ಐತಿಹಾಸಿಕ ಕಿತ್ತೂರಿಗೆ ಇದೇನು ದೃಷ್ಟಿ ಬಿಂದುವೇ?
ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರು –
ಐತಿಹಾಸಿಕ ಕಿತ್ತೂರು ಪಟ್ಟಣಕ್ಕೆ ತಾಲೂಕು ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕಿತ್ತೂರು ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ದಶಕದ ಹಿಂದೆ ತೀವ್ರ ಸ್ವರೂಪದ ಹೋರಾಟ ನಡೆಸಿದ್ದರು. ಹೋರಾಟದ ಪರಿಣಾಮವಾಗಿ ತಾಲೂಕು ಕೇಂದ್ರ ಸ್ಥಾನಮಾನ ನೀಡುವ ಭರವಸೆ ನೀಡಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ಸರಕಾರ ಇಲ್ಲಿಗೆ ವಿಶೇಷ ತಹಸೀಲ್ದಾರ ಕಚೇರಿ ನೀಡಿತು.
ಆಗ ಸರಕಾರಿ ಆಸ್ಪತ್ರೆಯ ಹಳೆಯ ಕಟ್ಟಡದ ಒಂದು ಭಾಗವನ್ನು ಸ್ವಲ್ಪ ನವೀಕರಿಸಿ ವಿಶೇಷ ತಹಶೀಲ್ದಾರ ಕಚೇರಿಯನ್ನಾಗಿ ಮಾಡಲಾಯಿತು. ಕಾಲಾನಂತರದಲ್ಲಿ ಅಂದಿನ ಶಾಸಕ ಸುರೇಶ ಮಾರೀಹಾಳ ಉಪನೋಂದಣಾಧಿಕಾರಿ ಕಚೇರಿಯನ್ನು ಸಹ ಇಲ್ಲಿಗೆ ತಂದರು. ಮತ್ತೊಂದು ಭಾಗವನ್ನು ದುರಸ್ತಿ ಮಾಡಿಕೊಂಡು ಸಾರ್ವಜನಿಕರ ಸೇವೆಗೆ ಉಪನೊಂದಣಿ ಕಚೇರಿಯೂ ತಲೆ ಎತ್ತಿ ನಿಂತಿತು. ಈಗ ಪೂರ್ಣ ಪ್ರಮಾಣದ ದಂಡಾಧಿಕಾರಿಗಳ ಕಛೇರಿಯಾಗಿ ಮಾರ್ಪಟ್ಟಿದೆ.
ಇದರ ಇನ್ನೊಂದು ಭಾಗ ಮಾತ್ರ ಪಾಳು ಬಿದ್ದು ಐತಿಹಾಸಿಕ ಕಿತ್ತೂರಿಗೆ ದೃಷ್ಟಿ ಬಿಂದುವಿನಂತೆ ನಿಂತುಕೊಂಡಿದೆ.
ಪಟ್ಟಣದ ತಹಸೀಲ್ದಾರ ಕಾರ್ಯಲಯದ ಮುಂದೆ ಹಳೆಯ ಸರಕಾರಿ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡು ಪಾಳು ಬಿದ್ದಿದೆ. ಪ್ರತಿದಿನ ಸುರಿಯುವ ಮಳೆಗೆ ಯಾವಾಗ ಬೀಳುತ್ತದೆ ಎಂಬ ಭಯದಲ್ಲಿ ಪ್ರತಿನಿತ್ಯ ಕಛೇರಿಗೆ ಬರುವ ಜನರಿದ್ದಾರೆ. ಅಧಿಕಾರಿಗಳೂ ಕಟ್ಟಡವನ್ನು ತೆರವುಗೊಳಿಸದೆ ತಾನಾಗಿಯೇ ಬೀಳುವುದಕ್ಕೆ ಕಾಯುತ್ತಿರುವಂತಿದೆ.
ಕಟ್ಟಡದ ಇತಿಹಾಸ
ಹಳೆಯ ಆರೋಗ್ಯ ಕೇಂದ್ರ ಕಟ್ಟಡದ ಒಂದು ಭಾಗ ಸಂಪೂರ್ಣವಾಗಿ ಪಾಳು ಬಿದ್ದಿದೆ. ಎಲ್ಲೆಂದರಲ್ಲಿ ಕಿತ್ತು ಬಿದ್ದಿರುವ ಸಿಮೆಂಟ್ ಮೇಲ್ಚಾವಣಿ, ಉಸ್ತುವಾರಿಯಿಲ್ಲದ ಪರಿಣಾಮ ಎಲ್ಲೆಂದರಲ್ಲಿ ಬೆಳೆದಿರುವ ಕಸ, ಕಂಟಿಗಳು. ಇದರಿಂದಾಗಿ ಪಾಳು ಕಟ್ಟಡ ಭೂತ ಬಂಗಲೆಯಂತಾಗಿದೆ.
ಈ ಹಳೆಯ ಕಟ್ಟಡದಲ್ಲಿ ಮೊದಲು ಸರಕಾರಿ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿತ್ತು. ನಿತ್ಯ ಇಲ್ಲಿಗೆ ನೂರಾರು ರೋಗಿಗಳು ಆಗಮಿಸುತ್ತಿದ್ದರು. ವ್ಯವಸ್ಥಿತ ಸಿಬ್ಬಂದಿಯೂ ಇದ್ದರು. ಮೊದಲಿದ್ದ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿತು.
ಪರಿಣಾಮ ಆರೋಗ್ಯ ಕೆಂದ್ರಕ್ಕೆ ಬೇರೆ ಸ್ಥಳವನ್ನು ನಿಗದಿ ಮಾಡಿ 2005ರಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಯಿತು. ನೂತನ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಗೊಂಡ ನಂತರ ಹಳೆಯ ಕಟ್ಟಡ ಪಾಳು ಬಿದಿದ್ದೆ.
ಈಗ ಇಲ್ಲಿ ಪ್ರತಿದಿನ ನೂರಾರು ಜನರು ತಮ್ಮ ಕೆಲಸ ಕಾರ್ಯಕ್ಕೆ ಬರುತ್ತಾರೆ. ಆದರೆ ಅದೇ ಶಿಥಿಲಾವಸ್ಥೆಯಲ್ಲಿರುವ ಕಟ್ಟದ ಕೆಳಗೆ ವೃದ್ದರು, ಚಿಕ್ಕ ಮಕ್ಕಳು ಸೇರಿದಂತೆ ಎಲ್ಲ ಜನರು ನಿಲ್ಲುತ್ತಾರೆ. ಆದರೆ ಈಗ ಸುರಿಯುವ ಮಳೆಗೆ ಕಟ್ಟಡ ಯಾವಾಗ ಬಿಳುತ್ತದೆಯೋ ಎನ್ನುವ ಆತಂಕ ಉಂಟಾಗಿದೆ.
ಇಲ್ಲಿ ರಾತ್ರಿ ಹೊತ್ತಿನಲ್ಲಿ ಕಿಡಿಗೇಡಿಗಳ, ಕುಡುಕರ ಹಾವಳಿ ಹೆಚ್ಚಾಗಿದೆ. ಹಾಳು ಬಿದ್ದ ಕಟ್ಟಡದ ಒಳಗಡೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಹಳೆ ಕಟ್ಟಡ ತೆರೆವುಗೊಳಿಸಿದಲ್ಲಿ ಮುಂದೆ ಆಗಬಹುದಾದ ಅಪಾಯವನ್ನು ತಡೆಗಟ್ಟಬಹುದು.
ಇದನ್ನೂ ಓದಿ – ನಾಗರ ಪೂಜೆಗೆ ಶುಭ ಸಮಯ ಯಾವುದು?
ಈಗಾಗಲೆ ಈ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು, ಆದಷ್ಟು ಬೇಗ ತೆರೆವುಗೊಳಿಸಲು ಕ್ರಮ ಕೈಗೊಳಲಾಗುವುದು.-ಪ್ರವೀಣ ಜೈನ್, ದಂಡಾಧಿಕಾರಿ ಕಿತ್ತೂರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ