Latest

ಶಿರಸಿಯ ಮಾರಿಕಾಂಬೆಯಲ್ಲಿ ಸಿಎಂ ಬೊಮ್ಮಾಯಿ ಬೇಡಿಕೊಂಡಿದ್ದೇನು?

 

ಪ್ರಗತಿವಾಹಿನಿ ಸುದ್ದಿ, ಶಿರಸಿ: “ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಿಸುತ್ತಿರುವ ಸಂಕ್ರಮಣದ ಕಾಲ ಇದು. ಉತ್ತರಾಯಣದಲ್ಲಿ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ನಮ್ಮ ಪರಂಪರೆಯಲ್ಲಿದೆ. ಆ ಹಿನ್ನೆಲೆಯಲ್ಲಿ ಈ ವರ್ಷ ರಾಜ್ಯದ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ನಾನು ಶಿರಸಿಯ ಶ್ರೀ ಮಾರಿಕಾಂಬೆಯಲ್ಲಿ ಬೇಡಿಕೊಳ್ಳುತ್ತೇನೆ,” ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಲ್ಲಿನ ನೂತನ ಸರ್ಕೀಟ್ ಹೌಸ್ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಸಮಸ್ತ ನಾಡಿನ ಜನತೆಗೆ, ವಿಶೇಷವಾಗಿ ಶಿರಸಿ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.

“ಶಿರಸಿ ಭಾಗ ಅರಣ್ಯ ಪ್ರದೇಶದಿಂದ ಕೂಡಿರುವ ಪ್ರದೇಶ. ಇಲ್ಲಿ ಅಭಿವೃದ್ಧಿ, ನಾಗರಿಕತೆ ಹಾಗೂ ಅರಣ್ಯ ರಕ್ಷಣೆ ಒಟ್ಟಿಗೇ ಸಾಗಬೇಕಾದ ಅವಶ್ಯಕತೆ ಇದೆ. ಅನೇಕ ಕಡೆ ಹಲವು ಸಂದರ್ಭಗಳಲ್ಲಿ ಅರಣ್ಯ ರಕ್ಷಣೆ ಮತ್ತು ನಾಗರಿಕತೆ ಬೆಳವಣಿಗೆಯಲ್ಲಿ ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅದಕ್ಕೆ ಪರಿಹಾರ ನೀಡುವುದು ನಮ್ಮ ಕರ್ತವ್ಯವೂ ಆಗಿದೆ. ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ,” ಎಂದರು.

“ಶಿರಸಿಯಲ್ಲಿ ಇಂದೇ 250 ಕೋಟಿಗೂ ಅಧಿಕ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಶಿರಸಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಭಿವೃದ್ಧಿಯಾಗುತ್ತಿದೆ. ಅದರ ಶ್ರೇಯಸ್ಸು ಅದಕ್ಕೆ ಕಾರಣರಾದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಲ್ಲುತ್ತದೆ,” ಎಂದರು.

ವಿಶ್ವೇಶ್ವರ ಹೆಗಡೆ ಕಾಗೇರಿಯವರ ನೇತೃತ್ವದಲ್ಲಿ ಗುಣಮಟ್ಟದ ಕಾಮಗಾರಿಗಳು ಆಗುವ ವಿಶ್ವಾಸ ತಮಗಿದೆ ಎಂದು ಸಿಎಂ ಹೇಳಿದರು.

ಉತ್ತರ ಕನ್ನಡದ ಘಟ್ಟದ ಮೇಲಿನ ಪ್ರದೇಶ ಅಪಾರ ವೈವಿಧ್ಯಮಯ ಜೀವವೈವಿಧ್ಯ, ಸಸ್ಯ ಸಂಕುಲಗಳನ್ನು ಹೊಂದಿದ ಸಂಪದ್ಭರಿತ ಪ್ರದೇಶ. ಇದು ನಿಸರ್ಗದತ್ತವಾದ ಸಂಪತ್ತಿರುವ ಪ್ರದೇಶ. ಇಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಅದೇ ಸಂದರ್ಭದಲ್ಲಿ ಇಲ್ಲಿನ ಹಸಿರು ಸಂಪತ್ತನ್ನೂ ಕೂಡ ಉಳಿಸಿಕೊಳ್ಳಬೇಕು. ಇದಕ್ಕಾಗಿಯೇ ತಾವು 2022-23ರಲ್ಲಿ ತಾವು ಪ್ರಥಮ ಬಾರಿ ಮಂಡಿಸಿ ‘ಗ್ರೀನ್ ಬಜೆಟ್’ನಲ್ಲಿ ಈ ಜಿಲ್ಲೆಗೆ ಏನನ್ನು ನೀಡಲಾಗಿತ್ತೋ ಅವೆಲ್ಲವೂ ಈಗ ಅನುಷ್ಠಾನಗೊಳ್ಳಬೇಕಿದೆ ಎಂದು ಸಿಎಂ ಹೇಳಿದರು.

ಯಲ್ಲಾಪುರ ಕ್ಷೇತ್ರದ ಕಳಚೆ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಿದ್ದು ಅದಕ್ಕೆ ಬಜೆಟ್ ನಲ್ಲಿ ಸಾಕಷ್ಟು ಹಣ ನೀಡಲಾಗಿದೆ. ಅಲ್ಲಿ ನಾಶವಾದ ಅರಣ್ಯದ ಪುನರುತ್ಥಾನಕ್ಕೆ ವಿಶೇಷ ಯೋಜನೆಯನ್ನು ಅರಣ್ಯ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಳಚೆ ನಿವಾಸಿಗಳ ಪುನರ್ವಸತಿ ಬಗ್ಗೆಯೂ ಚರ್ಚೆಯಾಗಿದ್ದು ಕೆಲವರು ಅಲ್ಲೇ ಇರಲು ಇಷ್ಟಪಡುತ್ತಿದ್ದಾರೆ. ಇನ್ನಷ್ಟು ಜನ ಪುನರ್ವಸತಿ ಕೇಳುತ್ತಿದ್ದಾರೆ. ಜನತೆಯ ಪುನರ್ವಸತಿಗೆ ಬಜೆಟ್ ನಲ್ಲಿ ಹಣ ನೀಡಲಾಗಿದ್ದು ಅದರ ಕಾರ್ಯಾನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಸಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್ ಮತ್ತಿತರರು ಹಾಜರಿದ್ದರು.

 

*68 ಪ್ರಯಾಣಿಕರಿದ್ದ ವಿಮಾನ ಪತನ; ರನ್ ವೇ ನಲ್ಲಿಯೇ ಹೊತ್ತಿ ಉರಿದ ವಿಮಾನ*

https://pragati.taskdun.com/nepalapokhara-international-airportflight-crash/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button