ಸಾಹಿತಿಗಳನ್ನು ಕಾಂಗ್ರೆಸ್ ಕಚೇರಿಗೆ ಕರೆದರೆ ತಪ್ಪೇನಿದೆ: ಡಿಸಿಎಂ ಡಿ. ಕೆ. ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷದ ಕಚೇರಿಗೆ ಸಾಹಿತಿಗಳನ್ನು ಕರೆದದ್ದು ನಾನೇ, ಅದರಲ್ಲಿ ತಪ್ಪೇನಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಅಕಾಡೆಮಿ ಅಧ್ಯಕ್ಷರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು.
ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು “ಸಾಹಿತಿಗಳು ರಾಜಕಾರಣಿಗಳು ಆಗಬಾರದು ಅಂತೇನಿಲ್ಲವಲ್ಲ. ಅಕಾಡೆಮಿ ಅಧ್ಯಕ್ಷರ ಸಭೆ ನಾನೇ ಕರೆದಿದ್ದು, ಅದರಲ್ಲೇನಿದೆ. ಇದು ಸರ್ಕಾರದ ನೇಮಕ. ಹೀಗಾಗಿ ಎಲ್ಲಿ ಬೇಕಾದರೂ ಕರೆಸಿಕೊಳ್ಳಬಹುದು. ಎಲ್ಲಿ ಬೇಕಾದರೂ ಸಭೆ ಮಾಡಬಹುದು” ಎಂದು ಹೇಳಿದರು.
“ಪ್ರಾಧಿಕಾರಗಳು ಇಂಡಿಪೆಂಡೆಂಡ್ ಬಾಡಿಗಳಲ್ಲ, ಆಲ್ ಆರ್ ಪೊಲಿಟೀಷಿಯನ್ಸ್, ಅವರದ್ದೇ ಆದ ಸಿದ್ಧಾಂತಗಳನ್ನು ಇಟ್ಟುಕೊಂಡು ಅವರೂ ರಾಜಕೀಯ ಮಾಡುತ್ತಾರೆ. ಅದನ್ನು ಕೆಲವೊಬ್ಬರು ಹೇಳಿಕೊಳ್ಳದೇ ಇರಬಹುದು. ನಾನು ಕರೆದಾಗ, ಇಷ್ಟ ಇದ್ದೋರು ಬಂದಿದ್ದಾರೆ. ಕೆಲವರು ಬಂದಿಲ್ಲ” ಎಂದರು.
“ಇದು ನಿಮಗೆ (ಮಾಧ್ಯಮದವರಿಗೆ) ತಪ್ಪು ಎನಿಸಬಹುದು. ಸಾಹಿತಿಗಳೂ ರಾಜಕಾರಣಿಗಳೇ, ಅವರೂ ರಾಜಕಾರಣಕ್ಕೆ ಬರಬಹುದು. ನಿಮ್ಮನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳುವುದಿಲ್ಲವೇ, ನೀವು ಬೆಳಗಿಂದ ಸಾಯಂಕಾಲದ ತನಕ ನಮ್ಮ ಹಿಂದೆ ಓಡಾಡುವುದಿಲ್ಲವೇ? ನಮಗೋಸ್ಕರ ಬಡಿದಾಡೋದಿಲ್ಲವೇ?” ಎಂದು ಹೇಳಿದರು.
ಕುಡಿಯುವ ನೀರಿನ ಬೆಲೆ ಏರಿಕೆ ಅನಿವಾರ್ಯ
ಬೆಲೆ ಏರಿಕೆ ಬಗ್ಗೆ ಕೇಳಿದಾಗ “ಬೆಂಗಳೂರಿನಲ್ಲಿ ಕುಡಿಯುವ ನೀರಿನ ಶುಲ್ಕ ಏರಿಕೆಯನ್ನು 14 ವರ್ಷದಿಂದ ಮಾಡಿಲ್ಲ. ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಿದೆ” ಎಂದು ಹೇಳಿದರು.
ಪ್ರತಿ ವರ್ಷ ನಷ್ಟ ಆಗುತ್ತಲೇ ಇದೆ. ಆದರೆ ಬೆಂಗಳೂರಿಗೆ ಕುಡಿಯುವ ನೀರು ಬೇಕು. ನೀರಿನ ದರ ಹೆಚ್ಚು ಮಾಡಬೇಕಾ ಬೇಡವಾ ನೀವೇ ಹೇಳಿ. ಬಿಜೆಪಿಯವರು ಇದ್ದಾಗ ವಿದ್ಯುತ್ ಬೆಲೆ ಜಾಸ್ತಿ ಮಾಡಿದರು. ನಾವು ಬಂದು ಕಡಿಮೆ ಮಾಡಿದೆವು. ಕಡಿಮೆ ಮಾಡಿದರೆ ಮಾತೇ ಆಡುವುದಿಲ್ಲ . ದರ ಹೆಚ್ಚಿಸಿದರೆ ಮಾತನಾಡುತ್ತೀರಿ. 400 ರೂ ಇದ್ದ ಗ್ಯಾಸ್ ಸಿಲಿಂಡರ್ 1 ಸಾವಿರ ಆಯಿತು. 75 ರೂ ಇದ್ದ ಪೆಟ್ರೋಲ್ 100 ರೂ ಆಯಿತು. 3 ರೂ ಜಾಸ್ತಿನಾ ಅಥವಾ 30 ರೂ ಜಾಸ್ತಿನಾ” ಎಂದು ಮರು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ