Kannada NewsKarnataka NewsLatest

ಎಲ್ಲಿದೆ ಅಚ್ಛೇ ದಿನ್?: ಬೆಲೆ ಏರಿಕೆಗೆ ಚನ್ನರಾಜ ಹಟ್ಟಿಹೊಳಿ ಕಿಡಿ

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೇಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ಎಲ್ಲಿದೆ ಬಿಜೆಪಿಯ ಅಚ್ಛೇ ದಿನ್ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೊರೋನಾದಿಂದ ತತ್ತರಿಸಿದ್ದ ಜನರಿಗೆ ಈಗ ಬೆಲೆ ಏರಿಕೆಯ ಬರೆ ಬಿದ್ದಿದೆ. ಜನಸಾಮಾನ್ಯರ ಗೋಳನ್ನು ಕೇಳುವವರಿಲ್ಲ ಎಂದು ಕಿಡಿಕಾರಿದ್ದಾರೆ.
ಜನರು ಕೊರೋನಾದಿಂದಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಆದಾಯವಿಲ್ಲದೆ ಹೊತ್ತಿನ ಕೂಳಿಗೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರಕಾರ ಜನರನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವ ಕೆಲಸ ಮಾಡುತ್ತಿದೆ. ಜನರು ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ. ತಿಂಗಳಿಡೀ ದುಡಿದರೂ ದಿನಸಿ ಖರೀದಿಸಲು ಹಣ ಸಾಕಾಗುತ್ತಿಲ್ಲ. ಜನರ ಕಣ್ಣಲ್ಲಿ ರಕ್ತ ಬರುವಂತಾಗಿದೆ. ಕೂಡಲೇ ಮಧ್ಯಪ್ರವೇಶಿಸಿ ಬೆಲೆಗಳನ್ನು ಹಿಡಿತಕ್ಕೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿ ಅಚ್ಛೇದಿನ್ ಬರಲಿದೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಜನರು ಅವರ ಭರವಸೆಗಳನ್ನು ನಂಬಿ ಮತ ಚಲಾಯಿಸಿದ್ದರು. ಆದರೆ ಬಿಜೆಪಿ ಜನರಿಗೆ ಅಕ್ಷರಶಃ ಮೋಸ ಮಾಡಿದೆ. ಕನಸಿನಲ್ಲೂ  ಬಿಜೆಪಿ ಹೆಸರು ಕೇಳಿದರೆ ಜನರು ಬೆವರುವಂತಾಗಿದೆ. ತಕ್ಷಣ ಕೇಂದ್ರ ಮತ್ತು ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು. ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಬೆಲೆಗಳನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಲಿದೆ ಎಂದು ಚನ್ನರಾಜ ಹಟ್ಟಿಹೊಳ್ಳಿ ಎಚ್ಚರಿಸಿದ್ದಾರೆ. 
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button