Belagavi NewsBelgaum NewsKannada NewsKarnataka News

ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಹೇಳುವುದೆಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಉಲಿದಂತೆ – ಶಂಕರಗೌಡ ಪಾಟೀಲ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಜನತಾ ಪಾರ್ಟಿಯವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೆಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಉಲಿದಂತೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರಗೌಡ ಪಾಟೀಲ ಹೇಳಿದ್ದಾರೆ.

ಕುಟುಂಬ ರಾಜಕಾರಣ ಕುರಿತಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಅಳವಡಿಸುತ್ತಿರುವ ಕುರಿತು ಹೇಳಿಕೆ ನೀಡಿರುವ ಅವರು, ರಾಷ್ಟ್ರ ರಾಜಕಾರಣದಿಂದ ಹಳ್ಳಿ ರಾಜಕಾರಣದವರೆಗೂ ಕುಟುಂಬ ರಾಜಕಾರಣವನ್ನೇ ಮಾಡಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

 ಬಿ.ಎಸ್.ಯಡಿಯೂರಪ್ಪ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಈಶ್ವರಪ್ಪನವರದ್ದು ಕುಟುಂಬ ರಾಜಕಾರಣವಲ್ಲವೇ? ಬೊಮ್ಮಾಯಿಯವರದ್ದು ಕುಟುಂಬ ರಾಜಕಾರಣವಲ್ಲವೇ? ಉದಾಸಿಯವರದ್ದು ಕುಟುಂಬ ರಾಜಕಾರಣವಲ್ಲವೇ? ಸಿದ್ದೇಶ್ವರ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಕತ್ತಿಯವರದ್ದು ಕುಟುಂಬ ರಾಜಕಾರಣವಲ್ಲವೇ? ಜಾರಕಿಹೊಳಿಯವರದ್ದು ಕುಟುಂಬ ರಾಜಕಾರಣವಲ್ಲವೇ? ಜೊಲ್ಲೆಯವರದ್ದು ಕುಟುಂಬ ರಾಜಕಾರಣವಲ್ಲವೇ?  ಜೊತೆಗೆ, ಕುಟುಂಬ ರಾಜಕಾರಣವನ್ನೇ ಹೊದ್ದು ಮಲಗಿರುವ ಜಾತ್ಯತೀತ ಜನತಾದಳದೊಂದಿಗೆ ಸೇರಿಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿಯವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

 ಲಕ್ಷ್ಮೀ ಹೆಬ್ಬಾಳಕರ್ ಅವರು ಅತ್ಯಂತ ಕೆಳಮಟ್ಟದಿಂದ ರಾಜಕಾರಣದಲ್ಲಿ ಮೇಲೆ ಬಂದವರು. ಅವರ ಸಹೋದರರಾಗಿರುವ ಚನ್ನರಾಜ ಹಟ್ಟಿಹೊಳಿ ಹಾಗೂ ಮಗ ಮೃಣಾಲ ಹೆಬ್ಬಾಳಕರ್ ಅವರು ಕಳೆದ 10 ವರ್ಷಗಳಿಗಿಂತ ಹೆಚ್ಚಿನ ಸಮಯದಿಂದ ಕಾಂಗ್ರೆಸ್ ನಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಸ್ವಂತ ಪ್ರತಿಭೆಯಿಂದ, ಹೋರಾಟದಿಂದ ಅವರು ರಾಜಕಾರಣದಲ್ಲಿ ಸ್ಥಾನ ಪಡೆದರೆ ಇದನ್ನು ಕುಟುಂಬ ರಾಜಕಾರಣ ಎನ್ನುವಂತೆ ಬಿಂಬಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಇನ್ನೇನು ಎಂದು ಶಂಕರಗೌಡ ಪಾಟೀಲ ಪ್ರಶ್ನಿಸಿದ್ದಾರೆ. 

ಯಾವುದೇ ರಾಜಕೀಯ, ಸಾಮಾಜಿಕ ಕೆಲಸ ಮಾಡದೆ ಕೇವಲ ಅಪ್ಪನ ಹೆಸರಲ್ಲಿ, ಅಮ್ಮನ ಹೆಸರಲ್ಲಿ, ಅಣ್ಣನ ಹೆಸರಲ್ಲಿ ಟಿಕೆಟ್ ಪಡೆಯುವ ನೂರಾರು ಜನರು ಬಿಜೆಪಿಯಲ್ಲಿರುವಾಗ, ಕುಟುಂಬದವರ ಹೆಸರಿನ ಮೇಲೆ ಬೇರೆ ಬೇರೆ ಹುದ್ದೆಗಳನ್ನು ಪಡೆಯುವ ಸಾವಿರಾರು ಉದಾಹರಣೆಗಳು ಬಿಜೆಪಿಯ ರಾಷ್ಟ್ರ ರಾಜಕಾರಣದಲ್ಲಿರುವಾಗ ಇಂತಹ ಬ್ಯಾನರ್, ಫ್ಲೆಕ್ಸ್ ಅಳವಡಿಸಿ ಬಿಜೆಪಿ ಅಪಹಾಸ್ಯಕ್ಕೀಡಾಗುತ್ತಿದೆ. ಬಿಜೆಪಿ ಮುಖಂಡರೆ ತಲೆತಗ್ಗಿಸುವಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button