
ಪಕ್ಷೇತರರೆಂದರೆ ಬಿಜೆಪಿ, ಕಾಂಗ್ರೆಸ್, ಎಂಇಎಸ್ ಬಂಡಾಯ ಎಲ್ಲವೂ ಸೇರಿದೆ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ನಡೆದಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ರಾಜ್ಯದ ಗಮನ ಸೆಳೆದಿದೆ. ಸೆಪ್ಟಂಬರ್ 6ರಂದು ಮತ ಎಣಿಕೆ ನಡೆಯಲಿದೆ.
ಸಮಯಾಭಾವದಿಂದಾಗಿ ರಾಜಕೀಯ ಪಕ್ಷಗಳು ಸರಿಯಾಗಿ ಪ್ಲ್ಯಾನ್ ಮಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಮೊದಲಬಾರಿಯಾಗಿದ್ದರಿಂದ ಇದು ಸಹಜ. ಅನೇಕ ಕಡೆಗಳಲ್ಲಿ ಲೆಕ್ಕಾಚಾರ ತಪ್ಪಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷಗಳು ಎಡವಿವೆ. ಬಿಜೆಪಿ 56 ವಾರ್ಡ್ಗಳಲ್ಲಿ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ತೀರಾ ಒತ್ತಡದಿಂದಾಗಿ ಗೊಂದಲಕ್ಕೊಳಗಾಬೇಕಾಯಿತು. ಕೆಲವು ಒಳ್ಳೆಯ ಅಭ್ಯರ್ಥಿಗಳೂ ಹೊರಗುಳಿಯಬೇಕಾಯಿತು, ಬಂಡಾಯಗಾರರ ಸಂಖ್ಯೆ ಹೆಚ್ಚಾಗಿದೆ.
ಕಾಂಗ್ರೆಸ್ ಬಂಡಾಯದ ಭೀತಿಯಿಂದಾಗಿ ಅನೇಕ ಕಡೆ ಬಿ ಫಾರ್ಮ್ ನೀಡುವ ಗೋಜಿಗೇ ಹೋಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕೆಲವೆಡೆ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಯಾರಿಗೆ ಬಹುಮತ?
ಇಂಟಲಿಜನ್ಸ್ ರಿಪೋರ್ಟ್ ಹಾಗೂ ಕೆಲವು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರದ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಪಕ್ಷೇತರರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ. ಎಂಇಎಸ್ ಅಭ್ಯರ್ಥಿಗಳ ಸಂಖ್ಯೆ ಕೂಡ ಹೆಚ್ಚಿರುವುದಿಲ್ಲ.
ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 20 -22 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 10-12 ಸ್ಥಾನಗಳಲ್ಲಿ ವಿಜಯಿಯಾಗಲಿದೆ. 28 -30 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದಾರೆ. ಪಕ್ಷೇತರರೆಂದರೆ ಬಿಜೆಪಿ, ಕಾಂಗ್ರೆಸ್, ಎಂಇಎಸ್ ಬಂಡಾಯ ಎಲ್ಲವೂ ಸೇರಿದೆ.
ಇಂತಹ ಅತಂತ್ರ ಸ್ಥಿತಿಯಲ್ಲಿ ಮೇಯರ್ ಪಟ್ಟ ಯಾರಿಗೆ ಸಿಗಲಿದೆ? ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಸಹಜವಾಗಿ ಪೈಪೋಟಿ ಉಂಟಾಗಲಿದೆ. ಯಾವುದೇ ಪಕ್ಷ ಸ್ವತಂತ್ರವಾಗಿ ಆಡಳಿತಕ್ಕೇರಲು ಸಾಧ್ಯವಿಲ್ಲ.
ಬಿಜೆಪಿ ಕನಿಷ್ಟ 8 -10 ಪಕ್ಷೇತರರನ್ನು ತನ್ನತ್ತ ಸೆಳೆಯಬೇಕಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಂಇಎಸ್ ಬಂಡಾಯಗಾರರಿಗೆ ಬಲೆ ಬೀಸಬೇಕಿದೆ. ಆಪರೇಶನ್ ಕಮಲ ನಡೆಸಬೇಕಾಗುತ್ತದೆ. ಇದು ಬಿಜೆಪಿಗೆ ಅಸಾಧ್ಯದ ಮಾತೇನಲ್ಲ.
ಕಾಂಗ್ರೆಸ್, ಎಂಇಎಸ್ ಸೇರಿದಂತೆ ಪಕ್ಷೇತರರ ಸಂಪೂರ್ಣ ಬೆಂಬಲ ಪಡೆದು ಆಡಳಿತ ನಡೆಸಲು ಮುಂದಾಗಬಹುದು. ಕನಿಷ್ಠ 20 ಪಕ್ಷೇತರರು ಕಾಂಗ್ರೆಸ್ ಗೆ ಬೆಂಬಲ ನೀಡಲು ಮುಂದಾಗಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ – ಶಿವಸೇನೆ ಒಂದಾದಂತೆ ಅದೇ ಸೂತ್ರವನ್ನು ಬಳಸಿ ಎಂಇಎಸ್ ಜೊತೆ (ಪಕ್ಷೇತರರು ಎನ್ನುವ ಹೆಸರಿನಲ್ಲಿ) ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ರಾಜ್ಯದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬೇಕಾದೀತು.
ಇನ್ನು ಎಂಇಎಸ್ ದೂರವಿಡಬೇಕೆನ್ನುವ ಕಾರಣಕ್ಕಾಗಿ ಕನ್ನಡ ಸಂಘಟನೆಗಳ ಮಧ್ಯಸ್ಥಿಕೆಯಲ್ಲಿ, ಕಾಂಗ್ರೆಸ್ -ಬಿಜೆಪಿ ಒಂದಾಗಿ ಅಧಿಕಾರದ ಗದ್ದುಗೆ ಏರಿದರೂ ಆಶ್ಚರ್ಯವಿಲ್ಲ. ಎಂಇಎಸ್ ಸ್ವತಂತ್ರವಾಗಿ ಅಧಿಕಾರ ನಡೆಸುವುದು ಕಷ್ಟ. ವಿವಿಧ ಪಕ್ಷಗಳ ಬಂಡಾಯಗಾರರು (ಬಹುಕತೇಕರು ಅಪ್ಪಟ ಕನ್ನಡ ಹೋರಾಟಗಾರರು) ಎಂಇಎಸ್ ಗೆ ಬೆಂಬಲ ನೀಡುವ ಸಾಧ್ಯತೆ ಕಡಿಮೆ.
ಒಟ್ಟಾರೆ, ಇದೇ ಮೊದಲ ಬಾರಿಗೆ ಭಾಷೆ ಬಿಟ್ಟು ನಡೆದಿರುವ ಚುನಾವಣೆ ಫಲಿತಾಂಶ ಕುತೂಹಲ ಮೂಡಿಸಿದೆ. ಇದು ಮುಂದಿನ ಚುನಾವಣೆಗಳಿಗೆ ಪಾಠವಾಗುವ ಜೊತೆಗೆ, ಎಂಇಎಸ್ ನಿರ್ನಾಮಕ್ಕೂ ಮುನ್ನುಡಿಯಾಗಬಹುದು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ 4000 ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಖಾಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ