ಎಂ.ಕೆ.ಹೆಗಡೆ, ಬೆಳಗಾವಿ : ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇಡೀ ರಾಜ್ಯ ಈಗಾಗಲೆ ಚುನಾವಣೆ ಮೂಡ್ ಗೆ ಜಾರಿದೆ. ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ಸಿದ್ಧತೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿವೆ. ಅಧಿಸೂಚನೆ ಪ್ರಕಟವಾಗಿದೆಯೇ ಎನ್ನುವ ಅನುಮಾನ ಬರುವಷ್ಟರ ಮಟ್ಟಿಗೆ ಚುನಾವಣೆ ಕಾವು ಏರತೊಡಗಿದೆ.
ಬೆಳಗಾವಿ ಇಡೀ ರಾಜ್ಯದಲ್ಲೇ ರಾಜಕೀಯವಾಗಿ ಅತ್ಯಂತ ಪ್ರಮುಖ ಜಿಲ್ಲೆ. ಈ ಜಿಲ್ಲೆಯಲ್ಲಿ ರಾಜಕೀಯ ಸದಾ ಎಚ್ಚರವಾಗಿಯೇ ಇರುತ್ತದೆ. ಎಂದೂ ಮಲಗಿದ ಉದಾಹರಣೆಯೇ ಇಲ್ಲ. ಜೊತೆಗೆ ಬೇರೆಯವರಿಗೆ ಮಲಗಲು ಬಿಡುವ ಜಾಯಮಾನವೂ ಬೆಳಗಾವಿ ರಾಜಕೀಯದ್ದಲ್ಲ.
ಬೆಳಗಾವಿಯಲ್ಲಿ 18 ವಿಧಾನ ಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ 4 -5 ಕ್ಷೇತ್ರಗಳು ಅತ್ಯಂತ ಜಾಗ್ರತ ಕ್ಷೇತ್ರಗಳು, ಹೈ ಓಲ್ಟೇಜ್ ಕ್ಷೇತ್ರಗಳು ಎಂದು ಕರೆಸಿಕೊಳ್ಳುತ್ತವೆ. ಅವುಗಳಲ್ಲಿ ಹುಕ್ಕೇರಿಯೂ ಒಂದು. ಹುಕ್ಕೇರಿ ಕ್ಷೇತ್ರವನ್ನು ಕಳೆದ ಹಲವು ವರ್ಷಗಳಿಂದ ಪ್ರತಿನಿಧಿಸುತ್ತ ಬಂದಿದ್ದವರು ಉಮೇಶ ಕತ್ತಿ. ತಾವು ಸ್ಪರ್ಧಿಸಿದ ಪ್ರತಿ ಚುನಾವಣೆಯಲ್ಲೂ ಹೊಸ ಹೊಸ ಪಕ್ಷವನ್ನೇ ಪ್ರತಿನಿಧಿಸಿದರೂ ಒಮ್ಮೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದು ಬಿಟ್ಟರೆ ಮತ್ತೆ 8 ಬಾರಿ ನಿರಾಯಾಸವಾಗಿಯೇ ಗೆಲ್ಲುತ್ತ ಬಂದಿದ್ದರು.
2008ರಲ್ಲಿ ಆಪರೇಶನ್ ಕಮಲಕ್ಕೆ ಶರಣಾದಾಗಿನಿಂದ ಸಾಯುವ ಕೊನೆಯ ಕ್ಷಣದವರೆಗೂ ಅತ್ಯಂತ ಕ್ರಿಯಾಶೀಲವಾಗಿಯೇ ಇದ್ದವರು ಅವರು. ಹಾಸ್ಯ ಚಟಾಕಿ ಹಾರಿಸುತ್ತಲೇ ನಾನೂ ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಲಿದ್ದೇನೆ. ನನಗೆ ಇನ್ನೂ ವಯಸ್ಸಿದೆ ಎನ್ನುತ್ತಲೇ ಬಂದಿದ್ದರು. ಆದರೆ ಅಕಾಲಿಕವಾಗಿ ಸಾವಿಗೀಡಾಗಿದ್ದರಿಂದ ಕಲರ್ ಫುಲ್ ವ್ಯಕ್ತಿತ್ವದ ಉಮೇಶ ಕತ್ತಿ ಯುಗವೇ ಅಂತ್ಯವಾಯಿತು.
ಈ ಬಾರಿ ಯಾರು ಕಣಕ್ಕಿಳಿಯಲಿದ್ದಾರೆ?
ಉಮೇಶ ಕತ್ತಿ ನಿಧನದಿಂದಾಗಿ ಈ ಬಾರಿ ಹುಕ್ಕೇರಿ ಕ್ಷೇತ್ರವನ್ನು ಯಾರು ಪ್ರತಿನಿಧಿಸಲಿದ್ದಾರೆ ಎನ್ನುವ ದೊಡ್ಡ ಚರ್ಚೆ ಜಿಲ್ಲೆಯಲ್ಲಿ ಎದ್ದಿದೆ. ಬಲಾಢ್ಯ ಉಮೇಶ ಕತ್ತಿ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂದು ಜಿಲ್ಲೆ ಕುತೂಹಲದಿಂದ ಎದುರು ನೋಡುತ್ತಿದೆ. ಉಮೇಶ ಕತ್ತಿ ಸ್ಥಾನಕ್ಕೆ, ಅಂದರೆ ಹುಕ್ಕೇರಿ ವಿಧಾನ ಸಭಾ ಕ್ಷೇತ್ರದಿಂದ ಅವರ ಸಹೋದರ, ಮಾಜಿ ಸಂಸದ ರಮೇಶ ಕತ್ತಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಕೆಲವರಿಂದ ಕೇಳಿ ಬಂದರೆ, ಉಮೇಶ ಕತ್ತಿ ಅವರ ಪುತ್ರ ನಿಖಿಲ್ ಕತ್ತಿಯೇ ಉತ್ತರಾಧಿಕಾರಿಯಾಗಲಿದ್ದಾರೆ ಎನ್ನುವ ಮಾತು ಅಲ್ಲಲ್ಲಿ ಚರ್ಚೆಗೆ ಒಳಗಾಗಿದೆ.
ಈ ಇಬ್ಬರ ಹೆಸರೂ ಹೊರಗಡೆ ಎಷ್ಟು ಗಂಭೀರವಾಗಿ ಚರ್ಚೆಯಾಗುತ್ತಿದೆಯೋ ಅವರ ಮನೆಯೊಳಗೂ ಅಷ್ಟೇ ಬಿರುಸಿನ ತಯಾರಿ ನಡೆದಿದೆ. ಇಬ್ಬರಿಗೂ ಚುನಾವಣೆಗೆ ನಿಲ್ಲುವ ಉತ್ಸಾಹವಂತೂ ಇದ್ದೇ ಇದೆ. ಆದರೆ ಪಕ್ಷ ಯಾರನ್ನು ಆಯ್ಕೆ ಮಾಡಲಿದೆ ಎನ್ನುವುದು ಇನ್ನೂ ನಿಗೂಢವಾಗಿದೆ.
ಈ ಹಿಂದೆ ಲೋಕಸಭಾ ಚುನಾವಣೆ ವೇಳೆ ಟಿಕೆಟ್ ಕೇಳಿದ್ದ ರಮೇಶ ಕತ್ತಿಯವರನ್ನು ಬಿಜೆಪಿ ವರಿಷ್ಠರು, ಮುಂದೆ ಅವಕಾಶ ಕೊಡೋಣ ಎಂದು ಸಮಾಧಾನಪಡಿಸಿ ಸುಮ್ಮನಿರಿಸಿದ್ದರು. ಹಾಗಾಗಿ ಈ ಬಾರಿ ತಮ್ಮನ್ನು ಕಡೆಗಣಿಸುವುದಿಲ್ಲ ಎನ್ನುವ ನಂಬಿಕೆ ಅವರಲ್ಲಿದ್ದಂತಿದೆ. 60ನೇ ವಸಂತಕ್ಕೆ ಕಾಲಿಡುತ್ತಿರುವ ಅವರು ಬಿಜೆಪಿಯ ನಿಯಮಾವಳಿಗಳ ಪ್ರಕಾರ ಇನ್ನು ಬಹಳ ವರ್ಷಗಳ ಕಾಲ ತಾವು ಸಕ್ರೀಯವಾಗಿ ಚುನಾವಣೆ ರಾಜಕೀಯದಲ್ಲಿರಲು ಸಾಧ್ಯವಿಲ್ಲ. ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳುವುದು ಬೇಡ ಎನ್ನುವ ಭಾವನೆಯೂ ಅವರ ಮನಸ್ಸಿನಲ್ಲಿದ್ದಂತಿದೆ. ಇದೇ ವೇಳೆ, ಅಪ್ಪನ ಕ್ಷೇತ್ರವನ್ನು ಪ್ರತಿನಿಧಿಸಬೇಕೆನ್ನುವ ಆಕಾಂಕ್ಷೆ ನಿಖಿಲ್ ಕತ್ತಿಯಲ್ಲೂ ಇದೆ.
ಈ ಕುರಿತು ರಮೇಶ ಕತ್ತಿ ಅವರು ಪ್ರಗತಿವಾಹಿನಿ ಜೊತೆಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಪ್ರಕಾರ, `ತಮಗೆ ಮತ್ತು ನಿಖಿಲ್ ಕತ್ತಿ ಇಬ್ಬರಿಗೂ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಮತ್ತು ಅಪೇಕ್ಷೆ ಇದ್ದೇ ಇದೆ. ಆದರೆ ಈ ಬಗ್ಗೆ ಇನ್ನೂ ಕುಟುಂಬದಲ್ಲಿ, ಕುಟುಂಬದ ಹಿತೈಷಿಗಳಲ್ಲಿ, ಪಕ್ಷದ ಹಿರಿಯರಲ್ಲಿ ಯಾವುದೇ ರೀತಿಯಿಂದ ಚರ್ಚೆ ನಡೆಸಿಲ್ಲ. ಚುನಾವಣೆ ಘೋಷಣೆಯಾದ ನಂತರದಲ್ಲಿ ಉಮೇಶ ಕತ್ತಿಯವರ ಪತ್ನಿ ಹಾಗೂ ನಮ್ಮ ಮೂವರು ಮಕ್ಕಳೂ ಸೇರಿದಂತೆ ಕುಟುಂಬದವರೆಲ್ಲ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಬ್ಬರಲ್ಲಿ ಯಾರೇ ಸ್ಪರ್ಧಿಸುವುದಾದರೂ ಅತ್ಯಂತ ಸೌಹಾರ್ಧಯುತವಾಗಿ ತೀರ್ಮಾನಿಸಿ, ಒಗ್ಗಟ್ಟಾಗಿ ಹೋರಾಟ ನಡೆಸಲಾಗುವುದು’.
ಇಬ್ಬರೇ ಅಲ್ಲ
ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿಯಲು ಉಮೇಶ ಕತ್ತಿ ಕುಟುಂಬದ ಇಬ್ಬರಲ್ಲದೆ ಬಿಜೆಪಿಯ ಚಿಕ್ಕೋಡಿ ಜಿಲ್ಲಾಧ್ಯಕ್ಷರಾಗಿರುವ ಡಾ.ರಾಜೇಶ ನೇರ್ಲಿ ಕೂಡ ಗಂಭೀರವಾಗಿಯೇ ಪ್ರಯತ್ನ ನಡೆಸಿದ್ದಾರೆ. 2018ರಲ್ಲಿ ಉಮೇಶ ಕತ್ತಿ ಹಾಲಿ ಶಾಸಕರಾಗಿದ್ದ ಸಂದರ್ಭದಲ್ಲೇ ನೇರ್ಲಿ ಟಿಕೆಟ್ ಕೇಳಿದ್ದರು. ಆದರೆ ಆಗ ಪಕ್ಷ ಉಮೇಶ ಕತ್ತಿ ತಪ್ಪಿಸಿ ನೇರ್ಲಿ ಅವರಿಗೆ ಟಿಕೆಟ್ ಕೋಡುವುದು ಸಾಧ್ಯವೇ ಇರಲಿಲ್ಲ. ಈಗ ಕ್ಷೇತ್ರ ಖಾಲಿ ಇದೆ. ಹಾಗಾಗಿ ನನಗೆ ಟಿಕೆಟ್ ಕೊಡಿ ಎಂದು ಅವರು ವರಿಷ್ಠರ ಬಳಿ ಕೇಳಿದ್ದಾರೆ. ಸಂಘಪರಿವಾರದ ಹಿರಿಯರ ಬೆಂಬಲವೂ ತಮಗಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಸಂಘಟನೆ ಕೆಲಸದಲ್ಲಿ ಅವರು ಬಹಳ ವರ್ಷಗಳಿಂದ ಇದ್ದವರು. ಕಳೆದ 4 -5 ವರ್ಷದಿಂದಂತೂ ಚುನಾವಣೆ ಸಿದ್ಧತೆಯಲ್ಲೇ ತೊಡಗಿಸಿಕೊಂಡಿದ್ದಾರೆ.
ಹಾಗೊಮ್ಮೆ ಕತ್ತಿ ಕುಟುಂಬ ತಪ್ಪಿಸಿ ಬೇರೆಯವರಿಗೆ ಬಿಜೆಪಿ ಟಿಕೆಟ್ ನೀಡಿದಲ್ಲಿ ರಮೇಶ ಕತ್ತಿ ಸುಮ್ಮನಿರುತ್ತಾರಾ? ಅಥವಾ ಬೇರೆ ಪಕ್ಷದಿಂದ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯುವ ನಿರ್ಧಾರಕ್ಕೆ ಬರುತ್ತಾರಾ ಎನ್ನುವ ಕುತೂಹಲವಂತೂ ಇದ್ದೆ ಇದೆ.
ತಮ್ಮ ಕುಟುಂಬ ಹೊರತುಪಡಿಸಿ ಟಿಕೆಟ್ ಕೊಡುವುದಿಲ್ಲ ಎನ್ನುವ ಬಲವಾದ ನಂಬಿಕೆ ರಮೇಶ ಕತ್ತಿ ಅವರಲ್ಲಿದ್ದರೆ, ನಮ್ಮಂತ ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎನ್ನುವುದು ಡಾ.ರಾಜೇಶ ನೇರ್ಲಿ ಅವರ ಪ್ರತಿಪಾದನೆ. ಅಂತಿಮವಾಗಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು.
ಕಾಂಗ್ರೆಸ್ ನಿಂದ ಎ.ಬಿ.ಪಾಟೀಲ?
ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಎ.ಬಿ.ಪಾಟೀಲ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ವೃಷಬ್ ಪಾಟೀಲ, ಎಂ.ಎಂ.ಪಾಟೀಲ, ಗಂಗಾಧರ ಗೌತಿ ಎನ್ನುವವರೂ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಒಂದೊಮ್ಮೆ ಬಿಜೆಪಿ ಉಮೇಶ ಕತ್ತಿ ಹೊರತಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದಲ್ಲಿ ರಮೇಶ ಕತ್ತಿ ತಮ್ಮ ಕಡೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಕಾದರೂ ಆಶ್ಚರ್ಯವಿಲ್ಲ.
ಒಟ್ಟಾರೆ ಹುಕ್ಕೇರಿ ಕ್ಷೇತ್ರ ಉಮೇಶ ಕತ್ತಿ ನಂತರವೂ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ.
*ಕಿಚ್ಚ ಸುದೀಪ್ ಭೇಟಿಯ ಕಾರಣ ತಿಳಿಸಿದ ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarkichcha-sudeepmeetclarification/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ