Kannada NewsKarnataka NewsLatest

ಬೆಳಗಾವಿ ಅಧಿವೇಶನದ ವೇಳೆ ಎಲ್ಲರ ನಿರೀಕ್ಷೆಯೇ ಬೇರೆ, ಆತಂಕವೇ ಬೇರೆ, ಏನದು?

M.K.Hegde

ಎಂ.ಕೆ.ಹೆಗಡೆ, ಬೆಳಗಾವಿ – ಬೆಳಗಾವಿಯಲ್ಲಿ ಸೋಮವಾರದಿಂದ 10 ದಿನಗಳ ಕಾಲ ವಿಧಾನಮಂಡಳದ ಅಧಿವೇಶನ ನಡೆಯಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ನೂರಾರು ನಿರೀಕ್ಷೆಗಳಲ್ಲಿ ಈ ಭಾಗದ ಜನರಿದ್ದಾರೆ.

ಮೊದಲ ಅಧಿವೇಶನದಿಂದ ಇಲ್ಲಿಯವರೆಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಇಲ್ಲಿ ಚರ್ಚೆ ನಡೆಯಲಿದೆ, ಅವಕ್ಕೆಲ್ಲ ಪರಿಹಾರ ಸಿಗಲಿದೆ ಎನ್ನುವ ನಿರೀಕ್ಷೆ ಜನರಲ್ಲಿ ಜೀವಂತವಾಗಿಯೇ ಇದೆ. ಆದರೆ ಅವ್ಯಾವುವೂ ಈಡೇರಿಲ್ಲ. ಅಧಿವೇಶನ ಬೆಳಗಾವಿಯಲ್ಲಾದರೂ ಚರ್ಚೆಯಲ್ಲಿ ದಕ್ಷಿಣ ಕರ್ನಾಟಕ ಭಾಗದ ಶಾಸಕರೇ ಮೇಲುಗೈ ಸಾಧಿಸುತ್ತ ಬಂದಿದ್ದಾರೆ. ಯಥಾಪ್ರಕಾರ ಬೆಂಗಳೂರಿನಂತೆಯೇ ಇಲ್ಲಿಯೂ ಚರ್ಚೆ ನಡೆಯುತ್ತವೆಯೇ ಹೊರತು ಈ ಭಾಗಕ್ಕೆ ಪ್ರಾಶಸ್ತ್ಯ ಸಿಗುವುದು ತೀರಾ ತೀರಾ ಕಡಿಮೆಯೇ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಇಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದು. ಬೇರೆಲ್ಲೆ ರಾಜಕಾರಣಿಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಬಗ್ಗೆ ಹೆಚ್ಚಿನ ಅಧ್ಯಯನ ಹೊಂದರುವವರು ಬೊಮ್ಮಾಯಿ. ಇಲ್ಲಿನ ಸಮಸ್ಯೆಗಳ ಕುರಿತು ಇಂಚಿಂಚೂ ಅರಿತವರು ಅವರು. ಹಾಗಾಗಿ ಈ ಬಾರಿಯ ಅಧಿವೇಶನದ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಅವರೇ ಮುಂದಾಗಿ ಇಲ್ಲಿನ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬಹುದು, ಇಲ್ಲವೇ ಚರ್ಚೆ ಬಂದಾಗಲಾದರೂ ಅದಕ್ಕೆ ಆದ್ಯತೆ ನೀಡಿ ಅವಕಾಶ ಕೊಡಬಹುದು ಎನ್ನುವ ನಿರೀಕ್ಷೆ ಇದೆ.

ಪ್ರಮುಖವಾಗಿ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ, ಮಹಾದಾಯಿ ಯೋಜನೆ ಸಾಕಾರ, ಶಾಸಕರ ಭವನ ನಿರ್ಮಾಣ, ಪ್ರವಾಹ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹೀಗೆ ಹತ್ತು ಹಲವು ವಿಷಯಗಳು ಈ ಬಾರಿಯ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಬಿಟ್ ಕಾಯಿನ್ ವಿಷಯವೂ ಕಲಾಪದಲ್ಲಿ ಗದ್ದಲವೆಬ್ಬಿಸಬಹುದು.

ಆತಂಕವೇನು?

ಇವೆಲ್ಲಕ್ಕಿಂತ ಮುಖ್ಯವಾಗಿ, ಒಂದು ದೃಷ್ಟಿಯಲ್ಲಿ ಆತಂಕಕ್ಕೂ ಕಾರಣವಾಗಿರುವ ವಿಷಯವೆಂದರೆ ಬೆಳಗಾವಿ ಅಧಿವೇಶನದ ಎರಡನೇ ದಿನವೇ ಹೊರಬೀಳಲಿರುವ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ. ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಡಿ.10ರಂದು ನಡೆದಿರುವ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ಅದು ಇಡೀ ಕಲಾಪವನ್ನು ನುಂಗಿಹಾಕಬಹುದು ಎನ್ನುವ ಭಯ ಎಲ್ಲರನ್ನೂ ಕಾಡುತ್ತಿದೆ.

ಬೆಳಗಾವಿ ಸೇರಿದಂತೆ ಕೆಲವು ಸ್ಥಾನಗಳಂತೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ದೊಡ್ಡ ಪ್ರತಿಷ್ಠೆಯ ಕಣವಾಗಿದೆ. ಇಲ್ಲಿ ಯಾವ ಪಕ್ಷವೇ ಗೆಲ್ಲಲಿ, ಯಾವ ಪಕ್ಷವೇ ಸೋಲಲಿ ಆ ಕುರಿತು ದೊಡ್ಡ ಮಟ್ಟದಲ್ಲಿ ಆರೋಪ, ಪ್ರತ್ಯಾರೋಪ, ಗದ್ದಲ ಉಂಟಾಗುವುದು ಖಚಿತ.

ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಿ ಸಂಜೆಯ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ. ಹಾಗಾಗಿ ಆ ದಿನ ಇಡೀದಿನ ಶಾಸಕರು ಕಲಾಪದಲ್ಲಿ ತೊಡಗಿಕೊಳ್ಳುವುದು ಅನುಮಾನ. ಭಾಗಿಯಾದರೂ ಎಲ್ಲರ ಲಕ್ಷ್ಯ ಫಲಿತಾಂಶದ ಕಡೆಯೇ ಇರಲಿದೆ. ಮರುದಿನ ಫಲಿತಾಂಶದ ವಿಶ್ಲೇಷಣೆ, ಆರೋಪ, ಪ್ರತ್ಯಾರೋಗಳಿಂದ ಸದನದಲ್ಲಿ ಗದ್ದಲ ಉಂಟಾಗಬಹುದು. ಅದು ಯಾವ ಹಂತಕ್ಕೆ ಹೋಗಲಿದೆ? ಎಷ್ಟು ದಿನ ಕಲಾಪ ಬಲಿಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿಶೇಷವೆಂದರೆ, ಈ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಪಕ್ಷಗಳು ಬಹುತೇಕ 2023ರ ವಿಧಾನಸಭೆಯ ಚುನಾವಣೆಯ ಮೂಡ್ ಗೆ ಸರಿಯುವುದು ಗ್ಯಾರಂಟಿ. ಈಗಾಗಲೆ ಘೋಷಣೆಯಾಗಿರುವ ಕೆಲವು ನಗರಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಧ್ಯವೇ ಬರಬಹುದಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಿಗೂ ಪಕ್ಷಗಳು ಸಜ್ಜಾಗಬೇಕಿದೆ.

ಈ ಎಲ್ಲವನ್ನೂ ಗಮನಿಸಿದರೆ, ಬೆಳಗಾವಿ ವಿಧಾನಮಂಡಳದ ಕಲಾಪಗಳು ರಾಜಕೀಯ ಚರ್ಚೆಗೇ ವೇದಿಕೆಯಾಗಲಿದೆಯೇ? ಅಭಿವೃದ್ಧಿ ವಿಷಯಗಳು ಗೌಣವಾಗಲಿದೆಯೇ ಎನ್ನುವ ಅನುಮಾನ, ಆತಂಕ ಮೂಡುತ್ತದೆ.

 

ಬೆಳಗಾವಿ ಅಧಿವೇಶನ; ಮೊದಲ ದಿನ ಸಿಎಂ ಪಾಲ್ಗೊಳ್ಳೋದು ಅರ್ಧ ದಿನ ಮಾತ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button