*ವೀಕ್ ಆಫ್ ಕೊಡದೇ ಕಿರುಕುಳ: ಮನನೊಂದ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಕೆಲಸದ ಕಚೇರಿಯಲ್ಲಿ ವೀಕ್ ಆಫ್ ಕೊಡದೇ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಮಹಿಳೆಯೊಬ್ಬರು ಸುದೀರ್ಘ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ಈ ಘಟನೆ ನಡೆದಿದೆ. ನಾಗೇಶ್ವರಿ ಆತ್ಮಹತ್ಯೆಗೆ ಶರಣಾದ ಮಹಿಳೆ. ನಾಗೇಶ್ವರಿ ಟಾಟಾ ಪ್ರಮೋಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಲೇಡಿ ಸೂಪರ್ ವೈಸರ್ ಡಾಲಿ ಎಂಬುವವರು ವೀಕ್ ಆಫ್ ಕೊಡುತ್ತಿರಲಿಲ್ಲವಂತೆ. ತುರ್ತು ರಜೆಯನ್ನು ಕೂಡ ಕೊಡುತ್ತಿರಲಿಲ್ಲವಂತೆ ಈ ಬಗ್ಗೆ ನಾಗೇಶ್ವರಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ವೀಕ್ ಆಫ್ ಕೊಡದೇ ಸತಾಯಿಸುತ್ತಿದ್ದು, ತುರ್ತು ಸಂದರ್ಭದಲ್ಲೂ ರಜೆ ಕೊಡುತ್ತಿರಲಿಲ್ಲ. ಇದರಿಂದ ಬೇಸತ್ತು ಹೋಗಿದ್ದೆ. ವಾರದಲ್ಲಿ ಒಂದು ದಿನ ವೀಕ್ ಆಫ್ ರಜೆ ನಿಯಮವಿದ್ದರೂ ಸೂಪರ್ ವೈಸರ್ ಡಾಲಿ ರಜೆ ನೀಡದೇ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಅನಿವಾರ್ಯವಾಗಿ ರಜೆ ಹಾಕಿದ್ದಕ್ಕೆ ಕೆಲಸದಿಂದ ತೆಗೆದು ಹಾಕಿದ್ದಾರೆ. ಸೂಪರ್ ವೈಸರ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್ ನೋಟ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.



