*ಜನಾರ್ಧನ ರೆಡ್ಡಿ ಅಮೇರಿಕಾದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ, ಬೇಡ ಅಂದವರು ಯಾರು?: ಡಿ.ಕೆ.ಶಿ*

ಪ್ರಗತಿವಾಹಿನಿ ಸುದ್ದಿ: “ಬಳ್ಳಾರಿ ಗಲಭೆ ಬಗ್ಗೆ ಎಚ್.ಎಂ.ರೇವಣ್ಣ ಅವರು ಒಳ್ಳೆಯ ಮಾಹಿತಿಗಳನ್ನು ಪಡೆದುಕೊಂಡು ಬಂದಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅರಮನೆ ಮೈದಾನದ ಬಳಿ ಮಾಧ್ಯಮಗಳಿಗೆ ಡಿಸಿಎಂ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ಬಳ್ಳಾರಿ ಗಲಭೆ ಕುರಿತಾಗಿ ಎಚ್.ಎಂ.ರೇವಣ್ಣ ಅವರ ಸಮಿತಿ ವರದಿ ನೀಡಿದೆಯೇ ಎಂದಾಗ, “ಅಧಿಕೃತ ಹಾಗೂ ಅನಧಿಕೃತ ವಿಚಾರಗಳನ್ನು ಭೇಟಿ ಮಾಡಿ ತಿಳಿಸಿದ್ದಾರೆ” ಎಂದರು.
ವಾಲ್ಮೀಕಿ ಮಹರ್ಷಿ ಎಲ್ಲಾ ಸಮುದಾಯಕ್ಕೆ ಸೇರಿದವರು
“ಎಲ್ಲಾ ಕಡೆಯೂ ಪ್ರತಿಮೆಗಳನ್ನು ಇಡುತ್ತಾರೆ. ಇದಕ್ಕೆ ಅಸೂಯೆ ಏಕೆ ಪಡಬೇಕು. ವಾಲ್ಮೀಕಿ ಮಹರ್ಷಿಯವರು ಒಂದು ಸಮುದಾಯಕ್ಕೆ ಸೇರಿದವರೇ? ಅವರು ಎಲ್ಲಾ ಸಮುದಾಯದ ಆಸ್ತಿ. ಅವರು ಬರೆದಿರುವ ರಾಮಯಣವನ್ನು ಎಲ್ಲರೂ ಓದುವುದಿಲ್ಲವೇ?. ಹೀಗಿರುವಾಗ ಅವರ ಬ್ಯಾನರ್ ಹಾಕಲು ಜನಾರ್ಧನ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ” ಎಂದರು.
Z ಪ್ಲಸ್ ಸೆಕ್ಯುರಿಟಿ ನೀಡಿ ಎಂದು ಜನಾರ್ದನ ರೆಡ್ಡಿ ಅವರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “Z ಆದರೂ ಕೇಳಲಿ. ಇರಾನ್, ಅಮೆರಿಕಾದಿಂದಾದರೂ ಸೆಕ್ಯುರಿಟಿ ತೆಗೆದುಕೊಂಡು ಬರಲಿ. ಇವರು ಯಾರನ್ನಾದರೂ ನೇಮಿಸಿಕೊಳ್ಳಲಿ. ಬೇಡ ಎಂದವರು ಯಾರು” ಎಂದು ತಿರುಗೇಟು ನೀಡಿದರು.
ರೆಡ್ಡಿ ಅವರಿಗೆ ರಕ್ಷಣೆ ನೀಡಬೇಕು ಎಂದು ಸೋಮಣ್ಣ ಅವರು ಸಹ ದನಿಗೂಡಿಸಿರುವ ಬಗ್ಗೆ ಕೇಳಿದಾಗ, “ಅವರ ಪಕ್ಷದ ಕೇಡರ್ಸ್ ನೂರು ಮಂದಿಯನ್ನು ಅವರು ತಯಾರಿ ಮಾಡಿಕೊಳ್ಳಲಿ” ಎಂದರು.
ಬಳ್ಳಾರಿ ಗಲಭೆಯ ತನಿಖೆಯನ್ನು ಸಿಐಡಿ ಅಥವಾ ಎಸ್ ಐಟಿಗೆ ನೀಡುವ ಆಲೋಚನೆ ಇದೆಯೇ ಎಂದು ಕೇಳಿದಾಗ, “ಇದರ ಬಗ್ಗೆ ಮುಖ್ಯಮಂತ್ರಿಯವರು ಹಾಗೂ ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಯಾವ ಚರ್ಚೆಯೂ ನನಗೆ ಗೊತ್ತಿಲ್ಲ” ಎಂದರು.
ಗುಂಡು ಸತೀಶ್ ರೆಡ್ಡಿ ಅವರ ಗನ್ ಮ್ಯಾನ್ ದು ಎನ್ನುವ ವರದಿ ಬಗ್ಗೆ ಕೇಳಿದಾಗ, “ಯಾರದ್ದೇ ಆಗಿದ್ದರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ವರದಿ ಬಗ್ಗೆ ನನಗೆ ಗೊತ್ತಿಲ್ಲ” ಎಂದರು.



