Karnataka NewsLatest

ರೋಟಾ ವೈರಸ್ ಎಂದರೇನು? ಈ ವೈರಾಣುವಿನಿ ರೋಗ ಲಕ್ಷಣಗಳೇನು?

ಮಕ್ಕಳಿಗೆ ರೋಟಾ ವೈರೆಸ್ ಲಸಿಕೆ ಹಾಕಿಸಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಮಕ್ಕಳಲ್ಲಿ ಉಂಟಾಗುವ ಮಾರಣಾಂತಿಕ ಅತಿಸಾರ ಭೇದಿಯನ್ನು ರೋಟಾ ವೈರಸ್ ಲಸಿಕೆಯು ತಡೆಗಟ್ಟುತ್ತದೆ. ಆದ್ದರಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುವ ರೋಟಾ ವೈರಸ್ ಲಸಿಕೆಯನ್ನು ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕರೆ ನೀಡಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ(ಆ.೨೮) ನಡೆದ ರೋಟಾ ವೈರಸ್ ಪರಿಚಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರೋಟಾ ವೈರಸ್ ಲಸಿಕೆಯನ್ನು ಹಾಕಿದ ಬಳಿಕ ಅವರು ಮಾತನಾಡಿದರು.
೬ನೇ ವಾರ, ೧೦ನೇ ವಾರ ಮತ್ತು ೧೪ನೇ ವಾರಗಳ ವಯೋಮಾನದ ಮಕ್ಕಳಲ್ಲಿ ೩ ಬಾರಿ ಬಾಯಿಯ ಮೂಲಕ ಈ ಲಸಿಕೆಯನ್ನು ನೀಡಲಾಗುತ್ತದೆ. ಅತಿಸಾರ ಭೇದಿಯ ವಿರುದ್ಧ ರಕ್ಷಣೆ ನೀಡುವ ರೋಟಾ ವೈರಸ್ ಲಸಿಕೆಯು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದರು.

ಉಚಿತ ಲಸಿಕೆ

ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ ಅವರು ಮಾತನಾಡಿ, ಈ ವರೆಗೆ ಲಸಿಕೆಯನ್ನು ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಹಾಕಿಸುತ್ತಿದ್ದರು, ಆದರೆ ಈಗ ಉಚಿತವಾಗಿ ಈ ಲಸಿಕೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಈ ಲಸಿಕೆಯ ಕುರಿತು ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳಾದ ಡಾ.ಎಸ್ ವಿ ಮುನ್ಯಾಳ ಅವರು ಮಾತನಾಡಿ ಆರೋಗ್ಯವಂತ ಮಕ್ಕಳು, ಮುಂದಿನ ಭಾರತದ ಸಂಪತ್ತು ಅತಿಸಾರ ಭೇದಿ ೫ ವರ್ಷದ ಒಳಗಿನ ಮಕ್ಕಳನ್ನು ಕಾಡುವ ಹೆಮ್ಮಾರಿ ರೋಗ ಭಾರತ ದೇಶದಲ್ಲಿ ಅಂದಾಜು ಒಂದು ವರ್ಷದಲ್ಲಿ ೨೦೮ ಮೀಲಿಯನ್ ಮಕ್ಕಳು ಈ ರೋಗದಿಂದ ಬಳಲುವರು, ಅದರಲ್ಲಿ ೧ ಲಕ್ಷದಷ್ಟು ಮಕ್ಕಳು ಸಾವನಪ್ಪುವರು.

ಅಂದರೆ ತಿಂಗಳಲ್ಲಿ ೮೭೨೦ ವಾರದಲ್ಲಿ ೨೮೭ ಗಂಟೆಗೆ ೧೨ ಮಕ್ಕಳು ಭಾರತದಲ್ಲಿ ಸಾವನ್ನಪ್ಪುವರು ಎಂದಾದರೆ ಅತೀಸಾರಬೇದಿಯ ಭಯಾನಕತೆ ಅರಿವಾಗಬಹುದು.
ಅತೀಸಾರ ಭೇದಿಯು ಹೆಚ್ಚಾಗಿ ತಾಯಿಯ ಎದೆಹಾಲು ಕುಡಿಯದ (ಉಣ್ಣದ) ಮಕ್ಕಳಲ್ಲಿ, ಅಪೌಷ್ಠಿಕ ಮಕ್ಕಳಲ್ಲಿ, ಯಾರು ಸ್ವಚ್ಛ ನೀರು ಹಾಗೂ ಆಹಾರ ಸೇವಿಸುವುದಿಲ್ಲವೋ ಆ ಮಕ್ಕಳಲ್ಲಿ, ಹಾಗೂ ದಿನನಿತ್ಯ ವಯಕ್ತಿಕ ಸ್ವಚ್ಛತೆಯ (ಶೌಚಾಲಯ ಉಪಯೋಗದ ನಂತರ ಕೈತೊಳೆಯುವುದು ಇತ್ಯಾದಿ) ಕೊರತೆಯಿರುವ ಮಕ್ಕಳಲ್ಲಿ ಮತ್ತು ಯಾವ ಮಕ್ಕಳಲ್ಲಿ ರೋಟಾ ವೈರಸ್ ಲಸಿಕೆ ಪಡೆದಿರುವುದಿಲ್ಲವೋ ಅವರಲ್ಲಿ ಹೆಚ್ಚಾಗಿ ಕಂಡುಬರುವುದು.

ಈ ರೋಟಾ ವೈರಸ್ ಎಂದರೇನು? ಈ ವೈರಾಣುವಿನಿ ರೋಗ ಲಕ್ಷಣಗಳೇನು?

ಈ ರೋಟಾ ವೈರಸ್ ಎನ್ನುವ ವೈರಾಣು ಅತೀ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಅತೀಸಾರ ಭೇದಿಯನ್ನುಂಟು ಮಾಡುವ ಸೂಕ್ಷ್ಮಾಣು ಜೀವಿ.
ಸೋಂಕು ತಗುಲಿದ ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚು ಸಾರಿ ನೀರು ನೀರಾದ ಭೇದಿ,ವಾಂತಿ, ಹೊಟ್ಟನೋವು ಹಾಗೂ ಜ್ವರ ಉಂಟು ಮಾಡಬಹುದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ ದೇಹದಲ್ಲಿ ನಿರ್ಜಲಿಕರಣ(ದೇಹದಿಂದ ಅಂಶ ಬಸಿದುಹೋಗುವುದು) ಉಂಟಾಗಿ ಮಗು ಮರಣಕೂಡಾ ಹೊಂದಬಹುದು. ರೋಗದಿಂದ ಬಳಲುತ್ತಿರುವ ಮಗುವಿನ ಭೇದಿಯಲ್ಲಿ (ಮಲದಲ್ಲಿ)ರುವ ವೈರಾನುಗಳು ಕಲುಷಿತ ನೀರು, ನೋಣಗಳ ಮೂಲಕ ಆಹಾರದಲ್ಲಿ ಅಥವಾ ಸ್ವಚ್ಛವಾಗಿ ಕೈತೊಳೆಯದೇ ಇದ್ದಲ್ಲಿ ಆರೋಗ್ಯವಂತ ಮಕ್ಕಳ ಹೊಟ್ಟಯನ್ನು ಸೇರಿದಾಗ ಆ ಮಗುವಿಗೂ ಕೂಡಾ ರೋಗ ಉಂಟಾಗಬಹುದು.

ಮಕ್ಕಳಲ್ಲಿ ಅತೀಸಾರ ಭೇದಿ ರೋಟಾ ವೈರಸ್ , ಬ್ಯಾಕ್ಟೀರಿಯಾ ಅಥವಾ ಪ್ರೋಟೂಜೊವಾಗಳಿಂದಲೂ ಉಂಟಾಗಬಹುದು. ಆದರೆ ಈ ರೋಗಾಣುಗಳಿಗೆ ನಿರ್ಧಿಷ್ಟ ಚಿಕಿತ್ಸೆ ಲಭ್ಯವಿರುವುದು. ಆದರೆ ರೋಟಾ ವೈರಾಣುವಿಗೆ ನಿರ್ಧಿಷ್ಠವಾದ ಚಿಕಿತ್ಸೆ ಇರುವುದಿಲ್ಲ ಆದರೆ ರೋಟಾವೈರಸ್ ಲಸಿಕೆಯಿಂದ ಪರಿಣಾಮಕಾರಿಯಾಗಿ ರೋಗ ಬರುವುದನ್ನು ತಡೆಗಟ್ಟಬಹುದು.

೦-೨ ವರ್ಷದ ಮಕ್ಕಳಿಗೆ ರೋಟಾವೈರಸ್ ಸೋಂಕು ಸಾಮಾನ್ಯವಾಗಿ ಕಂಡುಬರುವುದು . ಅತೀ ಹೆಚ್ಚು ಪ್ರಮಾಣದಲ್ಲಿ ಅಂದಾಜು ೪೦% ದಷ್ಟು ಮಕ್ಕಳಲ್ಲಿ ರೋಟಾ ವೈರಸ್ ಭೇದಿ ಕಂಡುಬರುವುದು ಎಂದು ತಿಳಿಸಿದರು.

9 ಮಾರಕ ರೋಗಗಳಿಗೆ ಲಸಿಕೆ

ಸಾರ್ವಜನಿಕ ಲಸಿಕಾ ಕಾರ್ಯಕ್ರಮದಲ್ಲಿ ೯ ಮಾರಕ ರೋಗಗಳಿಗೆ ಲಸಿಕೆಯನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಇನ್ನು ಮಕ್ಕಳಲ್ಲಿ ಅತಿಸಾರ ಭೇದಿ ಶಿಗೆಲ್ಲಾರ್ ಬೆಸಿಲ್ಲಾ ಎನ್ನುವ ಬ್ಯಾಕ್ಟಿರಿಯಾ, ಅಮೇಬಿಕ ಪ್ಯಾರಾಸೈಟ್ ಹಾಗೂ ರೋಟಾ ವೈರಸ್‌ನಿಂದ ಬರುತ್ತದೆ. ಬ್ಯಾಕ್ಟಿರಿಯಾ ಮತ್ತು ಪ್ಯಾರಾಸೈಟಗಳಿಗೆ ಪರಿಣಾಮಕಾರಿ ಔಷದಿಗಳಿವೆ. ಆದರೆ ರೋಟಾ ವೈರಸ್‌ಗೆ ಲಸಿಕೆ ಮಾತ್ರ ಪರಿಣಾಮಕಾರಿಯಾಗಿದೆ.
ಈಗಾಗಲೇ ೯೬ ದೇಶಗಳಲ್ಲಿ ಹಾಗೂ ನಮ್ಮ ದೇಶದ ೧೧ ರಾಜ್ಯಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದ್ದು, ಇದು ಅತ್ಯಂತ ಸುಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯಾಗಿದೆಯೆಂದು ಡಾ.ಐ.ಪಿ ಗಡಾದ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಾರ್ಯಕ್ರಮಾಧಿಕಾರಿಗಳು, ಬೆಳಗಾವಿ ಇವರು ತಿಳಿಸಿದರು.
ಈ ಸಂದರ್ಬದಲ್ಲಿ ಡಾ.ಶೈಲಜಾ ತಮ್ಮನ್ನವರ ಅಪರ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳು, ಡಾ.ಚಾಂದನಿ ದೇವಡಿ ಜಿಲ್ಲಾ ಕುಷ್ಠರೋಗ ಅಧಿಕಾರಿಗಳು, ಡಾ. ಸಂಜಯ ಡುಮ್ಮಗೋಳ ತಾಲೂಕಾ ಆರೋಗ್ಯಾಧಿಕಾರಿಗಳು, ಡಾ. ಗುರುನಾಥ ಕಡಬುರ ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಸವರಾಜ ಯಲಿಗಾರ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button