ಬಿಜೆಪಿ ಕತ್ತು ಹಿಸುಕುತ್ತಾ ಕುಮಾರಸ್ವಾಮಿ ಋಣಮುಕ್ತ ಕಾಯ್ದೆ?
ಎಂ.ಕೆ.ಹೆಗಡೆ, ಬೆಳಗಾವಿ –
ಜಾತ್ಯತೀತ ಜನತಾದಳ 2018ರ ಚುನಾವಣೆಗೂ ಮುನ್ನ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಎಲ್ಲ ಸಾಲಗಳನ್ನೂ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಚುನಾವಣೆಯಲ್ಲಿ ಕೇವಲ 37 ಸ್ಥಾನ ಗೆದ್ದರೂ ಕಾಂಗ್ರೆಸ್ ಜೊತೆ ಸೇರಿ ಅಧಿಕಾರಕ್ಕೇರಿತು.
ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸುವ ಅನಿವಾರ್ಯತೆ ಕುಮಾರಸ್ವಾಮಿಗೆ ಬಂದಿತ್ತು. ಆದರೆ ಮೈತ್ರಿ ಸರಕಾರವಾಗಿದ್ದರಿಂದ ಆ ನೆಪದಲ್ಲಿ ವಿಳಂಬ ಮಾಡತೊಡಗಿದರು. ಬಿಜೆಪಿ ಇದಕ್ಕೆ ಅವಕಾಶ ನೀಡದೆ ರಾಜ್ಯದ್ಯಂತ ಪ್ರತಿಭಟನೆಗಿಳಿಯಿತು. ಚುನಾವಣೆಗೆ ಮುನ್ನ ನೀಡಿದ್ದ ಭರವಸೆ ಈಡೇರಿಸಿ ಎಂದು ಪಟ್ಟು ಹಿಡಿಯಿತು.
ಸಂಕಷ್ಟಕ್ಕೆ ಸಿಲುಕಿದ ಕುಮಾರಸ್ವಾಮಿ ರೈತರ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಹತ್ತಾರು ಅಡ್ಡಿ ಆತಂಕ ಎದುರಿಸಿ ಯೋಜನೆ ಜಾರಿಗೆ ತಂದರು. ಇನ್ನೂ ಪೂರ್ಣ ಪ್ರಮಾಣದಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ. ಅದನ್ನು ಪೂರ್ಣಗೊಳಿಸುವ ಹೊಣೆ ಮುಂಬರುವ ಬಿಜೆಪಿ ಸರಕಾರದ ಹೆಗಲಿಗೆ ಬಿದ್ದಿದೆ.
ಏನಿದು ಋುಣಮುಕ್ತ ಕಾಯ್ದೆ?
ರೈತರ ಸಾಲಮನ್ನಾ ಯೋಜನೆ ಜಾರಿಗೊಳಿಸುವುದೇ ಸವಾಲಾಗಿರುವಾಗ ಕುಮಾರಸ್ವಾಮಿ ಸರಕಾರ ಪತನವಾಗುವ ಮುನ್ನ ಮತ್ತೊಂದು ಕಾಯ್ದೆ ಜಾರಿಗೆ ತಂದಿದೆ. ಕುಮಾರಸ್ವಾಮಿ ನೀಡಿರುವ ಮಾಹಿತಿ ಪ್ರಕಾರ ಈ ಕಾಯ್ದೆಗೆ ರಾಷ್ಟ್ರಪತಿಗಳು ಮೊನ್ನೆ ಜುಲೈ 16ರಂದು ಅಂಕಿತ ಹಾಕಿದ್ದಾರೆ. ಇದು ಬರಲಿರುವ ಯಡಿಯೂರಪ್ಪ ಸರಕಾರಕ್ಕೆ ಉಗುಳಲೂ ಆಗದ, ನುಂಗಲೂ ಆಗದ ತುತ್ತಾಗುವುದು ಖಚಿತ.
ಹಾಗಾದರೆ ಏನಿದು ಋುಣ ಮುಕ್ತ ಕಾಯ್ದೆ? ಋುಣ ಮುಕ್ತ ಕಾಯ್ದೆಯ ಸಮಗ್ರ ವಿವರ ಇನ್ನಷ್ಟೆ ಬರಬೇಕಿದೆ. ಆದರೆ ವಾರ್ಷಿಕ 1.20ಲಕ್ಷ ರೂ. ಗಿಂತ ಕಡಿಮೆ ಆದಾಯವಿರುವವರಿಗೆ ಅನ್ವಯವಾಗುವ ಕಾಯ್ದೆ ಇದು. ಅವರನ್ನು ಸಂಪೂರ್ಣ ಋಣಮುಕ್ತರನ್ನಾಗಿಸುವುದೇ ಈ ಕಾಯ್ದೆಯ ಜೀವಾಳ.
ಇಂತಹ ಬಡವರು ಯಾರಿಂದಲೇ ಸಾಲ ಪಡೆದಿರಲಿ, ಅವೆಲ್ಲ ಸಂಪೂರ್ಣ ಮನ್ನಾ ಆಗಲಿವೆ. ಸಾಹುಕಾರ ಸಾಲ, ಕೈ ಸಾಲ, ಚಿನ್ನ ಅಡವಿಟ್ಟು ಪಡೆದಿರುವ ಸಾಲ, ಬಡ್ಡಿ, ಚಕ್ರಬಡ್ಡಿ ಸಾಲ… ಯಾವುದೇ ಇರಲಿ. ಅವನ್ನೆಲ್ಲ ತೀರಿಸಬೇಕಿಲ್ಲ. ತನ್ನಿಂದ ತಾನೆ ತೀರಿಹೋಗಲಿದೆ. ಇದಕ್ಕಾಗಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ದಾಖಲೆ ಇದ್ದರೆ ಸಲ್ಲಿಸಬಹುದು, ಇಲ್ಲದಿದದರೂ ಅರ್ಜಿ ಹಾಕಿಕೊಳ್ಳಬಹುದು.
ಕೊಟ್ಟವ ಕೋಡಂಗಿ, ಇಸ್ಗೊಂಡವ ಈರಭದ್ರ
ಹಾಗಂತ ಅಧಿಕೃತವಾಗಿ ರಿಸರ್ವ್ ಬ್ಯಾಂಕ್ ನೋಂದಾವಣಿ ಮಾಡಿಕೊಂಡು ವ್ಯವಹಾರ ಮಾಡುವ ಸಂಸ್ಥೆಗಳಲ್ಲಿ ಪಡೆದಿರುವ ಸಾಲ ಮನ್ನಾ ಆಗುವುದಿಲ್ಲ. ಒಂದರ್ಥದಲ್ಲಿ ಅನಧಿಕೃತವಾಗಿ ಪಡೆದಿರುವ ಸಾಲಗಳೆಲ್ಲವೂ ಮನ್ನಾ ಆಗಲಿವೆ.
ಹಾಗಾಗದರೆ ಸಾಲ ಕೊಟ್ಟವರಿಗೆ ಸರಕಾರ ಮರುಪಾವತಿ ಮಾಡುತ್ತಾ? ಖಂಡಿತ ಇಲ್ಲ. ಕೊಟ್ಟವ ಕೋಡಂಗಿ, ಇಸ್ಗೊಂಡವ ಈರಭದ್ರ ಎನ್ನುವ ಯೋಜನೆ ಇದು. ಕೊಟ್ಟವರು ನೀರುಬಿಟ್ಟಂತೆಯೇ. ಅಂದರೆ ಅನಧಿಕೃತವಾಗಿ ಲೇವಾದೇವಿ ವ್ಯವಹಾರ ಮಾಡುವವರಿಗೆ ಸರಕಾರ ಕೊಟ್ಟ ಭರ್ಜರಿ ಏಟು ಇದು.
ಈ ಹೊಸ ಕಾಯ್ದೆಯನ್ನು ಕುಮಾರಸ್ವಾಮಿ ಅಧಿಕಾರದಿಂದ ಕೆಳಕ್ಕಿಳಿಯುವ ಮುನ್ನಾ ದಿನ ಜಾರಿಗೆ ತಂದಿದ್ದಾರೆ. ಅಂದರೆ ಮುಂಬರುವ ಸರಕಾರದ ಮೇಲಿದೆ ಇದನ್ನು ಜಾರಿಗೆ ತರುವ ಜವಾಬ್ದಾರಿ. ಇದನ್ನು ಜಾರಿಗೊಳಿಸುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆ ಮೂಡಿದೆ. ಇದರಿಂದ ಆಗುವ ಅಪಾಯಗಳ ಕುರಿತು ಕಾಯ್ದೆಯಲ್ಲಿ ಯೋಚಿಸಲಾಗಿದೆಯೇ? ಅಪಾಯ ತಡೆಯಲು ತೆಗೆದುಕೊಂಡ ಕ್ರಮಗಳೇನು ಎನ್ನುವ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ) ([email protected])
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ