Karnataka NewsLatest

ಬಿಜೆಪಿಯ 3 ಲಕ್ಷ ಮತದಾರರು ಎಲ್ಲಿ ಹೋದರು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವಿನ ಅಂತರದ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಗೆಲುವಿನ ಅಂತರ ಕುಸಿದಿರುವುದು ಒಂದು ಕಡೆಯಾದರೆ, ಬಿಜೆಪಿಯ ಸುಮಾರು 3 ಲಕ್ಷ ಮತದಾರರು ಎಲ್ಲಿ ಹೋದರು ಎನ್ನುವ ಗಂಭೀರ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

2019ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ ಅಂಗಡಿ 7,61,991 ಮತ ಪಡೆದಿದ್ದರು. ಈ ಬಾರಿ ಮಂಗಲಾ ಅಂಗಡಿಗೆ 4,40,327   ಮತಗಳು ಬಂದಿವೆ. ಅಂದರೆ 3.20 ಲಕ್ಷ ಮತ ಎಲ್ಲಿಗೆ ಹೋಯಿತು? ಪಕ್ಷೇತರ (ಎಂಇಎಸ್) ಅಭ್ಯರ್ಥಿ ಸುಮಾರು ಒಂದು ಲಕ್ಷ ಹೆಚ್ಚುವರಿ ಮತ ಪಡೆದಿದ್ದಾರೆ. ಇದರಲ್ಲಿ ಶೇ.75ರಷ್ಟು ಬಿಜೆಪಿ ಮತಗಳು ಎಂದುಕೊಳ್ಳೋಣ. ಕಾಂಗ್ರೆಸ್ ನ ವಿ.ಎಸ್.ಸಾಧುನವರ್ ಕಳೆದ ಚುನಾವಣೆಯಲ್ಲಿ 3,70,678 ಮತ ಪಡೆದಿದ್ದರು. ಈ ಬಾರಿ ಸತೀಶ್ ಜಾರಕಿಹೊಳಿ 4,35,087 ಮತ ಪಡೆದಿದ್ದಾರೆ. ಅಂದರೆ ಸುಮಾರು 65 ಸಾವಿರ ಬಿಜೆಪಿ ಮತಗಳು ಕಾಂಗ್ರೆಸ್ ಗೆ ಹೋಗಿವೆ ಎಂದುಕೊಳ್ಳೋಣ. ಇದೆಲ್ಲ ನಿಜವಾದಲ್ಲಿ, ಎಲ್ಲ ಸೇರಿಸಿದರೂ 1.40 ಲಕ್ಷದಷ್ಟು ಮತಗಳು ಅನ್ಯರ ಪಾಲಾಗಿದೆ ಎನ್ನಬಹುದು. ಇನ್ನೂ 1.60 ಲಕ್ಷ ಮತಗಳು ಎಲ್ಲಿ ಹೋದವು?

ಅಂದರೆ ಬಿಜೆಪಿಯ 1.60 ಲಕ್ಷ ಮತದಾರರು ಮತದಾನವನ್ನೇ ಮಾಡಲಿಲ್ಲವೇ?

ಒಟ್ಟೂ 18,21,614 ಮತದಾರರ ಪೈಕಿ 10,11,616 ಜನರು ಮಾತ್ರ ಮತ ಚಲಾಯಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಮತದಾರರೇ ಮತ ಚಲಾಯಿಸಲು ಬರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಮತದಾರರು ಕೈ ಕೊಟ್ಟಿದ್ದೇಕೆ? ಅವರೆಲ್ಲ ಮತದಾನದಿಂದ ದೂರ ಉಳಿದಿದ್ದೇಕೆ? ಕೊರೋನಾ ಕಾರಣದಿಂದ ಮನೆಯಿಂದ ಹೊರಗೆ ಬರಲಿಲ್ಲವೇ? ಅಥವಾ ಬೇರೆನಾದರೂ ಕಾರಣವಿದೆಯೇ? ಮುಂಬರುವ ಚುನಾವಣೆಗಳಲ್ಲಿ ಅವರನ್ನು ಸೆಳೆಯಲು ಏನು ಮಾಡಬೇಕು? ಎನ್ನುವ ಕುರಿತು ಬಿಜೆಪಿ ಚಿಂತಿಸಬೇಕಿದೆ.

4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್ ಹೆಚ್ಚಿನ ಮತ ಪಡೆದಿದೆ. ಇದರಲ್ಲಿ ಆಶ್ಚರ್ಯಪಡುವಂತದ್ದೇನೂ ಇಲ್ಲ. ಬಹಳಷ್ಟು ಮತದಾರರು ಲೋಕಸಭೆಗೆ ಒಂದು ಪಕ್ಷಕ್ಕೆ ಮತ ನೀಡಿದರೆ ವಿಧಾನಸಭೆಗೆ ಇನ್ನೊಂದು ಪಕ್ಷಕ್ಕೆ ಮತ ಹಾಕಬಹುದು. ಕೆಲವರು ಪಕ್ಷದ ಬದಲು ಅಭ್ಯರ್ಥಿ ನೋಡಿ ನಿರ್ಧಾರ ಮಾಡಬಹುದು. ಈ ಮತಗಳ ಮೇಲೆ ಶಾಸಕರ ಹಿಡಿತ ಇರಬೇಕೆಂದೇನೂ ಇಲ್ಲ.  ಹಾಗಾಗಿ ಈ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗದು.

ಬಹುಶಃ ಕೊರೋನಾ ಕಾರಣದಿಂದ ಜನರು ಮತಹಾಕಲು ಬರದೇ ಇರಬಹುದು. ಜೊತೆಗೆ ಉಪಚುನಾವಣೆ ಪ್ರಚಾರಕ್ಕೆ ಸಮಯಾವಕಾಶ ಕಡಿಮೆ ಇದ್ದುದೂ ಕಾರಣವಾಗಿರಬಹುದು.

-ಮಂಗಲಾ ಅಂಗಡಿ, ನೂತನ ಸಂಸದರು

ಜಯ ಮಂಗಲಂ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button