
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾಂಗ್ರೆಸ್ ನವರಿಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಅವರು ಬಳಸುವ ಭಾಷೆ ಕೀಳುಮಟ್ಟದ್ದಾಗಿದೆ. ಇಂತಹವರನ್ನು ಜನರು ಯಾವತ್ತೂ ಉನ್ನತ ಸ್ಥಾನದಲ್ಲಿ ಕೂಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಕಿತ್ತೂರು ಕರ್ನಾಟಕದಲ್ಲಿ 2023ರ ಚುನಾವಣೆಯ ರಣಕಹಳೆಯನ್ನು ಊದಲು ಅಮಿತ್ ಶಾ ಅವರು ಬಂದಿದ್ದಾರೆ. ಕಿತ್ತೂರು ಕರ್ನಾಟಕದ ಜನರು ಈ ಜನ ಸಂಕಲ್ಪ ಅಭಿಯಾನದಿಂದ ಕಳೆದ ಬಾರಿಗಿಂತ ಹೆಚ್ಚು ಶಾಸಕರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಮತ್ತೊಮ್ಮೆ ಕರ್ನಾಟಕದಲ್ಲಿ ಸದೃಢ, ಅತ್ಯಂತ ಕ್ರಿಯಾಶೀಲ, ಅಭಿವೃದ್ಧಿ ಪರ ಸರ್ಕಾರ ತರಲು ಆಶೀರ್ವಾದ ಮಾಡಬೇಕು ಎಂದು ಸಿಎಂ ಬೊಮ್ಮಾಯಿಯವರು ಮನವಿ ಮಾಡುತ್ತೇನೆ ಎಂದರು.
ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ್ ಬಾಳಪ್ಪರಂತ ವೀರರು ಹುಟ್ಟಿರುವ ನಾಡು ಇದು. ಆಗ ಕಣ್ಣಿಗೆ ಕಾಣುವಂತಹ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಆದರೆ ಇವತ್ತು ನಮ್ಮ ದೇಶವನ್ನು ಶೀತಲ ಮಾಡುವಂತಹ ಪಿ.ಎಫ್.ಐ, ಎಸ್.ಡಿ.ಪಿ.ಐ ಸಂಸ್ಥೆಗಳ ಮುಖಾಂತರ ಉಗ್ರಾವಾದಿ ಚಟುವಟಿಕೆ, ಭಯೋತ್ಪಾದನೆಯನ್ನು ಮಾಡಿ, ನಮ್ಮ ರಾಜ್ಯದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಬಗ್ಗುಬಡಿಯಲು ಸಂಕಲ್ಪವನ್ನು ಮಾಡಿ, ದಿಟ್ಟ ನಿರ್ಧಾರದ ಮೂಲಕ ಅಮಿತ್ ಶಾ ಅವರು ಪಿಎಫ್ಐ ಸಂಘಟನೆಯನ್ನು ಕರ್ನಾಟಕದಲ್ಲಿಯಷ್ಟೇ ಅಲ್ಲ, ಇಡೀ ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟಡಗಿಸಿದ್ದಾರೆ. ಬೇರೆ ಹೆಸರುಗಳಲ್ಲಿ ಅವರು ಮತ್ತೆ ತಲೆ ಎತ್ತಿದರೂ, ಅವರನ್ನು ಸೆದೆಬಡಿಯುವ ಧೀಮಂತ ನಾಯಕರು ನಮ್ಮ ಗೃಹ ಸಚಿವರಾಗಿದ್ದಾರೆ. ಹೀಗಾಗಿ ನಮ್ಮ ದೇಶ ಸುರಕ್ಷಿತವಾಗಿದೆ ಎಂದು ಹೇಳಿದರು.
ದೇಶ ಸುರಕ್ಷಿತ, ಶಾಂತಿಯುತವಾಗಿದ್ದಾಗ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಸದೃಢವಾಗಿರಲು ನಾವೆಲ್ಲರೂ ಬೆಂಬಲ ಕೊಡಬೇಕಾಗುತ್ತದೆ. ವಿಶ್ವಮಾನ್ಯ ನಾಯಕರಾದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದೇಶದ ಹೊರಗಡೆಯಿಂದ ಬರುವ ಆತಂಕವಾದವನ್ನು ಗಡಿಯಲ್ಲಿ ದಿಟ್ಟತನದಿಂದ ಎದುರಿಸುತ್ತಿದ್ದಾರೆ. ಅವರ ಆಡಳಿತದಲ್ಲಿ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಯುಪಿಎ ಸರ್ಕಾರ ಇದ್ದಾಗ ಯಾರಿಗೂ ನೆಮ್ಮದಿ ಇರಲಿಲ್ಲ. ಪ್ರತಿನಿತ್ಯ ಬಾಂಬ್ ಗಳು, ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದವು. ಅದೆಲ್ಲವನ್ನೂ ನಿಯಂತ್ರಣ ಮಾಡಿದಂತಹ ಸರ್ಕಾರ, ಡಬಲ್ ಇಂಜಿನ್ ಸರ್ಕಾರ ಕರ್ನಾಟಕದಲ್ಲಿ ಮತ್ತೊಮ್ಮೆ ಬರಬೇಕು ಎಂದರು.
ಕಾಂಗ್ರೆಸ್ ನವರಿಗೆ ಇವತ್ತು ಪ್ರಜಾಧ್ವನಿ ಈಗ ನೆನಪಾಗಿದೆ. ಐದು ವರ್ಷ ಅಧಿಕಾರ ಕೊಟ್ಟಾಗ ಏನು ಮಾಡಿದ್ರಿ. ಹಲವಾರು ಭಾಗ್ಯಗಳ ಮೂಲಕ ಜನರಿಗೆ ದೌರ್ಭಾಗ್ಯ ನೀಡುವ ಕೆಲಸ ಮಾಡಿದ್ದಿರಿ. ಸಾಮಾಜಿಕ ನ್ಯಾಯದ ಹೆಸರಲ್ಲಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೋಸ ಮಾಡುತ್ತ ಬಂದಿದ್ದೀರಿ. ನಾವು ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ರೈತಾಪಿ ವರ್ಗ ಸಂಕಷ್ಟದಲ್ಲಿದ್ದಾಗ ದಾವಿಸಿ ಹೋಗಿದ್ದು ಯಡಿಯೂರಪ್ಪನವರು. ಅವರು ಸಿಎಂ ಆಗಿದ್ದಾಗ 10 ಎಚ್.ಪಿ ವರೆಗೂ ರೈತರಿಗೆ ಉಚಿತ ವಿದ್ಯುತ್ ನೀಡಿದರು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದರು. ಪ್ರವಾಹ ಬಂದಾಗ ಕೇಂದ್ರದ ಪರಿಹಾರದೊಂದಿಗೆ ನಾವು ಪರಿಹಾರ ವಿತರಿಸಿದೆವು. ಆಹಾರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿದ್ದೇವೆ.
ಕಾಯಕ ಯೋಜನೆ ಮೂಲಕ ದುಡಿಯುವ ವರ್ಗಗಳಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು.
ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಕೊಟ್ಟಿದ್ದೇವೆ. ರೈತರ ಮಕ್ಕಳ ಜೊತೆಗೆ ಕೂಲಿಗಾರರ ಮಕ್ಕಳಿಗೆ, ಮೀನುಗಾರರ ಮಕ್ಕಳಿಗೆ, ಕಾರ್ಮಿಕರು, ನೇಕಾರರ ಮಕ್ಕಳಿಗೆ ನೀಡಿದ್ದೇವೆ. ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯೋಜನೆ ಮೂಲಕ 5 ಲಕ್ಷ ಯುವಕರಿಗೆ 5 ಲಕ್ಷ ರೂ. ಧನ ಸಹಾಯ ಮಾಡಿ ಸ್ವಯಂ ಉದ್ಯೋಗ ಕಲ್ಪಿಸವ ಕೆಲಸ ಮಾಡಲಾಗುತ್ತಿದೆ. 5 ಲಕ್ಷ ಮಹಿಳೆಯರಿಗೂ ಸ್ತ್ರೀ ಸಾಮಾರ್ಥ್ಯ ಯೋಜನೆ ಮೂಲಕ 5 ಲಕ್ಷ ರೂ. ಧನ ಸಹಾಯ ನೀಡಲಾಗುವುದು ಎಂದರು. ಹಿಂದುಳಿದ ಬಂಜಾರ್ ಸಮುದಾಯದ ಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. 50 ವರ್ಷದ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ.
ಕಾಂಗ್ರೆಸ್ ನವರು 200 ಯುನಿಟ್ ಉಚಿತ ವಿದ್ಯುತ್ ನಿಡುವುದಾಗಿ ಹೇಳುತ್ತಾರೆ. ನಮ್ಮ ಯಡಿಯೂರಪ್ಪ ಅವರು 2008 ರಲ್ಲಿಯೇ 10 ಎಚ್ ಪಿ ವಿದ್ಯುತ್ ಉಚಿತವಾಗಿ 15 ವರ್ಷಗಳಿಂದ ನೀಡುತ್ತಿದ್ದಾರೆ. ಇವತ್ತು ನಿವೇನು ಕೊಡುವುದಕ್ಕೆ ಸಾಧ್ಯವಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ನಾವು ಗೃಹಿಣಿಯರಿಗೆ ಸ್ತ್ರೀ ಶಕ್ತಿ ಯೋಜನೆ ಮಾಡಿದ ಮೇಲೆ ಕಾಂಗ್ರೆಸ್ ನವರು ಗೃಹಲಕ್ಷ್ಮಿ ಯೋಜನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಸೋಲು ಕಾಡುತ್ತಿದೆ. ಹೀಗಾಗಿ ಈ ರೀತಿಯ ಯೋಜನೆಗಳು, ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದೆಲ್ಲವೂ ಕರ್ನಾಟಕದ ಜನತೆಗೆ ಗೊತ್ತಿದೆ. ಎಂದು ಸಿಎಂ ಬಸವರಜ ಬೊಮ್ಮಾಯಿ ತಿರುಗೇಟು ನೀಡಿದರು.
ಕಾಂಗ್ರೆಸ್ ನವರಿಗೆ ಸೋಲಿನ ಭಿತಿ ಶುರುವಾಗಿದ್ದರಿಂದ ಅವರು ಬಳಸುವ ಭಾಷೆ ಅತ್ಯಂತಕೀಳು ಮಟ್ಟದ್ದಿದೆ. ಇದು ನಮ್ಮ ಕರ್ನಾಟಕ ರಾಜಕೀಯದ ಸಂಸ್ಕೃತಿಯಲ್ಲ. ಇಂತಹವರನ್ನು ಜನರು ಯಾವತ್ತೂ ಉನ್ನತ ಸ್ಥಾನದಲ್ಲಿ ಕೂಡಿಸಲು ಸಾಧ್ಯವೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಬೆಳಗಾವಿಯಲ್ಲಿ 18 ರಲ್ಲಿ 15 ಸ್ಥಾನ ಗೆಲ್ಲುವ ಗುರಿ ಹೊಂದಬೇಕು ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು. ಬೊಮ್ಮಾಯಿ ಬಿಟ್ಟ ಬೆಳಗಾವಿಯ 3 ಸ್ಥಾನಗಳು ಯಾವುವು ಎನ್ನುವ ಚರ್ಚೆ ಈಗ ಶುರುವಾಗಿದೆ.
ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಅಮಿತ್ ಶಾ, ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ