ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಜನತಾ ಪಾರ್ಟಿಯ ಚುನಾವಣಾ ತಂತ್ರಗಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಕುರಿತು ಅಮಿತ್ ಶಾ ಕಾರ್ಯತಂತ್ರ ರೂಪಿಸಲಿದ್ದಾರೆ.
ಮಧ್ಯಾಹ್ನ 4 ಗಂಟೆಗೆ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಕಿತ್ತೂರು, ಬೈಲಹೊಂಗಲ, ಖಾನಾಪುರ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾರ್ಯಕರ್ತರಿಗಾಗಿ ಈ ಸಮಾವೇಶ ನಡೆಯಲಿದೆ.
ಅಲ್ಲಿಂದ ಬೆಳಗಾವಿಗೆ ಆಗಮಿಸಲಿರುವ ಅವರು ಯುಕೆ 27 ಹೊಟೆಲ್ ನಲ್ಲಿ ಬಿಜೆಪಿ ಪದಾಧಿಕಾರಿಗಳು, ಪ್ರಮುಖರ ಸರಣಿ ಸಭೆಗಳನ್ನು ನಡೆಸುವ ಮೂಲಕ ಚುನಾವಣೆ ತಂತ್ರ ಹೆಣೆಯಲಿದ್ದಾರೆ. ಬೆಳಗಾವಿಯಲ್ಲಿ ಸಂಜೆ 7 ಗಂಟೆಗೆ ಬಿಜೆಪಿಯ ಪ್ರಮುಖರ ಸಭೆ ನಡೆಸಲಿರುವ ಅಮಿತ ಶಾ, ನಂತರ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಇದರಲ್ಲಿ ಬೆಳಗಾವಿ, ಚಿಕ್ಕೋಡಿ, ವಿಜಯಪುರ ಹಾಗೂ ಬಾಗಲಕೋಟೆಯ ಪ್ರಮುಖರು ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮನೆಯೊಂದು ಮೂರು ಬಾಗಿಲು
ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವ ಸ್ಥಿತಿ ಇದೆ. ನಾವಿಕನಿಲ್ಲದ ಹಡಗಿನಂತಹ ಸ್ಥಿತಿ ಬಿಜೆಪಿಯದ್ದು. ಕೆಲವು ಮಾಜಿ ಸಚಿವರು, ಸಂಸದರು, ಶಾಸಕರು ಒಂದು ಗುಂಪಾದರೆ, ರಮೇಶ ಜಾರಕಿಹೊಳಿ ತಮ್ಮದೇ ಒಂದು ಗುಂಪು ರಚಿಸಿಕೊಂಡಿದ್ದಾರೆ. ಇನ್ನು ಕೆಲವರು ಯಾವ ಗುಂಪಿಗೂ ಸೇರದೆ ತಟಸ್ಥರಾಗಿದ್ದಾರೆ. ಮೂರು ಗುಂಪುಗಳನ್ನು ಒಂದುಗೂಡಿಸುವುದು ಸುಲಭದ ಕೆಲಸವಲ್ಲ.
ಇನ್ನೂ ವಿಚಿತ್ರವೆಂದರೆ ಶಾಸಕರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಇಡೀ ಜಿಲ್ಲೆಯ ಪಕ್ಷ ಸಂಘಟನೆ ಜವಾಬ್ದಾರಿ ಹೊರಲು ಯಾರೂ ಸಿದ್ಧರಿಲ್ಲ. ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ, ರಾಜ್ಯದ ಸಚಿವರಾಗಿದ್ದ ಉಮೇಶ ಕತ್ತಿ ನಿಧನದ ನಂತರ ಮತ್ತು ಲೋಕಸಭೆ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆ ನಂತರವಂತೂ ಅಕ್ಷರಶಃ ಬಿಜೆಪಿ ಒಡೆದು ಛಿದ್ರವಾಗಿದೆ. ರಮೇಶ ಜಾಕಿಹೊಳಿ ವಯಕ್ತಿಕ ಅಜೆಂಡಾದೊಂದಿಗೆ ತಮ್ಮದೇ ಗುಂಪಿನ ಸಭೆಗಳನ್ನು ನಡೆಸುತ್ತಿರುವುದು ಇತರ ನಾಯಕರಿಗೆ ತೀವ್ರ ಇರಿಸುಮುರುಸನ್ನುಂಟು ಮಾಡಿದೆ. ಜಿಲ್ಲೆಯ ಕೆಲವು ನಾಯಕರ ಅಹವಾಲನ್ನು ರಾಜ್ಯ ನಾಯಕರ ಬಳಿ ಒಯ್ಯುವವರೂ ಇಲ್ಲ, ಒಯ್ದರೆ ಅದನ್ನು ಆಲಿಸುವ ಕಿವಿಗಳೂ ರಾಜ್ಯದಲ್ಲಿಲ್ಲ ಎನ್ನುವ ಸ್ಥಿತಿ ಉಂಟಾಗಿದೆ.
ಇಂತಹ ಸ್ಥಿತಿಯಲ್ಲಿ ವಿಧಾನಸಭೆಗೆ ಚುನಾವಣೆ ಬಂದಿದೆ. ಚುನಾವಣೆಗೆ ತಂತ್ರಗಾರಿಕೆ ರೂಪಿಸಲು ಅಮಿತ್ ಶಾ ಬರುತ್ತಿದ್ದಾರೆ. ಹಿಂದೆಂದೂ ಕಾಣದಂತಹ ದೊಡ್ಡ ಮಟ್ಟದ ಭಿನ್ನಮತ ನಿವಾರಿಸಲು ಅಮಿತ್ ಶಾ ಸಭೆಗಳು ಯಶಸ್ವಿಯಾಗಲಿವೆಯೇ? ಅಮಿತ್ ಶಾ ವಾಪಸ್ಸಾದ ಬಳಿಕವೂ ಎಲ್ಲ ನಾಯಕರು ಒಂದಾಗಿ ಉಳಿಯುತ್ತಾರಾ? ಈ ಬಾರಿಯ ಚುನಾವಣೆಯನ್ನು ಬಿಜೆಪಿಯ ನಾಯಕರೆಲ್ಲ ಒಟ್ಟಾಗಿ ಎದುರಿಸಲಿದ್ದಾರಾ ಎನ್ನುವ ಕುತೂಹಲ ಸ್ವತಃ ಬಿಜೆಪಿಯ ನಾಯಕರೂ ಸೇರಿದಂತೆ ಎಲ್ಲರಲ್ಲಿದೆ.
ಶನಿವಾರ ಅಮಿತ್ ಶಾ ಆಗಮನ : 4 ವಿಧಾನಸಭಾ ಕ್ಷೇತ್ರ ಟಾರ್ಗೆಟ್; 75 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ
https://pragati.taskdun.com/amit-shahs-arrival-on-saturday-4-assembly-constituencies-target-more-than-75-thousand-people-are-expected/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ