Latest

ಬೊಮ್ಮಾಯಿ ಮುಂದಿರುವ 5 ಸವಾಲುಗಳೇನು?

M.K.Hegde

ಎಂ.ಕೆ.ಹೆಗಡೆ, ಬೆಳಗಾವಿ – ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಭಾರತೀಯ ಜನತಾ ಪಾರ್ಟಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡ್ರಿಸಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಬಸವರಾಜ ಬೊಮ್ಮಾಯಿಗಿಂತ ಉತ್ತಮ ಆಯ್ಕೆ ಬಿಜೆಪಿಗೆ ಬೇರೆ ಇರಲಿಲ್ಲ. ಎಲ್ಲ ದೃಷ್ಟಿಯಿಂದ ನೋಡಿದರೂ ಇದೊಂದು ಸೂಕ್ತ ನಿರ್ಧಾರವೇ ಆಗಿದೆ.

ಒಂದು ಹಂತದಲ್ಲಿ ಪ್ರಹ್ಲಾದ ಜೊಶಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಬಿಜೆಪಿ ನಿರ್ಧರಿಸಿಯಾಗಿತ್ತು. ಆದರೆ ಜಾತಿ ವ್ಯವಸ್ಥೆಯನ್ನು ಸೋಲಿಸಲಾಗದೆ ಲಿಂಗಾಯತ ವ್ಯಕ್ತಿಗೇ  ಪಟ್ಟಕಟ್ಟುವ ಅನಿವಾರ್ಯತೆಗೆ ಬಿಜೆಪಿ ಸಿಲುಕಿಕೊಂಡಿತು. ಆ ಹಂತದಲ್ಲಿ ಬಸವರಾಜ ಬೊಮ್ಮಾಯಿ ಅವರ ಆಯ್ಕೆ ಯೋಗ್ಯವಾದ ಆಯ್ಕೆಯಾಗಿದೆ.

ಇದೀಗ ಬಸವರಾಜ ಬೊಮ್ಮಾಯಿ ಸಚಿವಸಂಪುಟವನ್ನೂ ರಚಿಸಿದ್ದಾರೆ. ಬೊಮ್ಮಾಯಿಗೆ ಹೈಕಮಾಂಡ್ ಆಶಿರ್ವಾದ ಇದೆ ಎನ್ನುವುದು ಖಚಿತ. ಯಡಿಯೂರಪ್ಪನವರಿಗೆ ಸುಮಾರು 2 ತಿಂಗಳು ಸಚಿವಸಂಪುಟ ರಚನೆಗೇ ಹೈಕಮಾಂಡ್ ಅವಕಾಶ ಕೊಟ್ಟಿರಲಿಲ್ಲ. ಅವರಿಗೆ ಸಾಕಷ್ಟು ಸತಾಯಿಸಿತ್ತು. ಅದನ್ನು ಯಡಿಯೂರಪ್ಪನವರೇ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.

ಮೊದಲನೆಯದಾಗಿ, ಬಸವರಾಜ ಬೊಮ್ಮಾಯಿ ಕೊರೋನಾ ನಿಯಂತ್ರಿಸಬೇಕಾಗಿದೆ. ಜೊತೆಗೆ 3ನೇ ಅಲೆ ಬಾರದಂತೆ ತಡೆಯಬೇಕಿದೆ. ಅದಕ್ಕೆ ಸಾಕಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲೇಬೇಕು. ರಾಜ್ಯದಲ್ಲಿನ ವೈದ್ಯಕೀಯ ಸೌಲಭ್ಯಗಳ ಸ್ಥಿತಿಗತಿ ಕೊರೋನಾದಿದಾಗಿ ಬಟಾಬಯಲಾಗಿದೆ. ಅದನ್ನು ಸುಧಾರಿಸಿಕೊಳ್ಳಬೇಕಿದೆ. ಕೊರೋನಾದಿಂದಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆ ಕುಸಿದಿದೆ. ಅವುಗಳನ್ನು ಕಟ್ಟಿ ನಿಲ್ಲಿಸಬೇಕಿದೆ.

ಎರಡನೆಯದಾಗಿ, ಪ್ರವಾಹ ಉಂಟುಮಾಡಿರುವ ಹಾನಿಯನ್ನು ಸರಿಪಡಿಸಬೇಕಿದೆ. ನಲುಗಿಹೋಗಿರುವ ಜನರಲ್ಲಿ ಧೈರ್ಯ ತುಂಬಿ ಅವರಿಗೆ ಮತ್ತೆ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕಿದೆ.

ಮೂರನೇಯದಾಗಿ, ಸಂಪುಟ ರಚನೆಯಿಂದಾಗಿ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಗೊಳಿಸಿ ಪಕ್ಷಕ್ಕೆ ಮತ್ತು ಸರಕಾರಕ್ಕೆ ಡ್ಯಾಮೇಜ್ ಆಗದಂತೆ ತಡೆಯುವ ಕೆಲಸ ಆಗಬೇಕಿದೆ.

ನಾಲ್ಕನೆಯದಾಗಿ, ರಾಜ್ಯದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರ ನಿಯಂತ್ರಿಸುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕಿದೆ. ತನ್ಮೂಲಕ ಜನಸಾಮಾನ್ಯರಿಗೆ ಆಡಳಿತ ವ್ಯವಸ್ಥೆಯ ಮೇಲೆ ವಿಶ್ವಾಸವನ್ನು ಮರಳಿ ತರಬೇಕಿದೆ. ಅತ್ಯಂತ ಶೂನ್ಯ ಮಟ್ಟದಿಂದ ಹಿಡಿದು ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ಮಿತಿಮೀರಿದೆ. ಕಠಿಣ ಎಚ್ಚರಿಕೆಯಷ್ಟೇ ಸಾಲದು, ಕಠಿಣ ಕ್ರಮದ ಮೂಲಕ ಅದಕ್ಕೆ ಕಡಿವಾಣ ಹಾಕಬೇಕಿದೆ.

ಐದನೇಯದಾಗಿ ಮತ್ತು ಅತ್ಯಂತ ಪ್ರಮುಖವಾಗಿ,  ಆಪರೇಶನ್ ಕಮಲ ಮತ್ತು ಕಳೆದ 2 ವರ್ಷಗಳ   ಆಡಳಿತ ಕುಸಿತದಿಂದಾಗಿ ಭಾರತೀಯ ಜನತಾಪಾರ್ಟಿ ಕರ್ನಾಟಕದಲ್ಲಿ ಕಳೆದುಕೊಂಡಿರುವ ಇಮೇಜ್ ನ್ನು ಮತ್ತೆ ಕಟ್ಟಿಕೊಳ್ಳುವ ಕೆಲಸವನ್ನು ಬಸವರಾಜ ಬೊಮ್ಮಾಯಿ ತಮ್ಮ ಟೀಮ್ ಸಹಾಯದಿಂದ ಮಾಡಬೇಕಿದೆ. ತನ್ಮೂಲಕ 2023ರ ಚುನಾವಣೆ ಹೊತ್ತಿಗೆ ಬಿಜೆಪಿಯನ್ನು ಜನರು ನಂಬುವಂತೆ ಮಾಡಬೇಕಿದೆ.

ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ನಂತರದ ಮೊದಲ ಅಧಿಕಾರಿಗಳ ಸಭೆಯಲ್ಲೇ ಸೂಚ್ಯವಾಗಿ ಇದನ್ನು ಉಲ್ಲೇಖಿಸಿದ್ದಾರೆ. ಇನ್ನು ಮುಂದೆ ಹೇಗೆಬೇಕಾದರೂ ಕೆಲಸ ಮಾಡುತ್ತೇನೆ ಎನ್ನುವ ಮನೋಭಾವನೆ ಬೇಡ ಎಂದು ಎಚ್ಚರಿಸಿದ್ದಾರೆ. ಅಂದರೆ ಈವರೆಗೆ ಅಂತಹ ಮನೋಭಾವನೆ ಇತ್ತು ಎನ್ನುವುದನ್ನು ಅವರೂ ಗಮನಿಸಿದ್ದಾರೆ, ಉಲ್ಲೇಖಿಸಿದ್ದಾರೆ. ಫೈಲ್ ಕ್ಲಿಯರನ್ಸ್ ಗೆ ಕೂಡ ಸಮಯಮಿತಿ ನೀಡಿದ್ದಾರೆ.

ಯಡಿಯೂರಪ್ಪ ಸರಕಾರದಲ್ಲಿ ಮುಖ್ಯಮಂತ್ರಿಗಳೇ ಆದೇಶ ಮಾಡಿದ್ದರೂ ಒಬ್ಬ ಸಾಮಾನ್ಯ ಕೇಸ್ ವರ್ಕರ್ ಕೂಡ ಲಂಚವಿಲ್ಲದೆ ಆ ಫೈಲನ್ನು ಮೂವ್ ಮಾಡುತ್ತಿರಲಿಲ್ಲ. ಇಂತದ್ದನ್ನು  ಸರಿಪಡಿಸದಿದ್ದರೆ ಜನಸಾಮಾನ್ಯರಿಗೆ ಈ ವ್ಯವಸ್ಥೆಯ ಮೇಲೆ ವಿಶ್ವಾಸ ಉಳಿಯಲು ಸಾಧ್ಯವಿಲ್ಲ.

ಬೊಮ್ಮಾಯಿ ಸರಕಾರಕ್ಕೆ ಹೆಜ್ಜೆ ಹೆಜ್ಜೆಗೂ ಸವಾಲುಗಳಿವೆ. ಈ ಐದು ಸವಾಲುಗಳು ಸರಕಾರ ಮತ್ತು ರಾಜ್ಯದ ಜನತೆ ವ್ಯವಸ್ಥೆಯೊಂದಿಗೆ ಉಳಿಯಬೇಕಾದರೆ ತುರ್ತಾಗಿ ಆಗಬೇಕಾದದ್ದು. ಬಸವರಾಜ ಬೊಮ್ಮಾಯಿ ಅವರಿಗೆ ಈ ಸವಾಲುಗಳನ್ನು ಎದುರಿಸುವ, ಪರಿಹರಿಸುವ ತಾಕತ್ತಿದೆ. ಇಡೀ ರಾಜ್ಯವನ್ನು, ರಾಜ್ಯದ 224 ಶಾಸಕರನ್ನು ಸೂಕ್ಷ್ಮವಾಗಿ ಅರಿತಿರುವ ಕೆಲವೇ ವ್ಯಕ್ತಿಗಳ ಸಾಲಿನಲ್ಲಿ ಬಸವರಾಜ ಬೊಮ್ಮಾಯಿ ಮುಂದೆ ನಿಲ್ಲುತ್ತಾರೆ. ಅವರು ಮನಸ್ಸು ಮಾಡಿದರೆ ಕಷ್ಟವಲ್ಲ.

ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ನೂತನ ಸಿಎಂ ಖಡಕ್ ವಾರ್ನಿಂಗ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button