Kannada NewsLatest

ವೀಕೆಂಡ್ ಕರ್ಫ್ಯೂ; ವಾರಾಂತ್ಯದ ಬೀಗ ಎಲ್ಲೆಲ್ಲಿ ಹೇಗಿದೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ, ಒಮಿಕ್ರಾನ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ನಿನ್ನೆ ರಾತ್ರಿಯಿಂದ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರಕ್ಕೂ ತಡೆಯೊಡ್ಡಲಾಗಿದ್ದು, ವೀಕೆಂಡ್ ಮಸ್ತಿ ಮೂಡ್ ನಲ್ಲಿದ್ದವರಿಗೆ, ಪಾರ್ಟಿ ಪ್ರಿಯರಿಗೂ ಬ್ರೇಕ್ ಬಿದ್ದಿದೆ.

ಸೋಮವಾರ ಬೆಳಿಗ್ಗೆ 5 ಗಂಎಯವರೆಗೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ತುರ್ತು ಸಂದರ್ಭ ಹೊರತುಪಡಿಸಿ ಅನಗತ್ಯವಾಗಿ ಓಡಾಟ ನಡೆಸುತ್ತಿರುವವರ ವಿರುದ್ಧ ಪೊಲೀಸರು ಕೇಸ್ ದಾಖಲಿಸುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ಹಾಕಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ದಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವವರ ವಾಹನಗಳನ್ನು ಸೀಜ್ ಮಾಡುತ್ತಿದ್ದು, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಎಚ್ಚರಿಕೆ ನಡುವೆಯೂ ನಿಯಮ ಉಲ್ಲಂಘಿಸಿ ಓಡಾಟ ನಡೆಸುತ್ತಿರುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಮೈಸೂರಿನಲ್ಲಿ ಕರ್ಫ್ಯೂ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು, ಮಾರ್ಕೆಟ್ ಗಳನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ. ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆಯೇ ಪೊಲೀಸರು ಫೀಲ್ಡಿಗಿಳಿದಿದ್ದು, ಚೆನ್ನಮ್ಮ ವೃತ್ತದಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸಿ ಅನಗತ್ಯ ಓಡಾಡುವವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ನಗರದ ಪ್ರಮುಖ ಮಾರ್ಕೆಟ್ ಗಳು, ದುರ್ಗದ ಬೈಲ್, ಜನತಾ ಬಜಾರ್ ಗಳನ್ನು ಬಂದ್ ಮಾಡಲಾಗಿದೆ. ಆದರೆ ಪೊಲೀಸರು ಎಷ್ಟೇ ಬುದ್ಧಿ ಹೇಳಿದರು ಹಲವೆಡೆ ಜನ ಸಂಚಾರ ನಡೆಸಿದ್ದಾರೆ.

ಧಾರವಾಡದಲ್ಲಿ ಹಲವೆಡೆ ಕೋವಿಡ್ ನಿಯಮ ಉಲ್ಲಂಘಿಸಲಾಗಿದ್ದು, ಜನರು ಟೀ ಅಂಗಡಿಗಳಲ್ಲಿ ಚಹಾ ಕುಡಿಯುತ್ತಿದ್ದರೆ ಮಾರ್ಕೆಟ್ ನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮರೆತು ತರಕಾರಿ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ.

ವಿಜಯಪುರದಲ್ಲಿ ಜನ ಗುಂಪು ಸೇರಲು ಅವಕಾಶ ನೀಡದ ಪೊಲೀಸರು ಸಾರ್ವಜನಿಕ ಸಂಚಾರಕ್ಕೆ ತಡೆಯೊಡ್ದಿದ್ದಾರೆ. ಅಥಣಿ-ಸಿಂಧಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬಳ್ಳಾರಿಯಲ್ಲಿ ಹೆಸರಿಗೆ ಮಾತ್ರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಅಂಗಡಿ ಮುಂಗಟ್ಟು ಮುಚ್ಚಿದ್ದರೂ ಜನ ಸಂಚಾರ ಎಂದಿನಂತೆಯೇ ಇದೆ.

ಇನ್ನು ಕುಂದಾನಗರಿ ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಹಲವೆಡೆ ಪೊಲೀಸರು ಸಾರ್ವಜನಿಕರಿಗೆ ಅನಗತ್ಯ ಓಡಾಟ ನಡೆಸದಂತೆ ಬುದ್ಧಿ ಹೇಳಿ ವಾಪಸ್ ಕಳುಹಿಸಿದ ಘಟನೆ ನಡೆದಿದೆ. ನಗರದಾದ್ಯಂತ ಬ್ಯಾರಿಕೇಡ್ ಗಳನ್ನು ಹಾಕಿ ತಪಾಸಣೆ ನಡೆಸಲಾಗುತ್ತಿದೆ. ಅಗತ್ಯ ವಸ್ತುಗಳ ಖರೀದಿ, ವೈದ್ಯಕೀಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಹಲವೆಡೆ ಗುಂಪು ಗುಂಪಾಗಿ ನಿಂತಿದ್ದ ಜನರನ್ನು ಪೊಲೀಸರು ಲಾಠಿ ಹಿಡಿದು ಬೆದರಿಸಿ ಚದುರಿಸುತ್ತಿದ್ದ ದೃಶ್ಯ ಕಂಡುಬಂದಿದೆ. ಇನ್ನು ಕೋವಿಡ್ ನಿಯಮ ಪಾಲನೆ ಮಾಡಿಕೊಂಡು ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಉದ್ಯಮಿ ಕುಟುಂಬ ಆತ್ಮಹತ್ಯೆ; ಶಾಸಕರ ಮಗನ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button