ಜೀವನದ ಶ್ರೇಷ್ಠ ಗಳಿಕೆ ಯಾವುದು?


ಜಯಶ್ರೀ ಜೆ. ಅಬ್ಬಿಗೇರಿ ಬೆಳಗಾವಿ
ಜೀವನದಲ್ಲಿ ನಡೆಯುವುದು ನಮಗೆ ಮೊದಲೇ ತಿಳಿದಿರುವುದಿಲ್ಲ. ಇಲ್ಲಿ ನಡೆಯುವುದೆಲ್ಲ ಪೂರ್ವ ನಿರ್ಧಾರಿತವೂ ಅಲ್ಲ. ಹಾಗಂತ ಮನಸ್ಸು ಮಾಡಿದರೆ ಅಸಾಧ್ಯವಾದುದನ್ನು ನಡೆಯುವಂತೆ ಮಾಡಲಾರೆವು ಅಂತೆನಿಲ್ಲ. ಸರಳವಾಗಿ ಹೇಳಬೇಕೆಂದರೆ ಇಂದು ನಾವು ಬದುಕುತ್ತಿರುವ ಆದುನಿಕ ಜಗತ್ತು ಅದಕ್ಕೆ ಕನ್ನಡಿಯಾಗಿದೆ. ಇಷ್ಟೊಂದು ತೀವ್ರಗತಿಯಲ್ಲಿ ಬೆಳೆದ ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಕ್ಷೇತ್ರದ ಏರುಗತಿ ನೋಡಿದರೆ ಮನಸ್ಸಿನ ತಾಕತ್ತು ಅರ್ಥವಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧನೆಯು ಮನೋವಿಕಾಸದ ಫಲವಲ್ಲದೇ ಮತ್ತೇನು? ಮನಸ್ಸು ಸಣ್ಣದೆನಿಸುವ ವಿಚಾರಗಳನ್ನು ದೊಡ್ಡದಾಗಿಸಬಲ್ಲದು. ಅಂತೆಯೇ ದೊಡ್ಡ ದೊಡ್ಡ ದುರಾಲೋಚನೆಗಳನ್ನು ನಗಣ್ಯವಾಗಿಸಬಲ್ಲದು. ಇದರರ್ಥ ಬದುಕಿನಲ್ಲಿ ಮನಸ್ಸಿಗೆ ಬಹುಮುಖ್ಯ ಸ್ಥಾನವಿದೆ ಎಂದಂತಾಯಿತು.
ಜೀವನದ ಕೇಂದ್ರ ಬಿಂದು ಮನಸ್ಸು. ಅದು ಹಸನಾಗಿದ್ದರೆ ಬದುಕು ಹಸನಾಗುತ್ತದೆ. ನೀರಿನಂತೆ ನಿರ್ಮಲವಾಗಿದ್ದರೆ ನಿಜಾನಂದವನ್ನು ನೀಡುತ್ತದೆ. ಹಾಗಾದರೆ ಮನಸ್ಸೆಂಬ ಫಲವತ್ತಾದ ಭೂಮಿಯಲ್ಲಿ ಕಾಮ, ಕ್ರೋಧ, ಮೋಹ,ಲೋಭ, ಮದ, ಮತ್ಸರಗಳನ್ನು ಬೆಳೆಸದೇ ಪ್ರೀತಿ ದಯೆ ಸಹನೆ ಸಹಾನುಭೂತಿ ಕ್ಷಮೆಗಳನ್ನು ಬೆಳೆಸುವುದು ನಮ್ಮ ಕಾಯಕವಾಗಬೇಕು. ಬೇಕಾದ ಬೆಳೆಯ ನಡುವೆ ಬೇಡವಾದ ಕಳೆಯು ಬೆಳೆಯುತ್ತದೆ. ಅದನ್ನು ಕಿತ್ತು ಸ್ವಚ್ಛ ಮಾಡುವುದು ನಮ್ಮದೇ ಜವಾಬ್ದಾರಿ. ಬೆಳೆಯನ್ನು ಬೆಳೆಯದಂತೆ ತಡೆಯುವ ಕಳೆಯನ್ನು ಹಸನಾಗಿಸಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ. ಇಷ್ಟೆಲ್ಲ ಅಗಾಧ ಶಕ್ತಿಯುಳ್ಳ ಮನಸ್ಸು ತನ್ನದನ್ನು ಮರೆತು ಬರೀ ಬೇರೆಯವರ ಬದುಕಿನ ಲೋಪ ದೋಷಗಳನ್ನು ಹುಡುಕುತ್ತ ಹೋಗುತ್ತದೆ. ಅಮೂಲ್ಯ ಬದುಕಿನ ಸಾರ್ಥಕತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಪರಚಿಂತೆ ನಮಗೇತಕಯ್ಯಾ?
ನಮ್ಮ ಚಿಂತೆ ನಮಗೆ ಸಾಲದೆ?
ಕೂಡಲಸಂಗಯ್ಯ ಒಲಿದಾನೋ ಒಲಿಯನೋ
ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು
ಬಸವಣ್ಣನವರ ಈ ವಚನ ಮನಸ್ಸನ್ನು ಹಸನಾಗಿಸಿಕೊಂಡು ನಾವೆಲ್ಲ ಹೂವಾಗಿ ಅರಳಬೇಕು ಎಂಬುದರ ಬಗ್ಗೆ ಬಹು ಸೊಗಸಾಗಿ ಬೆಳಕು ಚೆಲ್ಲಿದೆ. ಮೇಲಿನ ಈ ವಚನ ನಮಗೆಲ್ಲ ಒಂದು ಕಿವಿಮಾತಾಗಿದೆ. ಇದಿಷ್ಟು ಸಾಲದೆಂಬಂತೆ ಬೇರೆಯವರನ್ನೆಲ್ಲ ಹಿಂದಿಕ್ಕಿ ಯಾವುದೇ ಅಡ್ಡಮಾರ್ಗವನ್ನು ಅನುಸರಿಸಿ ಧನ,ಕನಕ, ಅಧಿಕಾರ, ಅಂತಸ್ತು ಗಳಿಸುವುದೇ ಬದುಕಿನ ಪರಮೋಚ್ಛ ಗುರಿ ಎಂದು ಭ್ರಮಿಸಿದ್ದೇವೆ. ಆ ಮೂಲಕ ಅತ್ಯಂತ ಮಹತ್ವದ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಏನೆಲ್ಲ ಗಳಿಸಿದರೂ ಮನಸ್ಸಿಗೆ ಶಾಂತಿ ಇಲ್ಲದಿದ್ದರೆ ಗಳಿಸಿದ್ದೆಲ್ಲ ಇದ್ದೂ ಇಲ್ಲದಂತೆಯೇ ಸರಿ. ಮನಃಶಾಂತಿಯು ಜೀವನದ ಶ್ರೇಷ್ಠ ಗಳಿಕೆ ಎನ್ನುವುದನ್ನು ಮರೆಯಬಾರದು.
ಪರಮಶಾಂತಿಯನ್ನು ನಿರ್ಲಕ್ಷಿಸಿದರೆ ಪರಿಣಾಮ ಬೆಂಕಿಗಿಂತಲೂ ಭೀಕರವಾಗುತ್ತದೆ. ಬೆಂಕಿ ತನ್ನ ಸುತ್ತ ಮುತ್ತ ಇರುವುದನ್ನು ಮಾತ್ರ ಸುಟ್ಟರೆ ಮನಸ್ಸಿನ ಅಲ್ಲೋಲ ಕಲ್ಲೋಲ ಸ್ಥಿತಿ ಎಲ್ಲವನ್ನೂ ಸುಟ್ಟು ಹಾಕುತ್ತದೆ. ಚಿತ್ತವನ್ನು ಒಳ್ಳೆಯದರತ್ತ ಕೇಂದ್ರೀಕರಿಸುತ್ತೇನೆಂಬ ನಿರ್ಧಾರ ಪ್ರಬಲವಾಗಿದ್ದರೆ ಯಾರೂ, ಯಾವುದೂ ನಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ತಿಳುವಳಿಕೆ ಬಂದಾಗಿನಿಂದ ನಮ್ಮನ್ನು ಅಂತರ್ಜಲದಂತೆ ಪೊರೆಯುವ ಮಹಾನ ಚೇತನವೆಂದರೆ ಮನಸ್ಸು. ಇಂಥ ವಿಶಿಷ್ಟ ಚೈತನ್ಯವನ್ನು ಭಿನ್ನ ನೆಲೆಗಳಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಅಧ್ಯಯನಗಳು ಸಂಶೋಧನೆಗಳು ನಡೆದೇ ಇವೆ. ಶಕ್ತಿಯ ಮೂಲ ಇರುವುದು ಮನಸ್ಸಿನಲ್ಲಿ. ಹೀಗಾಗಿ ಜೀವನದ ಶ್ರೇಷ್ಠ ಗಳಿಕೆಯಾದ ಮನಃಶಾಂತಿಯನ್ನು ಗಳಿಸಿ ಮುನ್ನಡೆಯಬೇಕಿದೆ. ಆಗ ಮಾತ್ರ ಎಂಥ ದುರ್ಗಮದ ದಾರಿಯೂ ಸುಗಮವೇ ಆಗುತ್ತದೆ. ಮನಸ್ಸೆಂಬ ಹಣತೆಗೆ ಬೆಲೆ ಬರುವುದು ಅದರಲ್ಲಿ ಅರಿವಿನ ದೀಪ ಬೆಳಗುತ್ತಿದ್ದರೆ ಮಾತ್ರ ಆದ್ದರಿಂದ ಮನಸ್ಸು ಸುಂದರವಾಗಿರಲಿ ಶಾಂತವಾಗಿರಲಿ. ಶಾಂತಿಯೇ ಬದುಕಿನ ನಿಜವಾದ ಸಿರಿ ಸಂಪದ ಅಲ್ಲವೇ?

https://pragati.taskdun.com/bjp-mla-n-y-gopalakrishnaresigncongress-join/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button