸೇರಿದಂತೆ ಇನ್ನೀತರ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಂದರೆಯಾಗುತ್ತಿದೆ ಎಂದು ಸದನದಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಸಚಿವರು ಉತ್ತರಿಸಿದರು.
ಕೈಲಾಸ-ಮಾನಸ ಸರೋವರ ಯಾತ್ರಾರ್ಥಿಗಳ ಸಹಾಯಧನ ಹೆಚ್ಚಳಕ್ಕೆ ಕ್ರಮ
ದಾನಿಗಳ ನೆರವಿನಿಂದ ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿ: ಸಚಿವೆ ಜೊಲ್ಲೆ
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಿ ವರ್ಗದ ದೇವಸ್ಥಾನಗಳನ್ನು ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸಲಾಗುವುದು ಎಂದು ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯೆ ಡಾ.ತೇಜಸ್ವಿನಿಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ವಾರ್ಷಿಕ ವರಮಾನದ ಆಧಾರದ ಮೇರೆಗೆ ಎ,ಬಿ,ಸಿ ವರ್ಗದ ದೇವಸ್ಥಾನಗಳೆಂದು ಗುರುತಿಸಲಾಗಿದ್ದು, ರಾಜ್ಯದಲ್ಲಿ ಕಡಿಮೆ ವಾರ್ಷಿಕ ವರಮಾನ ಇರುವ ದೇವಸ್ಥಾನಗಳ ಸಂಖ್ಯೆಯೇ ೩೪೨೧೯ ಇವೆ. ಈ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ದಾನಿಗಳ ನೆರವು ಸಹ ಕೋರಲಾಗಿದೆ. ದಾನಿಗಳು ಮುಂದೆ ಬಂದಲ್ಲಿ ಅವರಿಗೆ ನಿಯಾಮನುಸಾರ ಅನುಮತಿ ನೀಡಲಾಗುವುದು. ಅವಶ್ಯಕತೆ ಕಂಡುಬಂದಂತಹ ಅಧಿಸೂಚಿತ ದೇವಸ್ಥಾನಗಳಿಗೆ ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದಲೂ ಸಹ ಧನ ಸಹಾಯ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಪ್ರಸ್ತುತ ಸರಕಾರದಿಂದ ವಾರ್ಷಿಕ ರೂ.೪೮ ಸಾವಿರ ರೂ.ಗಳನ್ನು ತಸ್ತೀಕ್/ವರ್ಷಾಶನವನ್ನು ದೇವಾಲಯಗಳಲ್ಲಿ ಪ್ರತಿನಿತ್ಯ ಪೂಜೆ ಕೈಂಕರ್ಯಗಳನ್ನು ನೆರವೇರಿಸುವುದಕ್ಕೆ ಒದಗಿಸಲಾಗುತ್ತಿದ್ದು, ಇದನ್ನು ಹೆಚ್ಚಿಸುವುದಕ್ಕೆ ಉದ್ದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯದಿಂದ ಹಿಮಾಲಯದ ಗಿರಿ ಶಿಖರಗಳಲ್ಲಿರುವ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ.೩೦ ಸಾವಿರಗಳಂತೆ ಸರಕಾರದ ಸಹಾಯಧನ ವಿತರಿಸಲಾಗುತ್ತಿದ್ದು,ಅದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚಿಸಲು ಕ್ರಮವಹಿಸಲಾಗುವುದು. ಕಾಶಿಯಾತ್ರೆ ಕೈಗೊಳ್ಳಲು ಸಹಾಯಧನ ನೀಡುವುದರ ಬಗ್ಗೆ ಪ್ರಸ್ತಾವನೆ ಇರುವುದಿಲ್ಲ ಎಂದು ಸ್ಪಷ್ಡಪಡಿಸಿದ ಸಚಿವೆ ಜೊಲ್ಲೆ ಅವರು ಕಾಶಿಗೆ ವಿಶೇಷ ರೈಲು ಓಡಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ, ವಸತಿ ಯೋಜನೆಗಳಿಗಾಗಿ ೫೩೦ ಎಕರೆ ಜಮೀನು ನೀಡಿಕೆ: ಸಚಿವ ಅಶೋಕ
ವಸತಿ ಯೋಜನೆಗಳಿಗಾಗಿ ೫೩೦ ಎಕರೆ ಜಾಗವನ್ನು ವಸತಿ ಇಲಾಖೆಗೆ ಕಂದಾಯ ಇಲಾಖೆ ವತಿಯಿಂದ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ತಿಳಿಸಿದರು.
ಪರಿಷತ್‌ನಲ್ಲಿ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಒಟ್ಟು ೧೪,೨೭,೧೯೫ ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದ್ದು,ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಅದರಂತೆ ಎಲ್ಲ ಜಿಲ್ಲಾಧಿಕಾರಿಗಳು ಕಾಲಬದ್ಧ ಕ್ರಿಯಾಯೋಜನೆ ಸಿದ್ದಪಡಿಸಿಕೊಂಡಿದ್ದು,ಒತ್ತುವರಿ ಆಗಿರುವ ಸರಕಾರಿ ಜಮೀನುಗಳನ್ನ ತೆರವುಗೊಳಿಸಲು ಕ್ರಮವಹಿಸುತ್ತಿದ್ದಾರೆ ಎಂದು ವಿವರಿಸಿದ ಅವರು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ;ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ೧೯೩೯೬೭೨-೨೧.೦೯ ಎಕರೆ/ಗುಂಟೆ ಗೋಮಾಳ ಜಮೀನು ಇರುವುದನ್ನು ಸದನಕ್ಕೆ ತಿಳಿಸಿದರು.
ಒಂದು ವರ್ಷದೊಳಗೆ ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣ: ಸಚಿವ ಗೋವಿಂದ ಕಾರಜೋಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ