
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ವಿರುದ್ಧ ಮತ್ತೊಂದು ಹಲ್ಲೆ ಆರೋಪ ಕೇಳಿಬಂದಿದ್ದು, ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಯಲಹಂಕದ ಕ್ಲಬ್ ವೊಂದರಲ್ಲಿ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಲಾಗಿದ್ದು, ಮುಖ, ಮೂಗು, ತಲೆಯ ಭಾಗಕ್ಕೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆದರೆ ತಮ್ಮ ವಿರುದ್ಧದ ಆರೋಪ ಅಲ್ಲಗಳೆದಿರುವ ಮೊಹಮ್ಮದ್ ನಲಪಾಡ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸಲು ಯಾರೋ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಇದು. ಅನಗತ್ಯವಾಗಿ ನನ್ನ ವಿರುದ್ಧ ಗೂಬೆ ಕೂರಿಸುವ ಕೆಲಸ ನಡೆದಿದೆ. ನನ್ನ ಹಾಗೂ ಸಿದ್ದು ನಡುವೆ ಯಾವುದೇ ಗಲಾಟೆ ನಡೆದಿಲ್ಲ. ನಿನ್ನೆ ಸಭೆ ಕರೆದಿದ್ದು ನಿಜ. ಪಕ್ಷ ಸಂಘಟನೆ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಿರುವ ಕಾರ್ಯಚಟುವಟಿಕೆ ಬಗ್ಗೆ ಚರ್ಚಿಸಿದ್ದೇವೆ. ಆದರೆ ಗಲಾಟೆ ನಡೆದಿಲ್ಲ. ಬೇಕಿದ್ದರೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ, ತನಿಖೆ ಮಾಡಲಿ ಎಂದು ತಿಳಿಸಿದ್ದಾರೆ.
ಗಲಾಟೆ ಪ್ರಕರಣದ ಬಗ್ಗೆ ನಲಪಾಡ್ ಹೇಳಿಕೆ ಬೆನ್ನಲ್ಲೇ ವಿಡಿಯೋ ಬಿಡುಗಡೆ ಮಾಡಿರುವ ಸಿದ್ದು ಹಳ್ಳೇಗೌಡ, ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ನಲಪಾಡ್ ನನಗೆ ಹೊಡೆದಿದ್ದಾರೆ ಎನ್ನುವುದು ಸುಳ್ಳು. ನಾನು ಆರಾಮವಾಗಿದ್ದೇನೆ. ಯಾವುದೆ ಗಾಯಗಳು ಆಗಿಲ್ಲ. ಸಭೆ ಮುಗಿಸಿ ನಾನು ಬಳ್ಳಾರಿಗೆ ಹೊರಟಿದ್ದೇನೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಸತ್ಯಕ್ಕೆ ದೂರವಾದದ್ದು. ಇದೆಲ್ಲವೂ ಬಿಜೆಪಿಯವರು ಮಾಡಿರುವ ಷಡ್ಯಂತ್ರ ಎಂದು ಹೇಳಿದ್ದಾರೆ.
ಸಂಕೇಶ್ವರ ಮಹಿಳೆ ಶೂಟ್ ಔಟ್ ಪ್ರಕರಣ , ಪುರಸಭೆ ಸದಸ್ಯನ ಬಂಧನ