Kannada NewsKarnataka News

ಸಮ್ಮಿಶ್ರ ಸರಕಾರ ಬೀಳಿಸುವ ನಿರ್ಧಾರವಾಗಿದ್ದೆಲ್ಲಿ? ರಹಸ್ಯ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ:  ಕಾಂಗ್ರೆಸ್ ನಾಯಕರ ದುರಹಂಕಾರ, ಮಾಜಿ ಸಿಎಂ ಸಿದ್ದರಾಮಯ್ಯ ಸೊಕ್ಕಿನ ಹಿನ್ನೆಲೆಯಲ್ಲಿ ಮತ್ತು ಡಿಕೆಶಿ ಭ್ರಷ್ಠಾಚಾರದಿಂದ ಬೇಸತ್ತು ಅನಿವಾರ್ಯವಾಗಿ ಬಿಜೆಪಿ ಸೇರಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಅವರು, ಶುಕ್ರವಾರ ಗೋಕಾಕ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಗೋಕಾಕ ಬಿಜೆಪಿಯಿಂದ ನಡೆದ ಸ್ವಾಗತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಈ ಬಿಜೆಪಿ ಸಮಾವೇಶಕ್ಕೆ ಕಾಂಗ್ರೆಸ್ ಕಾರಣ. ನನ್ನ ವಿರೋಧಿಗಳು ಹೋರಾಟಗಾರರಲ್ಲ, ಕುತಂತ್ರಿಗಳು. ಕಳೆದ ವಿಧಾನಸಭೆ ಚುನಾವಣೆ ಮುಗಿದ ಬಳಿಕ ನಾವೆಲ್ಲ ಬೆಂಗಳೂರಿಗೆ ಹೋಗಬೇಕಿತ್ತು. ನಮಗಿಂತ ಮೊದಲು ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್ ಹೋಗಿದ್ರು. ಆಗಲೇ ನನ್ನ ವಿರುದ್ಧ ಕುತಂತ್ರ ನಡೆದಿತ್ತು ಎಂದರು.

ಸಿದ್ದರಾಮಯ್ಯ ನಂಬಿ ರಾಜಕೀಯ ಮಾಡಿದ್ವಿ. ಬಿಡದಿ ರೆಸಾರ್ಟ್‌ನಲ್ಲಿ ಡಿಕೆಶಿ  ವರ್ತನೆಯ ಕಂಡು ಆಗಲೇ ಸಮ್ಮಿಶ್ರ ಸರ್ಕಾರ ಬೀಳಿಸಲು ನಿರ್ಧರಿಸಿದೆ. ನಾನು ಯಾರ ಚಮಚಾಗಿರಿ ಮಾಡಿಲ್ಲ. ಸಿದ್ದರಾಮಯ್ಯ, ಸತೀಶ್ ಜಗಳದಲ್ಲಿ ನನ್ನನ್ನು ಮಂತ್ರಿ ಮಾಡಿದ್ರು. ಮೂರು ತಿಂಗಳ ನಂತರ ನನ್ನನ್ನು ಕೆಳಗಿಳಿಸಿ ರಾಜಕೀಯ ಮುಗಿಸಬೇಕು ಎನ್ನುವ ದುರುದ್ದೇಶ ಇತ್ತು. ಕಾಂಗ್ರೆಸ್ ಪಕ್ಷ ನಾಯಕರ ಸೊಕ್ಕಿನಿಂದ ಹಾಳಾಗಿದೆ. ಹಿಂದುಳಿದ ವರ್ಗದ ನಾಯಕರು ಬೆಳೆಯಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ ವಾಗಿದೆ ಎಂದು ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.

ಜಿಲ್ಲೆಯಲ್ಲಿ ಸಂಘಟನೆ ಮಾಡಿದ ತಕ್ಷಣ ಹೈಕಮಾಂಡ್‌ನಲ್ಲಿ ಬೇರೆ ಚರ್ಚೆ ಆಯಿತು. ಸತೀಶ್ ಜಾರಕಿಹೊಳಿ ನಾಯಿಯಂತೆ ಇದ್ದ ಎಂದು ಕಾಂಗ್ರೆಸ್ ನಾಯಕರು ಹೇಳಿದ್ರು. ಸಚಿವನಾದ ತಕ್ಷಣ ನಾನು ಸರ್ಕಾರ ಬಿಳಿಸುವ ನಿರ್ಧಾರ ಕೈಗೊಂಡೆ. ಪಕ್ಷದಲ್ಲಿ ಆತಂಕರಿಕ ಸಮಸ್ಯೆ ಹೇಳಿದ್ರೆ ಭಿನ್ನಮತ ಎಂದು ಬಿಂಬಿಸುತ್ತಾರೆ. ಹೀಗಾಗಿ ತೇಲಲಿ ಮುಳುಗಲಿ ನಿಮ್ಮ ಬೆನ್ನು ಬಿಡಲ್ಲ ಎಂದು ಯಡಿಯೂರಪ್ಪನವರಿಗೆ ಮಾತು ಕೊಟ್ಟಿದ್ದೆ. ಅದರಂತೆ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಅವರು ಹೇಳಿದರು.

ಆಪರೇಷನ್ ಕಮಲ ರಹಸ್ಯ ಬಿಚ್ಚಿಟ್ಟ ಸಾಹುಕಾರ

ಕಾಂಗ್ರೇಸ್ ಪಕ್ಷ ತೊರೆಯಲು ಮೊದಲ ಮಾತುಕತೆ ಯಡಿಯೂರಪ್ಪನವರ ಜತೆಗೆ ನಡೆದಿತ್ತು. ಎರಡನೇ ಮಾತುಕತೆ ಅಮಿತ್ ಶಾ ಜತೆಗೆ ಆಯಿತು. ಆಗ ಅಮಿತ ಶಾ ಅವರ ಮುಂದೆ ಯಡಿಯೂರಪ್ಪನವರನ್ನು ಸಿಎಂ ಮಾಡೋದು ಆದರೆ ಮಾತ್ರ ಬಿಜೆಪಿಗೆ ಬರುವುದಾಗಿ ಹೇಳಿದೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಶಾ ಯಸ್ ಎಂದು ಹೇಳಿದಾಗ ಬಿಜೆಪಿ ಸೇರಲು ಮುಂದಾದೆ. ೮ ಭಾರೀ ಆಪರೇಶನ್ ಕಮಲ ವಿಫಲಗೊಂಡಿತು. ಬಿಎಸ್‌ವೈ, ಜಗದೀಶ್ ಶೆಟ್ಟರ್ ವಾಪಸ್ ಕಾಂಗ್ರೆಸ್ ಹೋಗಿ ಎಂದರು. ಆದರೆ ಹಠ ಬಿಡದೇ ಬಿಜೆಪಿ ಸೇರಿದ್ದೇನೆಂದು ಸಾಹುಕಾರ್ ಆಪರೇಷನ್ ಕಮಲದ ಗುಟ್ಟು ಬಿಟ್ಟುಕೊಟ್ಟರು.

ಸೋಮವಾರ ನಾಮಪತ್ರ:

ಶನಿವಾರ ಐದು ಜನರ ಸೇರಿ ನಾಮಪತ್ರ ಸಲ್ಲಿಸುತ್ತೇನೆ. ಸೋಮವಾರ ಒಂದು ಲಕ್ಷ ಜನರ ನಡುವೆ ನಾಮಪತ್ರ ಬಹಿರಂಗವಾಗಿ ನಾಮಪತ್ರ ಸಲ್ಲಿಸುತ್ತೇನೆಂದು ರಮೇಶ ಜಾರಕಿಹೊಳಿ ತಿಳಿದರು.

ಅಶೋಕ ಪೂಜಾರಿಗೆ ಹೃದಯದಿಂದ ಮನವಿ

ಅಶೋಕ ಪೂಜಾರಿ ಬಿಜೆಪಿಯಲ್ಲಿ ಮುಂದುವರಿಯಬೇಕು ಎಂದು ಮನವಿ. ಕುತಂತ್ರಿಗಳ ಮಾತು ಕೇಳದೆ ಅಶೋಕ ಪೂಜಾರಿ ಬಿಜೆಪಿಯಲ್ಲೆ ಮುಂದವರೆಯಲಿ. ಅವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೆನೆಂದು ರಮೇಶ ಜಾರಕಿಹೊಳಿ ಹೇಳಿದರು.

ಲಖನ್ ಜಾರಕಿಹೊಳಿ ನನ್ನ ವೈರಿ

ರಣರಂಗದಲ್ಲಿ ಲಖನ್ ಜಾರಕಿಹೊಳಿ ನನ್ನ ವೈರಿ. ಸ್ವಾರ್ಥ, ಅಧಿಕಾರಕ್ಕೆ ಬಿಜೆಪಿಗೆ ಹೋಗಿಲ್ಲ ಎಂದು  ರಮೇಶ ಜಾರಕಿಹೊಳಿ ಸಹೋದರನ ವಿರುದ್ಧ ಕಿಡಿಕಾರಿದರು.
೨೦೦೮ರ ಚುನಾವಣೆಯ ಸನ್ನಿವೇಶ ಮತ್ತೆ ನಿರ್ಮಾಣವಾಗಿದೆ. ಆಗ ನಾನು ವೀಕ್ ಇದ್ದೆ. ಈಗ ಚಿತ್ರಣ ಬೇರೆ ಇದೆ. ಸತೀಶ್ ಕುತಂತ್ರದಿಂದ ಭಿಮಶೀ ಸ್ಪರ್ಧಿಸಿದ್ದರು. ಸಧ್ಯ ಲಖನ್ ಸಹ ಸತೀಶ್ ಕುತಂತ್ರದಿಂದ ಸ್ಪರ್ಧಿಸಿದ್ದಾರೆ ಎಂದು ಸಹೋದರನ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ, ಬಾಗಲಕೋಟ, ವಿಜಯಪುರ ಮುಸ್ಲಿಂ ಸಮಾಜವನ್ನು ಬಿಜೆಪಿಗೆ ಸೆಳೆಯುವ ಶಪಥವಿದೆ. ಬರುವ ಚುನಾವಣೆಯಲ್ಲಿ ಯಾವುದೇ ಅತೀಯಾದ ವಿಶ್ವಾಸ ಬೇಡ. ವಿರೋಧಿಗಳು ಪ್ರಭಲ ಎಂದು ತಿಳಿದು ಕೆಲಸ ಮಾಡೋಣ. ಬಿಜೆಪಿ ಸರ್ಕಾರ ಆಗಿದ್ದು ಗೋಕಾಕ್ ಕ್ಷೇತ್ರದಿಂದ ಆಗಿದೆ. ಉಪಚುನಾವಣೆಯಲ್ಲಿ ದೇವರ ಆಶೀರ್ವಾದದಿಂದ ಗೆಲ್ಲುತ್ತೇನೆಂದರು.

ಸವದತ್ತಿ ಶಾಸಕ ಆನಂದ ಮಾಮನಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ರಮೇಶ ಜಾರಕಿಹೊಳಿ ಅವರ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ಬಿಜೆಪಿಯ ಕಾರ್ಯಕರ್ತರು ರಮೇಶ ಜಾರಕಿಹೊಳಿ ಅವರನ್ನು ೧ ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಎಸ್ ವಿ ದೇಮಶೆಟ್ಟಿ, ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಲಕ್ಕಪ್ಪ ತಹಶೀಲ್ದಾರ, ಜಗದೀಶ ಸದರಜೋಶಿ, ಶಕೀಲ ಧಾರವಾಡ್ಕರ, ನಗರಸಭೆ ಸದಸ್ಯರಾದ ಎಸ್ ಎ ಕೋತವಾ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ನಗರಸಭೆ ಸದಸ್ಯರು ಇತರರು ಇದ್ದರು.


2 ಕ್ವಿಂಟಾಲ್ ತೂಕದ ಸೇಬು ಹಾರ

ಗೋಕಾಕ ಉಪಚುನಾವಣೆಗೆ ಬೃಹತ್ ಸಮಾವೇಶದ ಮೂಲಕ ರಮೇಶ್ ಜಾರಕಿಹೊಳಿ ರಣಕಹಳೆ ಮೊಳಗಿಸಿದ್ದಾರೆ. ಬಿಜೆಪಿ ಸೇರ್ಪಡೆಯಾದ ಬಳಿಕ ಮೊದಲ ಭಾರಿಗೆ ಬೆಳಗಾವಿಗೆ ಆಗಮಿಸಿದ ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿವರಿಗೆ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ನಗರದ ನಾಕಾದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತದಿಂದ ಗ್ರಾಮ ದೇವತೆ ಲಕ್ಷ್ಮೀ ದೇವಸ್ಥಾನದವರೆಗೆ ಬೈಕ್ ರ‍್ಯಾಲಿಯೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು. ಸಾಹುಕಾರ ರಮೇಶ ಜಾರಕಿಹೊಳಿ ಅವರಿಗೆ ೨ ಕ್ವಿಂಟಾಲ್ ತೂಕದ ಸೇಬು ಹಾರವನ್ನು ಕ್ರೇನ್ ಮೂಲಕ ಅಭಿಮಾನಿಗಳು ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button